ಒಟ್ಟು 7503 ಕಡೆಗಳಲ್ಲಿ , 128 ದಾಸರು , 4808 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನನರಿಯದವ ಜ್ಞಾನದ ಮಾತಾಡಿದರೇನು ಕಣ್ಣಿಲ್ಲದವ ಕನ್ನಡಿ ಪಿಡಿದರೇನು ಧ್ರುವ ಧೈರ್ಯವಿಲ್ಲದವ ಕೈಯಲಿ ಶಸ್ತ್ರ ಹಿಡಿದರೇನು ಸ್ಥೈರ್ಯವಿಲ್ಲದವ ತಪಸ್ಯಾದರೇನು ಮರ್ಯಾದಿಲ್ಲದವ ಗುರು ಸನ್ನಿಧವಿದ್ದರೇನು ಬಂಟ ಬಲ್ಲಿದನಾದರೇನು 1 ಗಂಡ ನಿಲ್ಲದ ನಾರಿ ಸುಗುಣ್ಯುದ್ದಂಡಾದರೇನು ಷಂಡ ಸಾವಿರ ಹೆಣ್ಣು ಮದುವ್ಯಾದರೇನು ಖಂಡಿಸದೆ ಅನುಮಾನ ಪಂಡಿತನೆನಿಸಿದರೇನು ಕಂಡು ಕಾಣದ್ಹೆಳವನ ಕೊಂಡಾಡಲೇನು 2 ಭಾನುಕೋಟಿ ತೇಜನಂಘ್ರಿ ಗುರುತಲ್ಲದರಿವೇನು ಅನುಭವಿಸಿ ಕೊಳ್ಳದ ನರಜನ್ಮವೇನು ದೀನ ಮಹಿಪತಿಸ್ವಾಮಿಕಾಣದ ಕಂಗಳವೇನುಜ್ಞಾನ ಉಂಟುಮಾಡಿಕೊಳ್ಳದವನ ಬಾಳಿವೇನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನ್ನೊಳಗಿಹುದು ತನಗೆ ತಿಳಿಯದು | ತನ್ನಂಥ ಮಹಿಮಗೆತೋರುವದು | ಇನ್ನೊಬ್ಬ ಮೂಢಗೆ ತೋರಿಸೆನೆಂದರೆಸಕ್ಕರಿಯೊಳಗಿನ ಸವಿ ಇದ್ಧಾಂಗೆ | ಹಾಂಗೆ ನಿಜವಸ್ತು 1 ನೂಕದು ಪೀಕದು ದೇಹಕ್ಕೆ ತಾಕದು | ಏಕಾಗಿ ಇಹುದುಮಾತಾಡದು ಪ್ರಾಕೃತ ಜನರಿಗೆ | ಮುಸುಕು ಹಾಕಿಹುದು ಕಾಷ್ಠದ ಒಳಗಿನ ಅಗ್ನಿ ಇದ್ಧಾಂಗೆ | ಹಾಂಗೆ ನಿಜವಸ್ತು 2 ಕಣ್ಣಿಗೆ ತೋರದು ಬೈಲಾಗಿ ಹೋಗದು | ಕಣ್ಣಿಗೆ ಕಣ್ಣಾಗಿ ನಿಂತಿಹುದು | ಹೆಣ್ಣಿಗೆ ಗಂಡಿಗೆ ಕುಣಿಸ್ಯಾಡುತಿಹುದು | ಕುಸುಮದ ಒಳಗಿನ ಪರಿಮಳದ್ಹಾಂಗೆ | ಹಾಂಗೆ ನಿಜವಸ್ತು 3 ಕೆಳಗದ ಮೇಲದ ಎಡಕದ ಬಲಕದ ಹಿಂದದ ಮುಂದದ ಜಡವದ | ಒಳ ಹೊರಗೆ ತುಂಬೇದ ಬ್ರಹ್ಮಾಂಡ ಮೀರೇದ | ಚಂದ್ರನ ಒಳಗಿನ ಬೆಳದಿಂಗಳ್ಹಾಂಗ ಹಾಂಗೆ ನಿಜವಸ್ತು 4 ನರಸಿಂಹ ಸದ್ಗುರು ರಾಮನ ದಯದಿಂದ ಪರವಸ್ತು ಎನಗೆ ಪ್ರಕಟಾಯಿತೊ ಪರರ ಮುಖದಿಂದಹೇಳುವದಲ್ಲ | ಪರವಸ್ತು ತಿಳಿದಂಥ ಯೋಗಿಯೆಬಲ್ಲಾ || ಹಾಂಗೆ ನಿಜವಸ್ತು 5
