ಚಿಂತೆಯಾತಕೊ ಮಾನವಾ ಭಜಿಸು ಶ್ರೀ-
ಕಾಂತಾಖ್ಯ ಸುರಕಾಮಧೇನುವಾ
ಅಂತಪಾರಗಳಿಲ್ಲದಾಸೆ ಕಡಲೊಳು ಬಿದ್ದು
ಭ್ರಾಂತಿಗೊಳಿಸದೆ ಮನವ ಬಳಲಿಸದಿರು ತನುವ ಪ.
ಸಂಸಾರವೆಂಬುವುದು ಸುಖ ದುಃಖ ಮಿಶ್ರಿತವು
ಕಂಸಾರಿವಶದೊಳಿಹವು
ಶೋಣಿತ ಪೂಯ ಕೇಶ ಕ್ರಿಮಿ
ದಂಶ ಪೂರಿತ ದೇಹವು
ಹಿಂಸೆಯಾಗುವ ಮೊದಲೇ ಹರಿಕೃಪಾಸುಧೆಯ ಲೇ-
ಶಾಂಶ ಸಂಪಾದಿಸಿ ನಿಜಾಂಶ ಸುಖವನು ಸೇರು 1
ಹಿಂದಿನನುಭವ ಗ್ರಹಿಸು ಹರಿಯ ಮಹಿಮೆಯ ಸ್ಮರಿಸು
ಮಂದ ಭಾವನೆ ವಾರಿಸು
ಮುಂದಾಹದೇನೆಂದು ಕುಂದದಿರು ಧೈರ್ಯದಿಂ-
ದಿಂದಿರೇಶನ ಪೂಜಿಸು
ತಂದೆ ತಾಯಿಗಳು ತಮ್ಮ ಕಂದನನು ಪೊರೆವ ಪರಿ-
ಯಿಂದ ಸಲಹೆಂದು ಗೋವಿಂದನಲಿ ಮೊರೆಯಿರಿಸು 2
ದೃಢ ಭಕುತಿಯಿಂದ ತನ್ನಡಿಯ ಸೇರಿದ ಜನರ
ಬಿಡನು ಭಕ್ತಾರ್ತಿಹರನು
ಪುಡಿಮಾಳ್ಪದುರಿತಗಳ ಪೂರ್ವದಲಿ ಪೊರೆದಂತೆ
ಕೊಡವನಖಿಳಾರ್ಥಗಳನು
ಮೃಡವಂದ್ಯ ಶೇಷಾದ್ರಿ ಒಡೆಯನಿರಲ್ಯಾಕೆ ಕಂ-
ಗೆಡುವಿ ಎಂದಿಗು ನಿನ್ನ ಕಡೆ ಹಾಯಿಸುವ ಹರಿಯು 3