ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾದೇವಿಯ ರಮಣ ಬಾ ವೃಂದಾರಕ ಮುನಿವಂದ್ಯ ಬಾ ಸಿಂಧುಶಯನ ಗೋವಿಂದ ಸದಮಲಾ ನಂದ ಬಾ ಮಾವನ ಕೊಂದ ಬಾ ಗೋಪಿಯ ಕಂದ ಬಾ ಹಸೆಯ ಜಗುಲಿಗೆ ಶೋಭಾನೆ 1 ಕೃಷ್ಣವೇಣಿಯ ಪಡೆದವನೆ ಬಾ ಕೃಷ್ಣನ ರಥ ಹೊಡೆದವನೆ ಬಾ ಕೃಷ್ಣೆಯ ಕಷ್ಟವÀ ನಷ್ಟವ ಮಾಡಿದ ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ ತುಷ್ಟ ಬಾ ಉಡುಪಿಯ ಕೃಷ್ಣ ಬಾ ಹಸೆಯ ಜಗುಲಿಗೆ ಶೋಭಾನೆ 2 ಎಲ್ಲರೊಳು ವ್ಯಾಪಕನಾಗಿಪ್ಪನೆ ಬಲ್ಲಿದ ಧೊರೆಯೇ ಜ್ಞಾನಿಗಳರಸನೆ ಎಲ್ಲಿ ನೋಡಲು ಸರಿಗಾಣೆ ವಿಜಯವಿ- ಠ್ಠಲ ಬಾ, ಅಪ್ರತಿಮಲ್ಲ ಬಾ ನೀ- ಹಸೆಯ ಜಗುಲಿಗೆ ಶೋಭಾನೆ 3
--------------
ವಿಜಯದಾಸ
ಪಂಕಜನಯನ ಪಾವನ್ನ ಸುಖ ಸಂಕೂಲ ಮೂರುತಿ ಲಾಲಿಸು ಚಿನ್ನಾ ವೆಂಕಟ ನಿಲಯಾ ಹಸೆಗೇಳು ಪ ಕಮಲ ಸಂಭವಗಿತ್ತ ಕಮನೀಯ ಕಾಯ ಸುಮನಸ ಜನತೆ ಸುಧೆಯನುಣಿಸಿ ಭೂಮಿ ಚೋರನ ಕೊಂದ ಮುನಿಗಳೊಡೆಯ ವಿಮಲ ಮೂರುತಿ ಹಸೆಗೇಳೋ 1 ನರಹರಿ ರೂಪದಿ ಬಂದು ದೈತ್ಯ ನುರವ ಬಗೆದು ವಟು ರೂಪದಿ ನಿಂದ್ಯೋ ದುರುಳ ರಾಯರನೆಲ್ಲ ಕೊಂದು ಲಂಕಾ ಪುರದಾಧಿಪತಿಯ ಸದೆದ ದಯಸಿಂಧೋ ಕರುಣಾಸಾಗರನೆ ಹಸೆಗೇಳೋ 2 ಯದುಜನೆನಿಸಿ ಎಲ್ಲಾ ಖಳರ ಜಯಿಸಿ ಸುದತೇರ ವ್ರತವ ಕೆಡಿಸಿದತಿ ಧೀರ ಕುದುರೆನೇರಿದ ಮಾಧಾರಾ ನಿನ್ನ ಅದುಭೂತ ಬಲ್ಲಿದಕ್ಕೆಣೆಗಾಣೆನುದಾರಾ ಉದಧಿ ಶಯನನೆ ಹಸೆಗೇಳು 3 ಅಪ್ರತಿಮಲ್ಲ ಅನಂತಾ ಸುಹಜ ನ ಪ್ರೀಯಾ ಸುರಪತಿ ಸಿರಿದೇವಿ ಕಾಂತಾ ಸ್ವ ಪ್ರಕಾಶಿತನೆ ಧೀಮಂತಾ ಅತಿ ಕ್ಷಿಪ್ರದಿ ಭಕ್ತರ ಪೊರೆವತಿ ಶಾಂತಾ ಸುಪ್ರದಾಯಕನೆ ಹಸೆಗೇಳೋ 4 ಪರಮ ಪುರುಷ ಪುಣ್ಯನಾಮಾ ಪರ ಪುರಷೋತ್ತಮ ಪರಿಪೂರ್ಣ ಕಾಮಾ ಶರಣರ ಭವವನ ಧೂಮಾ ಕೇತು ಕರಿಯ ಬಲ್ಲೆನೆ ಕಾಮಿತರ ಕಲ್ಪದ್ರುಮಾ ಕರಿರಾಜವರದಾ ಹಸೆಗೇಳೋ 5 ನಿತ್ಯ ಅತ್ಯಂತ ಮಹಿಮನೆ ಆಪ್ತ ಜನರ ಕ್ಲೇಶ ಕಳೆವ ಸುಕೀರ್ತೀ ಚಿತ್ತಜ ಜನಕ ಹಸೆಗೇಳೋ 6 ಕ್ಷೀರಾಬ್ಧಿವಾಸಾ ಚಿನ್ಮಯನೆ ನಿನ್ನ ಪಾರ ಮಹಿಮೆ ತಿಳಿವವನಿಹನೆ ಮೂರು ಗುಣ ರಹಿತನೆ ದೋಷ ದೂರ ವಿದೂರ ಶಿರಿದೇವಿಯೊಡನೆ ಬಾರಯ್ಯ ಹಸೆಯ ಜಗುಲಿಗೆ7 ವ್ಯಾಳಮರ್ದನನೆ ವಿಗಮನಾ ತ್ರಿ ಶೂಲ ಪಾಣಿಯ ಓಡಿಸಿದ ಖಳನಾ ಸೋಲಿಸಿದಪ್ರತಿಸುಗುಣ ಹೇಮ ಲಲಿತಾಂಗ ಹಸೆಗೇಳೋ 8 ಅಗಣಿತ ಜೌದಾರ್ಯ ಸಾರಾ ನಿನ್ನ ಪೊಗಳ ಬಲ್ಲೆನೆ ಪಾತಕದೂರಾ ನಗರಾಜನುತ ನಿರಾಧಾರ ಭವಾದಿಗಳಿಂದ ವಂದ್ಯನೆ ನವನೀತ ಚೋರ ಜಗನ್ನಾಥ ವಿಠಲ ಹಾಸೆಗೇಳೋ9
--------------
ಜಗನ್ನಾಥದಾಸರು
ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು ಯೋನಿಯಲಿ ಬಂದೆ ನೊಂದೆ ಗುರುವೆ ನೀನೆ ಗತಿಯೊ ಪ ಭರತ ಭಾರತಿರಮಣ ಭಾರತ ಪ್ರತಿಪಾದ್ಯ ಭರದಿಂದಲಿ ಎನ್ನಭಾರ ವಹಿಸುವ ಭರಣ ಭಾರದ್ವಾಜಾತ್ಮಜ ಭಾರಭಂಗಾ 1 ಗತಿ ಅಗತಿ ಗಮನಗರ್ಭ ಸ್ವರ್ಗ ನರಕ ಈ ಕ್ಷಿತಿ ಲೋಕಾಂತದಲ್ಲಿ ಬಳಲಿ ಮತಿಯ ಕಾಣದೇ ಮಂತ್ರಿ ರಾಜ ಮಹಾತತುವೇಶ ಬಲವತ್ವ್ಸರೂಪ2 ಪಂಚಾಹುತಿಯಲಿ ಹಾಕದಿರೋ ಜೀವೇಶ ಸಂಚಿತಾವಳಿ ಸರ್ವನಾಶಾ ಪಂಚದ್ವಾರದಲಿ ಶ್ರೀ ಹರಿಯ ಪೂಜಿಪ ಪುಣ್ಯ ಸಂಚಕನೆ ಪುರುಷಾಕಾರನೀಯೋ 3 ಅಪೂಪ ಬಹುರೂಪ ಹರಿಚಾಪ ಪ್ರತಾಪ ಕಪಿಕುಲಾಂಬುಜ ದಿನಪ ಸುರಪ ರಿಪು ವಿಪಿನಕಾಲ ಮಹಾ ಗುಪುತ ವ್ಯಾಪ್ತ ಸುಪ್ತಿ ಸ್ವಪನ ಜಾಗೃತಕಾರ್ಯಫಲದಾ4 ರಾಜಿಸುವ ರಾಗವಿದೂರಾ ವಾಜಿರೂಪ ವಾಶಿಷ್ಟ ವಂದ್ಯಾ ವರದಾ ಮಜ್ಜಗದ್ಗುರು ಮುಖ್ಯ ಪ್ರಾಣಾ 5 ಪೂರ್ವೋತ್ತರಂಗ ಸಂಧಿ ಸಂಧಾನ ವಿಶಿಷ್ಟಾ ಈರ್ವ ಸ್ಥಾನದಲಿ ನೀನೇ ಸರ್ವದಲಿ ಧ್ಯಾನವನು ಇತ್ತು ಪಾಲಿಸು ನಿತ್ಯ ಮೂರ್ತಿ 6 ಮಾನವ ರೂಪಾ ಮಾನಾಭಿಮಾನಿಗಳೊಡಿಯಾ ಆನಂದತೀರ್ಥಪದ ಭಕ್ತ ಅನಾಥಬಂಧು ವೈರಾಗ್ಯ 7 ಸಮಸ್ತ ಪರಮಾಣು ತಿಳಿಸೋ ಸಾಮ ಸೂರ್ಯಸ್ಥಿತನೆ ಸೂತ್ರಾ8 ಇಪ್ಪತ್ತೆರಡು ಸ್ಥಾನದಲಿ ಪ್ರಭುವೆ ಜಗ ದಪ್ಪ ಚತುರದ್ವಾರವಾಸ ಅಪ್ರತಿಮಲ್ಲ ಶ್ರೀ ವಿಜಯವಿಠ್ಠಲನ್ನ ಅಪ್ಪಿಕೊಂಡು ಮೆರೆದ ಧೀರಾ 9
--------------
ವಿಜಯದಾಸ
ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ | ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ಪ ದುರುಳ ಪಾಮರ ಸಂಕರನೆಂಬುವನು | ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ | ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ | ವರರು ಇರದಂತಾಗೆ ಸುಜನರು ಕೂಗೆ 1 ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ | ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ | ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ | ನಳಿನನಾಭನ ಚರಣ ಮನದಲಿಟ್ಟ ಪರಣಾ 2 ಇಪ್ಪತ್ತು ಒಂದು ದುರ್ಮತದ ವರ ಕುವಾಕು | ಸರ್ಪನನ್ ಗರುಡ ಶೀಳಿದಂತೆ ಕೇಳಿ | ಇಪ್ಪ ಬಲು ಅಜ್ಞಾನ ಓಡಿಸಿ ಸುಜ್ಞಾನ | ತಪ್ಪದಲೆಗರದು ಸಂತರನೆಲ್ಲ ಪೊರೆದು 3 ಮಿಥ್ಯ | ಪಂಚವಿರಹಿತ ಹರಿ ಪರನೆಂದು ಸಾರೀ | ಚಂಚಲವ ಪರಿಹರಿಸಿ ಮರುತ ಮತ ಉದ್ಧರಿಸಿ | ಕಾಯ ಸುಖ ತೀರ್ಥರಾಯಾ4 ಸುರರಾದಿಗಳ ಮಣಿಯ ಆರಾರು ನಿನಗೆಣೆಯೇ | ಅರಸಿದರೆ ಕಾಣೆ ಹರಿ ಪದಗಳಾ ಆಣೆ | ಶಿರಿ ವಿಜಯವಿಠ್ಠಲನ್ನ ಭಜಿಸುವ ಯತಿರನ್ನ | ಶರಣಪಾಲಕ ಪೂರ್ಣಪ್ರಜ್ಞ ಗುಣಪೂರ್ಣ 5
--------------
ವಿಜಯದಾಸ
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ1 ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2 ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3 ಅಚ್ಯುತ ಉನ್ನತ ಮಹಿಮನೆ ಯಾದವ ಬಾ | ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ | ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4 ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ | ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ || ನಿತ್ಯ ಸಲ್ಲಾಪಾ ಬಾ ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5 ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ | ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ || ಗೋಪಿಕಂದಾ ಬಾ | ಬಹುಬಲ ವೃಂದಾ ಬಾ | ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6 ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ | ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ || ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ | ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7 ತ್ರಿದಶಗುಣನುತ ವಿಲಾಸಾ ಬಾ | ಮಾಧವ ಶ್ರೀಧರನೆ ಸುನಾಸಾ ಬಾ || ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ | ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8 ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ | ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ || ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ | ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9 ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ | ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ || ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ | ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10
--------------
ವಿಜಯದಾಸ
ಶ್ರೀನಿವಾಸ-ಶ್ರೀನಿವಾಸ-ಶ್ರೀನಿವಾಸ ಪ ಶ್ರೀನಿವಾಸ ನಾನಿಹೆ ನಿನ್ನ ದಾಸ-ನಿನ್ನ ದಾಸ ನಿನ್ನದಾಸ ಅ.ಪ. ಈಶ, ತರಿಯುವೆ ಕ್ಲೇಶಾ ಕೊಡುಲೇಶ, ಕೊಡುಲೇಶ ಜೀಯ, ಸಡಗರ ದೈವ ಬಡವನು ನಾನು ಕೊಡುವುದು ಏನು, ಅಡಿಗಳನೀಡು, ಇಡುವೆನು ಮೌಳಿ, ಇಡುವೆನು ಮೌಳಿ ಘನಸುಖದಾತ, ಚಿನ್ಮಯಗಾತ್ರ, ವನರುಹ ನೇತ್ರ, ಅನಿಲನಸೂತ್ರ ಅನುದಿನ ತನುಮನನಾಥ ತನುಮನನಾಥ ಕುಂದುಗಳಳಿದು, ಕಂದನ ಸಲಹೋ ಕಂದನ ಸಲಹೋ 1 ವೇದವ್ಯಾಸ, ವಾದಾಗಾರ, ಬೋಧಿಸಿವಿದ್ಯೆ ಸಾಧನೆಗೈಸೋ ವೇಧನ ತಂದೆ ವೇಧನತಂದೆ ಸೋದರ ಪ್ರಜೆಗಳು ದೈತ್ಯರ, ಖೇದವನೀಡ್ಡೆ ಖೇದವನೀಡ್ದೆ ಧೀರವರಾಹ, ಯಾಗಶರೀರ, ಬಹುಗಂಭೀರ ಶೃತಿಗಳಸಾರ ಸಾರ ಸಾರಕೆ ಸಾರ ಕಂಭದಿಬಂದೆ ಕಂದನ ಪೊರೆದೆ ಕಂದನ ಪೊರೆದೆ 2 ಬಲಿಯೆಡೆನಿಂದ ಬೇಡುವೆನೆಂದ ಬೇಡುವೆನೆಂದ ಮೂರಡಿಯಿಂದ ಬೆಳೆಯುತ ಬಂದ ಬೆಳೆಯುತ ಬಂದ ಭೂಮಿಯು ಮುಗಿಯೆ ಶಿರವನ್ನೀಯೆ, ಭಕ್ತನಕಾಯೆ, ಬಾಗಿಲಕಾಯ್ದೆ, ಬಾಗಿಲಕಾಯ್ದೆ ವಿಪ್ರರ ಪೊರೆದ, ವರಸಮರಿಲ್ಲ ವರಸಮರಿಲ್ಲ ಭಾರ್ಗವರಾಮ, ಋಷಿಗಣಸ್ತೋಮ, ದೈತ್ಯವಿರಾಮ, ಸತ್‍ಜನಪ್ರೇಮ, ಮಂಗಳ ನಾಮ ಮಂಗಳನಾಮ 3 ತಾರಕನಾಮ, ಕಲಿಗಿವ ಭೀಮ, ದಶರಥರಾಮ, ಸೀತಾರಾಮ ಜಯಜಯರಾಮ ಜಯಜಯರಾಮ ಲಕ್ಷ್ಮಣನಣ್ಣ, ಸಗುಣಸಂಪನ್ನ, ಜಗಕಿವ ಅನ್ನ, ಬಿಡಬಿಡಬೆನ್ನ ಪ್ರಾಣನೆ ಅನ್ನ, ಕೇವಲನಣ್ಣ, ರವಿಶಶಿಕಣ್ಣ, ಸಿದ್ಧವಿದಣ್ಣ ಆಗಿಸಿ ಯಾಗ, ಸಾಗುತ ಬಂದ ಸಾಗುತ ಬಂದ ಕೊಂದನು ಖಳರ, ಮುಂದಕೆ ನಡೆದ 4 ಮುಟ್ಟಿ, ಕಳ್ಳನ ಮೆಟ್ಟಿ ರಾಜ್ಯವಕೊಟ್ಟ ಜಗಜ್ಜಟ್ಟಿಜಗಜ್ಜಟ್ಟಿ ನಿಜಮುನಿಇವನೆ, ನಿಜವಿಧಿ ಇವನೆ, ಸರ್ವೇಶ, ಸರ್ವೇಶ ಬೆಣ್ಣೆಯ ತಿಂದ ಪೋರನು ಎನಿಸಿ, ಚೋರನು ಎನಿಸಿ ಎನಿಸಿ, ಕ್ರೂರನು ಎನಿಸಿ, ನಾರೇರ ವರಿಸಿ, ಭೂರಿದನೆನಿಸಿ, ಲೀಲೆಯ ತೋರ್ದ 5 ಊರಿಗೆ ಬಂದೆ, ಜರೆಸುತ ಬಂದು, ಬಹುಮಡಿನೊಂದು, ಮರಳಿಯು ಬಂದು ಕದನಕೆ ನಿಂದ, ಬಲುಭಂಢ, ಬಲುಭಂಢ ರಾತ್ರಿಯಲೊಂದು ಸಾಗಿಸಿ ಬಂದು, ವೊಕ್ಕೂ, ತಾಮುಕುಂದ ತಾಮುಕುಂದ, ಸೂತ, ಜಗವಿಖ್ಯಾತ ಕೊಲ್ಲಿಸಿದಾತ ಸರ್ವಸಮರ್ಥ, ಸರ್ವಸಮರ್ಥ ಕಾಲದಿ ಭೇದ ಇಲ್ಲವು ಎಂದು ವಿಭುಶರಣೆಂಬೆ, ವಿಭುಶರಣೆಂಬೆ 6 ವೇದಸುವೃಂದ, ತ್ರಿಪುರರಕೊಂದ, ಬಲ್ಲ, ಎಲ್ಲವ ಬಲ್ಲ ನಿತ್ಯವಿದೆಲ್ಲ, ತಿಳಿದವರಿಲ್ಲ, ಸಾರಿಸಾಕಲ್ಯ ಜಗವನೆಲ್ಲ, ಬಿಗಿದಿಹನಲ್ಲ, ನಾಮದಿನಲ್ಲ, ನಾಮದಿನಲ್ಲ, ಆದಿಯು ಇಲ್ಲ, ಮಧ್ಯವು ಇಲ್ಲ, ಕೊನೆತಾನಿಲ್ಲ, ಖೇದವು ಇಲ್ಲ, ಮೋದವೆ ಎಲ್ಲ, ಭಗನಿಹನಲ್ಲ ಅಪಜಯವಿಲ್ಲ, ಶ್ರೀಗಿವನಲ್ಲ, ಅಪ್ರತಿಮಲ್ಲ, ಪ್ರಕೃತಿಯು ಅಲ್ಲ, ಸ್ವಾಮಿಯು ಇಲ್ಲ, ತಾನೇ ಎಲ್ಲ ಪ್ರೇರಿಪನೆಲ್ಲ, ಭಿನ್ನನು ನಲ್ಲ, ಸರ್ವೋತ್ಕøಷ್ಠ 7 ಕುಜನರ ಮುರಿಯೆ, ಎನಿಸಿ, ಧರ್ಮವನುಳುಹಿ, ಭಕ್ತರಿಗೊಲಿದು, ಪೊರೆವುದು ಸತ್ಯ, ಪೊರೆವುದು ಸತ್ಯ, ಸತ್ಯರ ಸತ್ಯ, ಸಂತರ ಮಿತ್ರ, ಪರಮ ಪವಿತ್ರ, ಲೋಕವಿಚಿತ್ರ ಸುಖಚಾರಿತ್ರ, ಮಂಗಳಗಾತ್ರ, ನಿಖಿಳಸುಭರ್ತ, ಭಕ್ತರ ಭೃತ್ಯ ನತ ಜನಪಾಲ, ವೇದಗಳೆಲ್ಲ, ಶಬ್ದಗಳೆಲ್ಲ, ಘೋಷಗಳೆಲ್ಲ ನಾಮಗಳೆಲ್ಲ, ಇವನನೆ ಎಲ್ಲ, ಪೊಗಳುವವಲ್ಲ, ಮುಕ್ತರಿಗೆಲ್ಲ, ಪ್ರಕೃತಿಯ ಸತ್ತಾ, ಸಕಲವ ನೀತ, ನೀಡುವ ದಾತ, ಸರ್ವಸುವ್ಯಾಪ್ತ, ಸರ್ವಸ್ವತಂತ್ರ8 ವೇದವ್ಯಾಸ, ಬದರೀನಿವಾಸ, ವೇದಸ ಪೀಠ, ಸಾಧಿಸುವಂತ್ಯ ಮೋದಕವೀಂದ್ರ, ಮಧ್ವನಪೋಷ, ಆದರವೀಯೊ ಪಾದಗಳಲ್ಲಿ ವೇದಗಳಳಿಯೆ, ವಿಧಿ ಮುಖಸುರರು, ಪಿಡಿದರು ಪಾದ ಮಾಧವ ನೀನು ಮೇದಿನಿಗಿತ್ತೆ ಸೂತ್ರ ಗೈದ ಮಹೇಶ, ವೇದಕುಮಿಗಿಲು, ಭಾರತಕರ್ತ, ಭಾರತ ಕರ್ತ ಛಂದದಸುಕಾಯ ಕುಡಿಸೈ ಜೀಯ ಹರಿಸುತಮಾಯ, ಹರಿಸುತಮಾಯ, ಹರಿಸುತಮಾಯ 9 ಶ್ರೀ ಇಹವಕ್ಷ, ಜ್ಞಾನಸುಪಕ್ಷ, ಸರ್ವಾಧ್ಯಕ್ಷ, ದಿವಿಜರಪಕ್ಷ ಬೃಹತೀಭಕ್ಷ, ತಾನಿರಪೇಕ್ಷ, ಆಶ್ರಿತರಕ್ಷ, ಕರುಣ ಕಟಾಕ್ಷ, ಕರುಣಿಸು ರಕ್ಷ, ನೀಜಗರಕ್ಷ, ಅಜಗರ ಶೈಯ್ಯ, ಮನ್ಮಥನಯ್ಯ ಭವಬಿಡಿಸಯ್ಯ, ಭಯಹರಿಸಯ್ಯ ದಯಮಾಡಯ್ಯ ಶರಣುಪರೇಶ ಇಚ್ಛೆ ಅನೀಶಾ, ಕಳೆಕಳೆ ಆಶಾ, ಕಡಿಕಡಿಪಾಶಾ, ನಾಬಡದಾಸ, ತೈಜಸ ಶರಣು, ಪ್ರಾಜ್ಞನೆ ಶರಣು, ತುರ್ಯನೆ ಶರಣು, ಕಪಿಲನೆ ಶರಣು ಶರಣು ಅನಂತ, ಶರಣು ಅನಂತ 10 ವೆಂಕಟರಮಣ, ಕಿಂಕರನಾನು, ಸಂಕಟಹರಿನೊ ಶಂಕರತಾತ ತಿದ್ದೊ, ಪಂಕಜನಯನ ದಡ್ಡನು ನಾನು ಭಕ್ತಿಗಡ್ಡೆಗೆಸೇರಿಸು ಪ್ರಾಣನ ಆಣೆ ರಾಜರ ಆಣೆ ಜಯಮುನಿ ಆಣೆ, ಗುರುಗಳ ಆಣೆ, ಉರಗಾದ್ರಿವಾಸ, ಪದ್ಮಜಳೀಶ, ಹರಿಸುತ ದೋಷ, ಚರಣದಿವಾಸ, ನಿರುತಲೀಯೊ, ಕರುಣವ ಸುರಿಸಿ, ಮರುತನ ಮತದ ಅರುಹುತಲೆನಗೆ, ಸಂತತ ವೆಂಬೆ, ಸಂತತವೆಂಬೆ, ಸಂತತವೆಂಬೆ ನಂದದಿ ಪಠಿಸೆ ನಂದವು ಶಾಶ್ವತ, ಜಯಮುನಿಹೃಸ್ಥ, ಮಧ್ಯರಮೇಶ ಶ್ರೀಕೃಷ್ಣವಿಠಲ ವಲಿಯುವ ಸಿದ್ಧ, ವಲಿಯುವ ಸಿದ್ಧ 11
--------------
ಕೃಷ್ಣವಿಠಲದಾಸರು