ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆತ್ಮಶೋಧನೆ ಎಲ್ಲರಲ್ಲಿಹ ಲಕ್ಷ್ಮೀನಲ್ಲ ಪೊರೆಯೊ ನಿಲ್ಲದಿಹ ಮನವ ನಿನ್ನಲ್ಲೆ ಇರಿಸೋ ಪ ಇಲ್ಲಿ ಯಾರಿಲ್ಲೆಂದು ಮೆಲ್ಲನೆ ಪರಸತಿಯ ಕಳ್ಳತನದಲಿ ಕೂಡಿ ಸುಳ್ಳು ಹೇಳಿ ಎಲ್ಲ ಕಡಿ ದಿಗ್ದೇವ ತತ್ವೇಶರಲ್ಲಿರುವ ಪುಲ್ಲನಾಭನೆ ನಿನ್ನ ವ್ಯಾಪಾರವರಿಯೆ 1 ಅರುಣನುದಯದಲೆದ್ದು ಪರರ ವಂಚನೆಗಾಗಿ ಅರಿಯದೆ ದ್ರವರೂಪ ಮನರೂಪ ಮೊದಲಾದ್ದು ಅರಿಷಟ್ಕರಿಂದ ಪರರೊಡವಿಯನು ಬಯಸುವೆನು 2 ಅಂಗಡಿಯ ತೆರದಿ ನಾನ್ಹಿಂಡುಗೊಂಬೆಗಳ್ಹೂಡಿ ಅಂಗ ಚಲಿಸದೆ ಮೂಗು ಹಿಂಡುತಲೆ ಕುಳಿತು ಅಂಗಜ ಜನಕ ಶ್ರೀ ನರಹರಿಯ ಧ್ಯಾನಿಸದೆ ಭಂಗಕೆ ಗುರಿಮಾಳ್ವ ಮಣ್ಣು ಚಿಂತೆಪೆನೊ 3
--------------
ಪ್ರದ್ಯುಮ್ನತೀರ್ಥರು
ದುರಿತ ತ್ಯಜಿಸಿರೋ ಪರಮ ಸಾಧ ಐಕೂರು ನರಸಿಂಹಾರ್ಯರ ಪ ಕೃಷ್ಣತೀರದಿ ಮಿಂದು | ಕೃಷ್ಣÀವರನೊಳು ಜಿಷ್ಣು ಸೂತನ ನೋಳ್ಪ | ವಿಷ್ಣು ದಾಸರ 1 ತರುಳತನದಲಿ | ಸದ್ಗುರುವರೇಣ್ಯರ ಚರಣ ಸೇವಿಸಿ ಶಾಸ್ತ್ರವರಿತ ಧೀರರ 2 ಸತತ ನಂಬಿದ ಶಿಷ್ಯತತಿಗೆ ಹರಿಗುಣ ಹಿತದಿ ಸುರಿದ | ಅಪ್ರತಿಮ ಮಹಿಮರ 3 ಪವನ ಶಾಸ್ತ್ರವೇದ | ಕವನವೆನ್ನುತ ವಿವರಿಸುತ್ತಲಿ ತನ್ನವರ ಪೊರೆದರ 4 ಏನು ಬಂದರು ಮನದಿ ಶ್ರೀನಿವಾಸನ ಧ್ಯಾನ ಬಿಡದಿಹ | ಮಹಾನುಭಾವರ 5 ಭಕುತಿ ಜ್ಞಾನವ ತಮ್ಮ ಭಕುತ ವರ್ಗಕೆ ಪ್ರಕಟಗೊಳಿಸಿದ ಇಂಥ | ಮುಕುತಿ ಯೋಗ್ಯರ 6 ಭುವನ ಮೇಲಿಹ ಇವರು ದಿವಿ ಭವಾಂಶರು ರವಿ ನಿಭಾಂಗರು | ಜವನ ಭವಣೆ | ತರಿದರು 7 ಇವರು ಪೇಳುವ ವಚನ ಶ್ರವವಣಗೈಯಲು ಶೌರಿ ಭುವನ ಪಡೆವರು 8 ಕಂತುಪಿತ ಕಥಾ ಸುಧಾ | ಗ್ರಂಥ ಮರ್ಮವ ಆ ದ್ಯಂತ ಬಲ್ಲರು ಪರಮ ಶಾಂತಿ ಶೀಲರು 9 ಮೌನಧ್ಯಾನದ ಜ್ಞಾನ ಖೂನ ತೋರದೆ ಹೀನರಂದದಿ ಹೊರಗೆ ಕಾಣಿಸುವರು 10 ಬಾಲಕೃಷ್ಣನ ದಿವ್ಯಲೀಲೆ ಚರಿತೆಯ ಕಾಲ ಕಳೆಯರು 11 ನಿಂದ್ಯ ವಂದನೆ ಬಂದ ಕುಂದು ಶ್ಲಾಘನೆ ಇಂದಿರೇಶನೆ ತಾನೆ ತಂದ ನೆಂಬರು 12 ಪಾದ ಪೊಂದಿದ ಜನಕೆ | ಮೋದಗರೆವರು ವ್ಯಾಧಿ ಕಳೆದರು ವೇದ ಬೋಧಿಸಿದರು 13 ವಿವಿಧ ವೈಭವ ಮೇಣ್ | ಕುವರ ಭಾಗ್ಯವ ವಿವಿಧ ಭೋಗವ ಶಿಷ್ಯ ನಿವಹಕಿತ್ತರು 14 ನಿತ್ಯ ಪೇಳುತ ಭೃತ್ಯನಿಕರಕೆ ಸಧೃಡ ಚಿತ್ತವಿತ್ತರು 15 ಕಾಮವಾಸನೆ ಸುಟ್ಟು | ನೇಮ ಪೂರ್ವಕ ರಾಮನೊಲಿಮೆಯ | ವಿಶ್ವಪ್ರೇಮವೆಂಬರು 16 ಈ ಸುಮಹಿಮರ | ಸದುಪದೇಶ ಕೊಳ್ಳಲು ಕ್ಲೇಶಬಾರದು | ಯಮನು ಘಾಸೆÉಗೊಳಿಸನು 17 ನಿರಯ ಪಾತ್ರರು 18 ಇನಿತುಪಾಸನೆಗೈವ ಘುನ ಮಹಾತ್ಮರ ಗುಣಗಣಂಗಳ | ತುತಿಸಲೆನಗೆ ಸಾಧ್ಯವೆ 19 ಅರುಣನುದಿಯದಿ | ಇವರ ಚರಣ ಕಮಲವ ಸ್ಮರಣ ಮಾಡಲು | ಹರಿಯ ಕರುಣವಾಹದು 20 ಸಾಮಜವರ ವರದ ಶಾಮಸುಂದರನ ಪ್ರೇಮಪಾತ್ರ ನಿಷ್ಕಾಮ ಪೂರ್ಣರು 21
--------------
ಶಾಮಸುಂದರ ವಿಠಲ
ಸಾರಿದೆನೋ ನಿನ್ನ ವೆಂಕಟರಮಣ ಪ ನಾರಪ್ಪಯ್ಯನಿಗೊಲಿದು ಗೋರೂಪದಲಿ ಬಂದಿಯೊ ಅ.ಪ ಸುಂದರ ಶುಭಕಾಯಾ ಆಕಾಶರಾಜನ ನಂದಿನಿಯಳ ಪ್ರೀಯ ವಂದಿಸುವೆನು ಭವಬಂಧನ ಬಿಡಿಸಯ್ಯ 1 ಕುರಕಿಹಳ್ಳಿಯ ಗ್ರಾಮದಿ ಶಿಲೆಯೊಳಗೆನಿಂದು ವರಕೃಷ್ಣಾನದಿ ಜಲದೀ ಅರುಣನುದಯದಲ್ಲಿ ನಿರುತ ಪೂಜೆಯಕೊಳುವಿ 2 ನೀರದ ನಿಭಕಾಯಾ ಧರೆಯೊಳುಕೃಷ್ಣಾ ತೀರ ಕಾರ್ಪರನಿಲಯಾ ಘೋರ ಪಾತಕಹರ ನಾರಸಿಂಹಾತ್ಮಕನೆ 3
--------------
ಕಾರ್ಪರ ನರಹರಿದಾಸರು
ಈ ಜೀವನಿಂದು ಫಲವೇನು |ರಾಜೀವಲೋಚನನ ಮರೆದಿಹ ತನುವಿನಲಿ ಪ.