ಮಾಲೆ ಧರಿಸಿಕೊಂಡೆ ಮಾಧವನೆಂಬ ಮಣಿ
ಮಾಲೆ ಧರಿಸಿಕೊಂಡೆ ಪ
ಮಾಲೆ ಧರಿಸಿಕೊಂಡೆ ನೀಲಶಾಮನದಿವ್ಯ
ಲೀಲೆ ಮೂಲೋಕಕ್ಕೆ ಮೇಲುಮೇಲುಯೆಂಬ ಅ,ಪ
ಭವದೂರ ಪಾದವಂದನೆಂಬ ಮುಕುಟ ಧರಿಸಿಕೊಂಡೆ
ಮಾದಮರ್ದನನಂಘ್ರಿಸ್ಮರಣೆಂಬ ಕರ್ಣಕುಂಡಲಿಟ್ಟುಕೊಂಡೆ
ಭುವನತ್ರಯದ ಮೇಲೆ ಜವನ ನಿರ್ಭಯಕೇಶವನ
ದಯವು ಎಂಬ ಭವದೊಳಗೆ ಹೊಕ್ಕು 1
ಜಡಜನಾಭನಚರಣ ದೃಢವೆಂಬ ಮಡಿಯನುಟ್ಟುಕೊಂಡೆ
ಕಡಲಶಯನನಡಿಯ ಭಕ್ತೆಂಬ ಕವಚ ತೊಟ್ಟುಕೊಂಡೆ
ಪೊಡವಿಗಧಿಕ ಓರ್ವ ಒಡೆಯ ಹರಿ ಅಹುದೆಂಬ
ದೃಢನಿಶ್ಚಯದ ಮೇಲ್ಮಾಡಿನೊಳಗೆ ಕೂತು 2
ಅಂಗಜಪಿತನೆಂಬ ಬಂಗಾರ ಕಂಕಣಿಟ್ಟುಕೊಂಡೆ
ರಂಗ ಕೃಷ್ಣನೆಂಬ ರತ್ನದ ಉಂಗುರಿಟ್ಟುಕೊಂಡೆ
ಮಂಗಲಮಯ ನೀಲಾಂಗ ಶ್ರೀರಾಮನಾಮ
ಚಂದ್ರಹಾರ ಹಾಕಿಕೊಂಡು ಶೃಂಗಾರನಾಗಿ ನಿಂತೆ 3