ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ ಪ ಹರಿಯ ಪಾದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳಾದೆ ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ ಮೊರೆಹೊಕ್ಕೆ ಮರೆಯದಿರು ಕರುಣದೋರೆನಗೆ 1 ಕ್ಷಮೆ ದಮೆಯು ಶಾಂತ ಸದ್ಗುಣವೊಪ್ಪುವಳೆ ನಿನಗೆ ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ 2 ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು ಉನ್ನಂತ ರತುನಗಳು ನಿನ್ನೊಳಡಗಿಹವು ಅನ್ನ ಪಾನಂಗಳಿಗೆ ಬೀಜ ಮೂಲವೆ ನೀನು ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ 3 ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ ಒಬ್ಬನಿಗೆ ಮೈಯ ನೀನು ಕೊಡುವೆ ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ 4 ಅಂಬುಧಿಯೆ ವಸನಗಳು ಕುಂಭ ಕುಚಗಳೆ ಗಿರಿಯು ಸಂಭ್ರಮದ ನದಿ ಕಾಲುವೆ ನಿನ್ನ ಬೆವರುಗಳು ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ 5 ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ ರೂಢಿ ದೇವತೆಯೆ ಮಾಡು ದಯವನು ನೀನು ಮನದಭೀಷ್ಟವನೆಲ್ಲ ಪಾಡು ಪಂಥವು ಬೇಡ ಪಡೆದ ಮಗನೊಡನೆ 6 ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು ಇಂಬಾದ ಪದವಿಯನು ಸಂಭ್ರಮದಿ ಕೊಡುತ ಬೆಂಬಡದೆ ವರಾಹತಿಮ್ಮಪ್ಪ ಕರುಣದಲಿ ಹಂಬಲಿಪ ತೆರದಿಂದ ಸಲಹುವುದು ಜಗದಿ 7
--------------
ವರಹತಿಮ್ಮಪ್ಪ
ತೆರಳಿ ಪೋದರಿಂದು ಪರಮ ಪದವನರಸುತ ಪ ಸಿರಿ ಶೇಷದಾಸಾರ್ಯರು ಅ.ಪ. ಸಿರಿಯುಕ್ತ ರಕಾಕ್ಷಿ ವರುಷ ಭಾದ್ರಪದಸಿತ ವರಪೌರ್ಣಿಮಾ ಸಹಿತವಾದ ಕವಿವಾರದಿ ಸರು ನಿಶಿಯೊಳು ಶತತಾರ ನಕ್ಷತ್ರ ಬರುತಿರೆ ನರಹರಿಯ ಚರಣಕಾಂಬ ಕಡು ತವಕದಿಂದ 1 ತಂದೆ ಮುದ್ದುಮೋಹನ ದಾಸವರ್ಯರಿಂದ ಕುಂದುರಹಿತನಾದ ಪ್ರಾಣನಾಥವಿಠಲ- ನೆಂದು ಅಂಕಿತೋಪದೇಶವನು ಕೈಕೊಂಡು ಬಂಧುರವಾದನೇಕ ಪದಗಳನು ರಚಿಸಿ 2 ದಾಸವೃತ್ತಿಯ ಕಂಡು ದೇಶ ದೇಶವ ಸುತ್ತಿ ಕರವ ನೀಡದೆ ಲೇಸು ಮಾಡುತಲಿ ಸಚ್ಛಿಷ್ಯರಿಗೆ ತತ್ತ್ವೋಪ- ದೇಶವನು ಪರಮ ಸಂತೋಷದಿಂದಗೈದು 3 ಆಶಪಾಶವ ತೊರೆದು ಮೀಸಲು ಮನರಾಗಿ ವಾಸುದೇವನ ನಾಮ ಸೋಸಿನಿಂದ ಭಜಿಸಿ ಸಾಸುವೆಯಷ್ಟಾದರಾಯಾಸವನುಪಡದೆ ಈ ಶರೀರ ವಿಶ್ವೇಶನಾಧೀನವೆಂದು 4 ಅಂಗೋಪಾಂಗವ ಮರೆದು ನಿಸ್ಸಂಗಯುತರಾಗಿ ಕಂಗಳನು ಮುಚ್ಚುತ ಭಂಗವಿಲ್ಲದ ಸುಖವ ಹಿಂಗದೆ ಕೊಡುವಂಥ ಮಂಗಳನ ಶ್ರೀ ರಂಗೇಶವಿಠಲನಂತರಂಗದಿ ನೋಡುತ5
--------------
ರಂಗೇಶವಿಠಲದಾಸರು
ನಮಿಪೆ ನದಿ ದೇವತೆಗಳೇ | ನಿಮಗೆ ಪ. ನಮಿಪೆ ನದಿ ದೇವತೆಗಳೇ ನಿಮ್ಮ ಚರಣಕ್ಕೆ ಕಮನೀಯ ಗಾತ್ರೆಯರೆ ಕಂಜದಳ ನೇತ್ರೆಯರೆ ಸುಮನರ ವಂದಿತರೆ ಸುಗುಣ ಸಂಪನ್ನೆಯರೆ ಅಘ ಹರೆಯರೇ ಕಮಲನಾಭನ ಅಂಗೋಪಾಂಗ ಸಂಜಾತೆಯರೇ ಅಮರ ಭೂ ಪಾತಾಳ ಲೋಕ ಸಂಚರೆಯರೆ ನಮಿಸಿ ಸ್ನಾನವಗೈವ ನರರ ಪಾವನಗೊಳಿಪ ಅಮಿತ ಪಾವಿತ್ರತರರೇ 1 ಗಂಗೆ ಗೋದಾವರಿ ಯಮುನೆ ಸರಸ್ವತಿ ಸಿಂಧು ಮಂಗಳಾಂಗೆ ಕೃಷ್ಣ ಭೀಮರಥಿ ಪಲ್ಗುಣಿ ಸಂಗಮ ತ್ರೀವೇಣಿ ಸರಯು ಗಂಡಿಕಿ ಸೀತ ತುಂಗಭದ್ರಾ ನಾಮರೇ ಅಂಗ ಮಾಲಾಪಾರಿ ಕಾವೇರಿ ಕಪಿಲೆ ನರ ರಂಗ ಪಾವನ ಗೈವ ಪುಷ್ಕರಗಳಭಿಮಾನಿ ಅಂಗನೆಯರೆÀಲ್ಲರಿಗೆ ಅಭಿವಂದಿಸುವೆ ಅಘವ ಹಿಂಗಿಸುವುದೆಂದು ಮುದದೀ 2 ಬಂದು ಸ್ವಪ್ನದಿ ಮಾಘ ಶುದ್ಧ ನವಮೀ ಭರಣಿ ಸಂಯೋಗದ ಪರ್ವವೆಂದು ಭದ್ರೆಲಿ ಸ್ವಾನ ವಿಂದು ಗೈದೆವು ಎಂದು ಮುಂದೆ ಕುಳ್ಳಿರೆ ನಾನಾ ನಂದದಿಂ ಕಂಡು ನಿಮ್ಮಾ ಸುಂದರಿಯರೇ ನಿಮ್ಮ ಸಂದರ್ಶನದಿ ಫಲವು ಬಂದುದೆನಗೆಂದು ನಾನಂದ ವಚನಕೆ ನಲಿದು ಒಂದು ಅರಿಯದ ಎನಗೆ ತಂದು ಕೊಟ್ಟಿರಿ ಸ್ನಾನ ದಿಂದ ಬಹು ಪುಣ್ಯ ಫಲವಾ 3 ಹರದಿಯರೆ ಕಂಡೆ ನಿಮ್ಮರವಿಂದ ಮುಖ ಶುಭ್ರ ಸರಿತು ದೇವತೇಗಳೇ ಗುರು ಕೃಪೆಯ ಬಲದಿಂದ ಸಿರಿ ನದಿಗಳೇ ಜಗದಿ ಭರದಿಂದ ಪರಿದು ಸಾಗರವ ಕೂಡುವ ತ್ವರದಿ ಪರಿಪರಿಯ ಜಲ ಜಂತು ಸಂಸಾರಿ ಸಂಗೆಯರೆ ನರರು ಬಣ್ಣಿಸಲಳವೆ ಕರುಣಿ ನಿಮ್ಮಯ ಮಹಿಮೆ ಸಿರಿಕಾಂತ ಪ್ರಿಯಸುತೆಯರೇ 4 ಶ್ರೇಷ್ಟನದಿ ಅಭಿಮಾನಿ ಸತಿಯರೇ ಎನ್ನ ಅಘ ಸುಟ್ಟು ನಿರ್ಮಲ ಭಾವ ಕೊಟ್ಟು ಹೃತ್ಪದದಲಿ ವಿಷ್ಣು ಮೂರ್ತಿಯ ಕಾಂಬ ಶ್ರೇಷ್ಟ ಜ್ಞಾನದ ಮಾರ್ಗ ಕೊಟ್ಟು ಸದ್ಭಕ್ತಿ ಭರದೀ ಚಿಟ್ಟನೇ ಚೀರಿ ದಾಸ್ಯದ ಭಾವದಲಿ ಕುಣಿದು ಶ್ರೇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲನ ಪದ ಮುಟ್ಟುವೊ ವಿಜ್ಞಾನ ಪ್ರವಹ ರೂಪದಿ ವಲಿದುದಿಟ್ಟಿಯರ ಸಂತೈಸಿರಿ 5
--------------
ಅಂಬಾಬಾಯಿ
ಸ್ವಾತಂತ್ರ್ಯವೆನಗುಂಟೆ ಸರ್ವಾಂತರ್ಯಾಮಿ ಪ ನಿಂತು ನೀ ನಡೆಸುವಿಯೊ ಜೀವಾಂತರ್ಯಾಮಿ ಅ.ಪ ಜೀವ ಸ್ವರೂಪದಲಿ ಜೀವನಾಕಾರದೊಳಿದ್ದು ಅನಾದಿಕರ್ಮ ಜೀವರಿಗೆ ಪ್ರೇರಿಸಿ ಜೀವಕೆ ಚೇತನ ಕೊಟ್ಟು ಜೀವಕ್ರಿಯೆಗಳನ- ಭಿವ್ಯಕ್ತಿ ಮಾಡಿ ಸತತ ಪೊರೆಯುವ ಕರುಣಿ 1 ದತ್ತಸ್ವಾತಂತ್ಯ ತನಗಿತ್ತಿಹನು ದೇವನೆಂದು- ನ್ಮತ್ತತನದಿ ತಾ ಕರ್ತನೆಂದೆನಿಸಿ ಸುತ್ತಲಹ ನಿತ್ಯ ಅವಸ್ಥೆಗಳ ಪರಿಹರಕೆ ಶಕ್ತನಾಗನು ಏಕೆ ಆಪತ್ತುಗಳು ಬರಲು 2 ಪೂರ್ಣವಾಗಿ ತಾ ಜಡನಂತಿಹಾ ಕರಣದಲಿ ಶ್ರೀರಮಣ ಸೇರಿ ಚೇತನ ಕೊಟ್ಟು ಕ್ರೀಡೆಗೋಸುಗ ಬಿಡುವ ಸರ್ವ ಜೀವರನಾ 3 ಅನಾದಿಕರ್ಮ ಎನ್ನದೆಂದಿಗು ಸರಿಯೆ ಮುನ್ನ ಪ್ರಳಯದಿ ನಿನ್ನ ಘನ್ನೊಡಲೊಳಿಂಬಿಟ್ಟೆ ಎನ್ನ ಕರ್ಮಗ್ರಂಥಿ ಎನ್ನಿಂದ ಬಿಡಿಸೊ 4 ಅನಿರುದ್ಧ ಲಿಂಗಾ ಅಂಗೋಪಾಂಗದಲಿ ನೀನ್ಹಾಂಗೇ ಮೆರೆವೆ 5 ಹೃಷೀಕಪನೆ ನಿನಗೆ ಇದು ಸಂತೋಷವೇನೊ ಈಷಣತ್ರಯ ಹರಿಸಿ ಪೋಷಿಸೋ ದೇವಾ 6 ತರಣಿ ತರಣಿಕಿರಣನನುಸರಿಸಿ ವೃತ್ತಿಯಹುದೊ ತ್ವರಿತದಲಿ ಸ್ಥೂಲದಲಿ ಕಾರ್ಯಾಭಿವ್ಯಕ್ತಿಯೊ 7 ನಾನತ್ತು ಫಲವೇನೊ ಸ್ಥಿತಿಕಾಲದಿ ನೀನಿಲ್ಲದಿನ್ನಿಲ್ಲ ಪ್ರತಿಬಿಂಬ ಕಾರ್ಯವಹುದೋ 8 ಹೆಚ್ಚು ಮಾತೇನು ಜೀವನಿಚ್ಛೆಯನನುಸರಿಸಿ ಅಚ್ಯುತ ತಾನೆ ಸ್ವೇಚ್ಛಚರಿಸಿ ಎಚ್ಚರಿಸಿ ಸ್ಥೂಲದಿಂದೆಚ್ಚರದಿ ನಡೆವುದೊ 9 ನಿನ್ನ ಸಂಕಲ್ಪವಲ್ಲದಿನ್ನಿಲ್ಲ ಅನ್ಯಥಾಗುವುದುಂಟೆ ಇನ್ನು ಹರಿಸೋದೇವಾ 10 ಶ್ರೀದನಿಂ ದತ್ತಸ್ವಾತಂತ್ರ್ಯ ಸಮ್ಮತವೇನು ಆದರಿಸಿ ಸಲಹಯ್ಯ ಮೋದತೀರ್ಥಾ- ರಾಧ್ಯ ಶ್ರೀ ವೇಂಕಟೇಶಾ11
--------------
ಉರಗಾದ್ರಿವಾಸವಿಠಲದಾಸರು