ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೇ ಬೇಡುವೆ ನಿನ್ನನು ನಿನ್ನಡಿಗಳನೆಂದಿಗು ನೆನೆವುದನು ಪ. ಒಂದೇ ಬೇಡುವೆನು ಮುಕುಂದ ಇದರ ಬಲ ದಿಂದ ಸರ್ವಾರ್ಥವ ಹೊಂದುವ ಮನದಿಂದ ಅ.ಪ. ಪಾತಕಗಳನೆಲ್ಲ ಪರಿಹರಿಸುವ ದುರ್ವಿ- ಘಾತಕವೈರ ಕತ್ತರಿಸುವುದು ಶ್ರೀಕರುಣಿಯ ಸನ್ನಿಧಾನವನಿರಿಸುವ ಆತತಾಯಿಗಳ ಭಂಗಿಸಿ ಬಾಧೆ ಪಡಿಸುವ 1 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ತುಂಬಿದ ಜನರೊಡನಾಡುವಾಗ ನಂಬಿದ ಸತಿಯೊಳು ನಯನುಡಿ ನುಡಿವಾಗ ಅಂಬುದನಿಭ ನಿನ್ನ ಹಂಬಲಗೊಳುವುದ 2 ನಡೆವಾಗ ನುಡಿವಾಗ ಮಡಿಯನುಟ್ಟಿರುವಾಗ ಪೊಡವಿ ಪಾಲಕರೊಡನಾಡುವಾಗ ಕಡಲಶಯನ ನಿನ್ನ ನೆನೆವರೆ ನಾಚಿಕೆ ಕಾಲ ದೃಢದಿಂದ ಸ್ಮರಿಸುವ 3 ಖೇದ ಮೋದಗಳೆಂಬ ಭೇದವಿಡದೆ ಯಾವಾ- ಗಾದರು ಸರಿಯಾಗಿ ಸ್ಮರಿಸುವರ ಕಾದುಕೊಂಡಿರುವಂಥ ಕರುಣಿಯೆಂಬುದರಿಂದ- ಗಾಧ ಮಹಿಮೆ ನಿನ್ನ ಹಾದಿ ತೋರಿಸುವುದ 4 ಶ್ರಮವಿಲ್ಲದೆ ಸ್ಮøತಿ ಭ್ರಮಣೆ ಬಿಡಿಸುವ ಶ್ರೀ- ರಮಣ ವೆಂಕಟಗಿರಿ ನಾಯಕನೆ ನಮಿಸಿ ಬೇಡವೆನೆಂಬ ಮಮತೆಯಿರಿಸಿ ನಿನ್ನ ಕಮನೀಯಪದಕಲ್ಪದ್ರುಮ ನೆರಳಿರಿಸೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