ಅಶೆ ಅಳಿಯದೆ ಮನದ ರೋಷವಡಗದೆ | ವೇಷ ದಂಭಕಗೆಲ್ಲಿ ಶಿವಯೋಗವು ಪ|
ತನ್ನ ತಾನರಿಯದೆ ಉನ್ಮತ್ತದಿಂದಲಿ ನನ್ನದು ನಾನೆಂದು ಜಲ್ಪಿಸುತ || ಕುನ್ನಿಯಂದದಿ ಕೋಟಲೆ ಯೊಳಗಿಹ ಹೀನ ಮನುಜಗೆಲ್ಲಿ ಶಿವಯೋಗವು 1
ಎಲಬು ತೊಗಲು ಮಲ ಮೂತ್ರದಿ ತೋರುವ | ಹೊಲಸಿನ ದೇಹವು ತಾನೆನುತ || ಹಲವು ಪಾಪಂಗಳನು ಹೇಸದೆ ಮಾಡುವ | ಕುಲಹೀನನಿಗೆಲ್ಲಿ ಶಿವ ಯೋಗವು 2
ಆರು ವೈರಿಗಳಿಗೆ ವಶವಾದನು ಈ ದೀನ | ವಾರಿಜನಾಭನ ಚರಣವನು || ಸೇರಿ ತನ್ನ ಹಿತವ ಮಾಡಿಕೊಳ್ಳದಾ- |ಚಾರಿಗೇಡಿಗೆಲ್ಲಿ ಶಿವ ಯೋಗವು 3
ಮೂರು ದೇಹಕೆ ಮೀರಿ ಬೇರೆ ತಾನಾಗದೆ | ಆರು ಇಂದ್ರಿಯಗಳಿಗೆ ವಶವಾಗಿಯು || ನಾರಿಯರ ಸಂಗ ಸುಖವ ಬಯಸುವ | ಕ್ರೂರ ಮನುಜನಿಗೆಲ್ಲಿ ಶಿವ ಯೋಗವು 4
ಶ್ರೀ ಗುರು ವಿಶ್ವಪತಿಯ ಪದ ಕಮಲವ | ಬೇಗದಿ ಸೇರಿ ಸುಖಿಯಾದೆ || ರಾಗರೋಷದಿ ತನ್ನಾಡಿತವ ತಾ ಮರೆತಂಥ | ಭೋಗಲಂಪಟಗೆಲ್ಲಿ ಶಿವಯೋಗವು ? 5