ಧಣಿ ನೀನಿರಲು ತಣಿಸಿ ಪರರ
ದಣಿವುದುಂಟೆ ಲೋಕದಿ ಪ
ಕ್ಷಣ ಕ್ಷಣದಲಿ ಪೊರೆವ ಚಿಂತಾ
ಮಣಿ ನೀನಿರೆ ತ್ರಿಭುವನಕೆ ಅ.ಪ
ಕರದಲಿರುವ ಮಣಿಯ ಬೆಲೆಯ
ನರಿಯದಂಥ ಮೂಢ ಜನರು
ಪರರಿಗಿತ್ತು ಹರುಷದಿಂದ
ಪುರಿಯ ಕೊಂಬ ತೆರದಲಿ 1
ದುರಿತ ದೂರ ಮಾಡಿ
ಸಾರ ಫಲಗಳನ್ನು ಕೊಡುವ
ನಾರಸಿಂಗ ಮಂತ್ರವಿರಲು
ಭೈರವನನು ಜಪಿಸುವಂತೆ 2
ಪಡೆದ ಜನಕನಲ್ಲದೆನ್ನ
ನುಡಿಗೆ ಒಲಿವರುಂಟೆ ಜಗದಿ
ಕಡಲಶಯನ ಎನ್ನ ಕರವ
ಪಿಡಿಯುತ ಪ್ರಸನ್ನನಾಗೋ 3