ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಪೇಳಯ್ಯ ಕಂದಗೆಂದು ಪೇಳಯ್ಯ ಹರಿ ಯೆಂದು ಪೇಳಯ್ಯ ಮಂದಮತಿ ನಿವಾರಣೋದಯ ಪ ಜಡಭವದ ಜಡರು ಕಡಿದು ದೃಢತರದ ಜ್ಞಾನ ಕೊಡುವ ಒಡೆಯ ನಿಮ್ಮ ಪುಣ್ಯ ನಾಮ ಕಡು ಪಾಪಿ ಜಿಹ್ವೆಗುದಯ 1 ಸೂತ್ರಧಾರ ನಿನ್ನ ಪಾದ ಖಾತ್ರಿಗೊಳಿಸಿ ನಿಜ ಸುಖದ ಪಾತ್ರನೆನಿಪ ಸತತ ಎನ್ನ ನೇತ್ರಕೆ ನಿನ್ನ ದರ್ಶನೋದಯ 2 ಅಧಮತನ ದೂರಮಾಡಿ ಸದಮಲ ಮತಿಯಿತ್ತು ವಿಧ ವಿಧದಿ ಕಾಯ್ವ ಸದಾಯೆನ್ನ ಹೃದಯದಿ ಶ್ರೀರಾಮೋದಯ 3
--------------
ರಾಮದಾಸರು
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು
ಶ್ರೀಹರಿಶರಣರು ನಮ್ಮವರು ಭವ ಶರಧಿಯ ಜಿಗಿದರು ನಮ್ಮವರು ಪ ಪರಮನ ಚರಣದಿ ಅರಿವಿಟ್ಟುರತರ ದುರಿತದಿಂದುಳಿದರು ನಮ್ಮವರು ಅ.ಪ ನಿತ್ಯತೃಪ್ತರು ನಮ್ಮವರು ಜಗ ಮಿಥ್ಯೆಂದರಿತರು ನಮ್ಮವರು ನಿತ್ಯ ಸರ್ವೋತ್ತಮ ಹರಿಯೆಂಬ ವೃತ್ತಿ ಬಲಿಸಿದರು ನಮ್ಮವರು 1 ಸತ್ತು ಚಿತ್ತರು ನಮ್ಮವರು ಮಹ ನಿತ್ಯ ಮುಕ್ತರು ನಮ್ಮವರು ಮುಕ್ತಿದಾಯಕನಂ ಗುರ್ತಿಟ್ಟರಿಯುವ ಸತ್ವ ಕಾಲಗಳು ನಮ್ಮವರು 2 ನಿರ್ಮಲಾತ್ಮಕರು ನಮ್ಮವರು ನಿಜ ಧರ್ಮ ನಿರತರೈ ನಮ್ಮವರು ಬೊಮ್ಮನಯ್ಯನ ಮರ್ಮ ತಿಳಿದು ದು ಷ್ಕರ್ಮವ ಗೆಲಿದರು ನಮ್ಮವರು 3 ದೋಷದೂರರು ನಮ್ಮವರು ನಿ ರಾಸೆ ತಾರರು ನಮ್ಮವರು ಹೇಸಿದೈವಗಳ ಆಶಿಸಿ ಬೇಡದ ಕೇಶವನ ದಾಸರು ನಮ್ಮವರು 4 ಭಜನಾನಂದರು ನಮ್ಮವರು ಸ್ಥಿರ ನಿಜ ಪದವರಿದರು ನಮ್ಮವರು ಕುಜನ ಕುಹಕಿಗಳ ಗಜಿಬಿಜಿಗಳುಕದೆ ಸುಜನರೆನಿಸಿದರು ನಮ್ಮವರು 5 ಭೂರಿ ಶೀಲರು ನಮ್ಮವರು ದುಷ್ಟ ಕೇರಿಯ ಮೆಟ್ಟರು ನಮ್ಮವರು ಸಾರಸಾಕ್ಷನ ಸವಿಸಾರವರಿದು ಪಾದ ಸೇರಿಕೊಂಡಿರುವರು ನಮ್ಮವರು 6 ಸದಮಲಾನಂದರು ನಮ್ಮವರು ದು ರ್ಮದವ ನೂಕಿದರು ನಮ್ಮವರು ಅಧಮತನದಲಿಂದೊದರುವ ಹೊಲೆಯರ ಎದೆಯ ತುಳಿವರೈ ನಮ್ಮವರು 7 ಮೋಸಕೆ ಸಿಲ್ಕರು ನಮ್ಮವರು ಯಮ ಪಾಶವ ಗೆಲಿದರು ನಮ್ಮವರು ಈಶನ ತಿಳಿದರು ನಮ್ಮವರು 8 ಸುಗಣ ಸಂತರು ನಮ್ಮವರು ಮಹ ಭಗವದ್ಭಕ್ತರು ನಮ್ಮವರು ರಘು ಶ್ರೀರಾಮ ಜಗಸರ್ವೋತ್ತಮೆಂದು ಪೊಗಳುತ ನಲಿವರು ನಮ್ಮವರು 9
--------------
ರಾಮದಾಸರು