ಕರುಣವ ತೋರೋ ಕರುಣಗುಣಾಂಬುಧಿ
ಕರುಣವ ತೋರೋ ರಂಗಯ್ಯ ಪ
ಕರುಣದಿ ಬಾರೋ ಬಾರೋ ಕರುಣ ತೋರಿ ಎನ್ನ
ಕರುಣದಪ್ಪಿ ಪೊರಿ ಕರುಣವ ತೋರೋ ಅ.ಪ
ಪರತರಮಹಿಮ ಹರಸುರಬ್ರಹ್ಮರ
ಮೊರೆಯ ಕೇಳಿದ ಕರುಣವ ತೋರೋ ರಂಗಯ್ಯ
ಧರೆಗೆ ಇಳಿದು ಶೇಷಗಿರಿಯಲಿ ನಿಂತು
ನರಸುರರಿಗೆ ವರವಿತ್ತ ಕರುಣವ ತೋರೋ ರಂಗಯ್ಯ
ಪುರದಿ ಬಂದು ನಿಂತ ಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ಬಾರೋ ಚರಣವಿಟ್ಟು ನಾರಿಕುಲವನು
ದ್ಧರಿಸಿದಿ ಕರುಣವ ತೋರೋ 1
ಅಂಬುಜನಯನ ಕಂಬದಿ ಬಂದು ಭಕ್ತ
ಗಿಂಬುಕೊಟ್ಟು ಕಾಯ್ದ ಕರುಣವ ತೋರೋ ರಂಗಯ್ಯ
ನಂಬಿಕೊಟ್ಟ ಕಮಲಾಂಬಕಿಯೆಂಜಲ
ಸಂಭ್ರಮದಿಂ ಮೆದ್ದ ಕರುಣವ ತೋರೋ ರಂಗಯ್ಯ
ನಂಬಿದ ಅಸುರಗೆ ಬೆಂಬಲಗೊಟ್ಟು ಸ್ಥಿರ
ಕುಂಭಿನಿಪಟ್ಟವಿತ್ತ ಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ಬಾರೋ ಅಂಬರೀಷನ ಮೊರೆ ಕೇಳಿ
ಶೀಘ್ರದಿಂದ ಕರುಣವ ತೋರೋ 2
ನಿರುತ ನಂಬಿ ನಿನ್ನ ಮರೆಹೊಕ್ಕ ಬಾಲಗೆ
ಸ್ಥಿರಪದವಿಯನಿತ್ತ ಕರುಣವ ತೋರೋ ರಂಗಯ್ಯ
ಗರುಡನೇರಿ ಬಂದು ಕರಿಯ ವಿಪತ್ತನು
ಪರಿಹರಿಸಿದ ಮಹಕರುಣವ ತೋರೋ ರಂಗಯ್ಯ
ಹರಿಹರಿ ಎಂದೊದರಿದ ತರಣಿಭಕ್ತಿಗೆ ಮೆಚ್ಚಿ
ನಿರುತ ಮೈಗಾವಲಾದ ಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ಬಾರೋ ಪರಮ ನಿರ್ಜರರಿಗೆ
ಅಮೃತವುಣಿಸಿದ ಕರುಣವ ತೋರೋ3
ದುರುಳಕೋಟಿಯಾಚರಿಸಿದ ದುರುಳಗೆ
ಪರಮ ಕೈವಲ್ಯವಿತ್ತ ಕರುಣವ ತೋರೋ ರಂಗಯ್ಯ
ಕಿರಿಕುಲದವನ ಕರದಿಂ ಪರಮಾ
ದರದಿ ಉಂಡ ಮಹಕರುಣವ ತೋರೋ ರಂಗಯ್ಯ
ನೀರು ಕೊಟ್ಟ ನಿಜಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ಬಾರೋ ಚರಣದಾಸ
ವರ ಕನಕನಿಗೊಲಿದ ಕರುಣವ ತೋರೋ 4
ಹಿಡಿ ಅವಲಕ್ಕಿಯ ಕೊಡಲು ಒಪ್ಪಿ ನೀ
ಕಡು ಸಂಪದವಿತ್ತ ಕರುಣವ ತೋರೋ ರಂಗಯ್ಯ
ಮಡಿದ ಬಾಲಕನಂ ಕಡುದಯದೆಬ್ಬಿಸಿ
ಪಿಡಿದು ಕಾಪಾಡಿದ ಕರುಣವ ತೋರೋ ರಂಗಯ್ಯ
ದೃಢಕರ ಬೆಂಬಲ ಬಿಡದೆಯಿರುವ ನಿನ್ನ
ಕಡುದಿವ್ಯ ಮೂರ್ತಿಯ ಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ರಂಗ ಒಡೆಯ ಶ್ರೀರಾಮ ಎ
ನ್ನೊಡಲಗಲದೆ ನಿಂತು ಕರುಣವ ತೋರೋ 5