ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಪ ವರಶುಕ್ಲವತ್ಸರದ ಭಾದ್ರಪದ ಶಿತಪಕ್ಷ ಹರಿವಾರ ನವಮಿಯಲ್ಲಿ ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ ಹರಿಯೆ ಪರನೆಂದೆನುತಲಿ ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ ಬೆರೆದು ಸುರಸಂದಣಿಯಲಿ ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ವರವಿಷ್ಣುದೂತ ವೈಮಾನಿಕರ ಒಡಗೂಡಿ 1 ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ಖತಿದೂರರಿವರು ಜಗದೀ ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ಅತಿಶಯದಿ ಪೇಳಿ ಇಹಕೆ ಸತತವು ಶರಣರ್ಗೆ ಗತಿಯಾಗುವಂತೆ ಸ ತ್ವಥವಿಡಿಸಿ ಕರುಣದಿಂದ ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ 2 ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ಖೇಚರಾರೂಢ ಹರಿಯಾ ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ವೈಚಿತ್ರ್ಯವನು ತೋರಿ ಈ ಚರಾಚರದಿ ಸಂಗೀತ ಸಾಹಿತ್ಯದಲಿ ಪ್ರಾಚಾರ್ಯವಂತರೆನಿಸೀ ಆ ಚತುರ್ದಶಭುವನಪತಿ ಶ್ರೀದವಿಠಲನ ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ 3
--------------
ಶ್ರೀದವಿಠಲರು
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ
ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ಧ್ರುವ ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ ಸ್ವಾಮಿ ನಿಮ್ಮ ಭಯ ನಮ್ಮ ಪುಣ್ಯೋದಯ 1 ಸ್ವಾಮಿ ನಿಮ್ಮ ಖೂನ ನಿಜಸ್ಥಾನ ಸ್ವಾಮಿ ನಿಮ್ಮ ಙÁ್ಞನ ನಿಜಧ್ಯಾನ 2 ಸ್ವಾಮಿ ನಿಮ್ಮ ನೋಟ ನಮ್ಮ ಮನದೂಟ ಸ್ವಾಮಿ ನಿಮ್ಮ ಮಾಟ ನಮ್ಮ ಸುಖದಾಟ 3 ಸ್ವಾಮಿ ನಿಮ್ಮ ನಾಮ ನಮ್ಮ ಅತಿಪ್ರೇಮ ಸ್ವಾಮಿ ನಿಮ್ಮ ನೇಮ ನಮ್ಮ ನಿಜಾಶ್ರಮ 4 ಸ್ವಾಮಿ ನಿಮ್ಮ ಸೋಹ್ಯ ನಮ್ಮ ನಿಜಾಶ್ರಯ ಸ್ವಾಮಿ ನಿಮ್ಮ ಸಾಹ್ಯ ಮಹಿಪತಿ ಮನೋತ್ರಾಹ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು