ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಶಲವರೆ ಲಾಲಿಸಿರಿ ಕಥೆಯನೆಲ್ಲವ ಪೇಳ್ವೆ ಕುಶಲಮತಿಗಳೇ ನಿಮ್ಮ ಕೌತುಕವು ಸಹಜವಲೆ 1 ಬಿಸರುಹಾಕ್ಷನ ಚರಿತೆ ಚಿತ್ರತರಮಹುದಲ್ತೆ ಉಸುರುವೆನು ಪೂರ್ವ ವೃತ್ತಾಂತವನು ನಾ ಮೊದಲೆ 2 ಅಸುರರುಪಟಳದಿಂದ ವಸುಧೆ ಭಾರವು ಹೆಚ್ಚೆ ಬಿಸಜಭವಮುಖ ಸುರರ ಮೊರೆ ಕೇಳಿ ಮನ ಮೆಚ್ಚೆ 3 ಬಿಸಜನೇತ್ರನು ತಾನು ದಶರಥನ ಸುತನೆನಿಸಿ ವಸುಮತಿಯಲುದಿಸಿ ಸಜ್ಜನರ ಸಂತಸಗೊಳಿಸಿ 4 ಹಸುಳೆತನದಲಿ ಅಸುರೆ ತಾಟಕಿಯ ಸಂಹರಿಸಿ ಕುಶಿಕಸುತನಧ್ವರವ ಕಡು ರಕ್ಷಣೆಯ ಮಾಡಿ 5 ಅಶಮವಾಗಿದ್ದಹಲ್ಯೆಯ ತಾನುದ್ಧರಿಸಿ ಅಸಮಾಕ್ಷಚಾಪವನು ಲೀಲೆಯಲಿ ತುಂಡರಿಸಿ 6 ಕರ ಪದ್ಮವನು ಗ್ರಹಿಸಿ ಎಸೆವೆರಡು ರೂಪದಲಿ ಘನಲೀಲೆ ಪ್ರಕಟಿಸಿ 7 ಕುಶಲದಿಂ ಯುವರಾಜ ಪಟ್ಟಕ್ಕೆ ಸನ್ನಾಹ ವೆಸೆದಿರಲು ವಿಧಿಲೀಲೆಯೇನೆಂಬನಾಹ 8 ದಶರಥನ ಕಿರುಮಡದಿ ಪಡೆದ ವರಕನುವಾಗಿ ಸತಿ ಅನುಜ ಸಹಿತನಾಗಿ 9 ವಸುಮತಿಯೊಳವತರಿಸಿ ಬಂದ ಕಾರ್ಯವ ನೆನೆದು ಅಸಮ ನಾಟಕ ಸೂತ್ರಧಾರಿ ಅಡವಿಗೆ ನಡೆದು 10 ಎಸೆವ ಗಂಗೆಯ ದಾಟಿ ಗುಹನನ ಧನ್ಯನಗೈದು ಋಷಿ ಭರದ್ವಾಜರಿಂ ಸತ್ಕಾರವನು ಪಡೆದು 11 ವಸುಮತೀಧರ ಚಿತ್ರಕೂಟದಲಿ ನಿಂತಿರಲು ಅಸಮ ಭಕ್ತವರೇಣ್ಯ ಭರತ ತಾನೈತರಲು 12 ಬಿಸಜಾಂಘ್ರಿ ಸಂಪೂತ ವರ ಪಾದುಕೆಗಳನಿತ್ತು ಕುಶಲಮತಿ ತಾನವನ ಕಳುಹಿ ಯೋಚಿಸಿ ಮತ್ತು 13 ಪೆಸರಾಂತ ದಂಡಕಾ ವನ ಪ್ರವೇಶವ ಮಾಡಿ ಅಸುರರನೇಕರು ಅಂತಕನ ಬಳಿದೂಡಿ14 ಋಷಿವರ್ಯ ಶರಭಂಗಗೀಕ್ಷಣದಿ ಸುಗತಿಯನು ಹಸನಾಗಿ ಕರುಣಿಸಿದ ಬಳಿಕ ಕುಂಭೋದ್ಭವನು 15 ಒಸಗೆಯಿಂದಿತ್ತ ದಿವ್ಯಾಸ್ತ್ರಂಗಳ ಸಂಗ್ರಹಿಸಿ ಪಸರಿಸಿಹ ವಿಲಸಿತದ ಪಂಚವಟಿಯಲಿ ನೆಲಸಿ 16 ಒಸಗೆಯಿಂದಿರೆ ಬಂದ ಶೂರ್ಪನಖಿಗತಿಭಂಗ ವೆಸಗಿ ಸೋದರನಿಂದ ಶೋಭಿಸೆ ಶುಭಾಂಗ 17 ಮಾಯಾ ಮೃಗಾಕಾರ ದಸುರ ಮಾರೀಚನಂ ಸಂಹರಿಸಿ ರಘುವೀರ 18 ಅಸಮ ಸೋದರ ಸಹಿತ ಆಶ್ರಮಕ್ಕೈತಂದು ದೆಸೆದೆಸೆಯೊಳರಸೆ ತನ್ನರಸಿ ಕಾಣದಿರಲು 19 ಹುಸಿವೇಷದಿಂ ಬಂದ ಖಳ ಕುಲಾಗ್ರಣಿಯಿಂದ ಶಶಿಮುಖಿಯು ಹಗರಣವಾಗಿರಲು ನಿತ್ಯಾನಂದ 20 ದೆಸೆಗೆಟ್ಟವನ ಪರಿಯಲತಿಶಯದಿ ಶೋಕಿಸುತ ದೆಸೆದೆಸೆಯೊಳರಸುತ್ತಾ ಬಸವಳಿದು ತಾ ಬರುತ 21 ಎಸೆವವರ ಋಷ್ಯಮೂಕಮತಂಗಾಶ್ರಮದಿ ಬಿಸಜಾಪ್ತಸುತನ ಕಂಡವನೊಡನೆ ತಾ ಮುದದಿ 22 ಉಸುರಿ ವಾಲಿಯ ವಧೆಗೈವೆನೆಂದಭಯವನು ಎಸೆವ ವಿಲಸಿತ ಮಹಿಮ ಕರಿಗಿರೀಶನು ತಾನು 23
--------------
ವರಾವಾಣಿರಾಮರಾಯದಾಸರು
ಸಡಿಲ ಬಿಡದೆ ಕೈಯ ಪಿಡಿದು ಉದ್ಧರಿಸಯ್ಯ ಬಡವನು ನಾನೈಯ್ಯ - ಕೊಡು ನಿನ್ನ ಸೇವೆಯ ಪ ಒಡಲಿಗೋಸುಗ ಪರರಡಿಗಳ ಪಿಡಿಯುತೆ ಭವ ಕಡಲಿನೊಳಗೆ ಅ.ಪ. ಪಡೆದು ವರಗಳನು ಕಡು ಖೂಳ ರಾವಣ ನಡುಗಿಸಿ ಸುರನರ ಭುಜಗರೊಡೆಯರನ್ನು ಹಿಡಿದು ಮುನೀಶರ ಹೊಡೆದು ಬಡಿದು ಹಿಂಸೆ - ಪಡಿಸುತ್ತ ಯುವತೇರ ದುಡುಕು ಮಾಡುತ್ತಲಿರೆ ಗಡಣೆಗಾರದೆ ಪಾಲ ಕಡಲ ತಡಿಗೆ ಬಂದು ದೃಢ ಭಕ್ತಿಯಲಿ ನಿಂದು ಜಡಜ ಭವಾದ್ಯರು ಪೊಡಮಟ್ಟು ಬೇಡಲು ಕೊಡುತೆ ಅಭಯವನು ಮಡದಿಯನೊಡಗೂಡಿ ಪೊಡವಿಗಿಳಿದು ಬಂದೆ 1 ಸತಿ ಕೌಸಲ್ಯದೇವಿಯ ಬಸುರೊಳು ಸಂಜನಿಸಿ ದಶದಿಶದೊಳು ಯಶ ಪಸರಿಸಿ ಅಸುರೆಯ ಅಸುವನು ಹಾರಿಸಿ ಕುಶಿಕ ಸುತನ ಯಜ್ಞ ಹಸನಾಗಿ ಪಾಲಿಸಿ ನಸುನಗುತಲಿ ಪದಸರಸಿಜ ಸೋಕಿಸಿ ಅಶಮವಾಗಿದ್ದ ಮುನಿಸತಿಯನುದ್ಧರಿಸಿ ಪಶುಪತಿ ಧನುಭಂಗವೆಸಗಿ ಸೀತೆಯ ಕರ ಬಿಸಜವ ನೊಶಗೈದ ಅಸಮ ಸಮರ್ಥ 2 ಚಂದದಿಂ ಶಾಙ್ರ್ಞವನೊಂದಿ ಅಯೋಧ್ಯೆಗೆ ಬಂದು ಪತ್ನಿಯಗೂಡಿ ನಂದದಿಂದಿರುತಿರ್ದು ಬಂದ ಕಾರ್ಯಕೆ ನೆವ ತಂದು ವನಕೆ ಬಂದು ನಿಂದಿರೆ ಜಾನಕಿ ಲಕ್ಷ್ಮಣರೊಡಗೊಂಡು ನೊಂದು ನೃಪನು ದಿನವನ್ನು ಹೊಂದಲು ಕರೆ- ತಂದು ಭರತನಿಗೆ ಅಂದು ರಾಜ್ಯವನೀಯೆ ಬಂದೊಲ್ಲದೆ ಬೇಗ ಬಂದು ವಂದಿಸೆ ಪದ ದ್ವಂದ್ವದ ಪಾದುಕವಂದದಿಂದೊಲಿದಿತ್ತೆ 3 ಚಿತ್ರಕೂಟಾದ್ರಿಯಿಂದತ್ತ ನಡೆದು ನೆಲ ಕೊತ್ತಿ ವಿರಾಧನ್ನ ವತ್ಸ ಲಕ್ಷ್ಮಣ ಸೀತಾ ಯುಕ್ತನು ನೀನಾಗಿ ಪೊರೆಯಲು ಇತ್ತು ಅಭಯವನ್ನು ಉತ್ತಮ ದಂಡಕದಿ ಸ್ತುತ್ಯ ಕುಂಭಜ ಮುನಿಯಿತ್ತ ಧನುವನಾಂತು ಕುತ್ಸಿತ ದನುಜೆಯ ಶಿಕ್ಷಿಸಿ ಖರ ಬಲ ಕತ್ತರಿಸುತೆ ಬೆನ್ಹತ್ತಿ ಮಾರೀಚನ್ನ ತುತ್ತು ಮೂರಾಗಿಸಿದತ್ಯಂತ ಶಕ್ತ 4 ಮೈಥಿಲಿಯಾಡಿದ ಮಾತಿಗೆ ಸೌಮಿತ್ರಿ ಪಾತಕಿ ದಶಮುಖ ಸಾತ್ವೀಕ ವೇಷದಿ ಸೀತೆಯ ನೊಯ್ದೆನೆಂದು ಆರ್ತ ಸ್ವರದಿ ಪೇಳಿ ಮೃತಿಯೊಂದೆ ಖಗಪತಿ ಆತಗೆ ಸದ್ಗತಿಯಿತ್ತು ನಡೆದು ಖಳ ಪೋತಕ ಬಂಧನ ತೋಳ್ಗಳ ಖಂಡಿಸಿ ಪ್ರೀತಿಲಿ ಶಬರಿಗೆ ಮುಕ್ತಿಯ ಪಾಲಿಸಿ ವಾತಸುತನ ಮನ ಪ್ರಾರ್ಥನೆ ಸಲಿಸಿದೆ 5 ಚರಣದಿಂದೊಗೆದು ದುಂದುಭಿಯ ಶರೀರವನ್ನು ತರುಗಳೇಳನು ಒಂದೇ ಸರಳಿನಿಂದುರುಳಿಸಿ ತರಣಿಸುತನ ಭಯ ಹರಿಸಿ ವಾಲಿಯ ಗರ್ವ ಮುರಿಸಿ ವಾನರ ರಾಜ್ಯ ದೊರೆತನ ಸಖಗಿತ್ತೆ ತರುಚರ ತತಿಗಳ ಕೆರಳಿಸಿ ಹರುಷದಿ ಪರನು ಭಕುತನನ್ನು ಕರೆದು ಕುರುಹುಗಳ ನೊರೆದು ಮುದ್ರಿಕೆಯಿತ್ತೆ ಕರುಣವಾರಿಧಿಯೆ 6 ತಿಂಗಳು ಮೀರಿತೆಂದು ಅಂಗದ ಪ್ರಮುಖರು ಕಂಗೆಟ್ಟು ಕುಳಿತಿರೆ ಭಂಗನ ಕಳೆದು ತ - ರಂಗಿಣಿ ಪತಿಯನ್ನು ಲಂಘಿಸಿ ಹನುಮನು ಕಂಗೊಳಿಸುವ ಲಂಕಾ ಪ್ರಾಂಗಣದಲಿ ನಿಂದು ಭಂಗಿಸಿ ಲಂಕಿಣಿಯನು ಸೀತಾಂಗನೆ - ಗುಂಗುರವಿತ್ತುತ್ತಮಾಂಗದ ಮಣಿಯಾಂತು ಕಂಗೆಡಿಸ್ಯಸುರರ ಜಂಗುಳಿಯನು ಭಕ್ತ ಪುಂಗವ ಬರೆ ನಿನ್ನಂಗ ಸಂಗವನಿತ್ತೆ 7 ಹರಿವರರನು ಕೂಡಿ ಶರಧಿಗೆ ಪಯಣಮಾಡಿ ಶರಣ ವಿಭೀಷಣನಿಗೆ ಸ್ಥಿರ ಪಟ್ಟವನು ನೀಡಿ ಭರದಿ ಸೇತುವೆಗಟ್ಟಿ ಅರಿಯ ಪಟ್ಟಣ ಮುಟ್ಟಿ ಧುರಕೆ ದೂತನ್ನ ಅಟ್ಟಿ ಪರಬಲವನು ಕುಟ್ಟಿ ಪುರಕೆ ಉರಿಯನಿಕ್ಕಿ ಶರವರ್ಷಂಗಳ ಕರಿ ರಥಾ ತುರಗ ಪದಾತಿಗ- ಳುರುಳಿಸಿ ದಶಶಿರನುರವನು ಇರಿದು ಪರಮ ಸಾಧ್ವಿಯ ಕರಸರಸಿಜ ಪಿಡಿದೆ 8 ಭಕ್ತ ವಿಭೀಷಣಗೆ ದೈತ್ಯಾಧಿಪತ್ಯವಿತ್ತು ಕೃತ್ತಿವಾಸನ್ನ ಸೇತು ಹತ್ತಿರ ಸ್ಥಾಪಿಸಿ ಪತ್ನಿ ಸಹೋದರ ಮಿತ್ರ ಭೃತ್ಯರ ಕೂಡಿ ಉತ್ತಮ ಪುಷ್ಪಕದಿ ಚಿತ್ರಕೂಟಕೆ ಬಂದೆ ಭಕ್ತನ ಕಳುಹಿ ಸದ್ವøತ್ತವ ಭರತಗೆ ಬಿತ್ತರಿಸಿ ಮಹದುತ್ಸವದಿ ಪುರ ಮತ್ತೆ ಪ್ರವೇಶಿಸಿ ರತ್ನ ಸಿಂಹಾಸನ ಹತ್ತಿ ಶ್ರೀಕಾಂತನೆ ನಿತ್ಯದಿ ಸಲಹುವೆ 9
--------------
ಲಕ್ಷ್ಮೀನಾರಯಣರಾಯರು
ಸಾರಸ ನಯನ ಶ್ರೀರಾಮಚಂದ್ರನ ಚರಿತೆ ಸಾರ ಹೃದಯ ಶ್ರೀ ಪ ಭವ ಮುಖರರ ಮೊರೆಯ ಕೇಳಿ ಧಾರುಣಿಯೊಳಗವತಾರ ಮಾಡಿದನಮ್ಮಾ ಅ.ಪ. ದಶರಥ ಸುತನೆನಿಸಿ ವಸುಧೆಯೊಳವತರಿಸಿ ಕುಶಿಕಸುತನ ಯಜ್ಞವ ನೆರೆಪಾಲಿಸಿ ಅಶಮವಾಗಿದ್ದ ಅಹಲ್ಯೆಯ ಶಾಪ ಪರಿಹರಿಸಿ ವಸುಧೀಶ ಜನಕನಾಸ್ಥಾನ ಪ್ರವೇಶಿಸಿ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯನೊಲಿಸಿ ಅಸಮ ಭಾರ್ಗವನೊಡನೆ ಸರಸವ ನೆಸಗಿ ಜಗದೊಳು ಲೀಲೆ ತೋರಿದ 1 ಜನಕನಾಜ್ಞೆಯ ತಾಳಿ ಜನಕ ಸುತೆಯ ಸಹಿತ ಅನುಜನೊಡನೆ ಹೊರಟು ವನವಾಸಕೆ ಘನಭಕ್ತಿ ಭರಿತ ಶ್ರೀ ಭರತಗೆ ಪಾದುಕೆ ನೀನು ಕರುಣಿಸಿ ಮುಂದೆ ವನದಂಡಕವ ಪೊಕ್ಕು ದುರುಳ ವಿರಾಧಮುಖರನು ಹನನಗೈದಾ ಬಳಿಕ ಶರಭಂಗ ಮುನಿಗೆ ಸದ್ಗತಿಯಿತ್ತಗಸ್ತ್ಯನ ವಿನುತ ಅಸ್ತ್ರಗಳನು ಪಡೆದನಾ 2 ಪಂಚವಟಿಯೊಳಗೆ ಸಂಚುಗೈಯುತ ಬಂದ ಕಾಂಚನಮೃಗವನು ಪಂಚಕಗೊಳಿಸಿ ಕುಂಚಿತ ಮತಿಯ ದ್ವಿಪಂಚಶಿರನು ಬರಲು ವಂಚನೆಯಿಂದಪರಿಹರಿಸಲು ಸೀತೆಯ ಸಂಚುಕಾಣದೆ ವನವನದೊಳು ಸಂಚರಿಸುತಲಿ ಶೋಕ ತೋರುತ ಪಂಚಶರಹತನಂತೆ ಬಳಲುತ ಪಂಚಶರ ಪಿತ ಬಂದ ಪಂಪೆಗೆ 3 ಮಾರುತಸುತನ ವಿನಯಭರಿತ ವಾಕ್ಯಕೆ ಮೆಚ್ಚಿ ತರಣಿಸುತನ ಕೂಡೆ ಸಖ್ಯವ ಬೆಳೆಸಿ ದುರಿತವಗೈದ ವಾಲಿಯ ನಿಗ್ರಹಿಸಿ ಕಪಿ ವರ ಸುಗ್ರೀವಗೆ ರಾಜ್ಯಕರುಣಿಸಿದಾ ಬಳಿಕ ಪರಮ ವಜ್ರಶರೀರಿ ಪವನಜ ಶರಧಿಯ ಲಂಘಿಸಿ ಧರಣಿತನಯಳಿ ಗರುಹಿ ಕುಶಲವ ಮುದ್ರಿಕೆಯನಿತ್ತು ಉರುಹಿ ಲಂಕೆಯ ಬರಲು ಒಲಿದನು 4 ಭಕ್ತ ವಿಭೀಷಣನಿಗೆ ಇತ್ತು ಅಭಯವನು ಶರಧಿ ಬಂಧಿಸಿ ದಾಟಿ ಹತ್ತು ತಲೆಯವನ ಪುರವ ಪ್ರವೇಶಿಸಿ ದೈತ್ಯಶೂರರನ್ನೆಲ್ಲ ಮೃತ್ಯು ವಶವ ಮಾಡಿ ಮತ್ತೆ ಕುಂಭಕರ್ಣೇಂದ್ರಜಿತ್ ಮುಖ ದೈತ್ಯರನು ಸಂಹರಿಸಿ ರಣದೊಳು ಶತ್ರು ಭಯಂಕರನಾಗಿ ಮೆರೆದನು ಸ್ತುತ್ಯ ಮಹಿಮ ಶ್ರೀ ಕರಿಗಿರೀಶನು 5
--------------
ವರಾವಾಣಿರಾಮರಾಯದಾಸರು