ಒಟ್ಟು 23 ಕಡೆಗಳಲ್ಲಿ , 18 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಗ) ನದಿಸರೋವರಗಳು ನದನದಿಗಳನು ಸ್ಮರಿಸಿರೋ ನದನದಿಗಳನು ಸ್ಮರಿಸಿ ಹೃದಯ ನಿರ್ಮಳರಾಗಿ ಮುದದಿಂದ ನಿಮ್ಮ ಮನದಧಮತನ ಬಿಟ್ಟ ಸಂ ಪದವಿಗೆ ಸೋಪಾನದಂತಾಗುವದು ಶ್ರೀ ಪದುಮನಾಭನು ವೊಲಿವನು ಪ ಸಿಂಧು ಮರುಧೃತಿ ಹೇಮವತಿ ನೇಮಿ ನೇತ್ರವತಿ ತರಣಿಸುತೆ ನರ್ಮದಾ ಗಾಯತ್ರಿ ಗೋಮತಿ ಗರುಡ ಸಾಧರ್ಮಾ ಸರಸ್ವತಿ ಮಣಿಮುಕ್ತ ಮುಕ್ತನದಿಯು ಪ್ರಣತ ವರದಕಾಗಿಣಿ ಕೃಷ್ಣವೇಣಿ ವೇದವತಿ ಹರಿಧೃತಿ ಇಂದ್ರಾಣಿ ಪುನಃ ಪುನಃ ವಾಣಿವಂ ಜರಫಣಿ ಭೀಮರಥಿನೀ 1 ಧಾರಿ ತುಂಗಾ ಭದ್ರಿಗಣಪತಿ ಶತಭಾಗ ನಾರದಿ ಉಭಯಪಿನಾಕಿ ಚಿತ್ರವತೀ ಮೂರು ಲೋಕೋದ್ಭವ ಭವಾನೀ ಚಾರು ಗಂಡಿಕೆ ಸರಯು ಶ್ರೋಣಿ ಭದ್ರನೀಲ ಕ್ಷೀರನದಿ ಪಾಪಘ್ನ ಮಹಾನದಿ ಅಘನಾಶಿ ವಾರಿಜಾಪ್ತಾವತಿ ಸುರ್ವಣ ಮುಖರೀ ವಿಸ್ತಾರ ಹಾಟಕ ಅತ್ರಿಣೀ 2 ಸುಲಭ ಮಂದಾಕಿನಿ ಕೌಮೋದಕಿ ಶಾಂತಿ ಕಪಿಲ ಚಂದ್ರಭಾಗ ಅರುಣೀ ಪೊಳೆವ ಕಾಳಾವತಿ ತ್ರಿಪಥಿ ಗೌರಿ ಕುಂತಿ ಅಳಕನಂದನ ಅಮಲವತಿ ಭೀಮಸಂಭೆ ಸಿ ತಾಂಬ್ರ ಪರ್ಣಿಯು ಜಯ ಮಂ ಸತಿ ಸತ್ಯವತಿ ವೈಷ್ಣವೀ 3 ಕನಿಕ ಶುಕ್ಲಾವತೀ ಬಾಹುನದಿಗೋವಿಂದ ಮಿನಗುವ ಭೋಗವತಿ ಕಾಶ್ಯಪಿಂಕಾಳಿಂದಿ ಅನುಸಿಂಧು ಐರಾವತಿ ಋಣ ವಿಮೋಚನ ಮಯೂರ ಸಂಭವೆ ನಿತ್ಯ ಪುಷ್ಕರಣಿ ಪಯೋ ಶ್ವಿನಿ ಮಹಾಪಗ ಭದ್ರ ಭೈರವಿ ವಿಚಿತ್ರ ನದಿಗಳನು 4 ಅರುಣೋದಯಲೆದ್ದು ಧರೆಯೊಳುಗಳ್ಳ ಬಲು ಸರಿತಗಳ ನೆನೆದು ಪುಳಕೋತ್ಸವದಲಿ ಪರಮ ಧನ್ಯರಾಗಿ ಪಾಪಗಳ ಪೋಗಾಡಿ ನಿರುತ ಮಾರುತ ಮತದಲೀ ಚರಿಸಿ ನಿಜಭಕುತಿಯಲಿ ಹಗಲು ಇರಳು ಇನಿತು ಸಿರಿಯರಸ ವಿಜಯವಿಠ್ಠಲನ ಚರಣಾಂಬುಜವ ಸರಸದಿಂದಲಿ ಧ್ಯಾನಗೈದು ಈ ನದಿಗಳಲಿ ಕರಣದಲಿ ತಿಳಿದು ನಿತ್ಯಾ5
--------------
ವಿಜಯದಾಸ
7. ಸಂಪ್ರದಾಯದ ಹಾಡುಗಳು ಏಳೈಯ್ಯ ಬೆಳಗಾಯಿತು ಏಳೈಯ್ಯ ರಾಮಾನಂತ ರಂಗ ನರಸಿಂಗ ಏಳೈಯ್ಯ ಪ ಅರುಣೋದಯವಾಗುತಲೆ ಸುರಮುನಿ ಭಕುತರು ಹರಿನೀನೆಗತಿಯೆಂದು ಆನಂದದಿ ನೆರೆದು ನಿಮ್ಮಯ ದಿವ್ಯ ಪಾಡುತಿರಲಿನ್ನು 1 ಕಿನ್ನರ ಸಿರಿಭೂದುರ್ಗಾದೇವಿಯರು ಹರುಷದಲಿ ಅವರವರು ಸೇವೆಗಳನುಸರಿಸಿ ಕಮಲ ಬಳಿಯಲ್ಲಿ ಸ್ಥಿರವಾಗಿ ನಿಂತಿರಲು 2 ಗೂಡಿನ ಕರುಗಳು ಗೋಗಳಿಗಾಗಿ ನೋಡುತಿರೆ ಮಾರ್ಗವನು ಗಾಢನಿದ್ರೆಯೊಳಿರುವ ಕಾರಣವು ಏನೊ 3 ಅಜಮಿಳ ಅಂಬರೀಷ ಅಕ್ರೂರ ವರದನೆ ಗಜರಾಜನು ಕಾಯಿದ ಕರುಣಾವಿಲಾಸನೇ ಪೊರೆವ ಸಂಪನ್ನ ಮಾಧವ ಗೋವಿಂದ 4 ಸಿಂಧು ಶಯನನಾದ ಸಿರಿಹೆನ್ನೆವಿಠ್ಠಲ ಛಂದದಿಂದಲಿ ನಿಮ್ಮ ಶೇವೆಯ ಮಾಳ್ಪರೊಳ್ ಸಂದೇಹಯಾತಕೆ ಶೀಘ್ರದಿಂದಲಿ ಇನ್ನು 5
--------------
