ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಶೆ ಅಳಿಯದೆ ಮನದ ರೋಷವಡಗದೆ | ವೇಷ ದಂಭಕಗೆಲ್ಲಿ ಶಿವಯೋಗವು ಪ| ತನ್ನ ತಾನರಿಯದೆ ಉನ್ಮತ್ತದಿಂದಲಿ ನನ್ನದು ನಾನೆಂದು ಜಲ್ಪಿಸುತ || ಕುನ್ನಿಯಂದದಿ ಕೋಟಲೆ ಯೊಳಗಿಹ ಹೀನ ಮನುಜಗೆಲ್ಲಿ ಶಿವಯೋಗವು 1 ಎಲಬು ತೊಗಲು ಮಲ ಮೂತ್ರದಿ ತೋರುವ | ಹೊಲಸಿನ ದೇಹವು ತಾನೆನುತ || ಹಲವು ಪಾಪಂಗಳನು ಹೇಸದೆ ಮಾಡುವ | ಕುಲಹೀನನಿಗೆಲ್ಲಿ ಶಿವ ಯೋಗವು 2 ಆರು ವೈರಿಗಳಿಗೆ ವಶವಾದನು ಈ ದೀನ | ವಾರಿಜನಾಭನ ಚರಣವನು || ಸೇರಿ ತನ್ನ ಹಿತವ ಮಾಡಿಕೊಳ್ಳದಾ- |ಚಾರಿಗೇಡಿಗೆಲ್ಲಿ ಶಿವ ಯೋಗವು 3 ಮೂರು ದೇಹಕೆ ಮೀರಿ ಬೇರೆ ತಾನಾಗದೆ | ಆರು ಇಂದ್ರಿಯಗಳಿಗೆ ವಶವಾಗಿಯು || ನಾರಿಯರ ಸಂಗ ಸುಖವ ಬಯಸುವ | ಕ್ರೂರ ಮನುಜನಿಗೆಲ್ಲಿ ಶಿವ ಯೋಗವು 4 ಶ್ರೀ ಗುರು ವಿಶ್ವಪತಿಯ ಪದ ಕಮಲವ | ಬೇಗದಿ ಸೇರಿ ಸುಖಿಯಾದೆ || ರಾಗರೋಷದಿ ತನ್ನಾಡಿತವ ತಾ ಮರೆತಂಥ | ಭೋಗಲಂಪಟಗೆಲ್ಲಿ ಶಿವಯೋಗವು ? 5
--------------
ನರಸಿಂಹ
ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1 ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2 ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3 ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4 ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಯಾದ ನಡಿ ಹಿಡಿರೋ ಮನಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಧ್ರುವ ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ 1 ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ 2 ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ ಘಾಸಿ ಮಾಡಲಬ್ಯಾಡಿ 3 ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ4 ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ 5 ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ 6 ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ 7 ಅನ್ನಬೇಡಿದವ ಗಿಲ್ಲೆನ ಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ 8 ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ 9 ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು