ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಾ ನಿನ್ನಯ ದಿವ್ಯ ನಾಮಾ ನೆನೆವೆನು ರಾಮಾ ನಿನ್ನಯ ದಿವ್ಯ ನಾಮಾ ಪ್ರೇಮವ ಕೊಟ್ಟನ್ನಾ ನೇಮದೊಳಿರಿಸೊ ನೀ ಕರುಣದಿ ಪ ಚಿತ್ತ ಶುದ್ಧವ ಮಾಡಿ ಮತ್ತೆ ನಿನ್ನಯ ಪಾದ ನಿತ್ಯದಿ ನೆನೆವಂತೆ ಭಕ್ತಿಯೊಳಿರಿಸೊ ನೀ ಎನ್ನನು 1 ದಶರಥನುದರದಿ ಶಿಶುವಾಗಿ ಜನಿಸಿದೆ ಹೊಸ ಆಭರಣವಿಟ್ಟು ಕುಶಲಮಾತೆಯನು ನೋಡುವ 2 ಛಂದದಿಂದಲಿ ಆನಂದದೊಳಿಹ ರಾಮಾ ಚಂದ್ರನ ಮೊಗ ಅತಿ ಸುಂದರವಾಗಿರುವವನೇ 3 ಬಿಲ್ಲ ಬಾಣವಪಿಡಿದು ಎಲ್ಲಾ ದೈತ್ಯರ ಕೊಂದು ಅಲ್ಲೇ ಕೌಶಿಕಯಾಗ ಎಲ್ಲ ಸಲಹಿದೆ ಧೀರನೇ 4 ವಿಥುಳಾಪುರದಿ ಬಂದು ಅತುಳ ಧನುವ ಮುರಿದು ಸತಿ ಸೀತಾ ಸಹಗೂಡಿ ಪಿತನಾ ಪಟ್ಟಣವನು ಸೇರಿದೆ 5 ಮಾತೆಯ ವರ ಕೇಳಿ ನೀತಿಯಿಂದಲಿ ಅನು ಜಾತನ ಒಡಗೂಡಿ ಖ್ಯಾತಿಯಿಂದಲಿ ಪೋದಂತಹ 6 ಸರಯು ತೀರದಿ ಬಂದು ಪುರದ ಜನರ ಬಿಟ್ಟು ಭರದಿ ನಾವೆಯನೇರಿ ತ್ವರಿತದಿಂ ದಾಟಿ ನೀ ಪೋದೆ 7 ಭಕ್ತಿಯಿಂದಲಿ ಆ ಸಕ್ತ ಭರತನ ಕಂಡು ಯುಕ್ತಿಯಿಂದಲಿ ತೇಜೋಯುಕ್ತಪಾದುಕವನು ಕೊಟ್ಟೆನೀ 8 ಪುಸಿಯತಿಯಾಗಿ ಶೀತೆಯ ಅಸುರ ಕೊಂಡೊಯ್ದನೆಂದು ವ್ಯಸನದಿಂದಲಿ ಪೋಗಿ ಪಕ್ಷಿಯುದ್ಧರಿಸಿದೆ ಘಮ್ಮನೆ 9 ಶಾಂತಮೂರುತಿ ಹನುಮಂತರೆಲ್ಲರು ಕೂಡಿ ಅಂತರದಲಿ ಸೇತು ನಿಂತು ನೋಡುವೆ ನೀ ಛಂದದಿ 10 ಶರಣ ಬಂದ್ವಿಭೀಷಣನ ಕರುಣದಿಂದಲಿ ಕಾಯ್ದೆ ಸ್ಥಿರದಾಪಟ್ಟವಗಟ್ಟಿ ಹರುಷದೋಳ್ ನಿಲಿಸಿದೆ ಅವನನು 11 ವಾನರರೊಡಗೊಂಡು ಸೇನೆ ಸಹಿತಲೇ ದಶಾ ನನ ರಾವಣನಕೊಂದು ಮಾನಿನೀ ಸಹಿತನೀ ಬಂದಿಹೆ 12 ಪುಷ್ಪಕವನೆ ಏರಿ ಅಕಸ್ಮಾತದಲಿ ಬಂದು ಆಕ್ಷಣದಲಿ ಭರತ ರಕ್ಷಣ ಮಾಡಿದ ದೇವನೇ 13 ಪಟ್ಟಣದಲಿ ಮಾಹಾ ಪಟ್ಟವನೇರಿಸಿ ಶಿಷ್ಟ ಅಯೋಧ್ಯೆಯ ಪಟ್ಟಣವಾಳಿದೆ ರಾಮನೆ 14 ಬ್ರಹ್ಮಮೂರುತಿ ರಾಮಾಗಮನ ಚರಣದಿ ಸುಮ್ಮಾನದಲಿ ಶಾಂತಿ ತನ್ಮಯಗೊಳಿಸಾನಂದದಿ 15
--------------
ಶಾಂತಿಬಾಯಿ