ಹೆನ್ನೆರಂಗದಾಸರು
ಅಂಕಿತ ರಹಿತ ಹಾಡುಗಳು ತುಳಸಿಯ ವೃಕ್ಷಗಳ ದಳದಳಗಳ ಮೇಲೆನೆಲಸಿಹನು ಹರಿಯು ಮುದದಿಂದಮುದದಿ ತುಲಸಿಯ ಪೂಜೆಗಳಮಾಡಬೇಕು ಸುಜನರು 1 ತುಲಸಿಯ ಮೂಲದೆ ನದಿಗಳುತುಲಸಿಯ ದಳದೊಳೆ ಶ್ರೀಹರಿಯುತುಲಸಿಯ ಶಾಖೆಯೊಳೆ ಸುರರೆಲ್ಲಾನೆಲೆಸಿಹರು ಶ್ರೀತುಲಸಿಯಮಹಿಮೆಗೆಣೆಯುಂಟೆ 2 ವೃಂದಾವನ ತುಲಸಿಗೆಒಂದು ಪ್ರದಕ್ಷಿಣವಚಂದದಿ ರಚಿಸಿದವರಿಗೆಭೂಮಿಯ ಸುತ್ತಿ ಬಂದಂಥಾಪುಣ್ಯ ದೊರೆವುದು 3 ಜಲದೊಳು ಶೋಧಿಸಿದತುಲಸಿ ದಳವನೆ ಹಾಕಿಆ ಜಲವನು ಶಿರದಿ ತಳಿದರೆತಳಿದರೆ ಗಂಗಾದಿಸಲಿಲದಿ ಮಿಂದ ಸುಫಲವು4 ಭೌಮ ಭಾರ್ಗವ ವಾರದಿಶ್ರೀ ಮಹಾಲಕ್ಷುಮಿಯುನೇಮದಿ ತುಲಸಿ ವನದೊಳುವನದೊಳಗಿರುವಳು ಧೀಮಂತರುಕೊಯ್ಯರದರಿಂದ 5 ಇಳೆಯೊಳಗುಳ್ಳಂಥಾಹಲವು ತೀರ್ಥಗಳಿಹವುತುಲಸಿಯ ಮೂಲದೆಡೆಯಲಿಎಡೆಯಲಿ ತನ್ಮøತ್ತಿಕೆಯತಳೆವುದು ಬಲ್ಲ ಸುಜನರು 6 ಅರುಣೋದಯದಲೆದ್ದುಸಿರಿ ತುಲಸಿಯ ದರುಶನವವಿರಚಿಪುದು ಬಲ್ಲ ಸುಜನರುಸುಜನರು ಪಾತಕಹರಿವುದು ಹರಿಯ ಕೃಪೆಯಿಂದಾ 7 ಸಾರಿಸಿ ರಂಗವಲಿಯನೇರಗೈದಿಕ್ಕಿದನಾರಿಯರಿಗೈದೆತನವನುತನವನು ವೃಂದಾವನಶ್ರೀರಮಣಿಯಿತ್ತು ಪೊರೆವಳು 8 ಮುತ್ತೈದೆತನವನುಪುತ್ರಸಂತಾನವನಿತ್ಯ ಸೇವೆಯನು ರಚಿಸಲುರಚಿಸಲು ತುಲಸೀದೇವಿಇತ್ತು ರಕ್ಷಿಪಳು ಕೃಪೆಯಿಂದಾ9
--------------
ಕೆಳದಿ ವೆಂಕಣ್ಣ ಕವಿ
ಅಧ್ಯಾಯ ಎರಡು ಸ್ವಾತ್ಮಾನಾಪಿ ವರಾಹೇಣ ದತ್ತಾವಾಸ ಸ್ಥಳೋsಚ್ಯುತಃ ಮಾಯಾವೀ ಬಕುಲಾಲಾಭ ತುಷ್ಟೋ ವ್ಯಾsದ್ವೇಂಕಟೇಶ್ವರ ಅರುಣೋದಯದಲೆದ್ದನು ಅಂದಿಗಲ್ಲೆ ಭೂ ವರಾಹನು ಬಂದು ಗರ್ಜನೆ ಮಾಡುತೆದುರಿಗೆ ಮುಂದಕಲ್ಲೆ ಅಡಗಿದನು ಭಯದಿಂದ ವೇಂಕಟನು 1 ಪಿಡಿದನು ಭೂವರಾಹನು ಮಂದ ಜನರನೆ ಮೋಹಿಸುತ ಹೀಗೆಂದ ವೇಂಕಟಗೆ ಇಂದು ನೀನ್ಯಾರೆಲೊ ಪೋಗುವಿಯೆಲ್ಲಿ ನೀ ಎನ್ನ ಮುಂದೆ ನುಡಿಬೇಗ 2 ಮಾತಾಡಿದನು ವೇಂಕಟನು ಆತುರನ ಪರಿಯ ಕೂತುಪೇಳಿದನಾಗ ತನ್ನ ಪುರಾತನ ಕಥೆಯಲ್ಲ ಆತಗೆ ಈ ತಲೆಯ ಔಷಧಕೆ ಬಂದೆನುನೀ ತಿಳಿಯೋ ಎಂದ 3 ಅಪ್ಪಿಕೊಂಡೀ ಮಾತಿಗವನಾ ಮುಪ್ಪಿನವ ತಾ ಕ್ರೋಢರೂಪಿಯು ತಪ್ಪದಲೇ ಅಪ್ಪಿಕೊಂಡಿಹ ಭೂವರಾಹನು ಹಾಲಿಗೆ ಹೆಪ್ಪು ಕೊಟ್ಟಂತೆ 4 ದುಃಖಗಳ ಪೇಳುತ ಸುಮ್ಮನಾಗದೆ ನಿಮ್ಮಾ ಭೆಟ್ಟಿ ಇದು ಸಂಭ್ರಮವು ರಮ್ಯಗಿರಿಯಲ್ಲಿ 5 ಮಾತಾಡಿದನುನಂದೊಂದು ಇಂದು ನಮ್ಮಿಬ್ಬರೊಳಗೆ ಒಂದು ಮಾತು ಉಳಿಯಲಿಲ್ಲಾ ನಿಂದೊಂದು ಮಾತೇನು ಪೇಳೊ ಶ್ರೀ ಲಕ್ಷ್ಮೀಕಾಂತಾ1 ಇರವೆ ಸ್ಥಳ ಒಂದಿಷ್ಟು ಸುದ್ದಿ ಒಂದು ಬಿಟ್ಟು ನಿನ್ನ ಬುದ್ಧಿ ಶ್ರೀ ಲಕ್ಷ್ಮೀಕಾಂತಾ2 ನಿನ್ನವನಾಗಿರುವೆÀ ಒಳ್ಳಿತು ನಿನ್ನಿಂದ ಫಲ ಪೇಳೊ ಶ್ರೀ ಲಕ್ಷ್ಮೀಕಾಂತಾ 3 ಮಡದಿಯ ಕಳೆದು ಮೇಲೆ ಕೊಡು ನೀ ಲಕ್ಷ್ಮೀಕಾಂತಾ 4 ಪದುಮಾವತಿಯ ಶ್ರೀಧರಣಿಕಾಂತಾ ಋಣಮುಕ್ತನಾಗಿ ಅದರಮೇಲೆ ಕೊಟ್ಟೀಯೇನೋ ಶ್ರೀ ಲಕ್ಷ್ಮೀಕಾಂತಾ 5 ಋಣಮುಕ್ತನಾನಾದಮೇಲೆ ಕ್ಷಣಮಾತ್ರ ಇಲ್ಲಿರುವವನಲ್ಲಾ ಒಣಮಾತೇನೋ ಸ್ಥಳ ಪೇಳೆನಗೆ ಶ್ರೀ ಧರಣಿಕಾಂತಾ ಗುಣಗಳುನಿನ್ನಲ್ಲೆ ಇಲ್ಲಹಣವು ಕೊಡಲಾಗುದು ಮತ್ತೆ ಒಣಸ್ನೇಹಕ್ಕೆ ಸ್ಥಳ ಬಂದೀತೆ ಲಕ್ಷ್ಮೀಕಾಂತಾ 6 ಇಲ್ಲೆ ಚಂಚಲ ನಾಗ ಬೇಡಾ ಶ್ರೀ ಧರಣಿಕಾಂತಾ ವಂಚಕ ನೀಸರಿಯೋ ಒಂದಕು ಕೊಡದ ಲೋಭಿ ಒಳ್ಳೆಹಂಚಿಕೆಯನೋ ನೀನು ಶ್ರೀ ಲಕ್ಷ್ಮೀಕಾಂತಾ7 ಕಡೆಗೆ ಚನ್ನಾಗಿ ಪೇಳೊ ನೀನು ಲಕ್ಷ್ಮೀಕಾಂತಾ8 ನಿನ್ನ ಅಭಿಷೇಕವು ಗೆಲಿಸುವಿಯೊ ಧನ್ಯ ಶ್ರೀ ಲಕ್ಷ್ಮೀಕಾಂತಾ 9 ಸ್ವಾಮಿ ಪುಷ್ಕರಣೆಯ ಮೂರು ಪಾದದಿಂದ ಪಾದಕಂತು ಎಷ್ಟೊ ಲಕ್ಷ್ಮೀಕಾಂತಾ 10 ಮತ್ಯಾಕೀಪರಿ ಮಾತಾಡುವಿ ಹೊತ್ತು ಬಹಳಾಯಿತು ಎನಗೆ ಪಥ್ಯಕ್ಕೆ ತಡವಾಯಿತೇಳೋ ಶ್ರೀಧರಣಿಕಾಂತಾ ಸತ್ಯ ನೂರುಪಾದ ಸ್ಥಳವ ಕ್ಲಿಪ್ತ ಮಾಡಿಕೊಟ್ಟೆ ನಿನಗೆ ಸ್ವಸ್ಥದಿಂದ ಇರುಹೋಗೋನೀ ಲಕ್ಷ್ಮೀಕಾಂತಾ 11 ಸ್ವಸ್ಥದಿಂದ ಇರುವೆನ್ಹ್ಯಾಂಗೆ ಪಥÀ್ಯದಡಿಗೆ ಮಾಡುವಂಥ ಹೆತ್ತತಾಯಿ ಇಲ್ಲವೋ ಎನಗೆ ಶ್ರೀ ಧರಣಿಕಾಂತಾ ಹೆತ್ತಾಯಿಯ ಪರಿಯಾಗಿ ನಿನಗೆ ಪಥÀ್ಯದಡಿಗೆ ಮಾಡುವದಕೆ ಮತ್ತ ಬಕುಲಾವತಿಯ ಕೊಡುವೆ ಶ್ರೀ ಲಕ್ಷ್ಮೀಕಾಂತಾ 12 ಇಂಥ ಘಾಯ ಮಾಯುವತನಕ ಜೇನ್ತುಪ್ಪಸಾಮೆಯ ಅನ್ನ ಸಂತತ ಬೇಕಲ್ಲಾ ಎನಗೆ ಶ್ರೀಧರಣಿಕಾಂತಾ ಚಿಂತಾಮಣಿಗೆ ಸರಿಯಾದಂಥ ನಂ ತಾದ್ರಿಯಲ್ಲಿದ್ದ ಮೇಲೆ ಚಿಂತೆಯಾಕೆ ಅದನು ಕೊಡುವೆ ಶ್ರೀ ಲಕ್ಷ್ಮೀಕಾಂತಾ 13 ವಚನ ಧರಣಿಯ ರಮಣ ಈ ಪರಿಯು ಬೇಡಿದ್ದುಕೊಟ್ಟು ತಿರುಗಿದನು ಸ್ವಾಮಿ ಪುಷ್ಕರಣೀಯ ತೀರಕ್ಕೆ ಸರಸದಲಿ ಮುಂದಲ್ಲೆ ಇರುವ ನಿತ್ಯದಲಿ ಪರಮ ಭಕುತಳು ಆಗಿ ಇರುವ ಬಕುಲಾವತಿಯ ಕರದಿಂದ ಪಥ್ಯ ಸ್ವೀಕರಿಸುತಲೇ ನಿತ್ಯದಲಿ ಸುರತಾನಂತಾಖ್ಯ ಗಿರಿಯಲ್ಲಿ ಇರುವವನ ಕರುಣದಲಿ ಮುಗಿಯಿತೆರಡು ಅಧ್ಯಾಯ1
--------------
ಅನಂತಾದ್ರೀಶ - ಕಥನಕಾವ್ಯಗಳು
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಈ) ರುದ್ರದೇವರು ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ಪ ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಮಂಡಲಧಾರಿ ಕಾಣಮ್ಮ ಅ.