ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಎಷ್ಟು ದಿನದ ಪೂಜೆ ಹಿಡಿದೆಣ್ಣಾ ಸತಿಯೆಂಬ ಮಾರಿದಿ- ನ್ನೆಷ್ಟು ದಿನ ಪೂಜೆ ಮಾಡಬೇಕಣ್ಣಾ ಪ ಎಷ್ಟು ದಿನದ ಪೂಜೆ ಹಿಡಿದಿ ನ್ನೆಷ್ಟುದಿನ ಮುಂದೆ ಬಾಕಿ ಉಳಿದಿದೆ ಕಷ್ಟಕಂಜದೆ ಬಿಡದೆ ಅನುದಿನ ನಿಷ್ಠೆಯಿಂದ ಪೂಜೆ ಮಾಡುವಿ ಅ.ಪ ಒಬ್ಬರ ಮನೆ ಮುರಿದು ತರುವಿ ಅವಳಿಗೇನೆ ಹಬ್ಬಮಾಡಿ ಉಣಿಸುತಿರುವಿ ಮತ್ತು ಇನ್ನು ಒಬ್ಬರೈತರ ಬೊಬ್ಬೆ ಹೊಡೆಯುವಿ ದಬ್ಬಿ ಓಡಿಸುವಿ ಹಬ್ಬ ಹುಣ್ಣಿಮೆ ಬರಲು ವೈಭವದುಬ್ಬಿಉಬ್ಬಿವಸ್ತ್ರ ಒಡವೆ ಅಬ್ಬರದಿಂದುಡಿಸಿ ತೊಡಿಸಿ ಮಬ್ಬಿನಿಂದ ಹಿಗ್ಗುತಿರುವಿ 1 ಧನವ ತಂದು ಅವಳಿಗರ್ಪಿಸಿ ಮತ್ತು ನಿನ್ನಯ ಮನವ ಅವಳ ವಶಕೆ ಸಲ್ಲಿಸಿ ಎಂಟುಗೇಣಿನ ತನುವು ಅವಳಾಧೀನದಲ್ಲಿರಿಸಿ ಕುಣಿವಿ ಪಶುವೆನಿಸಿ ಪಾಲಿಸಿ ದಿನಗಳೆಯುವಿ ನೋಡಿಕೊಳ್ಳದೆ 2 ಬಂದಕಾರ್ಯ ಮರೆದುಬಿಟ್ಟ್ಯಲ್ಲ ಹೆಡತಲೆಮೃತ್ಯು ಹಿಂದೆ ನಿಂತು ನಲಿಯುತಾಳಲ್ಲ ಹೇ ಪಾಪಿ ನೀನು ಒಂದೂ ವಿಚಾರ ಮಾಡಿ ಅರೀಲಿಲ್ಲ ಮಂದನಾದೆಲ್ಲ ತಂದೆ ಶ್ರೀರಾಮನ್ನಂತಂಘ್ರಿಗೊಂದಿ ಭಜಿಸಿ ದಾಸನಾಗಿ ಅಂದಮಾದ ನಿತ್ಯಮುಕ್ತಿ ಪಡೆವ ಸುಸಂಧಿ ನಡುವೆ ಹೋಗುತಾದರ್ಲ3
--------------
ರಾಮದಾಸರು
ಒಲಿಸಿದ್ಹ್ಯಾಗೆ ಪೇಳೆ ಜನನಿ ತುಲಸಿ ಹರಿಯ ಮೋಹಮಾನಿನಿ ಪ ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ ಒಲ್ಲ ಸೇವಂತಿಗಿರವಂತಿಗೆ ಎಲ್ಲ ಕುಸುಮಗಳನು ನೀ ನಿಲ್ಲದೆ ತನಗೆ ಸಲ್ಲದೆನುವ 