ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ವಿಜಯ ಗುರು ತವಪಾದರಜವ ಕರುಣಿಸಿ ಎನಗೆ ಭುಜಗಶಯನನ ಧ್ಯಾನ ಭಜನೆ ನೀಡುವುದು ಪ. ತವ ಶಿಷ್ಯವಂಶ ಸಂಜಾತಳೆನ್ನುತಲಿ ಬಹು ತವಕದಲಿ ಕರುಣಾರ್ದ ದೃಷ್ಟಿಯಿಂದ ತವ ಸೇವೆ ಎನಗಿತ್ತು ತವ ಕೀರ್ತನೆಯ ನುಡಿಸಿ ಮೂರ್ತಿ ತೋರೆನ್ನ ಭವತಾಪ ಹರಿಸಯ್ಯ 1 ನಿನ್ನ ಮಹಿಮೆಯ ಗುಟ್ಟು ವರ್ಣಿಪರು ಯಾರಿನ್ನು ನಿನ್ನ ಚರ್ಯೆಯ ಚರಿತೆ ಬರೆದವರ್ಯಾರೊ ನಿನ್ನ ನಿಜ ಸಂಕಲ್ಪ ಇನ್ನು ಅರಿಯುವರುಂಟೆ ಬನ್ನ ಭವ ಉಂಟೆ 2 ಆ ದೇವಮುನಿ ಆಜ್ಞೆ ಮೋದದಲಿ ಸ್ವೀಕರಿಸಿ ಪಾದನ್ಯೂನತೆ ಕವನ ಪೂರ್ಣಗೊಳಿಸಿ ವೇದಶಾಸ್ತ್ರಗಳರ್ಥ ಸುಲಭದಲಿ ತಿಳಿಸುತಲಿ ಹಾದಿ ತೋರಿದೆ ಶಿಷ್ಯರಾದ ಸುಜನರಿಗೆ 3 ಸತ್ಕರ್ಮ ಫಲಗಳನು ನಿತ್ಯದೊಳಗರ್ಪಿಸಲು ಉತ್ತಮನು ಆರೆಂಬ ಚಿತ್ತದಳಲ ಮುಕ್ತಿಯೋಗ್ಯರಿಗೆ ಬಹು ಯುಕ್ತಿಯಿಂದಲಿ ತೋರಿ ಉತ್ತಮನು ಹರಿಯೆಂದು ಶಕ್ತಿಯಿಂ ಸ್ಥಾಪಿಸಿದ 4 ವೈಕುಂಠಪುರದೊಳಗೆ ಶ್ರೀ ಕರನ ವಕ್ಷಕ್ಕೆ ಸೋಕಿಸಿದೆ ಚರಣವನು ಜೋಕೆಯಿಂದ ಈ ಕಾರ್ಯಕಾರಣವ ನಾ ಕೇಳಿ ನುಡಿವಂಥ ವಾಕು ಲಾಲಿಸುತ ವಿವೇಕ ಮತಿ ಕರುಣಿಪುದು 5 ಆ ಕಮಲನಾಭನಾ ಹೃದಯ ಕರುಣಾಮೃತವು ಸೋಕಿ ತುಂಬಿಹುದು ತವ ಚರಣ ಕಮಲದಲಿ ನಾ ಕೇಳ ಬಂದೆನಾ ಕರುಣಾಮೃತದ ಕಣವ ಯಾಕೆ ಮರೆಮುಚ್ಚಿನ್ನು ನೀ ಕೊಡೈ ತವಕದಲಿ 6 ಪಾದ ರೂಢಿಗೊಡೆಯಗೆ ಲಕುಮಿ ಓಡಿದಳು ಕರವೀರಪುರಕೆ ಸ್ವಾಮಿ ಬೇಡಾಗೆ ವೈಕುಂಠ ನೋಡಿ ಆನಂದಾದ್ರಿ ಮಾಡಿದನು ಮಂದಿರವ ಕೂಡಿ ಪದ್ಮಿನಿಯ 7 ನೋಡಿ ವೈಕುಂಠದೊಳು ನಾಡಿಗೊಡೆಯನ ಚರ್ಯ ರೂಢಿಯೊಳು ಜನಿಸಿ ಭೂಸುರವಂಶದಿ ದುರಿತ ಈಡಾಡಿ ಹರಿದಾಸ್ಯವನು ಬೇಡಿ ಬಯಸುತ ಪೊಂದಿ ನಾಡಿನೊಳು ಮೆರೆದೆ 8 ಪ್ರತಿವರ್ಷ ಬಿಡದೆ ತಿರುಪತಿ ಯಾತ್ರೆ ಭಕ್ತಿಯಲಿ ಪತಿತಪಾವನನ ಓಲೈಸಿ ಮೆರೆದೆ ಕ್ಷಿತಿಯಕ್ಷೇತ್ರ ಅಪ್ರತಿಮಹಿಮ ಸಂಚರಿಸಿ ಕ್ಷಿತಿಗೆ ತೋರಿದೆ ನಿನ್ನ ಮಹಿಮೆ ಜಾಲಗಳ 9 ಅಂಕಿತವದಲ್ಲದೆ ದಾಸತ್ವ ಸಿದ್ಧಿಸದು ಕಿಂಕರಗೆ ಅಂಕಿತವೆ ಕುರುಹು ಎಂದು ಅಂಕಿತವ ಪಡೆದು ಚಕ್ರಾಂಕಿತನ ಗುಣ ಮಹಿಮೆ ಶಂಕಿಸದೆ ಪೇಳ್ದೆ ತವ ಕಿಂಕರೋದ್ಧಾರಕನೆ 10 ನಿನ್ನ ಮಹಿಮಾದಿಗಳ ವರ್ಣಿಸಲು ಎನ್ನಳವೆ ಚನ್ನ ಗುರು ವಿಜಯವಿಠ್ಠಲನ ಪದಕಮಲ ಚನ್ನಾಗಿ ಕಂಡು ಹೃನ್ಮಂದಿರದಿ ಸತತದಲಿ ತನ್ಮಂತ್ರ ಕಿರಣವೆಮ್ಮಲ್ಲಿ ಬೀರಿದ ಕರುಣಿ 11 ವಿಕ್ರಮ ಕಾರ್ತೀಕ ಶುದ್ಧ ದಶವಿೂ ದಿವ್ಯ ಶುಕ್ರ ನಾಮರು ವಾರ ಶುಭದಿನದಿ ಇಂದು ಅಕ್ಕರದಿ ಕರಸಿಲ್ಲಿ ಉಕ್ಕಿಸಿದೆ ತವ ಸ್ತೋತ್ರ ಮಕ್ಕಳಂದದಿ ಪೊರೆವ ಅಕ್ಕರೆಯು ಉಂಟೊ 12 ಮಧ್ವರಾಯರ ಕುಲದಿ ಉದ್ಭವಿಸಿದಂಥ ಈ ಶುದ್ಧ ವೈಷ್ಣವ ಕುಲದಿ ಜನಿಸಿ ಬಂದೆ ಶುದ್ಧ ದಾಸತ್ವದ ಮುದ್ರಾಂಕಿತದ ರತ್ನ ಪಾದ ಕಂಡೆ 13 ಪಾಪಿ ಜನರುದ್ಧರಿಪ ಪಾವನಗಾತ್ರನೆ ಆ ಪಯೋಜಾಸನರ ತರತಮ್ಯವ ಸ್ಥಾಪಿಸಿದ ಮಹಿಮನೆ ಸದ್ಗುಣಾಂಬುಧಿ ನಿಲಯ ಗೋಪಾಲಕೃಷ್ಣವಿಠ್ಠಲನ ಪದಭೃಂಗ 14
--------------
ಅಂಬಾಬಾಯಿ
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು