ಒಟ್ಟು 8 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿರುವೆ ಬಾರಯ್ಯದೇವ ಬಲ್ಲಿದ ನೀನೆ ಅನಾಥಜನಜೀವ ಪ ಪುಲ್ಲನಾಭ ನೋಡೆನ್ನ ಪರಿಭವದ ದು:ಖವನು ನಿಲ್ಲದೆ ದಯಮಾಡು ಬೇಗದೊಳಭವ ಅ.ಪ ಕ್ಷಣಕ್ಷಣಕೆ ಒದಗುತಿಹ್ಯ ದಣಿವು ಬೇನ್ಯಾಪತ್ತು ಅನುಪಮ ಬಡತನದ ಘನ ಘನ ವಿಪತ್ತು ದಿನದಿನ ಪರರನು ಮಣಿದುಬೇಡುವ ಹೊತ್ತು ಇನಿತೆಲ್ಲ ಕನಿಕರದಿ ನೀನೆ ಕಳೆಯಭವ 1 ಕನಕ ವಸ್ತ್ರಾಭರಣ ವನಿತೆಗ್ಹಾಕುವ ಚಿಂತೆ ಧನಧಾನ್ಯವಿಲ್ಲೆಂಬ ಎಣಿಕಿಲ್ಲದ ಚಿಂತೆ ಮನಕೆ ತುಸುಗೊಡದ ರಿಣಬಾಧದ್ದತಿ ಚಿಂತೆ ವನಜಾಕ್ಷ ಕೃಪೆಯಿತ್ತು ನೀನೆ ಬಿಡಿಸಯ್ಯ 2 ಧರೆಯಸುಖೆನಗಿಲ್ಲೆಂಬ ಪರಿಪರಿಯು ಉರಿ ತಾಪ ಪರರಸೇವೆಯ ಮಾಡ್ವ ಪರಮ ಪರಿತಾಪ ಜರಜರಕೆ ಬಂದು ಆವರಿಸುವುವು ಮಹಪಾಪ ಪರಹರಿಸೆಲವೋ ಶ್ರೀರಾಮಪ್ರಭು ಭೂಪ 3
--------------
ರಾಮದಾಸರು
ಕಂಡೆ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು ಹಿಂಡ ದೈವದೊಡೆಯ ಪ್ರಚಂಡನ ಕಂಡೆ ಧ್ರುವ ದೀನನಾಥನ ಕಂಡೆ ದೀನೋದ್ಧಾರನ ಕಂಡೆ ಅನಾಥಜನರ ಪ್ರತಿಪಾಲನ ಕಂಡೆ 1 ಶರಣ ರಕ್ಷಕನ ಕಂಡೆ ವಾರಿಜಾಕ್ಷನ ಕಂಡೆ ವರಮುನಿ ಜನರಾ ಪ್ರತ್ಯಕ್ಷನ ಕಂಡೆ 2 ಭಕ್ತ ಪ್ರಿಯನ ಕಂಡೆ ಮುಕ್ತಿಯೀವನ ಕಂಡೆ ಪತಿತ ಪಾವನ ಗುರು ಸಂಜೀವನ ಕಂಡೆ 3 ದೇವದೇವನ ಕಂಡೆ ಕಾವ ಕರುಣನ ಕಂಡೆ ಮಹಿಪತಿ ತಾರಕ ಗುರು ಭವನಾಶನ ಕಂಡೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾರಕವಿದು ಹರಿಕಥಾಮೃತಸಾರ ಜನಕೆ ಪ ಘೋರತರ ಅಸಾರ ಸಂಸಾರವೆಂಬ ವನಧಿಗೆ ನವ ಅ.ಪ. ಶ್ವಾನಸೂಕರಾದಿ ನೀಚಯೋನಿಗಳಲಿ ಬಂದು ನೊಂದು ವೈನತೇಯ ವಾಹನನ ಸನ್ನಿಧಾನ ಬೇಕು ಎಂಬುವರಿಗೆ 1 ಪ್ರಿಯವಸ್ತುಗಳೊಳಗೆ ಪಾಂಡುವೇಯ ಸಖನೆ ಎಮಗೆ ಬ್ರಹ್ಮ ಸುರರು ತಂದೆ ತಾಯಿ ಎಂದರಿತವರಿಗೆ 2 ಜ್ಞೇಯ ಜ್ಞಾನ ಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕರ್ಮ ಶ್ರೀ ಯರಸ ನೀವನರಗೆ 3 ಶ್ರೀ ಮುಕುಂದ ಸರ್ವ ಮಮಸ್ವಾಮಿ ಅಂತರಾತ್ಮ ಪರಂ ಧಾಮ ದೀನಬಂಧು ಪುಣ್ಯ ನಾಮವೆಂದರಿತವರಿಗೆ 4 ಭೂತಭವ್ಯ ಭವತ್ಪ್ರಭು ಅನಾಥಜನರಬಂಧು ಜಗ ನ್ನಾಥ ವಿಠ್ಠಲ ಪಾಹಿಯೆಂದು ಮಾತುಮಾತಿಗೆಂಬುವರಿಗೆ 5
--------------
ಜಗನ್ನಾಥದಾಸರು
