ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದೆ ನಾನಾವಿಧದಲೀ ಬಂದ ಜನ್ಮಾವಧಿಯಲಿ ತಂದೆ ತಾಯಿ ಬಂಧು ಬಳಗ ಎಲ್ಲರೂ ನೀನೇ ಪ ಮಂದರಧರನೇ ಬೇಲೂರ ಚೆನ್ನಿಗರಾಯ ಹಿಂದಿಟ್ಟುಕೊ ಮುರಹರ ಸ್ವಾಮೀ ಅ.ಪ ಕುಕ್ಷಿಯೊಳೀರೇಳು ಲೋಕವನು ತಾಳ್ದನೇ ಪಕ್ಷಿವಾಹನಮೂರ್ತಿ ಮತ್ಸ್ಯಾವತಾರನೇ ಅಕ್ಷಯಾಗೆಂದು ದ್ರೌಪದಿಯ ಅಭಿಮಾನವನು ರಕ್ಷಿಸಿದ ಕೃಷ್ಣ ನೀನೆ ಸ್ವಾಮಿ 1 ಚಿಕ್ಕಂದು ಮೊದಲು ನಿನ್ನನು ನೆನೆವ ಬಾಲಕನಾ ಕಕ್ಕಸದ ಬಾಧೆಯಲಿ ಮೂದಲಿಪ ಹಿರಣ್ಯಕನಾ ಸೊಕ್ಕುಗಳ ಮುರಿದವನ ಕರುಳ ಮಾಲೆಯನಿಟ್ಟ ¨Àಕ್ತವತ್ಸಲನು ನೀನೇ ಸ್ವಾಮಿ 2 ಕರಿಕಂಠ ಹರನು ದಾನವನ ತಪಸಿಗೆ ಮೆಚ್ಚಿ ಅರಿತು ಅರಿಯದ ತೆರದಿ ಉರಿಹಸ್ತವನು ಕೊಡಲು ತರುಣಿ ರೂಪಿಲಿ ಪರಿಹರಿಸಿ ಭಸ್ಮಾಸುರನಾ [ಉರಿಸಿ]ಗೆಲಿದ ದೇವರದೇವಾ ಸ್ವಾಮಿ3 ಅಂದು ಮರೆಹೊಕ್ಕ ವಿಭೀಷಣಗೆ ರಾಜ್ಯವನು ಸಂದೇಹವಿಲ್ಲದಂದದಲಿ ಪಾಲಿಸಿ ನರನಾ ಮುಂದೆ ಸಾರಥಿಯಾಗಿ ರಥವ ನಡಸಿದ ಗೋ ವಿಂದ ಸಲಹಯ್ಯ ಯೆನ್ನನೂ [ಸ್ವಾಮಿ] 4 ದೇಶದೇಶದೊಳತ್ಯಧಿಕ ಕಾಶಿಗಿಂ ಮಿಗಿಲು ಭೂಸ್ವರ್ಗವೆನಿಪ ವೇಲಾಪುರವಾಸಾ ಕೇಶವ ಶ್ರೀವೈಕುಂಠ ಚೆನ್ನಿಗರಾಯಾ ಶೇಷಶಯನನೇ ಕರುಣಿಸೈ ಸ್ವಾಮೀ 5
--------------
ಬೇಲೂರು ವೈಕುಂಠದಾಸರು