ಕಾಡುತಲಿಹ್ಯದು ಬೆಡಗಿನ ಕೋಡಗ
ಬಡವರಿಗಳವಲ್ಲ ಪೊಡವಿಯಲಿ ಧ್ರುವ
ಮಾಯದ ಮುಖವದು ಮೋಹದ ನಾಸಿಕ
ಮಾಯಮಕರ ಕಿವಿಕಣ್ಣುಗಳು
ಹ್ಯಾವ ಹೆಮ್ಮೆಯ ಹುಬ್ಬು ಕಪಿಕಣ್ಣಯೆವೆಗಳು
ಬಾಯಿ ನಾಲಿಗೆ ಹಲ್ಲು ಬಯಕಿಗಳು 1
ಗಾತ್ರ ಸರ್ವಾಂಗವು ದುರುಳ
ದುರ್ಬುದ್ಧಿಯ ಬೆರಳುಗಳು
ಎರಡು ತುಟಿಗಳೆಂಬ ನಿಂದೆ ದೂಷಣಗಳು
ಕೊರಳು ಕುತ್ತಿಗೆ ದುಷ್ಕರ್ಮಗಳು 2
ಹಣಿಯು ದಾಡಿಯು ಗಲ್ಲ ಪ್ರಪಂಚ ಶೋಭಿತ
ಕಣ್ಣಭಾವಗಳಿವು ಚಂಚಲವು
ಬಣ್ಣಬಣ್ಣದಿ ಕುಣಿದಾಡುವ ಕಪಿ
ಗುಣ ಏನೆಂದ್ಹೇಳಲಿ ಕಪಿ ವಿವರಣ£ 3
ಉದರಬೆನ್ನುಗಳಿವು ಸ್ವಾರ್ಥಬುದ್ಧಿಗಳು
ಮದಮತ್ಸರಗಳೆಂಬ ಕೈಗಳು
ಪಾದ ಕಾಲುಗಳಿವು ಕಾಮಕ್ರೋಧಗಳು
ಮೇದಿನಿಯೊಳು ಕುಣಿದಾಡುವದು 4
ಆಶಿಯೇ ಪಂಜವು ವಾಸನೆ ಬಾಲವು
ಮೋಸಮೂಕರ ಗುಣಕೇಶಗಳು
ಏಸು ಮಂದಿಯ ಕಪಿ ಘಾಸಿಯ ಮಾಡಿತು
ಮೋಸಗೈಸಿತು ಭವಪಾಶದಲಿ 5
ಅಶನ ವ್ಯವಸನ ತೃಷಿ ಕಪಿಗಿದು
ಭೂಷಣ ಮೀಸಲಾಗಿಡಿಸಿತು ಸುವಾಸದ
ಹಸಗೆಡಿಸುದು ಯತಿ ಮುನಿಗಳ ತಪಸವು
ಮುಸುಕಿತು ಮೋಸವು ಕಪಿಯಿಂದಲಿ 6
ಕಂಡದ್ದು ಬೇಡುತಾ ಅಂಡಲಿಯುತಿಹುದು
ಮಂಡಲದೊಳು ತಾ ಕಾಡುತಲಿ
ಪಿಂಡ ಬ್ರಹ್ಮಾಂಡದಿ ಲಂಭಿಸುತಿಹದು
ಹಿಡದು ಬಿಡದು ಮುಷ್ಟಿಬಿರುದುಗಳು 7
ಪಂಡತನದಿ ಬಲು ಪುಂಡನಾಗಿಹದು
ಹಂಡೀಗತನದಲಿ ಬಾಳುವದು
ಭಂಡಿನಾ ಅಟಿಗೆ ಗಂಡಾಗಿಹುದು
ಕಂಡಕಡಿಗೆ ಹರಿಡಾಡುತಲಿ 8
ಮೂಢಮಹಿಪತಿಯ ಕಾಡುವ ಕಪಿಗಿನ್ನು
ಜಡಸೀದ ಗುರುಜ್ಞಾನ ಸಂಕೋಲಿಯು
ಕಾಡುವ ಕಪಿಕೈಯ ಬಿಡಿಸಿದ ಗುರು ಎನ್ನ
ಕಡೆಯ ಮಾಡಿದ ಬ್ರಾಹ್ಮಣ ಜನ್ಮಲಿ 9