ದೀನದಯಾಪರ ಜಾನಕೀನಾಥ ನೀನೆ ದಯಾರ್ಣವಅನಾಥಜನಾಪ್ತ ಪ ಘನತರ ಭವತಾಪವನು ಪರಿಹರಿಸೊ ಕನಿಕರಯುತ ನೀನೆ ಮನುಮುನಿವಿನುತ 1 ಲಾಖಚೌರೈಂಸಿಜನ್ಮ ಸಾಕಾದೆ ತಿರುತಿರುಗಿ ಕಾಕುಬವಣೆ ಸಾಕೋ ಲೋಕೇಶ ಕೃಪಾ ದೇ 2 ಭಕುತಾಭಿಮಾನಿ ನೀ ನಿಖಿಲಜಗಸೂತ್ರ ಭಕುತನ ಮೊರೆ ಕಾಯೊ ಭಕುತಾಭಿರಾಮ 3
--------------
ರಾಮದಾಸರು
ನೀನೆ ರಕ್ಷಿಸೊ ಎನ್ನ ಪೂರ್ಣ ನೀ ಸ್ವಾನುಭವಸುಖದಾಯಕ ಅನುದಿನಪಾಲಕ ಅನಾಥಜನ ನೀ ರಕ್ಷಕ 1 ನ್ಯೂನಪೂರ್ಣಕಾಗುತಿಹ್ಯ ನಿಜದೀನಬಂಧು ಶಾಶ್ವತ ಘನ ದಯ ಸದೋದಿತ ನೀನೆಮ್ಮ ಸುಸ್ವಹಿತ 2 ತಂದೆತಾಯಿಯು ನೀನೆ ಸದ್ಗುರು ಬಂಧುಬಳಗ ಸನಾತನ ಭೂಷಣ ನೀನೆ ಪಾಲಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಧವ ಮಧುಸೂದನ ಗೋವರ್ಧನ ಪ ದೋಷನಿವಾರಣ ಶೇಷಾರಿಗಮನ ವಾಸುಕಿಗಿರಿಶಯನ 1 ಕೀಟಕ ಸಂಹರ ಹಾಟಕಾಂಬರ ತಾಟಕಿಪ್ರಾಣಹರಣ 2 ಕೌಸ್ತುಭಮಾಲಾ ಕುಜನರ ಕಾಲ ಕಂಸಾಸುರಾದಿ ಮರ್ದನ 3 ಗೋಕುಲವಾಳಿದ ಗೋಪಿಯರ್ವರದ ಗೊಪ ಗೋಪತಿ ನಂದನ 4 ಮಂದರ ನಿಲಯ ಸಿಂಧುಜಾಪ್ರಿಯ ಬಂಧುವೆ ಅನಾಥಜನ 5 ಜಗದೋದ್ಧಾರಣ ಜಗತ್ರಯಮೋಹನ ಜಗಜೀವನ ಪಾವನ 6 ಶಂಖಚಕ್ರಾಂಕಿತನೆ ಕಿಂಕರಜನ ಪ್ರೀತ ಶಂಖಸುರಾದಿ ಮರ್ದನ 7 ಯದುಕುಲಸಂಭವ ಸದಯ ಯಾದವ ಸದಮಲಸುಖಸದನ 8 ಹರಿಗೋವಿಂದ ಪರಮಾನಂದ ನರಹರಿ ಸಿರಿರಮಣ 9 ಸಿರಿನರಸಿಂಗ ಪರಿಭವಭಂಗ ಪರತರ ಗಿರಿಧಾರಣ 10 ನಿತ್ಯನಿರಾಮಯ ನಿರ್ಗುಣ ನಿರ್ಭಯ ನಿರಂಜನ 11 ಪರಮಪುರುಷ ಹರಿ ಸರ್ವೇಶ ಸುರಮುನಿನುತಚರಣ 12 ನಿಮಗೋಚರ ಜಗದಾಧಾರ ಅಘನಾಶ ಭಜಕಜನ 13 ವೇದಾದಿನಮಿತ ವೇದವೇದಾತೀತ ಸಾಧುಸಜ್ಜನಪ್ರಾಣ 14 ವರದಶ್ರೀರಾಮ ನಿರತರ ಪ್ರೇಮ ಪರಿತರ ಪರಿಪೂರ್ಣ15
--------------
ರಾಮದಾಸರು
ಶ್ರೀಗುರುಸಾಹ್ಯ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು ಹಿಂಡದೈವದೊಡಿಯ ಪ್ರಚಂಡನ ಕಂಡೆ ಧ್ರುವ ದೀನಾನಾಥನ ಕಂಡೆ ದಿನೋದ್ಧಾರನ ಕಂಡೆ ಅನಾಥಜನರ ಪ್ರತಿಪಾಲನ ಕಂಡೆ 1 ಶರಣರಕ್ಷನ ಕಂಡೆ ವಾರಿಜಾಕ್ಷನ ಕಂಡೆ ವರಮುನಿಜನರ ಪ್ರತ್ಯಕ್ಷನ ಕಂಡೆ 2 ಭಕ್ತಪ್ರಿಯರ ಕಂಡೆ ಮುಕ್ತಿ ಈವನ ಕಂಡೆ ಪತಿತಪಾವನ ಗುರುಸಂಜೀವನ ಕಂಡೆ 3 ದೇವದೇವನ ಕಂಡೆ ಕಾವ ಕರುಣನ ಕಂಡೆ ಮಹಿಪತಿ ತಾರಕಗುರುಭವನಾಶನ ಕಂಡೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ ಸುವ್ವಿ ಸಾಯೋಜ್ಯದೊಡೆಯನೆ ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು ಅನುಮಾನೆಂಬೆಳ್ಳ ಚಿಗಳಿಯ ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ ಗಣನಾಥಗಿಟ್ಟು ಬಲಗೊಂಡು 1 ಮನವೆಂಬ ಕಣಕವ ಘನವಾಗಿ ಕುಟ್ಟುತ ಜ್ಞಾನ ವೈರಾಗ್ಯದೊಡಗೂಡಿ ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು ಅನಂದ ಘನವ ಬಲಗೊಂಡು 2 ನಿರ್ಗುಣಾನಂದನು ಸುಗುಣವ ತಾಳಿದ ಅಗಣಿತಗುಣ ಪರಿಪೂರ್ಣ ಪರಿಪೂರ್ಣವಾಗಿಹ ಅಗಮ್ಯನುಪಮ ನಿಗಮ ಗೋಚರನ ಬಲಗೊಳ್ಳಿ 3 ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು ಮತ್ತೆ ತ್ರಿಗುಣವ ತಾಳಿದ ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ ನಿತ್ಯ ನಿರ್ಗುಣನ ಬಲಗೊಳ್ಳಿ 4 ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು ಹತ್ತವತಾರ ಧರಿಸಿದ ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು ಪತಿತಪಾವನನ ಬಲಗೊಳ್ಳಿ 5 ಅನಾಥಜನರ ದೈನ್ಯ ಹರಿಸಲಾಗಿ ಆನಂದದಿಂದ ಪುಟ್ಟಿಹ್ಯ ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ ಜ್ಞಾನದಲೊಮ್ಮೆ ಬಲಗೊಳ್ಳಿ 6 ಕುಸುವ ನಿಶ್ಚಯ ಒನಕಿಯ ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು ಹಸನಾಗಿ ಕಣಕ ಕುಟ್ಟುತ 7 ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ ಮದನ ಮೋಹನಗ ಮದುವೀಗ ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು ಮೊದಲಾದ ಗುರಿಯ ಮುತ್ತೈದೇರು 8 ಚದುರತನದಲಿ ಒದಗಿ ಮುತ್ತೈದೇರು ಯದುಕುಲೋತ್ತಮನ ನೆನವುತ ನೆನವುತ ಹದನದಿಂದಲಿ ಮನವಿಡುತ ಆದಿ ತ್ರಿಮೂರ್ತಿ ಬಲಗೊಂಡು 9 ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ ಹಸನಾಗಿ ಕಣಕ ಕುಟ್ಟುತ ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ ವಿಶ್ವ ವ್ಯಾಪಕನ ಮದುವಿಗೆ 10 ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ ಒಟ್ಟಿ ಉನ್ಮನೆಯ ಮುದ್ರಿಯಲಿ ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು ಕೊಟ್ಟ ಸದ್ಗುರು ಹರುಷವ 11 ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು ಕಣಕವ ಕುಟ್ಟಿ ದಣಿದರು ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು ಮೌನ್ಯ ಮೋನದಲಿ ಮುಸುಕಿರೆ 12 ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು ಹೆಸರಿಟ್ಟು ಏಸು ಪರಿಯಿಂದ ಪರಿಯಿಂದ ಮಾಡುತ ಬೀಸೋರಿಗಿಗಳು ವಾಸುದೇವನ ಮದುವಿಗೆ 13 ಅಡಿಗಿಯ ಮಾಡಿದ ಸಡಗರ ಪೇಳಲಿ ಪೊಡವಿಯೊಳಿನ್ನು ಅಳವಲ್ಲ ಅಳವಲ್ಲದಡಗಿಯ ಕೂಡಿ ಮುತ್ತೈದೇರು ಎಡಿಯು ಮಾಡಿದರು ತಡೆಯದೆ 14 ಒಂದೆ ಸಾಲದಲಿ ಕುಳಿತರು ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ ಒಂದೊಂದು ಪರಿಯ ಬಡಿಸುತ 15 ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು ಒಪ್ಪದಿಂದ ಬಡಿಸುತ ಬಡಿಸುತ ತಪ್ಪದೆ ಉಪ್ಪಿನೆಸರಗಳು ಶ್ರೀಪತಿ ಪ್ರಸ್ತದೆಡಿಯಲಿ 16 ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು ಮತ್ತೆ ಅನೇಕ ಪರಿಯಾದ ಪರಿಯಾದ ಶಾಖವು ಸುತ್ತ ಪಂಕ್ತಿಯಲಿ ಆತ್ಮದಿಂದ ಬಡಿಸುತ 17 ಪರಮಾನ್ನಗಳ ತಂದು ಹಿರಿಯ ಮುತ್ತೈದೇರು ಸರಿಯಾಗಿ ಎಡಿಯ ಬಡಿಸುತ್ತ ಬಡಿಸುತ ಅನ್ನ ಪರಮಾನ್ನ ಅನುಭವದ ಅನಂದದಿಂದ ಬಡಿಸಿದೆ 18 ಮನೋ ಅನುಮಿಷದ ಎಣ್ಣೋರಿಗಿಗಳು ಎಣಕಿಲ್ಲದಿಹ ಭಕ್ಷ್ಯವು ಭಕ್ಷ್ಯದ ಜಿನಸ ಅನೇಕ ಪರಿಯಲಿ ಘನದೊಲುವಿಂದ ಬಡಿಸುತ 1 9 ಸಖರಿ ತುಪ್ಪವು ಭಕ್ತಿಭಾವದಲಾದ ಬಡಿಸುತ ನಡೆದರು ಅಖರದಿಂದಲಿ ಏಕಶಾಂತನ ಮದುವಿಗೆ 20 ಮೊಸರು ಮಜ್ಜಿಗಿಯು ಸುವಾಸದಿಂದಾದ ಲೇಸಾಗಿ ದಣಿಯಬಡಿಸಿರೆ ಬಡಿಸಿದ ಷಡುರಸಾನ್ನವನುಂಡಿನ್ನು ಕಡುಬೇಗ ಪ್ರೇಮ ಉಕ್ಕಿತು 21 ಉಂಡುವೀಳೆಯುವ ಕೊಂಡು ಸಾಧುಸಭೆ ಮಂಡಲದೊಳು ಪೊಗಳಿತು ಪೊಗಳಿತಾ ಮಂಡಲದೊಳು ಪ್ರಚಂಡನ ಮದುವಿ ಅಖಂಡ ಹರುಷದಿ 22 ಗಂಧ ಕಸ್ತುರಿಯ ತಂದೆ ಗುರುಕೃಪೆಯ ಚಂದವಾಗಿಟ್ಟು ಮೆರೆದರು ಮೆರೆದು ಮೇದಿನಿಯೊಳು ಗುರುದಯ ಕರುಣಾದಿ ಪರಮ ಸುಪಥವ ಪಡೆದರು 23 ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು ಬೆರೆದು ಹರುಷವ ಪಡೆದರು24 ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು ಪರಮಾನಂದದ ಹರುಷಲಿ ಹರುಷವ ಕಂಡಿನ್ನು ಕರುಮುಗಿದು ಮಹಿಪತಿ ಹೃತ್ಕಮಲದಲ್ಲಿ ಸ್ತುತಿಸಿದ 25 ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ ಪಾತಕವಿಲ್ಲ ಭಯವಿಲ್ಲ ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ ಸಂತತ ಸುಖವ ಪಡೆವರು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು