ದಾರಿಗಾಣದಯ್ಯ ಕಣ್ಣಿಗೆ ದಾರಿ ತೋರಿಸಯ್ಯಾ ಪ
ಪಾರುಗಾಣದ ಸಂಸಾರ ವಾರಿಧಿಯಲಿ
ಪಾರುಗಾಣಿಸಯ್ಯ ಮಾರನ ಪಿತನೇ ಅ.ಪ
ಯಾರಿಗೆ ಮೊರೆಯಿಡಲಾರು ಕೈಹಿಡಿವರು
ಧಾರಿಣಿಯೆ ಅಂಧಕಾರವಯ್ಯ
ಸಾರಸನಾಭ ನೀ ಕಾರುಣ್ಯಾಮೃತ
ಬೀರದಿದ್ದರೆ ಎನ್ನ ಗತಿಏನೋ ರಂಗ1
ಸತಿಸುತರೆನಗತಿ ಹಿತರೆಂದೆನ್ನುತೆ
ಸತತ ನಂಬಿ ಸತ್ಪಥವನು ಮರೆತಂತೆ
ಪತಿತನಾದೆನಗೆ ನೀ ಗತಿದೋರದಿದ್ದರೆ
ಪತಿತನಾಗಿರುವುದೇ ಗತಿಯೊ ಮಾಂಗಿರಿರಂಗ 2