ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಭಾಗ್ಯವೆ ಎಂಥಾ ಪುಣ್ಯವೆ ಗೋಪಿ ಪ. ಎಂತು ಸಾಕಲಿಂಥ ದುಷ್ಟನ ಎಂತನಿಂತು ಚಿಂತೆಯಾಂತು ಅ.ಪ. ಪುಟ್ಟಿದೇಳು ದಿವಸದಲ್ಲಿ ದುಷ್ಟಪೂತನಿ ಕೊಂದ ದೇವ ದೃಷ್ಟಿವಂತನೆ ದಿಟ್ಟ ತೃಣ ಕೇಶೀಯರ ಪುಟ್ಟಕಾಲಲಿ ಶಕಟನಳಿದ ಕಟ್ಟಿ ಸಕಲ ದನುಜರನ್ನು ದೃಷ್ಟಿ ತಾಕಿತೆ ಕೃಷ್ಣಗೆನುತ 1 ವಿಪ್ರನು ನಿನ್ನ ಮನೆಗೆ ಬಂದು ಕ್ಷಿಪ್ರದಿ ಪೂಜೆ ಕೃಷ್ಣೆಗೆನಲು ಅಪ್ರಮೇಯನು ವಿಪ್ರನ ಮುಟ್ಟೆ ಕಟ್ಟಿ ಕಂಬಕೆ ಬರಲು ನಿಂದು ಕೃಷ್ಣಗರ್ಪಿಸೆ ನೈವೇದ್ಯವಾಗ ಸುಪ್ರಕಾಶದಿ ತೆಗೆದುಕೊಂಡ ಕೃಷ್ಣನನು ನೀನಪ್ಪಿ ಮುದ್ದಿಸೆ2 ಚಂದಿರನ ನೀ ತೋರು ಎನಲು ಇಂದುವದನ ಕೇಳಲಾಗ ಸುಂದರಾನನನಂದದಿ ಗೋವ ಚಂದದಿಂದ ಕಾದು ಕಾಳಿಂಗನಂದದಿ 3 ಸುರರು ಶ್ರೀ ಶ್ರೀನಿವಾಸನ ಶಿರದಿ ಪುಷ್ಪ ಮಳೆಗೆರೆಯಲು ನೆರೆದು ಗೋಪೇರ ಸೀರೆ ಸೆರಗ ಸೆಳೆದು ವರಳನೆಳೆದು ಮುರಿದು ಮರವ ಗರೆದು ಅಮೃತಸದೃಶ ವಾಣಿ ನೆರೆದು ಗೋಪಿಯರೊಡನೆ ನಾಟ್ಯಗರೆದು ರಾಸವಾಡೆ ರಂಗನಕರೆದೆರೆವೆ ಮಗುವೆನ್ನುವ 4
--------------
ಸರಸ್ವತಿ ಬಾಯಿ
ಎಲ್ಲಿದ್ದರು ಕಾಯ್ವ ಯದುಕುಲತಿಲಕ| ಭಕ್ತ ರೆಲ್ಲಿದ್ದರು ಕಾಯ್ವ ಯದುಕುಲತಿಲಕ ಪ ಅಡವಿಯೊಳಿರಲು ಅರಣ್ಯದೊಳಿರಲು ಮಡುವಿನೊಳಿರಲು ಮರದ ಮೇಲಿರಲು ಪೊಡವಿಗೀಶ್ವರ ತಾನು ದೃಢಭಕ್ತನಂ ಬಿಡದೆ ರಕ್ಷಿಸುವ ಯೆಂತೆಂಬೊ ಬಿರುದು 1 ತಂದೆಯ ಬಾಧೆಗೆ ಕಂದ ನಿಮ್ಮನು ಕರೆಯೆ ಬಂದು ಕಂಭದಲಿ ನೀ ಕಾಯ್ದೆ ಗೋವಿಂದಾ ಅಂದು ದ್ರೌಪದಿ ಹಾಯೆಂದು ಬದರಲು ಕೇಳಿ ಆ ನಂದದಿಂದಕ್ಷಯವನಿತ್ತ ರಂಗನು ನೀನು 2 ಭರದೆ ಭಗದತ್ತನು ಅಸ್ತ್ರ ಬಿಡಲು ಕೊರಳ ಚಾಚಿದನಾಗ ಕರುಣಾವಾರಿಧಿಯು ವರುಣಗದೆಯನಾಗ ಮರುಳತನದಿ ಬಿಡೆ ಮರಳಿ ಅವನ ಉರುಳಿಸಿತು ಶೃತಾಯುವು 3 ಸಿಂಧುರಾಜನ ಶಿರವ ಅವನ ತಂದೆ ಕೈಯಲಿ ಹಾಕಿ ಬಂದ ಭಾರವನೆಲ್ಲಾ ಕಾಯ್ದೆ ಗೋವಿಂದ ಕರ್ಣ ಅಪ್ರಮೇಯನು ಭೂಮಿ ಕ್ಷಿಪ್ರದಿಂ ಒತ್ತಿದಾ 4 ಅಂದು ಅರ್ಜುನ ತನ್ನ ಕಂದನೊಡನೆ ಕಾದೆ ಹಿಂದಿನ ವೈರದಿಂ ಶಿರವನ್ನು ಹರಿಯೆ ಬಂದು ಮುಕುಂದ ಸಂಧಿಸಿ ಶಿರವನ್ನು ಆ ಇಂದಿರೆ ರಮಣ5 ಉತ್ತರೆ ಗರ್ಭವು ಬತ್ತಿ ಬೀಳಲು ಆಗ ಉತ್ತಮ ಋಷಿಗಳೆಲ್ಲರ ನೋಡಿ ನಿತ್ಯಬ್ರಹ್ಮಚಾರಿಗಳು ಪಾದದೀ ಮೆಟ್ಟಿದರೆ ಬದುಕುವುದೆಂದನು ಕೃಷ್ಣ 6 ಸನತ್ಕುಮಾರರು ಶೌನಕರು ಮೊದಲಾಗಿ ಪರುಶುರಾಮ ಹನುಮಾದಿಗಳು ಬ್ರಹ್ಮಚರ್ಯವು ನಮಗಿಲ್ಲವೆನುತ ಬ್ರಹ್ಮಚರ್ಯಕ್ಕೆ ಆಧಾರ ನೀನೆನ್ನಲು ವಾಮಪಾದದಿ ತುಳಿದೆಬ್ಬಿಸಿದನು ಶಿಶುವ 7 ಸರಸಿರುಹನಯನಾ ಫಣಿರಾಜಶಯನ ಶರಣಾಗತದುರಿತಾಪಹರಣ ದೈತೇಯಸಂಹರಣ ಗೋವರ್ಧನೋದ್ಧರಣ ಪೀತಾಂಬರಾಭರಣ ಕೌಸ್ತುಭಾಭರಣ 8 ಅಶ್ವತಾಮನ ಅಸ್ತ್ರ ವಿಶ್ವವನು ಸುಡುತಿರೆ ವಿಶ್ವನಾಯಕ ಶಮನ ಮಾಡಿ ಕಾಯ್ದು ಅಸಮಸಾಹಸದಿ ಚಕ್ರವ ಪಿಡಿದು ಗರ್ಭದ ಶಿಶುವನ್ನು ಕಾಯ್ದ ಕುಶಲಿ ವೆಂಕಟಕೃಷ್ಣ 9
--------------
ಯದುಗಿರಿಯಮ್ಮ
ಏಳು ಶ್ರೀನಿವಾಸ ಏಳು ಲಕ್ಷ್ಮೀರಮಣ ಏಳು ಬೆಟ್ಟದೊಡೆಯ ಏಳು ಭಕ್ತರ ಪ್ರೀಯ ಏಳಯ್ಯ ಬೆಳಗಾಯಿತು ಹರಿಯೇ ಪ. ಆದಿಶೇಷನ ಮೇಲೆ ಅಪ್ರಮೇಯನು ನೀನು ಆದರದಿ ಮಹಲಕ್ಷ್ಮಿಯೊಡನಿರಲೂ ಸುರರು ಸನಕ ಸನಂದನರು ಆದರಿಸೆ ಬಾ ಬೇಗ ಬಾಗಿಲನು ತೆಗೆದು ಆದಿಮೂರುತಿ ನಿನ್ನ ಮುಖ ದರ್ಶನವ ಮಾಡಿ ಮೋದ ಪಡುತಲೆ ಭಕ್ತ ಕೋಟಿ ಸ್ತುತಿ ಮಾಡಲು ಮಾಧವನೆ ಹಾಸು ಮಂಚವನಿಳಿದು ಬಾ ಕತ್ತಲೆ ಹರಿಪಾ ದಿವಾಕರನ ತೆರದಿ ಹರಿಯೇ ಏಳಯ್ಯ ಬೆಳಗಾಯಿತು 1 ಕಾಸಿದ್ಹಾಲನೆ ತಂದು ಕಾವಡಿಯಲಿ ತುಂಬಿ ಲೇಸಾಗಿ ನಿನ್ನ ಭಕ್ತರು ನಿಂತಿದಾರೆ ವಾಸುದೇವನೆ ನಿನಗೆ ಮಲ್ಲಿಗೆ ಕುಸುಮ ಭಾಸುರಾಂಗನೆ ತಂದು ಅರ್ಪಿಸಲು ಭಕ್ತರು ಏಸು ಹೊತ್ತಿನಿಂದ ತುಳಸೀ ದಳ ತಂದು ವಾಸುಕೀಶಯನಗೆಂದು ಭೂಸುರರು ನಿಂದಾರೆ ವೇದ ಘೋಷದಿಂದ ಈಸು ನುಡಿಗಳು ನಿನ್ನ ಕರ್ಣಕೇಳಲಿಲ್ಲವೆ ಏಸು ಮೆಚ್ಚಿಸಿಹಳೋ ಲಕ್ಷ್ಮೀ ನಿನ್ನ ಸರಸದೊಳು ವಾಸುಕೀಶಯನ ಹಾಸಿಗೆಯಿಂದೇಳೋ ದೊರೆಯೆ ಏಳಯ್ಯ ಬೆಳಗಾಯಿತು2 ಕರುಣಾಸಾಗರ ನಿನಗೆ ಕರುಣೆ ಬರುವಾತೆರ ಪರಿಪರಿಯ ಸ್ತೋತ್ರದೊಳು ನಾರಿಯೇರು ಕರೆವರೋ ಕರಗತ ಕಾಮಧೇನು ನೀನೆಂದು ಕರದೊಳಾರತಿಯ ಪಿಡಿದೂ ತರತರದ ಉಡಿಗೆ ತೊಡಿಗೆ ನಿನಗೀಯಲು ಸರಸರನೆ ದೇಶದೇಶದಿ ಬಂದು ನಿಂತಿದ್ದಾರೆ ಶರಧಿ ಗಂಭೀರನೆ ವರ ಶ್ರೀ ಶ್ರೀನಿವಾಸನೆ ಕರುಣೆ ತೋರುತ್ತ ನಿನ್ನ ಭಕ್ತರ ಮೇಲೆ ವರ ನಾರಿಯರ ನಾಟ್ಯ ವೈಭವದಿ ವರದುಂದುಭಿ ವಾದ್ಯದಲಿ ವರ ತಾಳ ಮೇಳದಿಂ ವರ ಶೇಷಾದ್ರಿವಾಸ ವೆಂಕಟೇಶನೆ ಏಳಯ್ಯ ಬೆಳಗಾಯಿತು 3
--------------
ಸರಸ್ವತಿ ಬಾಯಿ
ನವವಿಧ ಭಕುತಿ ಶ್ರವಣದಿಂದಲಿ ಪಾಪಹರಣವಾಗುವುದೆಂದು ಕವಿಗಳೆಲ್ಲರು ಕೂಗಿ ಒದರುತಿಹರು ಕಿವಿಗಳಿಗಾನಂದದಾಭರಣದಂತಿಹುದು ಶ್ರೀ- ಹರಿಯ ದಿವ್ಯನಾಮಾಮೃತದರಸವು ಮಾಧವನ ಮೂರ್ತಿಯನು ನೋಡದಿಹ ಕಂಗಳು ನವಿಲು ಕಣ್ಣುಗಳೆಂದು ಪೇಳುತಿಹರು ಕಮಲನಾಭ ವಿಠ್ಠಲನ ಮಹಿಮೆ ಪೊಗಳೆ ಫಣಿರಾಜನಿಗೆ ವಶವಲ್ಲ ದೇವಾ 1 ಕೀರ್ತನವು ಮಾಡಲು ಪಾತಕವು ಪರಿಹರವು ಮಾತುಳಾಂತಕನ ಮಹಿಮೆ ಘನವು ಶ್ರೀಶನನು ಮನದಣಿಯ ಸ್ತೋತ್ರವನು ಮಾಡಲು ನಾಶಗೈವನು ದುರಿತರಾಶಿಗಳನು ಮಾಡಿದಪರಾಧಗಳ ಮಾಧವನು