ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸೇವೆ ನಿರತರಿಗೆ ನಮೋ ನಮೋ ಪ ಅರಿವು ನಿಲ್ಲಿಸಿ ಪರಸಾಧನದಿರುತಿಹ್ಯ ಪರಮಪಾವನರಿಗೆ ನಮೋ ನಮೋ ಅ.ಪ ತಾಪಸಾರ್ಯರಿಗೆ ನಮೋ ನಮೋ ಮಹ ಪಾಪ ದೂರರಿಗೆ ನಮೋ ನಮೋ ಕೋಪಲೋಪರಿಗೆ ನಮೋ ನಮೋ ಇಹ ವ್ಯಾಪಾರರಿತವರಿಗೆ ನಮೋ ನಮೋ ತಾಪತ್ರಯವ ನೀಗಿ ಶ್ರೀಪತಿ ಚರಣವ ಗೌಪ್ಯದಿ ನೆನೆವರ್ಗೆ ನಮೋ ನಮೋ 1 ವೇದ ಸಂಪನ್ನರಿಗೆ ನಮೋ ನಮೋ ಭವ ಬಾಧೆ ಗೆಲಿದವರಿಗೆ ನಮೋ ನಮೋ ಸಾಧನ ಚತುಷ್ಟರಿಗೆ ನಮೋ ನಮೋ ಮಹ ಸಾಧುಸಂತರಿಗೆ ನಮೋ ನಮೋ ವಾದಿ ಮೂರ್ಖರೊಳು ವಾದಿಸದಂಥ ಸು ಬೋಧ ಗುರುವರಗೆ ನಮೋ ನಮೋ 2 ಭಾಗವತರಿಗೆ ನಮೋ ನಮೋ ಇಹ ಭೋಗನಿರಾಸ್ಯರಿಗೆ ನಮೋ ನಮೋ ಯೋಗಸಾಧಕರಿಗೆ ನಮೋ ನಮೋ ಮಹ ಯೋಗಿ ಮಹಾತ್ಮರಿಗೆ ನಮೋ ನಮೋ ಆಗಯೀಗೆನ್ನದೆ ಸಾಗರನಿಲಯನನ್ನ ಬಾಗಿಭಜಿಪರಿಗೆ ನಮೋ ನಮೋ 3 ಭಕ್ತಜನರಿಗೆ ನಮೋ ನಮೋ ವಿ ರಕ್ತ ಪುರುಷರಿಗೆ ನಮೋ ನಮೋ ಸತ್ಯಶೀಲರಿಗೆ ನಮೋ ನಮೋ ತಮ್ಮ ಗುರ್ತು ಅರ್ತವರಿಗೆ ನಮೋ ನಮೋ ಭಕ್ತಿಯುಕ್ತಿ ವಹಿಸೆತ್ತಗಲದಂಥ ಚಿತ್ತಶುದ್ಧರಿಗೆ ನಮೋ ನಮೋ 4 ನಿತ್ಯ ನಿರ್ಮಲರಿಗೆ ನಮೋ ನಮೋ ಭವ ಮರ್ತ ನಿರ್ತರಿಗೆ ನಮೋ ನಮೋ ತ ತ್ವರ್ಥಿಕರಿಗೆ ನಮೋ ನಮೋ ಮಹ ಮುಕ್ತಿ ಸಾಧ್ಯರಿಗೆ ನಮೋ ನಮೋ ಮೃತ್ಯುವ ಗೆಲಿದು ಕರ್ತ ಶ್ರೀರಾಮನ ಅರ್ತವರಿಗೆ ಬಹು ನಮೋ ನಮೋ 5
--------------
ರಾಮದಾಸರು
ನಿರ್ತದೊಡ್ಡದೈಯ್ಯಾ | ಅರ್ತವರಿಗೆಲ್ಲಿದೆ ಭಯವು ಪ ಗುರುವಿನಂಘ್ರಿಯ ಕಂಡು | ಗುರುದಯ ಪಡಕೊಂಡು | ಚರಿಸುವರಾನಂದ ನುಂಡು 1 ಘನದೆಚ್ಚರುಳ್ಳವಗ | ಬಿನಗುದೈವದ ಸಂಗ | ಆನಿಯೇರಿ ಕುನ್ನಿಯ ಹಂಗ 2 ಮೊಮ್ಮಕ್ಕಳ ಕಂಡಿರೆ | ಗುಮ್ಮನೆಂದರಂಜುವರೆ | ತಮ್ಮನುಭವ ಬಿಡುವರೆ 3 ಮುಂದಾಗುವ-ಹಿತೊಂದು | ಇಂದಿವೆ ಬಾರದ್ಯಾಕೆಂದು | ಮುಂದಗಿಡನು ಎಂದೆಂದು 4 ಮದಿರೆಕೊಂಡವನಂತೆ | ಮದವೇರಿಹ ನಗುತ | ಮಧುಹರನ ಕೊಂಡಾಡುತ 5 