ನೀನಹುದೊ ನಮ್ಮೊಡಿಯ
ಘನ ಗುರು ನಾ ನಿಮ್ಮ ಕಂಡೆ ಅಯ್ಯ ಧ್ರುವ
ನಾ ನಿಮ್ಮ ಪರಿವಾರ ನಾ ನಿಮ್ಮ ಕಿಂಕರ ನೀ ನಮ್ಮ ಸಹಕಾರ
ಬಡಿವಾರ 1
ನಾ ನಿಮ್ಮ ಬಾಲಕ ನೀ ನಮ್ಮ ಪಾಲಕ
ನಾ ನಿಮ್ಮ ಸೇವಕ ನೀ ನಮ್ಮ ರಕ್ಷಕ 2
ನಾ ನಿಮ್ಮ ಉದ್ಧೇಶ ನೀ ನಮ್ಮ ಪ್ರಾಣೇಶ
ನಾ ನಿಮ್ಮ ಸಹವಾಸ ನೀ ನಮ್ಮ ಅಭ್ಯಾಸ 3
ನಾ ನಿಮ್ಮ ಅಣುಗ ನೀ ನಮ್ಮ ಸರ್ವಾಂಗ
ನಾ ನಿಮ್ಮ ಬಳಗ ನೀ ನಮ್ಮ ಬಳಗ 4
ನಾ ನಿಮ್ಮ ಶರಣ ನೀ ನಮ್ಮ ಕರುಣ
ನಾ ನಿಮ್ಮ ನಿರ್ಗುಣ ನೀ ನಮ್ಮ ಭೂಷಣ 5
ನಾ ನಿಮ್ಮ ನಿರ್ಮಿತ ನೀ ನಮ್ಮ ಸಹಿತ
ನಾ ನಿಮ್ಮ ಆಶ್ರಿತ ನೀ ನಮ್ಮ ಸುದಾತ 6
ನಾ ನಿಮ್ಮ ಅಂಕಿತವೃತ್ತಿ ನಿಮ್ಮ ನಮ್ಮ ವಸ್ತುಗತಿ
ನಾ ನಿಮ್ಮ ಮಹಿಪತಿ ನೀ ನಮ್ಮ ಶ್ರೀಪತಿ 7