ನಂದ ಕುಮಾರ ಇಂದುಕುಲ ತಿಲಕ ಪ
ಎಂದಿಗು ನಿನ್ನಯ ಸುಂದರ ಚರಣವ
ವಂದಿಸಿ ನಲಿಯುವ ನಂದವೆನಗೆ ಕೊಡೊ ಅ.ಪ
ಧನಕನಕಗಳನು ದಿನ ದಿನ ಗಳಿಸುವ
ಅನುರಾಗಗಳನು ಕೊನೆಗಾಣಿಸೊ ದೇವ
ವನಜಸಂಭವಪಿತ ಕನಸಿನಲ್ಲಿಯೂ ನಿನ್ನ
ಮನನದಿ ಹಿಗ್ಗುವ ಮನವ ಎನಗೆ ಕೊಡೆಲೊ 1
ಭಯವಿಲ್ಲದೆ ದೋಷಮಯದ ನೋಟಗಳನು
ಬಯಸುವ ಮತಿಯನು ಲಯಮಾಡೋ ದೇವ
ಮಾಧವ ಎನ್ನ ನಯನಗಳಿಗೆ ನಿನ್ನ
ಪ್ರಿಯ ರೂಪದ ಪರಿಚಯವ ಮಾಡಿಸೊ ಸದಾ 2
ಕಾಲವ ಕಳೆಯಲು ಆಲಸವಿಲ್ಲದೆ
ಪೇಳಬಾರದ ನುಡಿ ಚಾಲನು ತೊಲಗಿಸೊ
ಬಾಲ ಗೋಪಾಲ ಎನ್ನ ನಾಲಿಗೆಯಲಿ ನಿನ್ನ
ಲೀಲೆಗಳನು ಸದಾ ಲಾಲಿಸಿ ಪೊಗಳಿಸೊ 3
ಪರಿಪರಿ ಭೋಗಕೆ ಪರಿದಾಡುತ ಸದಾ
ಪರರ ಸೇವಿಸುತಿಹ ಕರಗಳ ನಿಲ್ಲಿಸೊ
ಮುರಳೀಧರ ಕೃಷ್ಣ ಕರುಣದಿಂದಲಿ ಎನ್ನ
ಕರಗಳಿಗೆ ನಿನ್ನ ವರಸೇವೆಯ ನೀಡೊ 4
ಭುವಿಯಲಿ ದುರುಳರ ಸವಿನುಡಿಗಳಿಗತಿ
ಕಿವಿಗೊಟ್ಟು ಕೇಳುವ ಲವಲವಿಕೆಯ ಬಿಡಿಸೊ
ದಿವಿಜರೊಡೆಯ ಎನ್ನ ಕಿವಿಯೊಳಗೆ ನಿನ್ನ
ನವ ನವ ಚರಿತೆಯ ಸವಿರಸ ಸುರಿಸೆಲೊ 5
ಮಾಧವನನು ಮರೆತು ಪಾದಗಳಿಂದಲಿ
ಮೇದಿನಿ ತಿರುಗುವ ಮೋದವೆನಗೆ ಬೇಡ
ಯಾದವಪತಿ ನಿನ್ನ ಪಾದದರುಶನದ ವಿ
ನೋದಕ್ಕೆ ಸುತ್ತಲು ಆದರ ಪೊಂದಿಸೊ 6
ಭಿನ್ನ ಅಂಗಗಳಿಂದ ಎನ್ನ ಕರ್ಮಗಳನು
ನಿನ್ನ ಸೇವೆಯೆಂದು ಬಿನ್ನೈಸುವೆ ದೇವ
ಎನ್ನ ದುರಿತಗಳ ಭಿನ್ನ ಮಾಡುತಲಿ ಪ್ರ
ಸನ್ನನಾಗಿ ಎನಗೆ ಸನ್ಮತಿ ದಯಮಾಡೊ 7