ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ
ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ
ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ
ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ
ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ
ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ 1
ತುಳಿದನ ಅವಗೊಲಿದನ
ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ
ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ
ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ 2
ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ
ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ
ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು
ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ 3
ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ
ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ
ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ
ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ 4
ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ
ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ
ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ
ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ 5
ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ
ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ
ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ
ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ 6
ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ
ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ
ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ
ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ 7
ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ
ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ
ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ
ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ 8
ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ
ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ
ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ
ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ 9
ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ
ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ
ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ
ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ 10
ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ
ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ
ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ
ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ 11
ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ
ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ
ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ
ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ 12
ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ
ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ
ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ
ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ 13
ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ
ತ್ರಿಪುರದಲಿ ಜಲಜಾಕ್ಷಿಯರ ವ್ರತ ಭÀಂಗನ ನಿಸ್ಸಂಗನ
ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ
ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ 14
ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ
ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ
ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ
ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ 15