ಬಲ್ಲನೆಂಬೊ ಮಮಕಾರ ಬಿಡು
ಎಲ್ಲೆಲ್ಲಿ ಇರುವ ಶ್ರೀಹರಿಯ ನೋಡು
ಒಲಿಸಿ ಒಲಿಸಲು ನಿಲುವುದು ಜಿತವಾಗಿ ಹಾಡು ಪ
ನೋಡಿದ್ದನ್ನೆ ನೀ ನೋಡು | ನಿನ್ನೆ
ನೋಡಿದೆನೆಂಬೊ ಖೋಡ್ಯಾಲಸ್ಯ ಬಿಡು
ಹುಡುಕಿ ತತ್ವಂಗಳ ಸಮನಾಗಿ ಜೋಡು
ನಡುವೆ ತತ್ಪತಿಯ ಒಡೆಯನ ಇಡು 1
ಕೇಳಿದ್ದನ್ನೇ ನೀ ಕೇಳು | ನಿನ್ನ
ಆಳುವರ ಪಾದಕೆ ಬೀಳು
ಹಳೆವ ವಾರ್ತಿಗೆ ಅಳುಕುವ ಮನ ಸೀಳು
ಬಲು ಪರಿಯಲಿ ಕಾಮ ಕ್ರೋಧಂಗಳ ಹೂಳು 2
ಅಭಿವೃದ್ಧೀಗೆ ಬರುವುದು ಲೋಭ
ನಿಭಾಯಿಸಲು ಅದು ಹೊರುವುದು ಲಾಭ
ಸಭೆಯೊಳು ಪೇಳಬ್ಯಾಡ ಸ್ವಭಾವ
ಇಭವರದನಾಗುವ ಅಭಾವ 3
ನರ ಜನ್ಮವೇ ಬರುವೊದು ಕಷ್ಟ
ಹರಿ ಸರ್ವೋತ್ತಮೆಂಬೋದೆ ಇಷ್ಟ
ಸ್ಥಿರವಲ್ಲ ತ್ವರಿತ ಮಾಡೆಲೊ ಭ್ರಷ್ಟ
ಅರಿತವರ ಕೂಡೆ ನಿರತಾಡು ಶ್ರೇಷ್ಠ 4
ಅಂಕುರಾವು ಪುಟ್ಟಿಹದೀಗ
ಬಿಂಕದಿಂ ಪರಿಪಾಲಿಸೊ ಬೇಗ
ಶಂಕರನುತ ವಿಜಯ ರಾಮಚಂದ್ರವಿಠಲನ ಪದ-
ಪಂಕಜಕೆ ಅಳಿಯಂತೆ ಸಾಗು 5