ಮನ್ನಿಸುವ ಶ್ರೀಧರನ ಸ್ತುತಿಸಿ ಕೊಂಡಾಡುತಿಹರ ಕರುಣಾಕರ ಕಮಲನಾಭವಿಠ್ಠಲ ದುರಿತದೂರನು ಕಾಯ್ವ ಶರಣಜನರ 2 ಸ್ಮರಣೆಯನು ಮಾಡುತಿಹ ಮನುಜರಿಗೆ ಇಹಪರದಿ ಪರಮ ಮಂಗಳನೀವ ಪರಮಾತ್ಮನು ದುರಿತ ದೂರನ ಪಾದಸ್ಮರಣೆ ಮಾಡುವರಿಗೆ ಪರಿಪರಿಯ ಸೌಖ್ಯಗಳ ಕೊಡುವ ದೇವ ಮಧುವೈರಿಯನು ಸ್ಮರಿಸೆ ಮುದದಿ ಸಂಪದವೀವ ಮೂರ್ತಿ ಶ್ರೀಮಾಧವ ಕನಕಗರ್ಭನ ಪಿತನು ಕರುಣಾನಿಧಿಯು ಕಮಲನಾಭ ವಿಠ್ಠಲ ಕಾಯ್ವ ಸುಜನರ3 ಶಿಲೆಯಾದ ಅಹಲ್ಯೆಯ ಪರಿಪಾಲಿಸಿದ ಪಾದ ಧರಣಿ ಈರಡಿಗೈದ ದಿವ್ಯಪಾದ ಫಣಿ ಹೆಡೆಯ ತುಳಿದ ಪಾದ ವರ ಋಷಿಗಳೆಲ್ಲ ವಂದಿಸುವ ಪಾದ ಇಂದಿರಾದೇವಿ ಬಹುಚಂದದಿಂದೊತ್ತುತ ಕಂದರ್ಪನಯ್ಯನಿಗೆ ಪಾದಸೇವ ಚಂದದಿಂದಲಿ ಮಾಡಿ ಮಾಧವನಿಗೆ ನಂದಗೋಪಿಯ ಕಂದ ಸಲಹುಎನಲು ಸುಂದರ ಶ್ರೀ ಕಮಲನಾಭ ವಿಠ್ಠಲನು ಒಲಿವ 4 ಅರ್ಚಿಸುತ ಮೆಚ್ಚಿಸುತ ಸಚ್ಚಿದಾನಂದನನು ಸ್ವಚ್ಛ ಭಕುತಿಲಿ ಸ್ತೋತ್ರ ಮಾಡುತಿಹರ ಅಷ್ಟ ಐಶ್ವರ್ಯಪ್ರದನು ನಿತ್ಯಮುಕ್ತಳ ಕೂಡಿ ಭಕ್ತರ ಹೃದಯದಲಿ ಪೊಳೆವ ದೇವ ಸತ್ಯ ಸಂಕಲ್ಪನಿಗೆ ಕಸ್ತೂರಿ ತಿಲಕವು ಮತ್ತೆ ಪಾವಡಿ ಥಳಥಳನೆ ಹೊಳೆಯೆ ಸುತ್ತ ಬ್ರಹ್ಮಾದಿಗಳ ಸ್ತುತಿಗೆ ದೇವ ಚಿತ್ತವಿಟ್ಟು ಕೇಳ್ವ ಮಾಧವನು ಮುದದಿ ಕರ್ತೃ ಕಮಲನಾಭ ವಿಠ್ಠಲನು ಕಾಯ್ವ 5 ವಂದನೆಯನು ಮಾಡೆ ಮುಕುಂದನು ಒಲಿವನು ಮುದದಿ ಕಂದರ್ಪನಯ್ಯ ಕಮಲಾಕ್ಷ ಹರಿಯೂ ಸುಂದರಾಂಗ ಶ್ರೀಹರಿಗೆ ಗಂಧ ಪೂಸಿದಳಾಗ ಇಂದೀವರಾಕ್ಷಿ ನಸುನಗುತ ಬೇಗ ಇಂದ್ರಾದಿ ಸುರರೆಲ್ಲ ಕೊಂಡಾಡೆ ಮಾಧವನ ವಂದಿಸುತ ಸಿರಬಾಗಿ ಚಂದದಿಂದ ಮಂದಾರ ಪಾರಿಜಾತಗಳ ತಂದು ತಂದೆ ಕಮಲನಾಭ ವಿಠ್ಠಲನ ಮುಡಿಗೆ ಸಂಭ್ರಮದಿ ಮಳೆಗರೆಯೆ ಚಂದದಿಂದ 6 ದಾಸ್ಯವನು ಕೈಕೊಂಬ ದಾಸ್ಯಜನರನು ಪೊರೆವ ಮೀಸಲಾಗಿಹನು ಹರಿದಾಸ ಜನಕೆ ಪೋಷಿಸೆಂದೆನುವವರ ದೋಷಗಳನೀಡಾಡಿ ದೋಷರಹಿತನು ಪೊರೆವ ಸರ್ವಜನರ ಪೂಸಿ ಪರಿಮಳ ದ್ರವ್ಯ ಶ್ರೀಸಹಿತ ಮೆರೆವ ವಾಸುಕೀಶಯನ ಸಜ್ಜನರ ಪೊರೆವ ಮುರಳೀಧರ ಮಾಧವನು ಕರುಣದಿಂದ ಶರಣ ಜನರನು ಪೊರೆವ ಮರೆಯದೀಗ ಕಮಲನಾಭವಿಠ್ಠಲನು ಕಾಯ್ವದೇವ 7 ಸಖ್ಯ ಸ್ನೇಹಗಳಿಂದ ಮುತ್ತಿನ್ಹಾರಗಳನು ಕೃಷ್ಣನ ಕೊರಳಿಗ್ಹಾಕುತಲಿಬೇಗ ಅರ್ಥಿಯಿಂದಲಿ ರತ್ನ ಮುತ್ತಿನ ಚಂಡುಗಳ ವಿಚಿತ್ರದಿಂದಾಡುತಿರೆ ನೋಡಿ ಸುರರು ಮುತ್ತಿನಕ್ಷತೆಗಳನು ಮಾಧವನ ಸಿರಿಮುಡಿಗೆ ಅರ್ಥಿಯಿಂದ ಸುರಿಸುತಿರೆ ಹರುಷದಿಂದ ಅಪ್ರಮೇಯನು ಶ್ರೀಶ ಶ್ರೀನಿವಾಸ ಸರ್ಪಶಯನನು ಕಮಲನಾಭ ವಿಠ್ಠಲ ನಿತ್ಯ ತೃಪ್ತನು ಪೊಳೆವ ಭಕ್ತರ ಹೃದಯದಲಿ 8 ನಿತ್ಯ ತೃಪ್ತಗೆ ಮಾಡಿ ಅರ್ಥಿಯಲಿ ಅಪ್ರಮೇಯನನು ಸ್ತುತಿಸಿ ಮುತ್ತು ಮಾಣಿಕ್ಯ ಬಿಗಿದ ತಟ್ಟೆಯಲಿ ತಾಂಬೂಲ ಅಚ್ಚುತಾನಂತನಿಗೆ ಅರ್ಪಿಸುತಲಿ ಭಕ್ತಿಯಲಿ ವಂದನೆಯ ಭಕ್ತವತ್ಸಲನಿಗೆ ನಿತ್ಯ ಮುಕ್ತಳು ಮಾಡಿ ಹರುಷದಿಂದ ಸತ್ಯ ಸಂಕಲ್ಪ ಶ್ರೀ ಮಾಧವನಿಗೆ ಮುತ್ತಿನಾರತಿ ಬೆಳಗಿ ಅರ್ಥಿಯಿಂದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ಕೊಂಡಾಡಿ9
--------------
ನಿಡಗುರುಕಿ ಜೀವೂಬಾಯಿ
ಶ್ರೀವರ ಶ್ರೀಕರ ಶುಭಕರನೇ ಪಾವನ ಸಂಪದನೇ ವರದನೇ ಪ ಕಾವನು ಈವನು ಜೀವನು ನೀನೆ ದೈವವು ನೀನೆ ನವನಿಧಿಯು ನೀನೆ ಆವನು ಇನ್ನಾರನೂ ಅರಿಯೆನೆ 1 ತಂದೆಯು ತಾಯಿಯು ಮಾವನು ಭಾವನು [ಎಂದಿಗೆ ಇರುವನ ಪ್ರಿಯನು ಸಹಾಯನು ತಂದೆ ಮಾಂಗಿರಿನಿಲಯನೆ ಅಪ್ರಮೇಯನು ಜೀಯನು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್