ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರತ್ನ ಪರಮ ಪ್ರಿಯ ಕರುಣಾನಿಧೆ ನಿಮ್ಮ ಶರಣು ಹೊಕ್ಕೆನು ಪೊರೆಯಬೇಕೆನ್ನ ದೊರೆಯೆ ಪ. ವರ ತಂದೆ ಮುದ್ದುಮೋಹನ ದಾಸಾರ್ಯರೆ ಪರಿಪರಿಯಿಂದ ಭಕ್ತರನು ಪೊರೆಯುವರೆ ಪರಮಾರ್ಥ ಚಂದ್ರೋದಯದ ಪ್ರಕಾಶಕರೆ ಪರಿಮಳ ಸುನಾಮದಲಿ ಸರ್ವತ್ರವ್ಯಾಪಕರೆ 1 ತರತರದ ಸುಗುಣ ಮಣಿಮಾಲೆಯಿಂ ಶೋಭಿಪರೆ ವರಶಿಷ್ಯ ರತ್ನಪದಕಗಳಿಂದಲೊಪ್ಪಿಹರೆ ಸುರರಗಣ ಮಧ್ಯದಲಿ ಪರಿಶೋಭಿಸುತಲಿಹರೆ ಮೊರೆಹೊಕ್ಕವರ ಕಾಯ್ವ ಪರಮ ಕರುಣಾಕರರೆ 2 ಕನಸಿನಲಿ ಮನಸಿನಲಿ ಕಳವಳವ ಹರಿಸುವರೆ ಮನಸಿಜಪಿತನನ್ನು ಮನದಿ ನೆನೆಯುವರೆ ಇನಕೋಟಿತೇಜ ಶ್ರೀ ಶ್ರೀನಿವಾಸನ ಕೃಪೆಗೆ ಅನುಮಾನವಿಲ್ಲದೆಲೆ ಅರ್ಹತೆಯ ಕೊಡಿಸುವರೆ 3 ಭಕ್ತರನು ಪೊರೆಯುವ ಕಾರುಣ್ಯನಿಧಿ ಎಂದು ಪಾದ ನಂಬಿರುವೆ ಭಕ್ತವತ್ಸಲ ಶೇಷಶಯನನಾ ಸೇವೆಯನು ನಿತ್ಯ ಮಾಳ್ಪಂಥ ಸೌಭಾಗ್ಯ ನೀಡುವುದು 4 ಕವಿದಿರುವ ಅಜ್ಞಾನಪರೆಯನ್ನು ಛೇದಿಸುತ ಸವಿಯಾದ ಹರಿಯ ನಾಮಾಮೃತ ಉಣಿಸಿ ಪವನನಂತರ್ಯಮಿ ಗೋಪಾಲಕೃಷ್ಣವಿಠ್ಠಲ ತವಕದಿಂದಲಿ ಪೊಳೆವ ಸುಜ್ಞಾನ ನೀಡುವುದು 5
--------------
ಅಂಬಾಬಾಯಿ
ಮೂಲಮಂತ್ರವ ಜಪಿಸು ಅರ್ಹತೆಯಿರುವಂತೆ ನೀನು ಪ ನಮೋನಾರಾಯಣಾಯ ಕಡೆಯಲುಳ್ಳ ಅ.ಪ ವೇದ ಪಾಂಚರಾತ್ರಾಗಮ ಪೌರಾಣಗಳ ನಿರುತ ನುತಿಪ ವೇದದೆ ಶ್ರೀವೈಷ್ಣವರಿಗೆ ತಾರಕಬ್ರಹ್ಮವಾದ ಆದಿಯೊಳಾಚಾರ್ಯರಿಂದ ಪಂಚಸಂಸ್ಕಾರ ಹೊಂದಿ ಬೋಧೆ ಪಡೆದ ಮಹಾಮಂತ್ರರಾಜವೆನಿಸಿ ಮುಕ್ತಿ ಕೊಡುವ 1 ಅಷ್ಟಾಕ್ಷರಿಯಾದ ಮಂತ್ರ ಇಷ್ಟಸಿದ್ಧಿಮಾಳ್ಪ ಮಂತ್ರ ನಿಷ್ಠೆಯಿಂದ ಜಪಿಸುವರಿಗನಿಷ್ಟಹಾರಿಯಾದ ಮಂತ್ರ ಇಷ್ಟುಮಾತ್ರ ಪಠಿಸುವರಿಗೂ ಮೋಕ್ಷವನ್ನೆ ಕೊಡುವ ಮಂತ್ರ ಸೃಷ್ಟೀಶ ಹೆಜ್ಜಾಜಿಯ ಕೇಶವನನ್ನೊಲಿಪ ಮಂತ್ರ 2
--------------
ಶಾಮಶರ್ಮರು