ಮಾಯಕಾರಳೆ ಕಾಯೊ ಕರುಣದಿ
ಬಾಯಿ ಬಿಡುವೆನೆ ರುದ್ರಾಣಿ ಪ
ನೋಯಲಾರದೆ ದೇವಿ ಮರೆಹೊಕ್ಕೆ
ನೋವು ಕಳೆಯಮ್ಮ ಭವಾನಿ ಅ.ಪ
ಭಕ್ತಜನರಿಗೆ ಆಪ್ತಮಾತೃ ನೀ
ನಿತ್ಯೆ ನಿರ್ಮಲರೂಪಿಣೀ
ಭೃತ್ಯನೊಳು ದಯವಿತ್ತು ಪೊರೆ ಆದಿ
ಶಕ್ತಿ ದೈತ್ಯಸಂಹಾರಿಣಿ 1
ಶುಂಭ ನಿಶುಂಭರೆಂಬ ಖಳರ
ಜಂಬ ಮುರಿದೌ ಚಂಡಿಕೆ
ಅಂಬೆನಿನ್ನನು ನಂಬಿ ಭಜಿಪೆ
ಇಂಬುಗೊಟ್ಟು ಸಲಹಂಬಿಕೆ 2
ಸುರರ ಮೊರೆಕೇಳಿ ದುರುಳÀರ್ಹಾವಳಿ
ದೂರಮಾಡಿ ಶೌರಿಯೆ
ನೀ(ರಟ)ಸಿದವರಿಗೆ ವರವ ಕರುಣಿಸಿ
ಕರುಣ ದೋರಿದೌದರಿಯೆ 3
ಅನ್ನಪೂರ್ಣೆಯೆ ನಿನ್ನ ಪಾದ
ವನ್ನು ಭಜಿಸುವೆ ಕಲ್ಯಾಣಿ
ಭಿನ್ನವಿಲ್ಲದೆ ನಿನ್ನ ಸುತಗೆ ಸುಖ
ವನ್ನು ಕೊಡೆ ನಾರಾಯಣೆ 4
ರಾಮದಾಸರ ಪ್ರೇಮ ಜನನಿಯೆ
ನೇಮದಿಂ ನಿನ್ನ ಪಾಡುವೆ
ಹೈಮಾವತಿ ಎನ್ನ ಕಾಮಿತಾರ್ಥವ
ಪ್ರೇಮದಿಂ ನೀಡು ಕರುಣಿಯೆ 5