--------------
ನರಸಿಂಹ
ತನ್ನೊಳು ತಿಳಿಯೊ ಪ್ರಾಣಿ ಪುಣ್ಯಸಾಧನಿ ಧ್ರುವ ತನ್ನಿಂದಲೆ ತಾ ನೋಡುವ ಖೂನ ಚೆನ್ನಾಗ್ಯದನುಭವ ಜ್ಞಾನ ಸನ್ಮತ ಸುಖದೋರುವ ಚಿದ್ಫನ ಭಿನ್ನವಿಲ್ಲದೆ ನೋಡುವದುನ್ಮನ 1 ಮೂಲವಿಡಿದು ನಿಜ ನೋಡುವದರಿಂದ ಮ್ಯಾಲೆ ದೋರುತಲದೆ ಬ್ರಹ್ಮಾನಂದ ಕೀಲು ತಿಳಿದರೆ ಸದ್ಗುರು ಕೃಪೆಯಿಂದ ಒಲಿದು ಬಾಹನು ತಾ ಮುಕುಂದ 2 ಸೆರಗವಿಡಿದು ನೋಡುಲು ಗುರುಮುಖ ಮೂರು ಲೋಕಕ ಬಲು ಪರಮ ವಿವೇಕ ತರಳ ಮಹಿಪತಿ ಆತ್ಮಾನುಭವ ಸುಖ ದೋರುತಲದೆ ತಾ ಘನ ಕೌತುಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪಿಸಲಾರೆ ನಾನು ಪರಿಪರಿ ತಾಪದಲಿ ಕೃಪೆಮಡಿ ಸಲಹಿರಿ ಶ್ರೀ ಗುರುಗಳೆ ಪ. ಸುಪಥ ಕಾಣದೆ ನಿಮ್ಮ ಪಾದವನೆ ನಂಬಿದೆನು ಗುಪಿತ ಮಹಿಮರೆ ಇನ್ನು ಭವಪಾಶ ಬಿಡಿಸುತ್ತ ಅ.ಪ. ಬಂಧು ವರ್ಗಗಳನ್ನ ಬದುಕಿಸುವರು ಎಂದು ಬಂಧನದೊಳು ಬಿದ್ದು ಬೆಂದು ನೊಂದೆ ಮುಂದೆ ದಾರಿಯ ಕಾಣೆ ಮುಕ್ತಿ ಮಾರ್ಗವನರಿಯೆ ಬಂಧು ಬಳಗಗಳೆಲ್ಲ ನೀವೆಂದು ನಂಬಿದೆ 1 ಅಶನವಸನಗಳಲ್ಲಿ ಆಸೆಯನು ತೊರೆಯದೆ ವಸುಮತಿಯೊಳು ಜ್ಞಾನ ಹೀನವಾಗಿ ಪಶುವಿನಂದದಿ ತಿರುಗಿ ಕಾಲವ್ಯರ್ಥ ಕಳೆದೆ ಅಸಮ ಮಹಿಮರೆ ಇನ್ನು ಅಜ್ಞಾನ ಪರಿಹರಿಸಿ 2 ಮಮತೆಯನು ತೊರೆಯದೆ ಮಾಯ ಪಾಶಕೆ ಸಿಲುಕಿ ಮಮಕಾರದಿಂದ ನಾ ಮೈಮರೆತೆನು ನಮಿಸುವೆನು ದೈನ್ಯದಲಿ ನಾನೀಗ ನಿಮ್ಮ ಪದಕೆ ರಮೆಯರಸನ ತೋರಿ ಎನ್ನ ಮನ ಮಧ್ಯದಿ 3 ಪಾವನರೂಪರೆ ಪಾಪರಾಹಿತ್ಯರೆ ಪಾವಿನಶಯನಗೆ ಪರಮಪ್ರಿಯರೆ ದೇವತೆಗಳೊಡೆಯರೆ ದೇವಾಂಶ ಸಂಭವರೆ ಪಾವಮಾನಿಗೆ ಪ್ರಿಯರೆ ಪಾವನ್ನಗಾತ್ರರೆ 4 ಆಪತ್ತು ಕಳೆಯುವರೆ ಶ್ರೀಪತಿಯ ತೋರ್ವರೆ ಕೋಪಿಸದೆ ಎನ್ನೊಳು ಕೃಪೆಗೈಯ್ಯರಿ ಗೋಪಾಲಕೃಷ್ಣವಿಠ್ಠಲ ತಾನು ಹೃದಯದಲಿ ತೋರ್ಪುತೆ ಕರುಣಿಸುತ ಈ ಪರಿಯಿಂ ಸಲಹಿರಿ5
--------------