1 ಗಂಧ ಕಸ್ತೂರಿ ಪುನುಗು ಕೇಸರಿ ಅಂದಮಾದ ಸುಗಂಧ ಭಾರಿ ಚಂದದಿ ಪೂಸಲಿದರೊಳ್ನೀ ನೊಂದಿಲ್ಲದಿನಿತು ಧಿಕ್ಕಾರೆನುವ 2 ಮಿಗಿಲಾದ ಮಣಿಮಾಲೆಯ ಬಗೆಯದಿದನು ನಿನ್ನ ಬೇಡುವ ನಿಗಮಾತೀತ ಶ್ರೀರಾಮ ನಿ ನ್ನಗಲದಿರೆನೆಂಬ ಸಂತತ 3
--------------
ರಾಮದಾಸರು
ನೀನೆನನ್ಹುಟ್ಟಿಸಿದ್ಯೋ ನಾನೆ ನಿನ್ನ್ಹುಟ್ಟಿಸಿದೆನೋ ಜಾನಕೀಶ ನೀನೆನಗೆ ಸಿಟ್ಟಾಗದ್ಹೇಳೈ ಪ ತಂದೆ ಮಗನ್ನ್ಹೆತ್ತನೋ ಮಗ ತಂದೆನ್ಹೆತ್ತನೋ ತಂದೆ ಮಗನ್ನೀರ್ವರನು ತಾಯಿ ಹೆತ್ತಳೇನೋ ತಂದೆತಾಯಿಮಗತ್ರಯರು ಬಿಂದಿನಲುದ್ಭವಿಸಿದರೆ ಅಂದಮಾದ ಸಂಧಿದನು ಚೆನ್ನಾಗಿ ಬಿಡಿಸೈ 1 ಬೀಜದಿಂದ್ವøಕ್ಷಾಯ್ತೋ ವೃಕ್ಷದಲಿ ಬೀಜಾಯ್ತೋ ಬೀಜವ್ಯಕ್ಷಗಳೆರಡು ಹಣ್ಣಿನೋಳ್ಹುಟ್ಟಿದವೇ ಬೀಜವೃಕ್ಷ್ಹಣ್ಣುಮೂರು ಭೂಮಿಯೋಳ್ಹುಟ್ಟಿದವೇ ಸೋಜಿಗದ ಸಂಧಿದನು ನೈಜದಿಂ ಬಿಡಿಸೈ 2 ಜೀವದಿಂ ಮಾಯವೋ ಮಾಯದಿಂ ಜೀವವೋ ಜೀವಮಾಯಗಳೆರೆಡು ಭಾವದ್ಹುಟ್ಟಿಹ್ಯವೋ ಜೀವ ಮಾಯ ಮೂರು ಕಾಯದಲಿ ಜನಿಸಿದವೋ ನ್ಯಾಯದ ಸಂಧಿದನು ದಿವ್ಯವಾಗಿ ಬಿಡಿಸೈ 3 ಉತ್ಪತ್ತಿಯಿಂ ಲಯವೋ ಲಯದಿಂದ ಉತ್ಪತ್ತ್ಯೋ ಉತ್ಪತ್ತಿಲಯವೆರಡು ಸ್ಥಿತಿಯಿಂ ತೋರುವವೋ ಉತ್ಪತ್ತಿಲಯಸ್ಥಿತಿ ತತ್ವದೊಳು ಜನಿಸಿಹ್ಯವೋ ಗುಪ್ತದ ಸಂಧಿದನು ನಿರ್ತಾಗಿ ಬಿಡಿಸೈ 4 ವೇದದಿಂ ಸಾಧನವೋ ಸಾಧನದಿಂ ವೇದವೋ ವೇದಸಾಧನವೆರಡು ನಾದದ್ಹುಟ್ಟಿಹ್ಯವೋ ವೇದಸಾಧನ ನಾದಶೋಧದಿಂ ಜನಿಸಿಹ್ಯವೋ ಮೋದದ ಸಂಧಿದನು ಬೋಧದಿಂ ಬಿಡಿಸೈ 5 ಪಿಂಡಾಂಡದಿಂ ಬ್ರಹ್ಮಾಂಡೋ ಬ್ರಹ್ಮಾಂಡದಿಂ ಪಿಂಡಾಂಡೋ ಪಿಂಡಾಂಡಬ್ರಹ್ಮಾಂಡೆರಡು ಖಂಡನಿಂದ್ಹುಟ್ಟಿಹ್ಯವೋ ಪಿಂಡಾಂಡಬ್ರಹ್ಮಾಂಡ ಖಂಡನ್ಯೋಗಿಯಲಿ ಜನಸಿಹ್ಯವೊ ಗಂಡಾಂತರದ ಸಂಧಿದನು ಖಂಡಿತದಿಂ ಬಿಡಿಸೈ 6 ಕಾಮದಿಂ ನೇಮವೋ ನೇಮದಿಂ ಕಾಮವೋ ಕಾಮನೇಮಗಳೆರಡು ನಿತ್ಯದ್ಹುಟ್ಟಿಹ್ಯವೋ ನಿತ್ಯ ಶ್ರೀರಾಮ ನಿನ್ನಾಟವೋ ಈ ಮಹಸಂಧ್ಯೆನಗೆ ಪ್ರೇಮದಿಂ ಬಿಡಿಸೈ 7
--------------
ರಾಮದಾಸರು
ಬಾಲನಮ್ಮ ಬಾಲಕೃಷ್ಣ ಬಹಳ ಮಾಯಕಾರನೀತ ಪ ಬಾಲನೀನೆ ಗೋಪಾಲ ನೀಲಶ್ಯಾಮ ವನಮಾಲ ಬಾಲನಂತೆ ಕಣ್ಗೆತೋರಿ ಆಲಯ ಗೌಪ್ಯದಿಂದ ದೂರಿ ಅಧರ ಸುರಿವ ಅ.ಪ ಮಿಂದು ಮಡಿಯನುಟ್ಟಾನಂದದಿ ಶೋಭಿಸುವ ಅಂದಮಾದ ಹಂಸತಲ್ಪದಿ ಪವಡಿಸಿರುವ ಇಂದು ಮುಖಿಯವರ ಬಳಿಗೆ ಮುದದಿ ಮಂದಹಾಸದಿ ಮೋಹ ಮಾತನಾಡಿ ಬಾಧಿಸಿ ಕಂದರ್ಪನ್ಹೇವದಿ ಸುಲಿದುಕೊಂಡವ 1 ನಲಿನಲಿದು ಬೀಳುತೇಳುತ ಲಲನೆಯರಿಗೀ ಸುಲಿಯಪಲ್ಲು ತೋರಿನಗುತ ದಾರಿ ತರುಬಿ ಚೆಲುವಾದಾಟಗಳನೆ ಆಡುತ ಕೊಳಲನೂದುತ ಅರಿವು ಮರವೆಮಾಡಿ ತಿಳಿಯದ್ಹಾಗೆ ಘಳಿಲಿನ್ಹಾರಿ ಎಳೆದು ಏಕಾಂತಸ್ಥಳಕ್ಕೊಯ್ದು ಹಲವು ಕ್ರೀಡದಿಕಳೆಯ ಸೆಳೆದು ಗಲ್ಲಕಚ್ಚುವ ಜಿಗಿದು ಓಡುವ 2 ಹಿತದಿ ಆಡುವ ಸುತರ ಕೆಣಕುವ ಬಿಡಿಸಲ್ಹೋದ ಸತಿಯರ ಮೈಮೇಲೆ ಬರುವ ಸಣ್ಣವನೇನೇ ಪತಿ ನಾ ನಿಮಗೆಂದ್ಯವ್ವನ ತಾಳುವ ವ್ಯಥೆಯಬಡಿಸುವ ಮೀಸಲು ಮುರಿಸಿ ದೇವರು ತಾನೆಯೆನಿಸಿ ಪತಿತ ಶ್ರೀರಾಮ 3
--------------
ರಾಮದಾಸರು
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು