ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿಗೆ ದೂರುವೆನು ವೆಂಕಟರಾಯ ಚಾರದ ಮಹಿಮೆಯನು ಪ ಈರಾರು ಸ್ಥಳವಲ್ಲಿ ಮೂರಾರು ಸೇರಿಸಿ ಹೋರಾಟವನಿತ್ತು ಮಾರಿದೆಯೆನ್ನನು ಅ.ಪ ತೇಜವುಳ್ಳವನೊಬ್ಬನು ಐದನೆಯಲ್ಲಿ ಮೋಜಾಗಿ ಒಳಹೊಕ್ಕನು ಹೂಜಿ ತುಂಬಿದ್ದುದ ಸೋಜಿಗದೊಳು ಕದ್ದು ಪಾಜಿ ಮಾಡಿದನೆನ್ನ ಮೂಜಗದೊಡೆಯ 1 ಸೀತವಾದವನೊಬ್ಬನು ಅಷ್ಟಮದದಲ್ಲಿ ಕಾತುರದೊಳು ಬಂದನು ಘಾತಕತನ ಮಾಡಿ ಭೀತಿಗಳನು ತೋರಿ ದಾತ 2 ಮೂರನೆಯವನೊಬ್ಬನು ಏಳನೆಯಲ್ಲಿ ಸೇರಿಯೆ ಕಳುತಿದ್ದನು ಏರಿ ಬಂದುದನೆಲ್ಲ ಆರಿಸಿ ಮಾರಿಸಿ ಸೂರೆಗೊಂಡನು ಎನ್ನ ವಾರಿಜನಾಭ 3 ಅತ್ರಿಯ ಮೊಮ್ಮಗನು ನಾಲ್ಕನೆಯಲ್ಲಿ ಶತ್ರುವಾಗಿಯೆ ನಿಂತನು ಗೋತ್ರದಿ ಕಲಹವ ಬೆಳಸಿಯೆಯಿದ್ದಂಥ ಪಾತ್ರವÀ ತೀರಿಸಿ ಗಾತ್ರವ ಕೆಡಸಿದ 4 ಸುರಗುರುವೆಂಬುವನು ಮೂರನೆಯಲ್ಲಿ ಸ್ಥಿರವಾಗಿ ನಿಂತಿಹನು ಗುರುಗಳ ಮುಖದಿಂದ ಕರಕರೆ ಹತ್ತಿಸಿ- ದರು ಪಾಡಿ ಹರಿಯನ್ನು ತಿರುಕನಾದೆನು ನಾನು 5 ಆರನೆ ಮನೆಯೊಳಗೆ ದೈತ್ಯರ ಆ- ಚಾರಿಯನು ನಿಂತಿಹನು ಹಾರುಮಾತುಗಳೇಕೆ ತೂರಿದನೆಲ್ಲವ ಪಾರಾದೆನು ನಾನು ವಾರಿಜನೇತ್ರ 6 ಆದಿತ್ಯ ಪುತ್ರನಾದ ಶನೈಶ್ವರ ಬಾಧಿಪ ಮನೆಗಳಾರು ದ್ವಾದಶ ಆದಿಯು ದ್ವಿತೀಯ ಪಂಚಮದಲ್ಲಿ ವೇದಗಳೆಲ್ಲವು ಏಳುಯೆಂಟಿರಲಿ 7 ನಾಡನಾಳುವ ರಾಯರ ಕೆಡಿಸಿ ಮುಂದೆ ಕಾಡಿಗೆ ಸೇರಿಸಿದ ಈಡಿಲ್ಲ ಈತಗೆ ಜೋಡಿಲ್ಲ ಗ್ರಹರೊಳು ಪಾಡೆಲ್ಲ ಕೆಡಿಸಿದ ರೂಢಿಗೆ ಒಡೆಯ 8 ವಾರಿಧಿ ಮಥನದಲಿ ಸುಧೆಯನ್ನುಂಡು ಸೇರಿದ ಗೃಹರೊಳಗೆ ಮೀರಿದರಿಬ್ಬರ ಪಾರುಪತ್ಯಗಳನ್ನು ಮಾರ ಸನ್ನಿಭನೆ 9 ಸಂಧಿ ಸಂಧಿಯಲಿವರು ಬಂದೆನ್ನನು ದಂದುಗ ಬಡಿಸುವರು ಇಂದ್ರಾದಿ ದೇವರಿಗಳವಲ್ಲ ಇವರೊಳು ಹಿಂದು ಮುಂದರಿಯೆನು ಬಂದ ಬವರವನ್ನು 10 ಶುಭದಲ್ಲಿ ಶುಭವಿತ್ತರು ವೆಂಕಟರಾಯ ಶುಭ ತೋರಿಸೊ ಅಭಯವನಿಪ್ಪಂಥ ವರಾಹತಿಮ್ಮಪ್ಪನೆ ಪ್ರಭುವೆಂದು ನೀ ಹೇಳಿ ವಿಭವಗಳೆನಗೀಯೊ 11
--------------
ವರಹತಿಮ್ಮಪ್ಪ
