ಆವರೋಗವೆ ಯೆನಗೆ ದೇವ ಧನ್ವಂತ್ರೀ ಪ
ಸಾವಧಾನದಿಯೆನ್ನ ಕೈಪಿಡಿದು ನೋಡೋ ಅ ಪ
ಹರಿಮೂರ್ತಿ ಕಾಣಿಸದು ಎನ್ನ ಕಂಗಳಿಗೆ
ಹರಿಕೀರ್ತನೆ ಕೇಳದೆನ್ನ ಕಿವಿಗಳಿಗೆ
ಹರಿಯ ಶ್ರೀಗಂಧವಾಘ್ರಾಣಿಸದೆನ್ನ ನಾಸಿಕವು
ಹರಿಯಪ್ರಸಾದ ಜಿಹ್ವೆಗೆ ಸವಿಯಾಗದು 1
ಹರಿಪಾದ ಪೂಜಿಸೆ ಹಸ್ತಗಳು ಚರಿಸದು
ಹರಿಗುರುಗಳಂಘ್ರಿಗೆ ಶಿರ ಬಾಗದು
ಹರಿಯ ಸೇವೆಗೆ ಯೆನ್ನ ಅಂಗಗಳು ಚಲಿಸದು
ಹರಿಯಾತ್ರೆಗೆನ್ನ ಕಾಲುಗಳೇಳದೋ 2
ಅನಾಥಬಂಧು ಶ್ರೀವಿಜಯವಿಠ್ಠಲರೇಯ
ಯೆನ್ನ ಭಾಗ್ಯದ ಸ್ವಾಮಿಯಾಗಿ ನೀನೊ
ಅನಾದಿಕಾಲದ ಘನರೋಗವನೆ ಬಿಡಿಸು
ನಿನ್ನ ಉಪಕಾರವ ನಾನೆಂದಿಗೂ ಮರೆಯೇ 3