ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀನರಕ್ಷಕ ದೈತ್ಯ ಶಿಕ್ಷಕ ಏನ ಪೇಳಲಿ ಎಂತು ತಾಳಲಿ ಪ. ಹಗಲು ರಾತ್ರೆಯು ಹಲವು ಚಿಂತೆಯು ದ್ವಿಗುಣವಾಯಿತು ಧೈರ್ಯ ಕುಂದಿತು ನಗುವ ವಿಧಿಯನು ನೆನೆಯದಾಸೆಯ ಬಿಗುವಿನಿಂದ ಬೆಂಡಾದೆ ಕೇಶವ 1 ಸಂದ ಕಾಲವು ಸುಮ್ಮಗ್ಹೋಯಿತು ಮುಂದಿನವಧಿಯ ಮರವು ಮುಸುಕಿತು ಸುಂದರ ಸ್ಮಿತಾನಂದ ಮೂರುತಿ ಇಂದಿರೇಶ ನೀ ಎಂದು ತೋರುತಿ 2 ಗಣನೆಯಿಲ್ಲದಗಾಧ ತಪ್ಪನು ಎಣಿಸಲಾರೆನು ಎಂತು ನುಡಿವೆನು ವನಜನಾಭ ನೀನಾವ ಯುಕ್ತಿಯ ನೆನಸಿ ಸಲಹುವೆ ಎಂಬುದರಿಯೆನು 3 ಅಂತವಿಲ್ಲದಾ ಚಿಂತೆ ಎನ್ನನು ಭ್ರಾಂತಿಗೊಳಿಪುದು ಭಂಡು ಮಾಳ್ಪುದು ಕಂತುಜನಕ ಭೂಕಾಂತ ಕರುಣಿಸು ಸ್ವಾಂತರಂಗದಿ ನಿಂತು ನಿಯಮಿಸು 4 ನಿತ್ಯ ಸಲಹುವ- ನೆಂಬ ಬಿರುದ ನಾನರಿತು ನುಡಿದೆನು ಶಂಭುವಂದ್ಯ ಶೇಷಾದ್ರಿನಾಥ ಪಾ- ದಾಂಬುಜಾಶ್ರಿತನೆನಿಸು ಎನ್ನನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಹರಹರ ವಿಶ್ವೇಶ್ವರ ಕರುಣಾಕರ ಪರಮ ಪುರುಷ ದೇವಾ ಚರಾಚರವ ತುಂಬಿಭರಿತವಾಗಿ ಸ್ಮರಿಸುವ ಭಕ್ತರ ತ್ವರಿತದಿ ಪಾಲಿಪ ಪ ಗಜಾಸುರನೆಂತೆಂಬ ದನುಜನ ವಿಜಯನಾಗಿ ತೊಗಲನ್ನು ಪೊತ್ತೆ ನಿಜಾನಂದವ ನೀವಾ ಚಿನ್ಮಯನೇ 1 ತನುಮನದೊಳಗೆಲ್ಲಾ ಹೊಳೆಯುತಲಿರ್ಪಾ ಜನಜನಿತಳಲ್ಲಿ ಪ್ರಣವರೂಪನಾದ ತುಂಬುತ್ತಾ ತುಳುಕುತ್ತಾ ಘನಪರಮಾನಂದಾ ಸಚ್ಚಿದ್ರೂಪಾ 2 ಒಳಹೊರಗೆಂಬೀ ಭೇದಗಳೆಲ್ಲವ (ಹೊರಗೆ ಒಳಗೆ) ಹರಣ ಮಾಡುತಿರ್ಪಾ ಹರನೇ ನಾನೀನಾದ ಕಾರಣ ಬೆರತು ನಿನ್ನೊಳು ಸ್ಮರಿಸುವೆ ಭರದಿ 3 ಚಿಂತೆಗಳೆಲ್ಲವನೀಗೆ ನಿಜಾನಂದ ಸಂತಸಗಳನೀವಾ ಅಂತವಿಲ್ಲದಾನಂತ ಪರಾತ್ಪರ ಶಾಂತಿ ಪದವನೀವ ಮಹಾದೇವಾ 4
--------------
ಶಾಂತಿಬಾಯಿ