(ಅ) ಶ್ರೀಹರಿ ಸ್ತುತಿಗಳು
ಆನಂದ ಆನಂದ ಆನಂದ ಪ
ಆನಂದ ನಿನ್ನ ನೋಡಿದವರಿಗೆ ಅ.ಪ
ಆ ಮುಖ ಆ ಕಂಠವಾನಂದ
ಆ ಮಹಾಭುಜಕೀರ್ತಿ ಆನಂದ
ಸಾಮಜ ಶಂಖಚಕ್ರಗಳಾನಂದ
ಹೊಮ್ಮುವ ಗದೆ ಹಸ್ತ ಜಗದಾನಂದ 1
ಸುರಾಸುರರು ದೇವಾನುದೇವರು ತಂ-
ಬುರ ನಾರದ ಮೊದಲಾದವರು
ವರುಣಿಸಲಾರರು ನಿನ್ನಳವನ್ನು
ಅರಿಯಲು ಪೊಗಳಲು ಆನಂದವನ್ನು 2
ಸಂಖ್ಯೆಗೆ ಎಟುಕದ ಆನಂದವಯ್ಯ
ಅಂಕೆಗೆ ನಿಲುಕದ ಆನಂದವಯ್ಯ
ಅಂಕುಡೊಂಕಿಲ್ಲದ ಆನಂದವಯ್ಯ
ಬಿಂಕವ ಬಿಟ್ಟು ಪಾಡಿರೋ ಅಯ್ಯ 3
ಕಮಲವದನದ ಚೆಲುವಾನಂದ
ಕಮಲಲೋಚನದ ಸುಂದರ ಅಂದ
ಕಮಲೋದ್ಭವನಿಹ ವಕ್ಷವಾನಂದ
ಕಮಲಯುಗಳ ಶ್ರೀಪಾದವಾನಂದ 4
ಎಣೆಯಿಲ್ಲಾನಂದಕೆ ಎಣೆಯಿಲ್ಲವಯ್ಯ
ಕಣಕಣವು ನೋಡಲು ತಣಿಯದವಯ್ಯ
ಅಣಿಗೊಂಡ ಜಾಜಿಪುರೀಶನವ್ವಯ್ಯ
ವರ್ಣಿಸಲಾನು ಪಾಮರನಯ್ಯ 5