ಅರುಣನುದಯಲೆದ್ದು ಹರಿಸ್ಮರಣೆಯ ಮಾಡಿ |ಗುರು - ಹಿರಿಯರ ಚರಣಕಮಲಕೆರಗಿ ||ಪರಮಶುಚಿಯಾಗಿ ನದಿಯಲಿ ಮಿಂದು ರವಿಗಘ್ಯ |ವೆರೆಯದೆ ಮರೆಹ ಈ ಪಾಪಿತನುವಿನಲಿ 1ಹೊನ್ನಗಿಂಡಿಯಲಿ ಅಗ್ರೋದಕವನೆ ತಂದು |ಚೆನ್ನಾಗಿ ಹರಿಗೆ ಅಭಿಷೇಕ ಮಾಡಿ ||ರನ್ನದುಡಿಗೆಯುಡಿಸಿ ರತುನಗಳಳವಡಿಸಿ |ಕಣ್ಣಿರಲು ನೋಡಲರಿಯದ ಪಾಪಿತನುವಿನಲಿ 2ನಳನಳಿಸುವ ನಾನಾ ಪುಷ್ಪಗಳು ಶ್ರೀತುಳಸಿ |ಹೊಳೆವ ಕಿರೀಟ ಕೊರಳಲಿ ಪದಕ ||ನಳಿನಾಕ್ಷನಿಗೆ ಕರ್ಪುರದಾರತಿಯನೆತ್ತಿ |ಕಳೆಯ ನೋಡಲರಿಯದ ಪಾಪಿತನುವಿನಲಿ 3ವರಭಕ್ಷ್ಯಗಳುಪರಮಾನ್ನ ಶಾಲ್ಯನ್ನವು |ವರವಾದ ಮಧುಘೃತ ಕ್ಷೀರವನ್ನು ||ಸಿರಿನಾರಾಯಣಗೆ ಸಮರ್ಪಣೆ ಮಾಡಿ ತಾ - |ಎರಡು ಕೈಮುಗಿಯದ ಪಾಪಿತನುವಿನಲಿ 4ಉರಗಾದ್ರಿ - ಸ್ವಾಮಿಪುಷ್ಕರಣಿಗಳು ಮೊದಲಾದ |ಪರಿಪರಿ ತೀರ್ಥಗಳನೆಲ್ಲ ಮಿಂದು ||ತಿರುವೆಂಗಳಪ್ಪ ಶ್ರೀ ಪುರಂದರವಿಠಲನ |ಚರಣವನು ಭಜಿಸಲಯದ ಪಾಪಿತನುವಿನಲಿ 5
--------------
ಪುರಂದರದಾಸರು
ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತಪ.ಪಕ್ಷಿರಾಜನು ಬಂದು ಬಾಗಿಲೊಳಗೆನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ 1ಸನಕ - ಸನಂದನ - ಸನತ್ಸುಜಾತರು ಬಂದುವಿನಯದಿ ಕೈಮುಗಿದು ಓಲೈಪರು ||ಘನಶುಕ - ಶೌನಕ - ವ್ಯಾಸ ವಾಲ್ಮೀಕರುನೆನೆದು ಕೊಂಡಾಡುವರೊ ಹರಿಯೇ 2ಸುರರು ಕಿನ್ನರರು ಕಿಂಪುರುಷರು ಉರಗರುಪರಿಪರಿಯಲಿ ನಿನ್ನ ಸ್ಮರಿಸುವರು ||ಅರುಣನು ಬಂದುದಯಾಚಲದಲ್ಲಿ ನಿಂದಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ 3ಪದುಮನಾಭನೆ ನಿನ್ನ ನಾಮಾಮೃತವನುಪದುಮಾಕ್ಷಿಯರು ತಮ್ಮ ಮನೆಯೊಳಗೆ ||ಉದಯದೊಳೆದ್ದು ಸವಿದಾಡುತ ಪಾಡುತದಧಿಯ ಕಡೆವರೇಳು ಮಧುಸೂದನ ಕೃಷ್ಣ 4ಮುರುಮಢನನೆ ನಿನ್ನ ಚರಣದ ಸೇವೆಯಕರುಣಿಸಬೇಕೆಂದು ತರುಣಿಯರು ||ಪರಿಪರಿಯಿಂದಲಿ ಸ್ಮರಿಸಿ ಹಾರೈಪರುಪುರಂದರವಿಠಲ ನೀನೇಳೊ ಹರಿಯೇ 5
--------------
ಪುರಂದರದಾಸರು