ಪ. ಕೈಲಾಸಗಿರಿಯ ದೊರೆಯಿವನಮ್ಮ-ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ-ಸಂಕರ್ಷಣನೆಂದುಕೇಳೆ ಮಹಿಯೊಳು ಜನ ಪೊಗಳುವರಮ್ಮ-ಇದು ನಿಜವಮ್ಮನಾಲಿಗೆ ಸಾಸಿರ ಫಣಿಭೂಷಣ ನಮ್ಮರಮೆಯರಸಗೆ ಇವ ಮೊಮ್ಮಗನಮ್ಮ 1 ಪತಿ ಇವನಮ್ಮ-ಮಾವನ ಯಾಗದಲಿಬ್ಹಾಳ ಕೃತ್ಯಗಳನು ನಡೆಸಿದನಮ್ಮ-ಸಾಗರದಲಿ ಹುಟ್ಟಿದಕಾಳಕೂಟವ ಭಕ್ಷಿಸಿದನಮ್ಮ-ರಾಮನ ದಯವಮ್ಮಮೇಲೆ ಉಳಿಯಲು ಶೇಷಗರಳವುನೀಲಕಂಠನೆಂದೆನಿಸಿದನಮ್ಮ2 ಹರನೊಂದಿಗೆ ವೈಕುಂಠಕೆ ಬರಲು-ತಾತಗೆ ವಂದಿಸುತತರುಣೀರೂಪವ ನೋಡ್ವೆನೆನಲು-ಹರಿ ತಾ ನಸುನಗುತಕರೆದು ಸೈರಿಸಲಾರೆ ನೀ ಎನಲು-ಹಠದಿ ಕುಳ್ಳಿರಲುಕರುಣೆಗಳರಸನು ಹರನ ಮೊಗವ ನೋಡಿಅರುಣೋದಯಕೆ ಬಾರೆಂದು ಕಳುಹಿದ 3 ಅರುಣೋದಯಕೆ ಗಂಗಾಧರ ಬರಲು-ಹದಿನಾರು ವರುಷದ ತರುಣೀರೂಪದಿ ಹರಿ ವನದೊಳಗಿರಲು-ಚರಣನಖಾಗ್ರದಿಧರಣೀ ಬರೆಯುತ್ತ ನಿಂತಿರಲು-ಸೆರಗ ಪಿಡಿಯೆ ಬರಲುಕರದಿ ಶಂಖ ಗದೆ ಚಕ್ರವ ತೋರಲುಹರನು ನಾಚಿ ತಲೆತಗ್ಗಿಸಿ ನಿಂತ4 ಮಂಗಳಾಂಗನೆ ಮಾರಜನಕ-ನಾ ಮಾಡಿದ ತಪ್ಪಹಿಂಗದೆ ಕ್ಷಮಿಸೊ ಯದುಕುಲ ತಿಲಕ-ವಕ್ಷದಲೊಪ್ಪುವ ನಿನ್ನಂಗನೆ ಅರಿಯಳು ನಖಮಹಿಮಾಂಕ-ಹೀಗೆನುತಲಿ ತವಕರಂಗವಿಠಲನ ಪದಂಗಳ ಪಿಡಿದು ಸಾಷ್ಟಾಂಗವೆರಗಿ ಕೈಲಾಸಕೆ ನಡೆದ 5
--------------
ಶ್ರೀಪಾದರಾಜರು
ಉದಯವಾಯಿತು ಹೃದಯ ಕಮಲದೊಳಗೆ ಧ್ರುವ ಗುರುಕರುಣಾನಂದಬೋಧ ಅರುಣೋದಯವಾಯಿತು ಸ್ಮರಣಿಗರವು ದೊರೆಯಿತು ಹರಿಯ ಚರಣದ 1 ಸಮ್ಯಜ್ಞಾನದ ಪ್ರಭೆ ಸಮ್ಯವಾಗಿದೋರಿತು ತಾಮಸನಿದ್ರೆ ಹರಿಯಿತು ತಿಮಿರಾಂಧದ 2 ಥಳಥಳಿಸುವ ರವಿಕೋಟಿ ಬೆಳಗಾಯಿತು ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ 3 ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಘಲ ಉದಯವಾಯಿತದೃಷ್ಟವು ಸದೃಷ್ಟವಾಗಿ 4 ಸದ್ಗತಿ ಸುಖವಿದು ಸದೋದಿತವಾಯಿತು ಸಾಧಿಸಿ ಮಹಿಪತಿಗೆ ಸದ್ಗರು ಕೃಪೆಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಕಾದಶಿ ನಿರ್ಣಯ ಅನಲು [ಸಮನೆ] ಮನೆಗೆ ಪೇಳಬಂದ ಅನಾಥಬಂಧು ಹಯವದನ ಗೋವಿಂದ ಪ. ತನ್ನ ನಂಬಿದವರ ತಾಪತ್ರಯವಳಿದು ಉನ್ನಂತ ಪದವೀವ ದಿನತ್ರಯವನ್ನು 1 ವೃದ್ಧಿಮಾತ್ರ ಅರುಣೋದಯದ ಕೆಳಗೆ [ಶುದ್ಧಿದಂ] ಘಳಿಗೆ ಸಾಕುಯೆಂದು 2 ಅತಿವೃದ್ಧಿ ಒಂದುಘಳಿಗೆಯ ಕೆಳಗೆ ವಿಂ ಶತಿ [ಫಣಫಲ] ದೊಳಗೆ [ಶುದ್ಧಿ] ಬೇಕೆಂದು 3 ತಿಥಿ ವೃದ್ಧಿಆದಾಗೆ ಹತ್ತು [ಫಣಪಲ] ತಿಥಿಕ್ಷಯದಲ್ಲಿ ಅದರೊಳು [ಶುದ್ಧಿ] ಬೇಕೆಂದು 4 ಇಂದು ದಶಮಿ ಶಾಖವ್ರತವ ಮಾಡಿ ನೀವು ಒಂದು ಬಾರಿ ಭೋಜನ ಮಾಡಿರೊಯೆಂದು 5 ತಾಂಬೂಲಚರ್ವಣ ಸಲ್ಲ ಸ್ತ್ರೀಸಂಗ ಹಂಬಲವನ್ನು ನೀವು ಬಿಡಿರಿಯೆಂದು 6 ನಾಳೆ ಏಕಾದಶೀ ಉಪವಾಸ ಜಾಗರ ಆಲಸ್ಯ ಮಾಡದೆ ಆಯತಾಕ್ಷಗೆಯೆಂದು 7 ಫಲಹಾರವು ಸಲ್ಲ ಭೋಜನವು ಸಲ್ಲದು ಜಲಪಾನ ಸಲ್ಲ ಮೆಲಸಲ್ಲದೆಂದು 8 ನಾಲ್ಕುಹೊತ್ತಿನ ಆಹಾರವ ಬಿಡುವುದು ಹದಿ ಜಾಗರ ಮಾಡಿರೊಯೆಂದು 9 ಪೇಳ ಅರ್ಧದ್ವಾದಶಿಬಂದಾಗ ನೀವೆಲ್ಲ ಒಲುಮೆಯಿಂದ ಪಾರಣೆಯ ಮಾಡಿರೊಯೆಂದು10 ಇಂತು ತಿಥಿತ್ರಯ ಮಾಡುವ ಜನರನ್ನು ಸಂತತ ಪೊರೆವ ಶ್ರೀಕಾಂತ ಹಯವದನ 11