ತಂದೆ ಮಹಿಪತಿದಯಾ | ನಂದ ಕವಚದಿ ಕಾಯಾ | ಛಂದ ಮಾಡಿದಾ ಉತ್ಸಾಯಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೇಲ್ ಮೇಲ್ ಮೇಲ್ ಮೇಲ್ ಹರಿನಾಮ ಮೇಲು ಮೂಜಗಸೂತ್ರ ಹರಿನಾಮ ಪ ಕಾಲಕುಜನಕುಲ ಹರಿನಾಮ ಪಾಲಸುಜನಗಣ ಹರಿನಾಮ ಜಾಲಮಾಯ ದರ್ಪಣ್ಹರಿನಾಮ ವಿಶ್ವ ಹರಿನಾಮ ಅ.ಪ ಶರನಿಧಿಮಂದಿರ ಹರಿನಾಮ ಶರಧಿಮಥನ ಮುರಹರಿನಾಮ ಪುರತ್ರಯಸಂಹರ ಹರಿನಾಮ ಸುರಗಣಭೋಜನ ಹರಿನಾಮ ಶರಣರ ಸಿರಿತಾನ್ಹರಿನಾಮ ಪರತರ ಪಾವನ ಹರಿನಾಮ1 ಶಾಪವಿಮೋಚನ ಹರಿನಾಮ ತಾಪತ್ರಯಗಳ್ಹರ ಹರಿನಾಮ ಗೋಪೇರಾನಂದ ಲೀಲ ಹರಿನಾಮ ಕಪಾಲಧರನುತ ಹರಿನಾಮ ಗೌಪ್ಯಕೆ ಗೌಪ್ಯದ ಹರಿನಾಮ 2 ದುರಿತ ದಾರಿದ್ರ್ಯ ದೂರ್ಹರಿನಾಮ ಪರಿಹರ ಜರಾಮರಣ್ಹರಿನಾಮ ನರನ ಸಿರಿಯ ಭಾಗ್ಯ ಹರಿನಾಮ ಸುರತರು ಹರಿನಾಮ ಅರಿವಿನ ಅರಮನೆ ಹರಿನಾಮ ಪರಕ ಪರಮಸಿರಿ ಹರಿನಾಮ 3 ನಿಜಮತಿ ಭಂಡಾರ ಹರಿನಾಮ ಕುಜಮತಿ ಖಂಡನ ಹರಿನಾಮ ಭಜಕರನಿಜಧೇನ್ಹರಿನಾಮ ಭುಜಗಾದ್ರಿ ಪರ್ಯಂಕ ಹರಿನಾಮ ದ್ವಿಜರಿಗಮೃತನಿಧಿ ಹರಿನಾಮ ಅಜನಿಗುತ್ಪತ್ತಿ ಮಂತ್ರ ಹರಿನಾಮ 4 ವೇದಗಳಾಧಾರ ಹರಿನಾಮ ಸಾಧುಸಂತ ಪ್ರೇಮ ಹರಿನಾಮ ಭೇದವಾದÀರಹಿತ್ಹರಿನಾಮ ಸಾಧಿಸಲಸದಲ ಹರಿನಾಮ ಆದಿ ಅನಾದಿವಸ್ತು ಹರಿನಾಮ ಭೋಧ ಸ್ವಾದಸಾರ ಹರಿನಾಮ 5 ಕಾಲ ಹರಿನಾಮ ಕೀಳರ ಎದೆಶೂಲ್ಹರಿನಾಮ ಶೀಲರ ಜಪಮಾಲ್ಹರಿನಾಮ ಲೋಲಗಾನಪ್ರಿಯ ಹರಿನಾಮ ಕೀಲಿ ವೇದಾಂತದ ಹರಿನಾಮ ಫಾಲನೇತ್ರಗೆ ಶಾಂತಿ ಹರಿನಾಮ 6 ಪ್ರಳಯಕೆ ಅಳುಕದ ಹರಿನಾಮ ಪ್ರಳಯ ಪ್ರಳಯಗೆಲುವ್ಹರಿನಾಮ ಮಲಿನದಿ ಸಿಲುಕದ ಹರಿನಾಮ ಚಲಿಸದ ನಿರ್ಮಲ ಹರಿನಾಮ ಬೆಳಗಿನ ಬೆಳಗೀ ಹರಿನಾಮ ಕುಲಮುನಿ ಪಾವನ ಹರಿನಾಮ 7 ವಿಷಮಸಂಸಾರಖಡ್ಗ ಹರಿನಾಮ ವ್ಯಸನಕಾಷ್ಠಕಗ್ನಿ ಹರಿನಾಮ ವಿಷಕೆ ಮಹದಮೃತ ಹರಿನಾಮ ಮಸಣಿಮಾರಿಧ್ವಂಸ ಹರಿನಾಮ ಅಸಮಸುಖದ ಋಣಿ ಹರಿನಾಮ ವಸುದೇಜೀವಜೀವಳ್ಹರಿನಾಮ8 ಧರ್ಮಶಾಸ್ತ್ರದ ಗುಟ್ಟು ಹರಿನಾಮ ಮರ್ಮ ತಿಳಿಸುವ ರಟ್ಟು ಹರಿನಾಮ ಕರ್ಮ ಕಡಿಯುವ ಶಸ್ತ್ರ ಹರಿನಾಮ ನಿರ್ಮಲಾನಂದ ಪದವೀ ಹರಿನಾಮ ನಿರ್ಮಾಣ ನಿಜಜ್ಞಾನ ಹರಿನಾಮ ಬ್ರಹ್ಮಕಿಟ್ಟಿಗುರಿ ಹರಿನಾಮ 9 ಭವಗುಣಮರ್ದನ ಹರಿನಾಮ ಭವನಿಧಿ ಸೇತುವೆ ಹರಿನಾಮ ಭವನ ಭೀತಿಹರ ಹರಿನಾಮ ರವಿಕುಲ ಪಾವನ ಹರಿನಾಮ ಬುವಿತ್ರಯ ಪವಿತ್ರ ಹರಿನಾಮ ಸಾಯುಜ್ಯಪದಸ್ಥಾನೀ ಹರಿನಾಮ 10 ಸತ್ಯಕ್ಕೆ ಬಹು ನಿರ್ಕು ಹರಿನಾಮ ಮಿಥ್ಯಕ್ಕೆ ಅನರ್ಥ ಹರಿನಾಮ ನಿತ್ಯಕ್ಕೆ ಮಹಸುರ್ತು ಹರಿನಾಮ ಚಿತ್ತಕ್ಕೆ ಚಿಜ್ಜ್ಯೋತಿ ಹರಿನಾಮ ಅರ್ತವರಿಗೆ ಗುರ್ತು ಹರಿನಾಮ ಭೃತ್ಯಜನರ ಮತ್ತು ಹರಿನಾಮ 11 ಮಾಯಕ್ಕೆ ಪ್ರತಿಮಾಯ ಹರಿನಾಮ ಮಾಯ ಕತ್ತಲುನಾಶ ಹರಿನಾಮ ಕಾಯಕ್ಕೆ ಶೋಭಾಯ ಹರಿನಾಮ ಭಾವಕ್ಕೆ ಪರಿಶುದ್ಧ ಹರಿನಾಮ ತಾಯಿತಂದೆ ಜೀವಕ್ಹರಿನಾಮ ಅಮೃತ ಹರಿನಾಮ 12 ಪುಣ್ಯ ಶರಧಿಗೆ ಚಂದ್ರ್ಹರಿನಾಮ ಮನ್ನಣೆ ಮೂಲೋಕದ್ಹರಿನಾಮ ಧನ್ಯರಿಗೆ ಧನ್ಯ ಹರಿನಾಮ ಉನ್ನತ ಸಾಮ್ರಾಜ್ಯ ಹರಿನಾಮ ಮುನ್ನ ಕೈವಲ್ಯಪದ ಹರಿನಾಮ ಸನ್ನಿಧಿ ವೈಕುಂಠ ಹರಿನಾಮ 13 ನಿಗಮಕೆ ಸೊಬಗಿನ ಹರಿನಾಮ ಸುಗುಣರೊಳ್ನೆಲೆಗೊಂಡು ಹರಿನಾಮ ಅಗೋಚರ ಆಗಮಕ್ಹರಿನಾಮ ಸೊಗಸುವ ಭಕ್ತರಲ್ಹರಿನಾಮ ಅಗಜೇಶ ಪೊಗಳುವ ಹರಿನಾಮ ಅಗಜೆಯು ಒಪ್ಪಿದ ಹರಿನಾಮ 14 ವಿಮಲ ಗುಣಗಣ ಹರಿನಾಮ ದಮೆ ದಯಾನ್ವಿತ ಹರಿನಾಮ ಶಮೆ ಶಾಂತಿಮಂದಿರ ಹರಿನಾಮ ಸುಮನಸ ಕಲ್ಪದ್ರುಮ ಹರಿನಾಮ ನಮಿತ ಸುರಾದ್ಯರಖಿಲ ಹರಿನಾಮ ಅಮಿತ ವಿಶ್ವರೂಪ ಹರಿನಾಮ 15 ಮೂರು ಕಾಲದರಿವದ್ಹರಿನಾಮ ಮೂರಾರಿಕ್ಕಡಿಗೈವುದ್ಹರಿನಾಮ ಪಾರಪಂಚ ಪರುಷ್ಹರಿನಾಮ ಸಾರಸೌಖ್ಯಾಂಬುಧಿ ಹರಿನಾಮ ದಾರಿ ವೈಕುಂಠಕ್ಕೆ ಹರಿನಾಮ ಸೇರಿ ದಾಸರನಗಲದ್ಹರಿನಾಮ 16 ಭಕ್ತವತ್ಸಲ ಜಯ ಹರಿನಾಮ ಮುಕ್ತಿದಾಯಕ ಜಯ ಹರಿನಾಮ ಹತ್ತಾವತಾರ ಜಯ ಹರಿನಾಮ ಸತ್ಯ ಶೀಲ ಜಯ ಹರಿನಾಮ ನಿತ್ಯ ನಿರುಪಮ ಜಯ ಹರಿನಾಮ ಕರ್ತು ಶ್ರೀರಾಮ ಜಯ ಹರಿನಾಮ 17
--------------
ರಾಮದಾಸರು