ಪರಮ ಕರುಣಾಳುಗಳು ಈ ಗುರುಗಳು ಶ್ರೀ
ವರತಂದೆ ಮುದ್ದುಮೋಹನವಿಠಲಾಖ್ಯರು ಪ.
ಶಾಂತರು ದಾಂತರು ಸಂತೋಷ ಸುಖಿಗಳು
ಅಂತರಂಗದಿ ಹರಿಯ ಧ್ಯಾನಿಸುವರು
ಕಂತುಜನಕನ ಧ್ಯಾನ ಸತ್ಪಾಂಥರಿಗೆ ಬೀರುತಲಿ
ಎಂತೆಂತೊ ಸುಜನರಿಂ ಸ್ತುತಿಸಿಕೊಳುತಿಹರು 1
ನಿರಪೇಕ್ಷೆಯಿಂದಲಿ ಪರರಿಗುಪಕಾರವನು
ತೆರವಿಲ್ಲದೆಲೆ ಸತತ ಮಾಡುತಿಹರು
ಅರಿಯೆನಿವರಾ ಮಹಿಮೆ ಪರದೇಶಿ ನಾನಿನ್ನು
ಕರುಣೆಯಿಂದೆನಗೆ ಹರಿ ಅಂಕಿತವನಿತ್ತರು 2
ಸುಪ್ರೀತರಾಗಿನ್ನು ಈ ಶರೀರದ ಒಳಗೆ
ಶ್ರೀಪತೀ ತೈಜಸನ ವ್ಯಾಪಾರದಿ
ಶ್ರೀ ಪರಮ ಗುರುಗಳೆಂದ್ಹರಿಯ ನಿರ್ಮಾಲ್ಯವನು
ಕೃಪಾತಿಶಯದಿ ಕೊಡಿಸಿ ಎನ್ನನುದ್ಧರಿಸಿದರು3
ಎಲ್ಲರೂ ದÉೀವಾಂಶರೆನ್ನುವುದು ಕೇಳುತಲಿ
ನಿಲ್ಲದೇ ಮನಸು ಬಹು ತಲ್ಲಣಿಸುತಿರಲು
ಪಲ್ಲವಿಸಿ ಎನ್ನ ಮನ ಮಂದಿರದಿ ಅನುಗಾಲ
ಪುಲ್ಲಾಕ್ಷನನು ತೋರಿ ಉಲ್ಲಾಸಕೊಡುತಿಹರು 4
ಶ್ರೇಷ್ಠಗುರುಗಳು ಇವರು ಸೃಷ್ಟಿಯೊಳಗೆನಗಿನ್ನು
ಎಷ್ಟು ಯೋಚಿಸೆ ಮನವು ಮಹಿಮೆಯರಿಯೆ
ವೃಷ್ಟಿವಂಶಜ ರುಕ್ಮಿಣೀರಮಣ ಗೋಪಾಲ-
ಕೃಷ್ಣವಿಠಲನ ಬಹು ದಿಟ್ಟಾಗಿ ತೋರುವರು 5