--------------
ವಾದಿರಾಜ
ಏಳಮ್ಮ ತಾಯೆ ಮುದದಿಂದೆಮ್ಮನು ಕಾಯೆ ಕೋಳಿ ಕೂಗುತಲಿದೆ ಕೇಳಮ್ಮಯ್ಯಾ ಪ ಕಾಲನಾಮಕ ಸೂರ್ಯದೇವನ ರಥದ ಕೆಂ- ಧೂಳಿಯೇಳುವಂತೆ ಅರುಣೋದಯವಾಯ್ತು ಅ.ಪ. ಮರುತಸುತನೆದ್ದು ಪರಾಕ್ಹೇಳುತಿಹನು ಗರುಡನು ಹೊರಬಾಗಿಲೊಳು ಕಾದಿರುವನು ಪರಿವಾರದವರೆಲ್ಲ ಕರಕಟ್ಟಿ ನಿಂದಿಹರು ಹಿರಿಯ ಸೊಸೆ ವಾಣಿ ವಾರಿ ಕಲಶ ಪೊತ್ತಿಹಳು1 ಸಾರಭಕ್ತರು ಎಲ್ಲ ಸಾಲಾಗಿ ನಿಂದಿಹರು ಭೂರಿ ಕುತೂಹಲದಿ ನಿನ್ನ ದರುಶನಕಾಗಿ ವಾರಿಜಭವ ಮುಖ್ಯ ಸರುವ ದೇವತೆಗಳು ಸಾರಿ ಬರುತಿರುವರು ನೀನೇಳಮ್ಮಯ್ಯಾ 2 ನೀ ಪೋಗಿ ಆತನ ಕರಪಿಡಿದೆಬ್ಬಿಸಾದೊಡೆ ಶ್ರೀಪತಿಯು ಶೇಷತಲ್ಪದಿಂದೇಳನು ಅಪಾರಮಹಿಮ ಶ್ರೀ ರಂಗೇಶವಿಠಲನ ವ್ಯಾಪಾರಂಗಳನರಿತವರಿನ್ನ್ಯಾರಮ್ಮ 3
--------------
ರಂಗೇಶವಿಠಲದಾಸರು
ಏಳು ಏಳು ಕೇಶವಾ ಶ್ರೀಮಾಧವಾ ಏಳು ಏಳು ಕೇಶವಾ ಪ ಏಳಯ್ಯ ಮಧುಸೂದನ ಚಕ್ರಧಾರೀ ಏಳಯ್ಯ ನಿಜಶೌರಿ ದಶರೂಪಧಾರೀ ಏಳಯ್ಯ ದೇವಕಿಕಂದ ಉದಾರೀ ಏಳಯ್ಯ ಮುರಹರ ಕೌಸ್ತುಭಧಾರೀ1 ತ್ರಿಜಗವನ್ನು ಬೇಗ ಪಾಲಿಸಲೇಳು ಭಜಕರ ಕರುಣದಿ ರಕ್ಷಿಸಲÉೀಳÀು ಸುಜನರ ಮರೆಯದೆ ವರದೆತ್ತಲಿಕೆ ಯೇಳು ಕುಜನರ ಹರುಷದಿ ತರಿಯಲೇಳು 2 ದಾಸದಾಸರು ಬಂದು ಸೇವಿಸುತಿಹರೇಳು ತಾಸು ತಾಸಿಗೆ ತತ್ವವರುಹಲೇಳು ದಾಸಗೆ ನಿತ್ಯದಿ ಭಾಸವಾಗಲೇಳು ದಾಸಗೆ ಮುಕ್ತಿಯ ಪಾಲಿಸಲೇಳು 3 ಅರುಣೋದಯವಾಯ್ತು ಕಿರುಣೋದಯವಾಯ್ತು ಭರದಿಂದ ಸೂರ್ಯನು ಮೇಲೇರುತಿಹನು ಚರಣ ಕಿಂಕರರೆಲ್ಲ ಸಂಸಾರ ಶರಧಿಯ ಸರಸದಿ ದಾಂಟಿ ನಿಂನನು ಸೇರುತಿಹರು 4 ವಿದ್ಯೆಯರುಹಲು ಯೇಳು ಜ್ಞಾನವೀಯಲು ಯೇಳು ಬುದ್ದಿಯ ಕಲಿಸಿ ಆತ್ಮವ ಸೇರಲೇಳು ಮದ್ದು ಭವರೋಗಕ್ಕೆ ಬೇಗನೀಯಲು ಯೇಳು ಎದ್ದು ಲೋಕಕ್ಕೆ ನೀ ಬೆಳಗಲೇಳು 5 ಸನ್ನುತ ವರ ದೂರ್ವಾಪುರಕೆ ದಿಗ್ದೇಶದಿಂ ದೀನದಾಸರು ಬಂದು ಘನಭಕ್ತಿಯಿಂದ ನಿತ್ಯ ಮಾಡುವರಯ್ಯ ಚನ್ನಕೇಶವಾ ಸೇವೆ ಸ್ವೀಕರಿಸೇಳು 6
--------------
ಕರ್ಕಿ ಕೇಶವದಾಸ
ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ- ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4 ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೆ ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ- ದೇವ ಬಲಿಹರಣ ಅತಿಥಿ ಪೂಜೆಗಳಿಂದ 5 ಪರಮ ಹರುಷದಿಂದ ದೇವ ಪ್ರಸಾದವನು ವರ ಮಾತೃ ಪಿತೃ ಸೋದರರು ಸಹಿತ ಪರಮ ಸಖರ ಪಂಙÂ್ತ ಪಾವನರೊಡಗೂಡಿ ನರಹರೆ ಎನುತ ಭೋಜನ ಮಾಡಿ ಮೋದಿಸುತ 6 ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ ಶ್ರೀಯರಸನಂಘ್ರಿ ಸೇವೆಯನು ಮಾಡಿ ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ- ರಾಯಣನ ಗುಣಗಳನು ಪೊಗಳುತಲಿ 7 ತನುಮನವÀ ಶ್ರೀಹರಿಯಾಧೀನವ ಮಾಡಿ ಅನುಸರಿಸಿ ಭಾಗ್ಯಬಡತನ ಎಣಿಸದೆ ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8 ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ ಪಾವನ ಚರಿತ್ರ ಹಯವದನನ ನೆನೆದು 9
--------------
ವಾದಿರಾಜ
ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ | ಙÁ್ಞನಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ | ಸಿರಿ | ಪ್ರಾಣೇಶ ಕುಣಿಯುವನಯ್ಯಾ ಅಯ್ಯಯ್ಯಾ ಪ ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ | ಶರೀರದಿಂದಲಿ ಅಷ್ಟಕೇತ್ರಗಳ ಪುಟ್ಟಿಸಿ | ವರದೇಶ ವೈಕುಂಠದಲ್ಲಿಟ್ಟನು ಸಪ್ತ | ಪಿರಿಸಹಿತ ತೀರ್ಥರಾಜಾ || ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ | ಇರುತಿಪ್ಪವಲ್ಲಿ ಮಿಗಿಲಿದಾದಕೆ ಅತಿಶಯವೊ | ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ | ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ 1 ತರಣಿಸುತೆ ಮಾನಸೋತ್ತರ ಶೈಲದಲಿ ಕುಳಿತು | ವರರಾಜ ತೀರ್ಥ ಮಾಧವನ ಸಾರುವೆನೆಂದು | ಭರದಿಂದ ತಪವು ಮಾಡೆ ಸರಸಿಜೋದ್ಭವನೊಲಿದು | ವರವಿತ್ತ ಮುಂದೆ ನೀನು ಧರೆಯೊಳು ಕಾಳಿಂ || ದ ರಾಯಗೆ ಕುವರಿ ಎನಿಸಿ ಮಹಾಸರತಿಯಾಗಿ ಪೋಗಿ | ಸಿರಿ ಮಾಧವನ ಚರಣ | ನೆರೆ ಮೆರೆದಳೈಯ್ಯಾ ಅಯ್ಯಾ ಅಯ್ಯಾ ಅಯ್ಯಾ 2 ತುರುಗಮ ನೆವದಿಂದ ಅರವತ್ತು ಸಾವಿರ ಸ | ಗರನ ಕುಲದವರು ಕಪಿಲಾಖ್ಯಾ ಹರಿ ಮುನಿಯಿಂದ | ಉರಿದು ಪೋಗೆನಲಾಗಿ ಭಗೀರಥ ಭೂಪತಿ ಉಗ್ರ | ಧುರಧಿ ತಪವನ್ನೆ ಮಾಡೇ | ಹರಿ ನಿರೂಪವ ತಾಳಿ ಗಿರಿಗಹ್ವರವನೊಡದು | ಸಿರಿ | ಚರಣದೆಡೆಯಲ್ಲಿ ನಿಂದು ಯಮುನೆ ವಡಗೊಡಿ ಬಾ | ಮರವಾದವಳಂದು ಅಯ್ಯ ಅಯ್ಯಾ ಅಯ್ಯಾ3 ಸರಸ್ವತಿಯ ಬೆರೆದು ತ್ರಿವೇಣಿ ಸಂಗಮವೆಂದು | ಕರಿಸಿಕೊಂಡಿತು ವಿಕರ ಸೋಮೇಶ್ವರನ ತನಕ | ಪರಮೇಷ್ಠಿಯಿಲ್ಲಿಗೈತಂದು ಬೊಮ್ಮಾಂಡವನು | ಸರಿ ಮಾಡಿ ತೊಲಗಲಾಗೀ || ಸುರರು ಶಿರದೂಗುತಿರೆ | ವರರಾಜತೀರ್ಥ ಮಹಾಭಾರವಾಗಲು ಇದಕೆ | ಸರಿ ಮಿಗಿಲು ಇಲ್ಲೆನುತ ಪೊಗಳಿ ಕರದರು ಮಹ | ವರದ ಪ್ರಯಾಗವೆಂದಯ್ಯಾ ಅಯ್ಯಾ ಅಯ್ಯಾ 4 ಪುರವೈರಿ ನಟಣೆ ಪೂ ತುಲಸಿ ಸುರಪತಿ ವೈಶ್ವಾ | ನರನು ತಿಲ ಹೋಮ ಯಮರಾಯಕಿಂಚಿತು ದಾನ | ನಿಋರುತಿತ ಪೈತೃಕಕರ್ಮ ವರುಣ ಜಲದಾನಸ್ತುತಿ | ಮರುತ ಭೂತನು ಕುಬೇರ || ಅರಗಳಿಗೆ ವಸತಿ ಈ ವಟನಿಕಟ್ಟಿಯಲಿಯಿದ್ದು | ಪರಿಪರಿಯಿಂದಲಿ ಒಲಿಸಿ ಮಾಧವನಿಂದ | ಪುರಷಾರ್ಥ ಪಡೆದು ಸುಖಿಸಿದರು ಸಮಸ್ತ ಬಗೆ | ಅರಿತು ಕೊಂಡಾಡಿ ಜನರೈಯ್ಯ ಅಯ್ಯಾ ಅಯ್ಯಾ5 ಎರಡೊಂದು ಮೂರು ಕುಲದ ಮಧ್ಯ ನಿಂದು | ಕರ್ತಾರಿಯೊಳಗೆ ಮಿಂದು ಸತ್ಕರ್ಮವನೆಸಗಿ ಭೂ | ಸುರರ ಮೆಚ್ಚಿಸಿ ಮನದಿ ಪಾಪಗಳ ಉಚ್ಚರಿಸಿ | ಕರಣ ನಿರ್ಮಲಿನರಾಗಿ | ವಿಪ್ರ ಚಂಡಾಲ || ಪರಿಯಂತ ವಪನವೆ ಮುಖ್ಯವೆಂದು ತಿಳಿದು | ಚರಿಸಿದರೆ ಅನಂತ ಜನ್ಮಕ್ಕೆ ಮಹಾಸೌಖ್ಯ | ಬರಿದೆ ಆಗದು ಕಾಣಿರೈಯ್ಯ ಅಯ್ಯ ಅಯ್ಯಾ6 ಧರೆಯ ಮೇಲೆ ಬಿದ್ದ ಶಿಶುಗಳ ತಂದು ಮುಂಡಣವ | ಉರುತರ ಬುದ್ದಿಯಿಂದ ಮಾಡಿಸಲಿ ಬೇಕು ವಿ | ಸ್ತರಿಸುವೆನಯ್ಯಾ ಯೌವನ ವಾರ್ಧಿಕರಿಗೆ ನಿಜ | ವರನಾರಿಯರಿಗೆ ವೇಣಿ ಸರಿ ಎನ್ನಿ ಸಾತ್ವೀಕ || ಪುರಾಣದಲಿ ಪೇಳಿದ ಎರಡು ಭುಜದಲಿ ತಪ್ತ ಚಕ್ರ | ವಿರಹಿತರಾಗಿ ಬರಲು ಷಣ್ಮುತ ಜನಕ ಗತಿಯಿಲ್ಲ ಮತಿಯಿಲ್ಲ | ಸ್ಥಿರವಾಕ್ಯ ಲಾಲಿಪುದು ಅಯ್ಯಾ ಅಯ್ಯಾ ಅಯ್ಯಾ 7 ಎರಡೈದು ತುರಗ ಕೃತು ಮೊದಲಾದ ತೀರ್ಥಗಳು | ಪರಿಪರಿ ದೇವ ಮುನಿಗಳು ನಾಮದಲಿ ಉಂಟು | ಪರಮಭಕುತಿಯಿಂದ ಮಜ್ಜನಾದಿಯ ಮಾಡೆ | ಪರಲೋಕ ಕರತಳದೊಳು || ಇರುತಿಪ್ಪದು ನಿತ್ಯಾ ಪ್ರಯಾಗರಾಜನ | ಸ್ಮರಣೆ ಮಾಡಿದ ಮನುಜನು ಆವಾವಲ್ಲ್ಯಾದರು ಇರಲು | ಮಾಧವ ವೊಳಗೆ ಮೊಳೆವ | ದರುಶನವ ಕೊಡುತಲಯ್ಯ ಅಯ್ಯಾ ಅಯ್ಯಾ 8 ಅರುಣೋದಯಲೆದ್ದು ಶುದ್ಧಾತ್ಮರಾಗಿ | ಪರಿಪರನೆಂಬೊ ಙÁ್ಞನದಲಿ ಹಾಡಿಪಾಡಿದವರ | ದುರಿತ ರಾಸಿಗಳ ದಹಿಸಿ ನಿಂ | ದಿರದೆ ಸಂತರ ಕೊಡಿಸಿ || ಮೊರೆವುತಿಪ್ಪುದು ಗಡಾ ಸಿದ್ದಾರ್ಥ ಕ್ಷೇತ್ರವಿದು | ನೆರೆನಂಬಿ ಮಾನವನು ಮಾನಸದಲಿ ಭಜಿಸಿ | ಸಿರಿ ವಿಜಯವಿಠ್ಠಲ ಕರುಣವುಳ್ಳವನಿಗೆ | ದೊರಕುವದು ದೊರಕುವದಯ್ಯಾ ಅಯ್ಯಾ ಅಯ್ಯಾ 9
--------------
ವಿಜಯದಾಸ
ನಿತ್ಯ ಸೋಧಿಸಿ ಭಕ್ತಿ ರಸÀ ಸ್ವಾದ ಮಾಡುವ ಸಾಧುಗಳೊಳಗಿಡೊ ಶ್ರೀಶಾ ರಮೇಶ ಪ ಬೋಧಿಸಿ ತತ್ತ್ವರಸ ಸ್ವಾದ ನೀಡುವ ಮಾಧವ ಶ್ರೀಶನೆ ಮೋದ ಬೀರುತ ನಿನ್ನ ಪಾದವ ತೋರುವ ಸಾಧುಗಳೊಳಗಿಡೊ ಅಗಾಧ ಮಹಿಮನೆ ಅ.ಪ ಭವÀಸಂಸಾರದೊಳಿರಲು ಸಜ್ಜನರು ಅರುಣೋದಯದೊಳೆದ್ದು ನಿನ್ನ ಚರಣಪಲ್ಲವವನ್ನು ಕೃಷ್ಣಾ ಸ್ಮರಿಸುತಲಿರುವರೊ ಪರಮಪುರುಷಕೇಳೊ ಅಂಥಾ ವರ ಭಾಗವತರನು ಕರುಣದಿ ತೋರೋ ಶ್ರೀಶಾ ವರ ನೂಪುರಗೆಜ್ಜೆ ಧರಿಸಿ ಮೆರೆವ ದೇವಾ ವರ ಭಕ್ತರು ಕರೆ ಕರೆದಲ್ಲಿಗೆ ಬಹ ಶರಧಿ ಶಯನ ನಿನ್ನ ಬಿರುದಲ್ಲವೆ ಕೃಷ್ಣಾ ತ್ಪರಿತದಿ ನಿನ್ನಡಿ ಸ್ಮರಿಸುವರನೆ ತೋರೊ 1 ಅಗರು ಚಂದನ ಗಂಧ ಸೊಗವಿಲಿ ಧರಿಸುತ ಮಿಗೆ ಪೀತಾಂಬರದುಡಿಗೆಯನುಟ್ಟು ಕೃಷ್ಣಾ ಸಿರಿ ಸಹಿತಿರೆ ಸೊಗವಿಲಿ ಕರಿರಾಜನ ಸ್ವರ ಆಲಿಸಿ ಅಗಹರ ಸಿರಿಗ್ಹೇಳದೆ ಬಂದೆ ಶ್ರೀಧರ ಝಗಝಗಿಸುತ ನಿನ್ನ ಪದರುಹಗಳನಿಟ್ಟು ಮಿಗೆ ವೇಗದಿ ಬಂದು ಕರಿಯನುದ್ಧರಿಸಿದೆ ಈಗ ಬೇಗ ನಿನ್ನ ಭಕ್ತರ ಸೊಗವಿಲಿ ತೋರೋ ಕೃಷ್ಣಾ 2 ಯತಿ ಮುನಿ ಹೃದಯಾನಂದ ಶ್ರೀಕೃಷ್ಣ ಸತತದಿ ನಿನ್ನ ನಾಮ ಜತನ ಮಾಡುತ ತಮ್ಮ ಮತಿಭ್ರಮಣೆಯಲು ನಿನ್ನಾಕೃತಿ ನೋಡುತ ಸ್ತುತಿಪ ಯತಿಕುಲ ತಿಲಕಾಗ್ರಣಿ ಶ್ರೀ ಶ್ರೀನಿವಾಸ ಎನ್ನ ಮತಿಭ್ರಮಣೆಯನು ನೀಗಿಸುವಂಥಾ ಸುಜನರ ಸತತದಿ ತೋರಿಸೋ ಕ್ಷಿತಿಯೊಳು ವೆಂಕಟ ಪತಿತ ಪಾಮರರನು ಗತಿಕಾಣಿಸೆ ಕೃಷ್ಣಾ3
--------------
ಸರಸ್ವತಿ ಬಾಯಿ
ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ಅಪರಾಧಕಾಕರಾದವನು ಪ. ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದುಪೊರೆವ ನಿನ್ನಡಿಯ ಮರೆದುದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದುಮರಿಯಾದೆಗೆಟ್ಟು ತಿರಿದುಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ 1 ಜಟ್ಟಿಗಳ ಮನೆಯ ನಾಯಂತೆ ಒಳ್ಳೆಬಟ್ಟೆಗಳತೊಟ್ಟವರ ಹಿಂದೆ ತಿರುಗಿಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರುಕೆಟ್ಟು ಮುರಿದುದನು ಪೇಳಿಉಟ್ಟ ಅರಿವೆಯ[ಕೋರಿ] ಹೊಟ್ಟೆ ಬಾಯನೆ ತೋರಿಕೊಟ್ಟುದಕೆÉ ತೃಪ್ತನಾಗದೆ ಅವರ ಬಯ್ವವನು 2 ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-ಕೃತ್ಯ ಶತಗಳನು ಮಾಡಿಸತ್ಯ ಶೌಚಂಗಳ ಬಿಟ್ಟು ಶ್ರವಣ ಮನನಾದಿ ಪ್ರ-ಸಕ್ತಿಗಳ ಹೋಗಲಾಡಿಉತ್ತಮರು ತಾಯಿತಂದೆ ಗುರುಹಿರಿಯರುಗಳಅರ್ಥಗಳನಪಹರಿಸಿ ಅವರ ನಿಂದಿಸುವನು 3 ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿಸರ್ವವಿಹಿತಗಳ ಮೀರಿಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನನಿರ್ವಾಹಗಳನೆ ತೋರಿದುರ್ವಿಚಾರದಿ ಸ್ವಲ್ಪಧನಕಾಗಿ ಎನ್ನೊಳಿಹಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ 4 ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯಕುಲಸತಿಯ ಕೂಡೆ ಕಲಹಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-ಗಳ ಮುರಿವ ಪಾಪಚಿಂತೆಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿಸುಲಭ ಹಯವದನನ್ನ ಮರೆತ್ಹಾಳುಹರಟೆಯವ 5
--------------
ವಾದಿರಾಜ