ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನವಂತನಾದವನೆ ಘನವಂತ ಜಗದಿ ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ ಮನ್ನಿಪರು ಅವನೊಚನ ಘನಭಕುತಿಲಿಂದ 1 ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ ತಿರುಗುವನು ಎಂದೆನುತ ತಿರಿಸುವರು ಹೀನ 2 ಬಂಧುಬಳಗವುಯೆಂದು ಬಂದು ಕರೆಯಲವನ ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು ಚಂದದಿಂದುಂಡೇವೇನೆಂದು ಜರೆವರು ಮನಕೆ ಬಂದ ತೆರದವನ ಮನನೊಂದಳಲುವಂತೆ 3 ಹತ್ತಿರದವರಾರು ಹತ್ತಿರಕೆ ಬಾರರು ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4 ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ ಚರಿಸುವ ಅಧಮಜನರಿರವೇನು ಜಗದಿ ಗರುವಿಕರ ಸಿರಿಗಿಂತ ಶರಣರ ಬಡತನವೇ ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5
--------------
ರಾಮದಾಸರು
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು