ಹಿಗ್ಗಿದಳು ನಂದನ ಸತಿ
ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ
ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ
ಕಾಲುಗಳನೆಂದು ಕರಗಳಲಿ ಪಿಡಿದು
ನೀಲಮೇಘಶ್ಯಾಮ ಶ್ರೀಲಕುಮಿಯರಸನನು
ಬಾಲನೆಂದರಿತು ಆಲಿಂಗನದಿ ಮೈ ಮರೆತು1
ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು
ನಂಬಬಹುದೇ ಮೋಹಜಾಲವಿರಲು
ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ
ಮೋದ ಕಂಬನಿಯ ಸುರಿಸುತ್ತ 2
ಓರೆಗಣ್ಣಿನ ನೋಟ ನಾರಿಯರ ಪೇಚಾಟ
ಮೂರು ಲೋಕಕೆ ಹರ್ಷಕರ ಮಂದಹಾಸ
ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ
ಚಾರುಮುಖಿ ಸುತನ ಮನಸಾರ ದರುಶನದಿಂದ 3
ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ
ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ
ಸಿಂಧು ಶ್ರೀರಂಗನ್ನ ನೋಡುತಲಿ
ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4
ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ
ಉನ್ನತೋನ್ನತ ಸುಗುಣ ಜ್ಞಾನಮಯನ
ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ
ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5