ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ ಪ ಹರಿಯ ಪಾದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳಾದೆ ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ ಮೊರೆಹೊಕ್ಕೆ ಮರೆಯದಿರು ಕರುಣದೋರೆನಗೆ 1 ಕ್ಷಮೆ ದಮೆಯು ಶಾಂತ ಸದ್ಗುಣವೊಪ್ಪುವಳೆ ನಿನಗೆ ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ 2 ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು ಉನ್ನಂತ ರತುನಗಳು ನಿನ್ನೊಳಡಗಿಹವು ಅನ್ನ ಪಾನಂಗಳಿಗೆ ಬೀಜ ಮೂಲವೆ ನೀನು ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ 3 ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ ಒಬ್ಬನಿಗೆ ಮೈಯ ನೀನು ಕೊಡುವೆ ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ 4 ಅಂಬುಧಿಯೆ ವಸನಗಳು ಕುಂಭ ಕುಚಗಳೆ ಗಿರಿಯು ಸಂಭ್ರಮದ ನದಿ ಕಾಲುವೆ ನಿನ್ನ ಬೆವರುಗಳು ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ 5 ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ ರೂಢಿ ದೇವತೆಯೆ ಮಾಡು ದಯವನು ನೀನು ಮನದಭೀಷ್ಟವನೆಲ್ಲ ಪಾಡು ಪಂಥವು ಬೇಡ ಪಡೆದ ಮಗನೊಡನೆ 6 ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು ಇಂಬಾದ ಪದವಿಯನು ಸಂಭ್ರಮದಿ ಕೊಡುತ ಬೆಂಬಡದೆ ವರಾಹತಿಮ್ಮಪ್ಪ ಕರುಣದಲಿ ಹಂಬಲಿಪ ತೆರದಿಂದ ಸಲಹುವುದು ಜಗದಿ 7
--------------
ವರಹತಿಮ್ಮಪ್ಪ
ಸ್ವಾತಂತ್ರ್ಯವೆನಗುಂಟೆ ಸರ್ವಾಂತರ್ಯಾಮಿ ಪ ನಿಂತು ನೀ ನಡೆಸುವಿಯೊ ಜೀವಾಂತರ್ಯಾಮಿ ಅ.ಪ ಜೀವ ಸ್ವರೂಪದಲಿ ಜೀವನಾಕಾರದೊಳಿದ್ದು ಅನಾದಿಕರ್ಮ ಜೀವರಿಗೆ ಪ್ರೇರಿಸಿ ಜೀವಕೆ ಚೇತನ ಕೊಟ್ಟು ಜೀವಕ್ರಿಯೆಗಳನ- ಭಿವ್ಯಕ್ತಿ ಮಾಡಿ ಸತತ ಪೊರೆಯುವ ಕರುಣಿ 1 ದತ್ತಸ್ವಾತಂತ್ಯ ತನಗಿತ್ತಿಹನು ದೇವನೆಂದು- ನ್ಮತ್ತತನದಿ ತಾ ಕರ್ತನೆಂದೆನಿಸಿ ಸುತ್ತಲಹ ನಿತ್ಯ ಅವಸ್ಥೆಗಳ ಪರಿಹರಕೆ ಶಕ್ತನಾಗನು ಏಕೆ ಆಪತ್ತುಗಳು ಬರಲು 2 ಪೂರ್ಣವಾಗಿ ತಾ ಜಡನಂತಿಹಾ ಕರಣದಲಿ ಶ್ರೀರಮಣ ಸೇರಿ ಚೇತನ ಕೊಟ್ಟು ಕ್ರೀಡೆಗೋಸುಗ ಬಿಡುವ ಸರ್ವ ಜೀವರನಾ 3 ಅನಾದಿಕರ್ಮ ಎನ್ನದೆಂದಿಗು ಸರಿಯೆ ಮುನ್ನ ಪ್ರಳಯದಿ ನಿನ್ನ ಘನ್ನೊಡಲೊಳಿಂಬಿಟ್ಟೆ ಎನ್ನ ಕರ್ಮಗ್ರಂಥಿ ಎನ್ನಿಂದ ಬಿಡಿಸೊ 4 ಅನಿರುದ್ಧ ಲಿಂಗಾ ಅಂಗೋಪಾಂಗದಲಿ ನೀನ್ಹಾಂಗೇ ಮೆರೆವೆ 5 ಹೃಷೀಕಪನೆ ನಿನಗೆ ಇದು ಸಂತೋಷವೇನೊ ಈಷಣತ್ರಯ ಹರಿಸಿ ಪೋಷಿಸೋ ದೇವಾ 6 ತರಣಿ ತರಣಿಕಿರಣನನುಸರಿಸಿ ವೃತ್ತಿಯಹುದೊ ತ್ವರಿತದಲಿ ಸ್ಥೂಲದಲಿ ಕಾರ್ಯಾಭಿವ್ಯಕ್ತಿಯೊ 7 ನಾನತ್ತು ಫಲವೇನೊ ಸ್ಥಿತಿಕಾಲದಿ ನೀನಿಲ್ಲದಿನ್ನಿಲ್ಲ ಪ್ರತಿಬಿಂಬ ಕಾರ್ಯವಹುದೋ 8 ಹೆಚ್ಚು ಮಾತೇನು ಜೀವನಿಚ್ಛೆಯನನುಸರಿಸಿ ಅಚ್ಯುತ ತಾನೆ ಸ್ವೇಚ್ಛಚರಿಸಿ ಎಚ್ಚರಿಸಿ ಸ್ಥೂಲದಿಂದೆಚ್ಚರದಿ ನಡೆವುದೊ 9 ನಿನ್ನ ಸಂಕಲ್ಪವಲ್ಲದಿನ್ನಿಲ್ಲ ಅನ್ಯಥಾಗುವುದುಂಟೆ ಇನ್ನು ಹರಿಸೋದೇವಾ 10 ಶ್ರೀದನಿಂ ದತ್ತಸ್ವಾತಂತ್ರ್ಯ ಸಮ್ಮತವೇನು ಆದರಿಸಿ ಸಲಹಯ್ಯ ಮೋದತೀರ್ಥಾ- ರಾಧ್ಯ ಶ್ರೀ ವೇಂಕಟೇಶಾ11
--------------
ಉರಗಾದ್ರಿವಾಸವಿಠಲದಾಸರು