ರಾಮತಾರಕ ಒಂದೆ ಮೂಲಸೂತ್ರ
ಕಾಮವೈರಿಯು ತೋರ್ಪ ಮೋಕ್ಷದಪಾತ್ರ ಪ
ಶ್ರೀಮಹಿಜಾಪ್ರಿಯ ದಿವ್ಯಮಂತ್ರವು ಮಾತ್ರ
ಕಾಮಿತ ಪಡೆಯಲು ಭಕ್ತಿಮಾಡುವ ತಂತ್ರ ಅ.ಪ
ತಾಪಸ ಮಡದಿಯ ಶಾಪವನಳಿಸಿತು
ಪಾಪಿ ದೈತೇಯಳ ಕೋಪವನುರುಬಿತು
ಪರಮೇಶನ ಚಾಪವ ಮುರಿಯಿತು
ಭೂಪತಿ ತನುಜೆಯ ಪಾಪವ ಹರಿಸಿತು 1
ಅಂಗನೆಗೊಲಿಯಿತು ಮುನಿಗಳ ಸಲಹಿತು
ಹಿಂಗದೆ ರಾವಣಸೋದರಗೊಲಿಯಿತು
ಭಂಗಿಸುವ ದಶಕಂಠನ ವಧಿಸಿತು
ಮಾಂಗಿರೀಶನ ಪಾದವೆಗತಿ ಯೆಮಗೆನಿಸಿತು 2