ಶರಣು ದೇವರ ದೇವ ಶರಣು ಸುರವರ ಮಾನ್ಯ
ಶರಣು ಶತಕೋಟಿ ಲಾವಣ್ಯ | ಲಾವಣ್ಯ ಮೂರುತಿಯೆ
ಶರಣೆಂಬೆ ಸ್ವಾಮಿ ಕರುಣೀಸೊ 1
ಆದಿನಾರಾಯಣನು ಭೂದೇವಿ ಮೊರೆ ಕೇಳಿ
ಯಾದವರ ಕುಲದಲ್ಲಿ ಜನಿಸೀದ | ಜನಿಸೀದ ಕೃಷ್ಣ
ಪಾದಕ್ಕೆ ಶರಣೆಂಬೆ ದಯವಾಗೊ 2
ನಿನ್ನ ವಿಸ್ಮøತಿ ದೋಷ ಜನ್ಮ ಜನ್ಮಕ್ಕೆ ಕೊಡದಿರು
ಎನ್ನ ಕುಲ ಬಂಧು ಎಂದೆಂದು |ಎಂದೆಂದು ನಿನಗಾನು
ಬಿನ್ನೈಪೆ ಬಿಡದೆ ಸಲಹಯ್ಯ 3
ವಸುದೇವನಂದನನ ಹಸುಗೂಸು ಎನಬೇಡಿ
ಶಿಶುವಾಗಿ ಕೊಂದ ಶಕಟನ್ನ | ಶಕಟನ್ನ ವತ್ಸಾಸುರನ
ಅಸುವಳಿದು ಪೊರೆದ ಜಗವನ್ನ 4
ವಾತರೂಪಿಲಿ ಬಂದ ಆ ತೃಣಾವರ್ತನ್ನ
ಮಡುಹಿ ಮೊಲೆಯುಣಿಸಿದಾ
ಪೂತನಿಯ ಕೊಂದ ಪುರುಷೇಶ 5
ನಿನ್ನ ಸ್ಮøತಿಗಿಂತಧಿಕ ಪುಣ್ಯ ಕರ್ಮಗಳಿಲ್ಲ
ನಿನ್ನ ವಿಸ್ಮøತಿಗಿಂತ | ಅಧಿಕವಾದ ಮಹಪಾಪಗಳು
ಇನ್ನಿಲ್ಲ ಲೋಕತ್ರಯದೊಳು 6
ಅಂಬುಜಾಂಬಕಿಗೊಲಿದ ಜಂಭಾರಿಪುರದಿಂದ
ಕೆಂಬಣ್ಣದ ಮರ ತೆಗೆದಂಥ | ತೆಗೆದಂಥ ಕೃಷ್ಣನ ಕ
ರಾಂಬುಜವೆ ನಮ್ಮ ಸಲಹಲಿ 7
ದೇವಕೀಸುತನಾಗಿ ಗೋವುಗಳ ಕಾದದೆ
ನಲಿವೋನೆ ಮೂರ್ಲೋಕ
ಓವ ದೇವೇಂದ್ರ ತುತಿಪೋನೆ 8
ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ
ಜಗದಿ ಜೀವರನ ಸೃಜಿಸುವಿ | ಸೃಜಿಸಿ ಜೀವರೊಳಿದ್ದು
ಜಗದನ್ಯನೆಂದು ಕರೆಸುವಿ 9
ಕರಣನೀಯಾಮಕನೆ ಕರುಣಾಳು ನೀನೆಂದು
ಮೊರೆಹೊಕ್ಕೆ ನಾನಾ ಪರಿಯಲ್ಲಿ | ಪರಿಯಲ್ಲಿ ಮಧ್ವೇಶ
ಮರುಳು ಮಾಡುವರೆ ನೀಯೆನ್ನ 10
ಕುವಲಯಾಪೀಡನನು ಲವಮಾತ್ರದಿ ಕೊಂದು
ಶಿವನ ಚಾಪವನು ಮುರಿದಿಟ್ಟಿ | ಮುರಿದಿಟ್ಟಿ ಮುಷ್ಟಿಕನ
ಬವರದಲಿ ಕೆಡಹಿ ಬಲಿಗೈದೆ 11
ಗಂಧವಿತ್ತಬಲೆಯೊಳ ಕುಂದನೆಣಿಸದೆ ಪರಮ
ಸುಂದರಿಯ ಮಾಡಿ ವಶವಾದಿ | ವಶವಾದಿ ನಮ್ಮ ಗೋ
ವಿಂದ ನೀನೆಂಥ ಕರುಣಾಳು 12
ವಂಚಿಸಿದ ಹರಿಯೆಂದು ಪರಚಿಂತೆಯಲಿ ಕಂಸ
ಮಂಚದ ಮ್ಯಾಲೆ ಕುಳಿತಿದ್ದ | ಕುಳಿತಿದ್ದ ಮದಕರಿಗೆ
ಪಂಚಾಸ್ಯನಂತೆ ಎರಗೀದೆ 13
ದುರ್ಧರ್ಷ ಕಂಸನ್ನ ಮಧ್ಯರಂಗದಿ ಕೆಡಹಿ
ಜನನೋಡೆ ದುರ್ಮತಿಯ
ಮರ್ದಿಸಿದ ಕೃಷ್ಣ ಸಲಹೆಮ್ಮ 14