ಅಂಬಾಬಾಯಿ
ತಪ್ಪ ಪಾಲಿಸಯ್ಯ ತಿಮ್ಮಯ್ಯ ತಪ್ಪ ಪಾಲಿಸಯ್ಯಪ. ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳು ಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆಅ.ಪ. ಜಲಜನಾಭ ನಿನ್ನ ಮಹಿಮೆಯ ನೆಲೆಯನರಿಯದೆನ್ನ ಮನವದು ನೆಲೆಯಿಲ್ಲದ ಭವಜಲಧಿಯೊಳಾಡುತ್ತ ಲಲನಾ ವಿಷಯದ ಬಲೆಗೆ ಮೋಹಿಸಿ ಮನ ಸಿಲುಕಿ ಮಲಿನವಾಯ್ತು ತತ್ವದ ನೆಲೆಯನರಿಯದಾಯ್ತು ಹೀಗೆನ್ನುತ ಕಳೆದುಹೋಯ್ತು ವಿಂಶತಿ ವತ್ಸರಗಳು ತೊಳಲಿ ಸಕಲ ಭವದೊಳಗಾರ್ಜಿತವಹ1 ಹಾಳು ಮನವು ಕೂಡಿ ನಾನಾ ಚಾಳಿ ಮಾಳ್ಪುದಾಡಿ ಬುದ್ಧಿಯ ಪೇಳಿದಷ್ಟು ದುಶ್ಯೀಲವೆ ಮಾಳ್ಪುದು ಆಲೋಚನೆಯೊಳಗೆ ಬಿದ್ದರೆ ಮೇಲಿಲ್ಲವು ಕ್ಷಣಕೆ ತನ್ನಯ ಶೀಲವನೆ ಸ್ವೀಕರಿಸುತಿರುವುದು ಪೇಳಲೇನು ಕರುಣಾಳು ನೀ ಯೆನ್ನಯ2 ನಾನಾ ಕಷ್ಟಪಟ್ಟೆ ಇನ್ನಾದರು ಮಾನಿಸಬೇಕಷ್ಟೆ ಎನ್ನೊಳು ಊನ ಗ್ರಹಿಸಿ ಅನುಮಾನ ಸಾಧಿಸಿದರೆ ನಾನೆಂಬುವದೇನು ಸ್ವತಂತ್ರವ ಕಾಣೆನು ಎನ್ನೊಳಗೆ ಸಂತತ ನೀನೇ ಗತಿಯೆನಗೆ ಇದಕನು- ಮಾನವಿಲ್ಲ ಪಾದಾನತಜನರಾ ಧೀನನೆಂಬ ಬಿರುದಾನಬೇಕಾದರೆ3 ಅಪರಾಧಿಯೆ ನಾನು ಹೇಗೈ ಅಖಿಲಾತ್ಮನು ನೀನು ಹೃದಯದಿ ಕೃಪೆಯ ಬೀರಿ ತೋರಿಪ ಪರಮಾತ್ಮನೆ ಚಪಲನಾಗಿ ಎನ್ನುಪಮೆಗೆಯೊಡ್ಡಿದೆ ಸಫಲವಾಯ್ತು ಎನಗೆ ಕೀರ್ತಿಯು ಅಪಕೀರ್ತಿಯು ನಿನಗೆ ಪಾದವ ಜಪಿಸುವಂತೆ ಕರುಣಿಪುದಿನ್ನಾದರೂ ಕಪಟವಾಯ್ತೆ ಸರೀಸೃಪಗಿರಿರಾಜನೆ4 ದೂಷಣಾರಿ ನಿನ್ನ ಪಾದದ ದಾಸಗೈಯ್ಯೊ ಎನ್ನ ಎನ್ನೊಳು ದೋಷವಿಲ್ಲ ಜಗದೀಶ ಜನಾರ್ದನ ದಾಶರಥಿಯ ಕರುಣಾಶರಧಿಯೊಳಗೆ ಈಸಾಡಿದ ದಾಸ ಕಾರ್ಕಳಾ ಧೀಶ ಶ್ರೀನಿವಾಸ ರವಿಶತ ಭಾಸ ಶ್ರೀಲಕ್ಷ್ಮೀನಾರಾಯಣ ಸ ರ್ವೇಶ ಭಕ್ತಜನಪೋಷ ನೀಯೆನ್ನಯ5
