ಮಂಗಳ ಪಾಡಿರೆ ಭಾವೆಯರೇ
ರಂಗನ ರಮಣಿಯ ಭಾವಿಸಿರೇ ಪ
ಅಂಗಜಜನನಿಯ ಕೃಪೆಯಿ ಸ-
ತ್ಸಂಗತಿ ಪಡೆದೆವು ನಿಶ್ಚಯಂಅ.ಪ
ಭೋಗವತೀಪತಿಶಾಯಿಯೊಳು ಅನು
ರಾಗಗೊಂಡಿಹ ದೇವಿಯಿವಳ್
ಭಾಗ್ಯಲಕ್ಷ್ಮಿಯ ಪಾದದೊಳು
ಬಾಗುತ ಶಿರವನು ರಾಗದೊಳು 1
ವೇದಸಾರದ ವಾಕ್ಯದಲಿ
ಮಾಧವಿಯಂ ಸ್ತುತಿ ಮಾಡುತಲಿ
ಭೇದವೆಣಿಸದೆ ಸಲಹೆನ್ನುತಲಿ
ಮಾಧವನಂ ಕೊಂಡಾಡುತಲಿ 2
ತಾಪತ್ರಯಗಳ ಪರಿಹರಿಸಿ
ಆಪತ್ತುಗಳಿಂದುದ್ಧರಿಸಿ
ಕಾಪಾಡುವಳಿವಳೆಂದೆನಿಸಿ
ಶ್ರೀಪದ್ಮಿನಿಯನು ಸಂಸ್ಮರಿಸಿ 3
ಶರಣಾಗತ ಸಂರಕ್ಷಕಿಗೆ
ವರಶೇಷಗಿರಿನಿಲಯನಿಗೆ
ಕರುಣಾರೂಪಿಣಿ ಪದ್ಮಿನಿಗೆ
ಕರಗಳ ಮುಗಿಯುತೆ ಮಾಧವಿಗೆ 4