ಪುರಂದರ ಗುರುವರ ಇನ್ನು
ಭಾಳ ಹೊತ್ತಾಯಿತು ಭಕುತ ಜನಪ್ರಿಯ ಪ.
ಶ್ರೀಶನಪ್ಪಣೆಯಿಂದ ಭೂಲೋಕದಲಿ ಪುಟ್ಟಿ
ಆಶೆಯಿಂದಲಿ ಧನ ಗಳಿಸಿ ಕೋಟಿ
ವಾಸುದೇವನು ಎಚ್ಚರಿಸಲು ವೈರಾಗ್ಯ
ದಾಸತ್ವದಲಿ ಜಗದಿ ಮೆರೆಯಬೇಕು 1
ವ್ಯಾಸ ಮುನಿಯಿಂದುಪದೇಶಕೊಳ್ಳಲುಬೇಕು
ದಾಸತ್ವ ಜಗದಲಿ ಸ್ಥಾಪಿಸಬೇಕು
ದೋಷರಹಿತ ಮಧ್ವಶಾಸ್ತ್ರ ತತ್ವಗಳ ಪ್ರ
ಕಾಶಗೈಸುತ ಕವನಗೈಯ್ಯಬೇಕು 2
ಸತಿಸುತ ಪರಿವಾರ ಭೂ ಸಂಚರಿಸಬೇಕು
ಸ್ತುತಿಸುತ್ತ ಹರಿಯನ್ನು ಕುಣಿಸಬೇಕು
ಜತನದಿ ನಿಜತತ್ವಗಳನರಿಯಲಿಬೇಕು
ಕ್ಷಿತಿಗೆ ಅಚ್ಚರಿ ಮಹಿಮೆಯ ತೋರಬೇಕು 3
ಪುಷ್ಯದಮಾವಾಸೆ ಹರಿಪುರ ಸೇರಲು
ಶಿಷ್ಯಕುಲವು ಜಗದಿ ಬೆಳೆಯಲೆಂದು
ಶಿಷ್ಯ ವಿಜಯದಾಸರಿಗೆ ಅಂಕಿತವನಿತ್ತು
ಶಿಷ್ಯ ಪ್ರಶಿಷ್ಯ ಸಂತತಿ ಬೆಳಸಬೇಕು 4
ಪಾಪಿ ಜನಗಳ ಪಾವನಗೈಯಲಿಬೇಕು
ತಾಪಪಡುವರ ಪೊರೆಯಲೆತ್ನಿಸಬೇಕು
ಶ್ರೀಪತಿ ದಾಸತ್ವ ಜಗದಿ ನಿಲ್ಲಿಸಬೇಕು
ಗೋಪಾಲಕೃಷ್ಣವಿಠ್ಠಲನ ಸ್ಮರಿಸಬೇಕು 5