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪ ಪಾಲಿಸಿಕೊಳ್ಳೊ ಜೀಯಾ ತಿಮ್ಮಪ್ಪ ವೆಂಕಟಗಿರಿರಾಯ ಪ. ಬಪ್ಪ ತನ್ನಯ ಭಕ್ತ ಜನರ ಬವಣೆಗಳ ನೊಪ್ಪನೆಂಬ ಬಿರುದಿಪ್ಪ ಭಾಸುರಕಾಯ ಅ.ಪ. ಅರವಿಂದ ಸಖನುದಯಿಸಲು ಅಜ ಗರನಂತೆ ಬೀಳುವ ತಪ್ಪು ಗುರು ಹಿರಿಯರ ಜರಿವಂಥ ತಪ್ಪು ನಿನ್ನ ಸ್ಮರಣೆಯ ಮಾಡದ ತಪ್ಪು ನಿತ್ಯ ಕರ್ಮಗಳ ಬಿಡುವ ತಪ್ಪು ಸ್ಥಿರ ಚಿತ್ತದಲಿ ನಿನ್ನ ಚರಣಾರಾಧಿಸದಂಥ 1 ಸಂಧ್ಯಾ ಕೃತ್ಯಗಳ ಕಾಲದಲಿ ಪರ ನಿಂದೆಯ ಮಾಡುವ ತಪ್ಪು ದಿವ್ಯ ಶ್ರೀ ಗಂಧ ಶ್ರೀ ತುಳಸಿ ಪುಷ್ಪಗಳ ತಾನೆ ತಂದಿರಿಸದ ಮಹಾ ತಪ್ಪು ಮಿಂದು ಮಡಿಯೊಳಿದ್ದು ಮರುಳನಾಗಿ ನಿಜ ಮಂದಗಮನೆಯಳ ಮಾತನಾಲಿಸುವಂಥ 2 ಮನ ವಚನಾದಿಗಳಿಂದ ಪರ ವನಿತೇರ ಸ್ಮರಿಸುವ ತಪ್ಪು ಪುಣ್ಯ ದಿನಗಳ ತ್ಯಜಿಸುವ ತಪ್ಪು ಪರ ಧನಾಭಿಲಾಶಿಯ ತಪ್ಪು ಕನಸಿಲಾದರು ನಿನ್ನ ನೆನೆಯದೆ ಸತಿಸುತ ತನುವೆನ್ನದೆಂಬ ಚಿಂತನೆಯಿಂದ ಬಳಲುವ 3 ನೇಮ ವ್ರತಗಳೆಲ್ಲ ಮರತು ಸೌಖ್ಯ ಕಾಮುಕನಾಗಿಹ ತಪ್ಪು ಬಹು ಪಾಮರವೃತ್ತಿಯ ತಪ್ಪು ನಿನ್ನ ದಯ ಶೋಭಿಸದಂಥ ತಪ್ಪು ಆ ಮಹಾ ಮಂತ್ರಗಳ ಜಪಿಸದ ತಪ್ಪು ಕಾಮಿನಿಯರ ಮೋಹಕ್ಕೊಳಗಾಗಿ ಬಳಲುವ 4 ನರಗುರಿಯಾದೆನ್ನ ತಪ್ಪ ನೋಡೆ ಹುರುಳು ಗಾಣುವುದುಂಟೆನಪ್ಪ ಸರ್ವ ಸ್ಥಿರ ಚರಾದಿಗಳೊಳಗಿಪ್ಪ ಲಕ್ಷ್ಮೀ ವರನಿತ್ಯ ಸತ್ಯ ಸಂಕಲ್ಪ ಪರಮ ಪಾವನ ಶ್ರೀಮದುರಗೇಂದ್ರ ಗಿರಿವಾಸ ಕರುಣದಿಂದೆನ್ನನುದ್ಧರಿಸಿ ರಕ್ಷಿಸು ಬೇಗ 5
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪಲರಿಯದು ಬರೆದ ಬ್ರಹ್ಮನಿರ್ಮತವು ಒಪ್ಪುವದು ಯತಿ ಮುನಿ ಋಷಿಯ ಸಂತತಿಯು ಧ್ರುವ ಆನಿ ಮೊದಲಿರುವೆ ಕಡೆ ಅಣುಮಾತ್ರಾಕಾರವನು ಮುನ್ನ ಬರೆದಂತೆ ತಾನಡೆಯುತಿಹಂದು ಇನ್ನು ಮುತ್ತನ್ಯ ದೈವಕ ಬಯಸಿ ಬೇಡಿದರೆ ಮುನ್ನಿಗೆ ಕೊಡಬಲ್ಲವೆ ಬಿನಗುದೈವವು 1 ಭಿನ್ನವಿಲ್ಲದೆ ತನುವಿನೊಳು ಆನಂದ ಘನ ಉನ್ನತ ಮಹಿಮ ಪರಿಪೂರ್ಣವಿರಲು ಮೂರ್ತಿ ಶ್ರೀಪಾದವನು ಅನುದಿನ ಭಜಿಸಿ ಘನ ಸುಖವ ಪಡಿಯೊ ಮನವೆ 2 ಕಕ್ಕುಲಾತಿಯ ಬಟ್ಟು ಕಂಡವರ ಕಾಲ್ಗೆರಗಿ ಫಕ್ಕಸಾರಿಯ ಧರ್ಮ ಜರಿಯ ಬ್ಯಾಡ ಸಕಲ ಸಹಕಾರ ಮಹಿಪತಿಸ್ವಾಮಿ ನಿನಗಿರಲು ಭಕುತಿ ಮುಕುತಿಯ ಉಂಟು ಮೂಢ ಜನವೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಕ್ಷಮೆ ಮಾಡೊ ಕೃಪೆಯಿಂದ ನೋಡೊ ಧ್ರುವ ನೀನೆ ದಯಾನಿಧಿ ನಾನೆ ಅಪರಾಧಿ ಖೂನ ದೋರು ಹಾದಿ ಸ್ಥಾನ ನಿಜಗಾದಿ 1 ಅನಾಥನೆಂದು ನೋಡಿ ಸುನಾಥ ಎನ್ನ ಮಾಡಿ ಸ್ವಾನಂದ ಸುಖ ನೀಡಿ ಮನ್ನಾಥ ನಿಜಗೂಡಿ 2 ಹೆಳಲಾರೆ ಬಹಳ ಕೇಳೋ ನೀ ದಯಾಳ ತಾಳಿ ಎನ್ನ ತೋಳ ಬಾಳ ವಿಶ್ವಪಾಲ 3 ಸೇವೆ ಇದೆ ನಮ್ಮ ಭಾವಿಸುದು ನಿಮ್ಮ ಪಾವನಗೈಸು ವರ್ಮ ಸುವಿದ್ಯ ಪರಬ್ರಹ್ಮ 4 ಬಂದ ಮ್ಯಾಲೆ ಶರಣಕುಂದಬ್ಯಾಕೊ ಪೂರ್ಣ ಕಂದ ಮಹಿಪತಿ ಗುಣ ಚಂದಮಾಡೊ ಕರುಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ ಪ ನೀನೆದಯಾನಿಧಿ ನಾನು ಅಪರಾದಿ ಖೂನದೋರೋ ಹಾದಿ ಸ್ಥಾನ ನಿಜಾನಾದಿ 1 ಅನಾಥನೆಂದು ನೋಡಿ ಸನಾಥನೆನ್ನಮಾಡಿ ಸ್ವಾನಂದ ಸುಖನೀಡಿ ಮನ್ನಾಥ ನಿಜಗೂಡಿ2 ಹೇಳಲಾರೆ ಬಹಳಾ ಕೇಳೋನೀದಯಾಳಾ ತಾಳಿಯನ್ನ ತೋಲಾಬಾಲವಿಶ್ವಷಾಲಾ 3 ಸೇವಿ ಇದೇನಮ್ಮ ಭಾವಿಸುದು ನಿಮ್ಮ ಪಾವನ್ನಗೈಸು ವರ್ಮಾ ಸುನಿತ್ಯ ಪರಬ್ರಹ್ಮಾ 4 ಬಂದ ಮ್ಯಾಲೆ ಶರಣಾ ಕುಂದವ್ಯಾಕೋ ಪೂರ್ಣ ಕಂದ ಮಹಿಪತಿಗುಣಾ ಛಂದ ಮಾಡೋಕರುಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಪ್ಪು ನೋಡುವರೇನೋ ಕೃಪಾಸಿಂಧು ಶ್ರೀಗುರು ಒಪ್ಪಿಸಿಕೊಂಡರೆ ತಪ್ಪಾರಿಸುವರೆ ಧ್ರುವ ಒಡಲಹೊಕ್ಕವರವಗುಣವ ನೋಡುವರೇನೊ ಒಡಿಯನೆಂದವರ ತಾ ಕೈಯ್ಯ ಬಿಡುವರೆ ಮಡದಿ ಮಕ್ಕಳೆನಿಸಿ ಕಡೆಗಣ್ಣ ನೋಡುವರೆ ಒಡುಹುಟ್ಟಿದವರಿಗೆರಡ ಬಗೆವರೇನಯ್ಯ 1 ಬಡವರ ಮಕ್ಕಳ ಮಡುವಿನೊಳು ಧುಮುಕಿಸಿ ಕುಡಗೋಲ ಕುಂಬಳ ಕೊಟ್ಟವರ ಕೈಯ್ಯ ಒಡನೆ ಹೋಳುವದುಚಿತವೇನಯ್ಯ 2 ಬಡವನಾಧಾರಿ ಎಂದು ನಾ ನಿಮ್ಮ ಪೊಡವಿಯೊಳು ಶ್ರೀಪಾದ ದೃಢದಲಿ ನೋಡು ಕರುಣಾಲೆನ್ನ ನೀಡಿ ಅಭಯ ಹಸ್ತದಿ ಮೂಢ ಮಹಿಪತಿಗೆ ಕಡೆಗಾಣಿಸುವುದೈಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಪೇಳ್ವೆ ನಿನ್ನೊಳೆನ್ನಪ್ಪಿ ಸಲಹಯ್ಯ ಅಪ್ಪ ಸಿರಿಪತಿಯೆನ್ನ ನೆಪ್ಪಿನೊಳಗಿರ್ದು ಪ ಅರಿವಿಟ್ಟು ತವಚರಣ ಸ್ಮರಿಸದಿರೆ ಎನ್ನ ತಪ್ಪು ಮರೆವೆಯನು ಪರಹರಿಸದಿರೆ ನಿನ್ನ ತಪ್ಪು ಧರೆಯ ಭೋಗವ ಮೀರಿ ನಡೆಯಿದಿರೆ ಎನ್ನ ತಪ್ಪು ಪರಮವೈರಾಗ್ಯ ಭಕ್ತಿ ಕೊಡದಿರೆ ನಿನ್ನ ತಪ್ಪು 1 ಅರ್ತಿಯಿಂ ತವಭಜನೆ ಮಾಡಿದಿರೆ ಎನ್ನ ತಪ್ಪು ಚಿತ್ತ ಚಂಚಲಗೊಳಿಸಿದರೆ ನಿನ್ನ ತಪ್ಪು ಸತ್ಯಭ್ರಷ್ಟನಾಗಾಚರಿಸಿದರೆ ಎನ್ನ ತಪ್ಪು ಸತ್ಯಜನಸಂಗ ಕೊಡದಿರೆ ನಿನ್ನ ತಪ್ಪು 2 ನಾಶವೊಂದೋ ಮಹಹೇಸಿಸಂಸಾರದ ವಾಸನೆಯ ಬಿಡದಿರೆ ಎನ್ನ ಘನತಪ್ಪು ಶ್ರೀಶ ಶ್ರೀರಾಮ ತವ ದಾಸತ್ವ ಕೊಡದಿರೆ ಸಾಸಿರಪಾಲಿಗೆ ನಿನ್ನ ಮಹತಪ್ಪು 3
--------------
ರಾಮದಾಸರು
ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು |ಸರ್ಪಶಯನನ ದೂತಾ ||ಇಪ್ಪತು ಒಂದು ಕುಭಾಷ್ಯ ಮುರಿದ | ರಾ ಮ |ತ ಪ್ರವರ್ತಕ ರಾಘವೇಂದ್ರ ಮುನಿಪ ಮಹಾ ಪ ಪ್ರತಿ ವರುಷಕೆ ಬಂದು ಸನುತಿಸಿ ಪೋಗು ಎಂದು |ನತ ಸ್ವಪ್ನದಲಿ ನೀ ಬಂದೂ ||ಹಿತದಿಂದ ಪೇಳಲು ರತನಾಗಿ ಧನದಿ ಮ |ರತು ಬಿಟ್ಟೆ ನಿಮ್ಮನು ಯತಿಕುಲೋತ್ತಮ ಇಂಥಾ 1 ಸ್ನಾನ ಸಂಧ್ಯಾನ ಸುಜಪತಪ ವ್ರತಹೋಮ |ಮೌನ ಮಾರ್ಗಗಳರಿಯೆ ||ಜ್ಞಾನಿಗಳಾನು ಸಂಧಾನ ಪೂರ್ವಕ ಪೂಜೆ |ಯಾನು ಮಾಡದೆ ದುಷ್ಟ ಮಾನವರೊಳಗಿದ್ದೆ 2 ಏಸು ಜನ್ಮದಿ ಬಂದಾ ದೋಷವ ಕಳದು ವಿ |ಶೇಷ ಸುಖವ ಕೊಡುವಾ ||ಈ ಸುವಾರ್ತಿಯ ಕೇಳಿ ಮೊರೆಹೊಕ್ಕೆ ಗುರು ಪ್ರಾ ||ಣೇಶ ವಿಠಲನ ದೂತಾ ಮತಪ್ರೀತಾ 3
--------------
ಗುರುಪ್ರಾಣೇಶವಿಠಲರು