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಸುಂದರ ಮೂರುತಿ ಹರಿಯೆ ಬಾ- ರೆಂದು ಕಶ್ಯಪ ಋಷಿ ಅದಿತಿಯರು ಮಂದಹಾಸದಿ ನಮ್ಮ ಮಂದಿರಕೀಗ ಗೋ- ವಿಂದ ಬಾ ಶ್ರೀಮುಕುಂದ ಬಾ ಯಾದವ ವೃಂದ ಬಾ ಬಲುಮುದದಿಂದ ಬಾ ಬಾ- ರೆಂದು ಕರದಾರು ಶೋಭಾನೆ 1 ಅಚ್ಚುತಾನಂತ ಶ್ರೀಹರಿ ನೀನು ಸಚ್ಚಿದಾನಂತಾತ್ಮನೆ ನೀನು ಮಿತ್ರೆ ಲಕುಮಿ ಒಡಗೂಡುತ ಬಾರೆಂದು ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು ಕೀರ್ತಿಪರು ಅನಸೂಯಾತ್ರಿಯರು ಬಾರೆಂದು ಕರೆದಾರು ಶೋಭಾನೆ 2 ಭಾಗವತರ ಪ್ರಿಯ ಬಾರೆಂದು ಭಾರದ್ವಾಜರು ಭಕ್ತಿಯಲಿ ಸತಿ ಸುಶೀಲೆ- ಯರು ಸುಂದರ ನಾರಿಯರು ಕರೆವರು ಕಂಸಾರಿ ಬಾರೆಂದು ಕರದಾರು ಶೋಭಾನೆ 3 ಹಸ್ತಿವರದ ಹರಿ ಬಾರೆಂದು ವಿಶ್ವಾಮಿತ್ರರು ಹರುಷದಲಿ ಸತಿ ಸಹಿತದಿ ಕರೆವರು ಭಕ್ತಿಯಲಿ ಪರಮಾಸಕ್ತಿಯಲಿ ಹರಿಯನು ಸ್ತೋತ್ರದಲಿ ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4 ಕೌಶಿಕ ಯಜ್ಞಪಾಲನೆ ಬಾ ಕಂಸನ ಸಭೆಯಲಿ ಸೆಳೆದನೆ ಬಾ ಹಂಸವಾಹನಪಿತ ಬಾರೆಂದು ಕರೆವರು ಗೌತಮರು ಪತ್ನಿ ಅಹಲ್ಯೆಯರು ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ ಬಾರೆಂದು ಕರದಾರು ಶೋಭಾನೆ 5 ಜಗದುದರನೆ ಶ್ರೀ ಹರಿಯೆ ಬಾ ನಿಗಮತಂದು ಸುತಗಿತ್ತನೆ ಬಾ ಝಗಿಝಗಿಸುವ ಆಭರಣಗಳ್ಹೊಳೆಯುತ ಬಾರೆಂದು ಜಯ ಜಯವೆನ್ನುವರು ಋಷಿ ಜಗದಗ್ನಿಯರು ರೇಣುಕ ಸಹಿತ ಶ್ರೀಶನ ಕರದಾರು ಶೋಭಾನೆ 6 ಮದನ ಗೋಪಾಲನಿಗೆ ಮಂಗಳ ಯದುಕುಲ ತಿಲಕನಿಗೆ ಮಂಗಳ ಕಮಲಾನಾಭ ವಿಠ್ಠಲನಿಗೆ ಸತಿ ಅ- ರುಂಧತಿಯರು ಜಯ ಜಯ ಮಂಗಳವೆಂದು ಕರದಾರು ಶೋಭಾನೆ7 ಶೋಭನವೆನ್ನಿರೆ ಶ್ರೀಹರಿಗೆ ಶೋಭನವೆನ್ನಿರೆ ಮಾಧವಗೆ ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ ಸಿರಿಯರಸಗೆ ದಿವ್ಯ ಶೋಭಾನೆ ಪರಮಪುರುಷನಿಗೆ ಶೋಭಾನೆ ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8
--------------
ನಿಡಗುರುಕಿ ಜೀವೂಬಾಯಿ
ಹರನಮಃ ಪಾರ್ವತೀ ಪತೆಯೇ ನಮೋ ಹರನಮಃ ಪಾರ್ವತೀ ಪತೆಯೇ ಪ ಹರಹರ ಶಂಕರ ಶಂಭೋ ಮಹಾದೇವ ಹರನಮಃ ಪಾರ್ವತೀ ಪತೆಯೇ ಅ.ಪ ಹರಿಯ ಪಾದೋದಕ ಶಿರದಲಿ ಧರಿಸಿದ ಪರಮ ವೈಷ್ಣವ ನಿನ್ನ ಚರಣಗಳಿಗೆ ನಮೋ 1 ಅತ್ರಿಯ ಪತ್ನಿಯ ಉದರದಿ ಜನಿಸಿದ ದತ್ತನಾಮಕ ಹರಿ ಭ್ರಾತ ದೂರ್ವಾಸನೆ 2 ಹರಿಯು ಪ್ರಸನ್ನನಾಗುವ ತೆರದಲಿ ಮನ ಕರುಣಿಸೋ ಉರಗಭೂಷಣ ಗಿರಿಜಾಪತೆ 3
--------------
ವಿದ್ಯಾಪ್ರಸನ್ನತೀರ್ಥರು