ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗಪ್ಪ ಬಂದವ್ನೆ ಬಾಗ್ಲಲ್ಲಿ ನಿಂತವ್ನೆ ಸಿಂಗಾರದಿಂದವ್ನೇ ತೆಂಗಿನಕಾಯ್ಬಾಳೆಹಣ್ತಂದು ನೋಡಿರೋ ಹೊಂಗೂಳನೊತ್ತವ್ನೇ ಪ ನಾಕ್ಮಳ ನಿಂತವ್ನೆ ನೀರಲ್ಲಿ ನಿಂತವ್ನೆ ನಾಕೈಯಾ ಪಡೆದವ್ನೇ ಇಕ್ಕೆಲದಲಿ ಸಂಕುಚಕ್ರವ ಹಿಡಿದವ್ನೆ ರಾಕ್ಷಸನ್ನ ಮೆಟ್ಟವ್ನೆ1 ಗಟ್ಟಿ ಬೆನ್ನಿನ ಮ್ಯಾಗೆ ಬೆಟ್ಟವ ಹೊತ್ತವ್ನೆ ಗಟ್ಟಿ ಗದೇ ಹಿಡಿದವ್ನೇ ಮಟ್ಟಸವಾದ ನಾಕ್ಕಾಲಲ್ಲಿ ನಿಂತವ್ನೆ ಸಿಟ್ಟಿಲ್ಲ ನಗತವ್ನೇ 2 ಮೊಳದುದ್ದ ಮೂಗ್ಯ್ಮಾಲೆ ಭೂಮಿಯ ಹೊತ್ತವ್ನೇ ಬೆಳಸವ್ನೇ ಕೋರೆಹಲ್ಲಾ ತೊಳಲಿಬಳಲವನಪ್ಪ ನಮ್ಮಪ್ಪ ರಂಗಪ್ಪ ಯೆಳನಗೆ ನಗ್ತಾನೇ 3 ಮೂಡ್ತವ್ನೆ ಕಂಬ್ದಲ್ಲಿ ನರಸಿಮ್ಮನಾಗವ್ನೆ ಹಿಡಿದವ್ನೆ ದೊಡ್ರಾಕ್ಷಸ್ನಾ ದೊಡ್ದುಗ್ರಲೊಟ್ಟೆಯ ಬಗಿತವ್ನೆ ಸಿಗಿತವ್ನೆ ಕೊಡುತೀನ್ವರವನೆಂತಾನೇ 4 ಗಿಡ್ಡ ಹಾರುವನಂತೆ ಮೂರೆಜ್ಜೆ ಭೂಮಿಯನಡ್ಡಡ್ಡ ಅಳೆದವ್ನೆ ಪಾಡ್ಯದ ಹಬ್ದಲ್ಲಿ ಬಲಿಯ ಕರೆತರುತಾನೆ ಬೇಡಿದ್ದ ಕೊಡುತಾನೇ 5 ಜಯ ಜಯ ಜಯವೆಂತಾನೇ ಕೈಯಲ್ಲಿ ಹಿಡಿದವ್ನೆ ಗಂಡುಗೊಲ್ಲಿಯ ನೋಡೋ ಭಯವಿಲ್ಲ ಕೈಮುಗಿಯೋ 6 ಶಿವನ ಬಿಲ್ಮುರಿದವ್ನೆ ರಾವಣನ ತರಿದವ್ನೆ ಭೂಮಿಯೆಲ್ಲವಾಳ್ತವ್ನೆ ತವಕದಿ ನೋಡಿರೆಲ್ಲಾ 7 ಮಡುವಿಗೆ ಧುಮುಕಿ ಕಾಳಿಂಗನ ತುಳಿದವ್ನೆ ಹಿಡಿದವ್ನೆ ಹೊಂಗೊಳಲಾ ಮಾನವ ಕಡುರೂಪವಂತ ನಮ್ಮ 8 ಮತ್ತರ ಮಡದೀರ ವ್ರತವನು ಕೆಡಿಸಲು ಬೆತ್ತಲೆ ನಿಂತವ್ನೇ ಕೃತ್ತಿವಾಸನ ಕೈಯ್ಯೊಳಿಂಬಾಗಿ ನಿಂದವ್ನೆ ಉತ್ತಮ ದೇವನಮ್ಮ 9 ದುರುಳರನೊದೆಯಾಕೆ ಹೊಂಟವ್ನೇ ಪದಕಮಲಕೆ ಯೆರಗೋ 10 ಮುದ್ದು ರಂಗಪ್ಪನಿಗೆ ಪೊಂಗಲು ನೇವೇದ್ಯ ಸಿದ್ಧ ಮಾಡಿರಯ್ಯಾ ಬದ್ಧವು ಅವ ನಮ್ಮ ಕಾಯೋದು ಸಟೆಯಲ್ಲ ಎದ್ದೆದ್ದು ತಲೆಬಾಗಿರೊ 11 ರಾಮನು ಅವನೇ ಕಾಮನಪ್ಪನು ನಿಸ್ಸೀಮ ನಮ್ಮ ರಂಗನೇ ರಾಮದಾಸನ ಮನದೊಳು ಮನೆ ಮಾಡ್ಯವ್ನೇ ಪಾಮರ ವರದನೆಂಬ ಮಾಂಗಿರಿ 12
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್