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ ಚಪ್ಪರ ಶ್ರೀನಿವಾಸಪ. ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ ದರ್ಪಕತಾತನೆ ತಾ ಸಜ್ಜನಪ್ರೀತಅ.ಪ. ಮಾಧವ ನಿನ್ನಯ ಮಹಿಮೆ ತಿಳಿಯದಪ- ರಾಧವ ಮಾಡಿದೆ ದಾರಿದ್ರ್ಯದ ಪಾದ ದರುಶನದ ಗಾದಿಯ ಕಾಣದಾದೆ ನಾ ದ್ರೋಹಿಯಾದೆ1 ತ್ರಾಣವಿರುವಾಗ ಕಾಣಿಕೆ ಹಾಕಿದೆ ದೀನದಾರಿದ್ರ್ಯದ ಹೊತ್ತಿನಲಿ ಮೇಣದರಿಂದಲಿ ತೆಗೆದು ತೆಗೆದು ಪಂಚ ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ2 ಮಂದವಾರದಿಕ್ಕೊಂದೂಟವ ಸತ್ತ್ವ ದಿಂದಿರುವಾಗ ನಾ ನೇಮಗೈದೆ ಮಂದಭಾಗ್ಯ ಜ್ವರದಿಂದ ಪೀಡಿತನಾದ- ರಿಂದೆರಡೂಟವನೂ ಮಾಡಿದೆ ನಾನು3 ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ ಮಿನುಗುವ ಡಬ್ಬಿಯ ನಾ ಮಾಡಿದೆ ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು4 ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ ಗುಡ್ಡೆಯ ಮೇಲಿರುವ ಮಹಾನುಭಾವ5 ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು ಮಂಡೆಯೊಳುರಿವುದು ಖಂಡಿತದಿ ಪುಂಡರೀಕಾಕ್ಷನೆ ಕರುಣಾಮೃತರಸ ಕುಂಡದೊಳ್ ಮೀಯಿಸಯ್ಯ ವೆಂಕಟರಾಯ6 ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ ಕೆಡುಕು ಮಾಡುವುದೇನು ಜಡಜನಾಭ ಕಡಲಶಯನ ಲಕ್ಷ್ಮೀನಾರಾಯಣ ನ- ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ7
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪುಗಳೊಪ್ಪುವೆ ಎನ್ನಲಿ ತಿಮ್ಮಪ್ಪ ನೀ ಕ್ಷಮಿಸಿ ರಕ್ಷಿಸು ಕರುಣದಲಿ ಪ. ಬುದ್ಧಿ ಹೀನನಾಗಿ ಎದ್ದು ಹಾಸಿಕೆಯಿಂದ ಮೇಧ್ಯವಸ್ತುಗಳೆಲ್ಲ ತಂದು ತಿಂದು ಮಧ್ಯಾನದಲಿ ನಿದ್ರೆ ಗೈದು ಮೋಹದಲಿ ನಿ- ಸತಿ ಸಂಗ ಗೈದಿಹೆನು 1 ಗುರು ಹಿರಿಯರ ಕೆಟ್ಟ ಗರುವದಿಂದ ನೀ ಕರಿಸಿ ಲೋಭದೊಳತಿಥಿಗಳ ಬಿಟ್ಟು ಪರ ಧನವನು ನಾನಾ ತರದಿಂದ ಕೊಂಡು ಶ್ರೀ ವರ ನೀನೆ ಗತಿಯೆಂದು ಸ್ಮರಿಸಿಕೊಂಡಿಹೆನು 2 ಇಂಥಾನಂತಾನಂತ ಪಾತಕಿಗಳ ರಮಾ ಕಾಂತ ನೀ ಕ್ಷಮಿಸಲು ಶಕ್ತನೆಂದು ಚಿಂತಿಸಿ ನುಡಿದೆನು ಲಾಲಿಸಿ ಕಾಯೊ ದು- ರಂತ ಮಹಿಮ ವೆಂಕಟೇಶ ನೀ ದಯದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಮ್ಮ ಕೇಳಿದ್ಯಾ ಪರಬೊಮ್ಮ ನೀನಂತೊ ನಿತ್ಯ ತೃಪಿತನು ನೀನಂತಲ್ಲೊ ಕೃಷ್ಣಯ್ಯ ಸುತ್ತಿ ಬಂದೆನೆ ನಾಲಿಗಾರಿದೆ ಅಮ್ಮ ಹತ್ತು ಸಾವಿರ ಭಾನುಪ್ರಭೆಯುಳ್ಳವನಂತೊ ಕತ್ತಲೆಮನೆ ಪೋಗಲೊಬ್ಬನಂಜುವೆನೆ 1 ಪುರಾಣಪುರುಷ ನೀನಂತಲ್ಲೊ ಕೃಷ್ಣಯ್ಯ ಆರು ತಿಂಗಳು ಪೋದಾವಂದೆಲ್ಲ ಎನಗೆ ನಿರತಿಶಯ ಮಹಾ ಮಹಿಮೆ ಉಳ್ಳವನಂತೊ ಪೂರತಿ ಮನೆಯೊಳು ನಡೆಯಲಾರೆ 2 ಅಣ್ಣಾ ನೀ ಸರ್ವಜ್ಞನೆಂಬೋರೊ ಜಗವೆಲ್ಲ ಬೆಣ್ಣೆಯು ಸಿಗದಲ್ಲೆ ಪುಡುಕಿದರೆ ಸಣ್ಣವ ನೀನಲ್ಲವೆಂಬರೊ ಪಿರಿಯಾರು ಮಣ್ಣು ನಾ ಮೆದ್ದಾರೆ ಟೊಣದೆಲ್ಲವಮ್ಮ 3 ಜಗದುದರನು ನೀನಂತಲ್ಲೊ ಕೃಷ್ಣಯ್ಯ ನಗುಚಾಟಲು ಸಣ್ಣ ಪೊಟ್ಟಿ ನೋಡೆ ನಿಗಮಗಳು ನಿನ್ನ ತುತಿಯಂತೊ ಗೋವಿಂದ ನಗುವರಲ್ಲವೆ ಗೋಪ ನಾರಿಯರು 4 ಮೂಢ ದೈತ್ಯರಿಗೆಲ್ಲದಲ್ಲಣ ನೀನಂತೊ ಜಾಡ ಮೈಯನ ನೋಡಿ ಅಂಜುವೆನೆ ಬೇಡಿದ ಪುರುಷಾರ್ಥ ಕೊಡುವನು ನೀನಂತೊ ಬೇಡಿದೆ ನಮ್ಮಮ್ಮ ಅಮ್ಮೆ ಕೊಡೆಂದು 5 ಬೆಟ್ಟವ ನೀನೆತ್ತಿದಂತಲ್ಲೊ ಕೃಷ್ಣಯ್ಯ ಬಟ್ಟು ನಿನ್ನದು ನೋಡೆ ಎತ್ತಲಾರೆ ಘಟ್ಯಾಗಿ ವಿಪ್ರರು ಪೇಳೋದು ಪುಸಿ ಏನೊ ಹೊಟ್ಟಿಗೋಸುಗ ಸುಳ್ಳು ಪೇಳುವರೆ 6 ಏಸು ಲಕ್ಷ್ಮಣವಿವೆ ನೋಡಬೇಕೆಂದರೆ ಪುಸಿದ್ಯಾಕುಸರಾನು ನೋಡೆಂದನು ಪರಿ ಗೋಪಿಯ ಮೋಸಗೊಳಿಪ ಕೃಷ್ಣ ನಮ್ಮ ಸಲಹಲಿ 7
--------------
ವ್ಯಾಸತತ್ವಜ್ಞದಾಸರು