ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು
ಮಾಯಾ ಪ್ರಪಂಚವನು ಅನುಗಾಲಾ
ನಂಬು ನಮ್ಮಂಬುಜಾಂಬಕನ ಪಾದಾಂಬುಜವ
ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ
ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ
ಒಂದು ದಿನಲಿರಲಾಗಲವರರೇತಸು
ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು
ರ್ಗಂಧದೊಳು ಬಂದು ನಿಂದೂ
ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು
ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು
ಬಿಂದು ಕೆಳಗೆ ಹೊರಳಿದಿರು ಮರುಳೆ 1
ತಾಮಸವ ಕವಿದು ಕಾವಳಗೊಂಡ ಕತ್ತಲೆಯ
ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ
ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ
ಮುಂಜಿಯನು ಕಟ್ಟಿ ಬಂಧುಬಳಗ
ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ
ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ
ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ 2
ಮದ ಮತ್ಸರ ಲೋಭ ಮೋಹ ಕಾಮಾದಿಯಲಿ
ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ
ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ
ತುಂಬಿ ಕಾಲವನು ಕಳೆದು ಮಕ್ಕಳ ಪಡೆದು
ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ
ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ
ಮುದದಿಂದ ನರಕದೊಳು ಬೀಳುವಾ ಹುರುಳೆ 3
ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ
ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು
ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು
ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ
ಬದ್ಧವಿಲ್ಲದಲೆ ಕರಗಾತಿಂದು ಬಡತನಾ
ಸಿದ್ಧನಾಗಲು ತಿಂದವರು ಹರದೋಡಿ
ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ 4
ಬಿಡು ಬಿಡು ಅಕಟ ಸಂಸಾರ ಸಾಗರದ
ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ
ಹಿಡಿ ಹಿಡಿ ಪರಮ ಭಾಗವತರ ಸಂಗತಿಯ
ಸರ್ವಜ್ಞತೀರ್ಥರ ಮತದ ಕರುಣವನು
ಪಡೆಯಲು ಅಧಿಕಾರನಾಗಿ ಸಿರಿದೇವಿಯ
ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ
ತಡಿಯದಲೆ ಸದ್ಗತಿಗೆ ಸೇರುವದು ಮರುಳೆ5