ಒಟ್ಟು 903 ಕಡೆಗಳಲ್ಲಿ , 96 ದಾಸರು , 717 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಿದ್ದರೇನಯ್ಯ ಜ್ಞಾನವಿಲ್ಲದಿರೆ ಶ್ರೀನಾಥನಂ ನೆನೆಯದಿಹ ಹೀನಮಾನವಗೇ ಪ. ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ ಅರಿತವರ ಸಂಗತಿಯೊಳ್ವೆರಯಲಿಲ್ಲವಲ್ಲಾ 1 ಹರಿಕತೆಯ ಭಕ್ತಿಯೊಳು ಪ್ರಕಟಮಾಡಿಸಲಿಲ್ಲ ಪರಿಪರಿಯ ಭೋಗದಿಂ ಮರುಳಾದೆನಲ್ಲ 2 ಬಂದೇ ದಾನವಿರದ ಧನವೇಕೆ ಪೇಳು ತಿಂದುಂಡು ಮಲಗುವಾನರಜನ್ಮ ಹಾಳು3 ಕರ ಚರಣ ಮೊದಲಾದ ಕರಣಂಗಳಂ ಪಡೆದು ಹರಿಪದವ ಪೊಂದುವಾ ಪರಿಯುಂಟೆ ಪೇಳು 4 ಆನಂದ ಸಾಮ್ರಾಜ್ಯ ನಿನಗಹುದು ಕೇಳು 5
--------------
ನಂಜನಗೂಡು ತಿರುಮಲಾಂಬಾ
ಏನು ಇದ್ದರೇನು ನಿನ್ನ ಸಂಗದ ಸಂಗಡ ಬಾರದೇನು ದಾನ ಧರ್ಮವ ಮಾಡಿದ್ದೊಂದು ಬೆನ್ನಬಿಡದದೇನು ಪ ಆಳು ಕಾಳು ಮಂದಿ ಮನುಷರು ಬಹಳವಿದ್ದರೇನು ಮಾಳಿಗೆ ಕೈಸಾಲೆ ಚಂದ್ರಶಾಲೆಯಿದ್ದರೇನು ನೀಲ ಮುತ್ತು ಕೆಂಪಿನುಂಗುರ ಕೈಯಲಿದ್ದರೇನು ಕಾಲನವರು ಎಳೆಯುತಿರಲು ನಾಲಗೆಗೆ ಬಾರದೇನು 1 ನೆಟ್ಟ ಹತ್ತಿಲು ತೋಟ ತೆಂಗು ಎಷ್ಟುತಾನಿದ್ದರೇನು ಮಹಿಷಿ ಸಾವಿರವಿದ್ದರೇನು ಪಟ್ಟೆ ಶಾಲು ಚಿನ್ನದ ಕುಳದ ಘಟ್ಟಿಯಿದ್ದರೇನು ಕಟ್ಟಿಯಿಟ್ಟ ಗಂಟುನಿನ್ನ ಸಂಗಡ ಬಾರದೇನು 2 ಲಕ್ಷವಿತ್ತ ಜಯಿಸಿ ರಾಜ್ಯ ಪಟ್ಟವಾದರೇನು ಕಟ್ಟಿದಾನೆ ಮಂದಿ ಕುದುರೆ ಹತ್ತಿರಿದ್ದರೇನು ನೆಟ್ಟನೆ ಜೀವಾತ್ಮ ಗೂಡ ಬಿಟ್ಟು ಪೋಗದೇನು ಕುಟ್ಟಿ ಕೊಂಡಳುವುದರೆ ಮಂದಿ ಎಷ್ಟು ಇದ್ದರೇನು 3 ಮಕ್ಕಳು ಮೊಮ್ಮಕ್ಕಳು ಹೆಮ್ಮಕ್ಕಳಿದ್ದರೇನು ಚಿಕ್ಕ ಪ್ರಾಯದ ಸತಿಯು ಸೊಸೆದಿಕ್ಕಳಿದ್ದರೇನು ಲೆಕ್ಕವಿಲ್ಲದ ದ್ರವ್ಯ ನಿನಗೆ ಸಿಕ್ಕುಯಿದ್ದರೇನು ