ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಟ್ಹಾಂಗಿರಬೇಕು ಮಾಂ ಇಟ್ಹಾಂಗಿರಬೇಕು ಸೃಷ್ಟೀಶ ನಮ್ಮ ಧ್ರುವ ಸಕಳವೆಲ್ಲ ಹರಿ ಸೂತ್ರವು ಇರಲಿಕ್ಕೆ | ವಿಕಳಿತಗೊಂಬುವದ್ಯಾಕೆ ಮಾಂ | ಅಖಿಳ ಭುವನಕೆಲ್ಲ ಸಾಕಿ ಸ - | ಹಕಾರ ನೊಬ್ಬ ಶ್ರೀಪತಿಯ ಮಾಂ | 1 ಯಂತ್ರಜೀವ ತಂತ್ರ ಶಿವ ಇರಲಿಕ್ಕೆ ಸ್ವ | ತಂತ್ರವೆ ನಾನೆಂಬುದ್ಯಾತಕೆ ಮಾಂ | ಚಿತ್ರ ವಿಚಿತ್ರವು ದೋರುವ ಸೂತ್ರವು | ಕರ್ತು ಸದ್ಗುರು ಸುತಂತ್ರವು ಮಾಂ 2 ಅಂತ್ರ ಬಾಹ್ಯ ವ್ಯಾಪಕನಾಗಿರಲಿಕ್ಕೆ | ತಂತ್ರ ಮಂತ್ರಗಳ್ಯಾತಕೆ ಮಾಂ | ಜಂತ್ರ ಮಾಡಿ ಜನ್ಮ ಮರಣದ ತಿರಿಹುವಾ | ಗಂತ್ರವು ಎಂದಿಗೆ ತಿಳಿಯದು ಮಾಂ 3 ಇಟ್ಹಾಂಗ ಇರಬೇಕು ಕೊಟ್ಹಾಂಗ ಕೊಂಡಿನ್ನು | ತುಟ್ಟಿಲೆ ಮಿಸುಕದೆ ಗುಟ್ಟಿಲೆ ಮಾಂ | ಹೊಟ್ಟಿಗಾಗಿ ಅಷ್ಟು ಸಾಯಾಸ | ಬಟ್ಟರೆ ಸಾರುಸದೇ ಅಟ್ಟಿಸುವದು ಮಾಂ 4 ಇಟ್ಹಾಂಗ ಇರೋ ಮಹಿಪತಿ ಸೃಷ್ಟಿಯೊಳಿನ್ನು | ಘಟ್ಟಿಗೊಂಡ ಗುರುಪಾದವು ಮಾಂ | ಮುಟ್ಟಿ ಮುದ್ರಿಸಿ ಕೃಪಾದೃಷ್ಟಿಲೆ ಹೊರೆವನು | ಕೊಟ್ಟು ನಿನಗೆ ಸ್ವಾನುಭವವು ಮಾಂ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೀವ ನಿಮ್ಮದೊ ಗುರು ಭಾವ ನಿಮ್ಮದೊ ಜೀವ ಭಾವದ ಶಿವಸೂತ್ರ ನಿಮ್ಮದೊ ಧ್ರುವ ಕಾಯ ಮಾಯ ನಿಮ್ಮದು ಅಂತ್ರ ಬಾಹ್ಯ ನಿಮ್ಮದು ನಿರ್ಮಿಸಿಹ್ಯ ಇದು ಉಪಾಯ ನಿಮ್ಮದು 1 ಪೃಥ್ವಿ ಅಪ್ಪು ನಿಮ್ಮದು ತೇಜ ತತ್ತ್ವ ನಿಮ್ಮದು ವಾಯುವಾಕಾಶವೆ ತಾ ತತ್ತ್ವನಿಮ್ಮದು 2 ಪ್ರಾಣವೇ ನಿಮ್ಮದು ಪಾನವೇ ನಿಮ್ಮದು ವ್ಯಾನ ಉದಾನ ಸಮಾನ ನಿಮ್ಮದು 3 ಅಂತಃಕರಣ ನಿಮ್ಮದು ಬುದ್ದಿಮನ ನಿಮ್ಮದು ಚಿತ್ತ ಚೈತನ್ಯ ಚೇತನ ನಿಮ್ಮದು 4 ನುಡಿನೋಟ ನಿಮ್ಮದು ಆಟಕೂಟ ನಿಮ್ಮದು ಕರ್ನ ಕೇಳಿಕೆಯಾಟವು ನಿಮ್ಮದು 5 ಸ್ಥೂಲ ಸೂಕ್ಷ್ಮ ನಿಮ್ಮದು ಕಾರಣವು ನಿಮ್ಮದು ಮಹಾ ಕಾರಣವು ಆನಂದ ನಿಮ್ಮದು6 ಜಾಗ್ರತೆ ನಿಮ್ಮದು ಶೀಘ್ರತಿ ನಿಮ್ಮದು ಪ್ರವೃತ್ತಿನಿವೃತ್ತಿ ಸುವ್ಯಕ್ತಿ ನಿಮ್ಮದು 7 ಸ್ವಪ್ನಾವಸ್ಥೆ ನಿಮ್ಮದು ಸುಷಪ್ತಿ ನಿಮ್ಮದು ಸರ್ವಾವಸ್ಥೆಗಳ ಲಕ್ಷಣ ನಿಮ್ಮದು 8 ಅರಹು ಮರಹು ನಿಮ್ಮದು ಖೂನ ಕುರಹು ನಿಮ್ಮದು ಸೂತ್ರ ನಿಮ್ಮದು 9 ಇಹಪರ ನಿಮ್ಮದು ಸಾಹ್ಯ ಸರ್ವ ನಿಮ್ಮದು ಗುಹ್ಯ ಗುರುತ ದೋರುವ ಸೋಹ್ಯ ನಿಮ್ಮದು 10 ಮಹಿಪತಿ ಜೀವ ನಿರ್ಮಿತ ಙÁ್ಞತಿ ನಿಮ್ಮದು ಸದ್ಗತಿಗೈಸುವ ಖ್ಯಾತಿ ನಿಮ್ಮದು 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮಮ್ಮನ ಕಂಡೆ ಬೊಮ್ಮನ ಪಡೆದಿಹಳ ಧ್ರುವ ಅಮ್ಮನ ಕಂಡೆನಗೆ ಸುಅಮೃತ ಪಾನವಾಯಿತು ಸಂಭ್ರಮದಿಂದಲೆನಗೆ ಬ್ರಹ್ಮಾಂಡದೊಳು 1 ಅಹ್ಲಾದವಾಯಿತಿಂದು ಫುಲ್ಲಲೋಚನೆಯ ಕಂಡು ಉಲ್ಲಾಸ ತುಂಬಿತೆನಗೆ ಮೂಲೋಕದೊಳು 2 ಮಾತೃ ಪಿತೃವೆಂಬುದು ಸೂತ್ರಧಾರಿ ತಾನೊಬ್ಬಳೆ ಅಂತ್ರ ಬಾಹ್ಯದಲೆನಗೆ ಪುತ್ರ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಕ್ಷಿಸೊ ಸ್ವಾಮಿ ನೀ ಪಕ್ಷಿ ಸುವಾಹನ ಭಿಕ್ಷೆ ಸುನೀಡೊ ನೀ ಲಕ್ಷ ಸುಸಾಧನ ಅಕ್ಷಯಾನಂದ ನೀ ಲಕ್ಷುಮಿ ಜೀವನ ಪಕ್ಷ ನೀ ಪ್ರಾಣಕ ಈಕ್ಷಿಸಿದವನ 1 ಸೃಷ್ಟಿಗಧಿಕ ನೀ ವಿಷ್ಣು ಜನಾರ್ಧನ ಕಷ್ಟ ನೀ ಹಿಂಗಿಸೊ ದುಷ್ಟರ ಮರ್ದನ ಶಿಷ್ಟರ ಪಾಲಕ ಶ್ರೇಷ್ಠ ನಾರಾಯಣ ದೃಷ್ಟಿಸಿ ನೋಡೊ ನೀ ಕೃಷ್ಣ ಕೃಪಾಘನ2 ಈಶನೆಂದರಿಯದೆ ದೋಷದ ರಾಶಿ ನಾ ವಾಸನೆ ಪೂರಿಸೊ ದಾಸರ ದಾಸ ನಾ ಏಸು ತಾ ಜನ್ಮಕೆ ಬಂದು ಸೂಸಿದೆನೊ ಹೇಸಿತು ಜೀವನ ಸ್ಮರಿಸಬೇಕೆಂದು ನಾ 3 ನಿಮ್ಮನೆ ನೋಡಬೇಕೆಂದು ಬಂದೆ ನಾ ಘಮ್ಮನೆ ಪೂರಿಸೊ ಭಾವನೆ ಕಂದನ ತಮ್ಮನೆ ಬೇಡಿಕೊಂಬುದು ತಾ ವಂದನ ಅಮ್ಮ ನಮ್ಮಪ್ಪನೆ ಬಂಧು ನೀ ಎಂದೆ ನಾ 4 ಕಾಣದ ಪಾಮರ ಹೀನ ಸೂಕರ ಏನು ತಾ ಬಲ್ಲದು ಲೂನದ ಸೂಕರ ನೀನೆ ದಯಾನಿಧೆ ಜ್ಞಾನದ ಸಾಗರ ನ್ಯೂನ ನೋಡದೆ ತಾರಿಸೊ ಶ್ರೀಧರ 5 ಪಾರ ನೀ ಗೆಲಿಸೊ ದ್ವಾರಕಿನಾಥನೆ ಸಾರಿ ನೀ ಬೋಧವ ತಾರಿಸೊ ದಾತನೆ ತೋರಿ ನೀ ಪಾದವ ಬೀರು ಸ್ವಹಿತನೆ ಸಿರಿ ಲೋಲನೆ ನೀಕರುಣಿಸಿ ಮಾತನೆ 6 ಪಾಲಿಸೊ ಪ್ರಾಣವ ಬಾಲಮುಕುಂದನೆ ಲಾಲನೆ ನೋಡು ಗೋಪಾಲ ಗೋವಿಂದನೆ ತ್ಯಕ್ತ ನಾ ತಾಳು ನೀ ಸಚ್ಚಿದಾನಂದನೆ ಕೀಲನೆ ಹೇಳು ನೀ ಭಕ್ತಿಯ ವಂದನೆ 7 ದೇವರ ದೇವನೆ ಕಾವ ಕರುಣನೆ ಜೀವದ ಜೀವ ನೀ ಸ್ವಾಮಿ ಸರ್ವೇಶನೆ ಭಾವದ ಭಾವ ನೀ ಸಾವಿರ ನಾಮನೆ ಸೇವೆಗೆ ಯೋಗ್ಯನ ಮಾಡು ಸರ್ವೋತ್ಮನೆ 8 ಹಿಂಡ ದೈವಕೆ ಪ್ರಚಂಡ ಪರೇಶನೆ ಗಂಡು ಹೆಣ್ಣಿಗೆ ತಾ ಒಬ್ಬ ಸರ್ವೇಶನೆ ಮಂಡಿ ಮರೆಯಲಿಹನೆ ಮಹೇಶನೆ ಕಂಡುಕಾಂಬ ಸುಖದೋರು ದೇವನೆ 9 ವೇದಕ ನಿಲ್ಕದಾಭೇದ್ಯ ಪುರುಷನೆ ಸಾರ ಸುರಸನೆ ಅದಿಗಿಂದತ್ತಲ್ಯಾನಾದಿ ನಿರ್ವಿಶೇಷನೆ ಹಾದಿದೋರಿಕೊಡೊ ಭಕ್ತಿಗೊಂದೀಶನೆ 10 ಮಹಿಪತಿಗೆ ನೀ ಸ್ವಾಮಿ ಶ್ರೀನಾಥನೆ ಬಾಹ್ಯ ಅಂತ್ರಕೆ ನೀನೆವೆ ಸುದಾತನೆ ಸೋಹ್ಯದೋರಿಕೊಡೊ ಸಾಹ್ಯವುಳ್ಳಾತನೆ ತ್ರಾಹಿಯಂದವನ ಮಾಡು ಸನಾಥನೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ನೀನೆವೆ ಸರ್ವ ಚೇತನ ಧೃತಿಯ ಸಕಲವೇ | ಧರಿಯೊಳು ನಾನೆಂಬುವ ಗುಣವೇ ವರಶೃತಿ ನೇಹನಾ ನಾಸ್ತಿಯಂದು | ಸಾರುವದಿದಕನು ಮಾನವೇ ಪ ಬಯಲೊಳು ಪುಟ್ಟದ ಪರಿಪರಿನಾದದ | ಹೊಯಿಲಿನ ಮಂಜುಳ ಶಬ್ದವಾ | ಬಯಲದಿ ಕೇಳಿತಲ್ಲಿನವ ಹೊಂದುವಾ | ಬಯಲಾಧಾರ ನೀನಲ್ಲವೇ 