ತೆರಳಿ ಪೋದರಿಂದು ಪರಮ ಪದವನರಸುತ ಪ
ಸಿರಿ ಶೇಷದಾಸಾರ್ಯರು ಅ.ಪ.
ಸಿರಿಯುಕ್ತ ರಕಾಕ್ಷಿ ವರುಷ ಭಾದ್ರಪದಸಿತ
ವರಪೌರ್ಣಿಮಾ ಸಹಿತವಾದ ಕವಿವಾರದಿ
ಸರು ನಿಶಿಯೊಳು ಶತತಾರ ನಕ್ಷತ್ರ ಬರುತಿರೆ
ನರಹರಿಯ ಚರಣಕಾಂಬ ಕಡು ತವಕದಿಂದ 1
ತಂದೆ ಮುದ್ದುಮೋಹನ ದಾಸವರ್ಯರಿಂದ
ಕುಂದುರಹಿತನಾದ ಪ್ರಾಣನಾಥವಿಠಲ-
ನೆಂದು ಅಂಕಿತೋಪದೇಶವನು ಕೈಕೊಂಡು
ಬಂಧುರವಾದನೇಕ ಪದಗಳನು ರಚಿಸಿ 2
ದಾಸವೃತ್ತಿಯ ಕಂಡು ದೇಶ ದೇಶವ ಸುತ್ತಿ
ಕರವ ನೀಡದೆ
ಲೇಸು ಮಾಡುತಲಿ ಸಚ್ಛಿಷ್ಯರಿಗೆ ತತ್ತ್ವೋಪ-
ದೇಶವನು ಪರಮ ಸಂತೋಷದಿಂದಗೈದು 3
ಆಶಪಾಶವ ತೊರೆದು ಮೀಸಲು ಮನರಾಗಿ
ವಾಸುದೇವನ ನಾಮ ಸೋಸಿನಿಂದ ಭಜಿಸಿ
ಸಾಸುವೆಯಷ್ಟಾದರಾಯಾಸವನುಪಡದೆ
ಈ ಶರೀರ ವಿಶ್ವೇಶನಾಧೀನವೆಂದು 4
ಅಂಗೋಪಾಂಗವ ಮರೆದು ನಿಸ್ಸಂಗಯುತರಾಗಿ
ಕಂಗಳನು ಮುಚ್ಚುತ ಭಂಗವಿಲ್ಲದ ಸುಖವ
ಹಿಂಗದೆ ಕೊಡುವಂಥ ಮಂಗಳನ ಶ್ರೀ
ರಂಗೇಶವಿಠಲನಂತರಂಗದಿ ನೋಡುತ5