ಕಾಮಹರ ಒಬ್ಬ ತಾನೆ ಬಲ್ಲಾ |
ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ಪ
ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ |
ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ
ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು 1
ಫಣಿಯಾಭರಣವು ಪೆಡೆಯೆತ್ತಿ ಇರಲು |
ಮಣಿ ರುಂಡಮಾಲೆ ತೂಗಾಡಲು |
ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು
ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು 2
ಕಾಳಕೂಟದ ವಿಷಬಿಂದು ಮಾತುರನುಂಗೆ |
ತಾಳಲಾರದೆ ತಳಮಳವಗೊಂಡು |
ಕಾಳಿಮರ್ದನ ಕಮಲಾಯತಾಕ್ಷ ಎನ್ನ |
ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು3
ಗಜಮುಖ ತಾಳವ ಪಿಡಿದು ತಥೈ ಎನ್ನಿ |
ಅಜಸುತ ರಿಪು ಮದ್ದಳಿಯೆ ಮುಟ್ಟಿ |
ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ |
ಜಗಾಧಿಪತಿ | ವಿಷ್ಣು ರಾಮನಲ್ಲದಿಲ್ಲವೆಂದು 4
ಆರು ಮುಖದವ ಶಂಖವನ್ನು ಊದೆ |
ಭೈರವ ನಾಗಸ್ವರವ ನುಡಿಸೆ |
ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ|
ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು 5
ಗೋರಾಜ ಸರಿಗಮಪದನಿಸ ಎಂದು ನಲಿಯೇ |
ಉರಗಾದಿ ಮೂಷಕಾದಿ ಚಿಗಿದಾಡಲು |
ವಾರಣದ ಗಂಗೆ ಸಿರದಲಿ ತುಳುಕಲು |
ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು 6
ತುಂಬುರನಾರಂದ ತಂದನ್ನಾತಾ ಎನ್ನೆ |
ಅಂಬರದಿಂದ ಪೂಮಳೆಗೆರೆಯೆ |
ಅಂಬುಜಪತಿ ಶಿರಿ ವಿಜಯವಿಠ್ಠಲ ವಿ
ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು 7