1 ಸೃಷ್ಟಿಯೊಳಗ ಕಮನೀಯ ಲಾವಣ್ಯದು | ತ್ಕøಷ್ಟತರ ಮೋಹನ ರೂಪವಾ | ದೃಷ್ಟಿಲಿ ಕಾಣುತ ಸುಖದೋಳಗಾಗುವ | ದೃಷ್ಟಸ್ವ ತೇಜ ನೀನಲ್ಲವೆ 2 ಕಮಲ ಪಾರಿಜಾತ ಮಲ್ಲಿಗೆ ಮಕ | ರಂಗದೊಳಗ ಸುಳಿದಾಡುತ | ಮಂದ ಮಾರುತ ಬಂದು ಸೋಕಲು ನಲಿವಾ | ಸುಂದರ ರೂಪನು ನೀನಲ್ಲವೆ 3 ರಸಭರಿತ ಬೇರೆ ಬೇರೆ ದೋರುತಲಿಹಾ | ಅಸಮತೆರೆದ ಪದರ್ಥವನು | ರಸನಾದಿ ಕೊಂಡು ಸವಿಗೆ ತಲೆದೂಗುವಾ | ಕುಶಲ ಭೋಕ್ತನುನೀನಲ್ಲವೇ 4 ಚೆನ್ನಾಗಿ ಕಸ್ತೂರಿ ಪುಳಕವ ಕೂಡಿಸಿ | ಪನ್ನೀರವನು ಮೇಲೆದಳಿದು | ಉನ್ನತ ಚಂದನ ಲೇಪಿಸೆ ಸುವಾ | ಸನೆ ಕೊಂಬುವ ನೀನಲ್ಲವೇ 5 ಅಷ್ಟದಳ ಕಮಲದಳ ಗದ್ದುಗಿಯೊಳು ನಿಂದು | ಅಷ್ಟಮ ಸ್ಥಳಗಳ ಮುಟ್ಟಿಸಿ | ನೆಟ್ಟಿನೆ ಮುಖದೊಳು ಸವಿಸವಿ ಮಾತವ | ಸ್ಪಷ್ಟದಿ ನುಡಿಪ ನೀನಲ್ಲವೇ 6 ಭಜಕನ ಮಾಡಿ ಸೌಮ್ಯತನದಿ ಕರದಿಂದ | ರಜತಮ ವಿರಹಿತ ದಾನವನಾ | ದ್ವಿಜರಿಗೆ ಕುಡಿಸಿ ಅದರಶ್ರಯ ಕೊಂಬುವ | ನಿಜಶಯ ಕರ್ತನು ನೀನಲ್ಲವೇ 7 ಪವನಭ್ರವ ನಡೆಸುವಪರಿಚರಣದಿ | ಜವದಿ ಸುಕೇತ್ರ ಯಾತ್ರೆಯಾ | ಬವರದಿ ಮಾಡಿ ಪುಣ್ಯ ಅರ್ಪಿಸಿ ಕೊಂಬಾ | ಭುವನ ಪಾವನ ನೀನಲ್ಲವೇ 8 ರಸನುಂಡು ಕಬ್ಬ ಹಿಪ್ಪಿಯುಗುಳುವಂತೆ | ಅಸಮತೆ ರಚಿಸಿ ಸರ್ವಾಂಗರ | ರಸವಿತ್ತು ಮಲವಘ ಮುಖದಿಂದ ಪವನದಿ | ಬಿಡಸುವನು ನೀನಲ್ಲವೇ 9 ಅಂಗನೆಯರ ಧೃಡಾಲಿಂಗನವನು ಮನ| ದಿಂಗಿತದಂದದಿ ಗೈಯ್ಯಲು | ಅಂಗಸಂಗದ ಲೋದಗುವ ಭೋಗಿಪ | ಅಂಗಜ ಜನಕ ನೀನಲ್ಲವೇ 10 ಯಂತ್ರವಾಹಕ ನಂದದಿ ಜಗನಿರ್ಮಿಸಿ | ಚಿತ್ರ ವಿಚಿತ್ರವ ದೋರುವಾ | ಅಂತ್ರ ಬಾಹ್ಯವ್ಯಾಪಕ ಮಹಿಪತಿ ಸುತ ಪ್ರಭು | ಸೂತ್ರಧಾರಿ ನೀನಲ್ಲವೆ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು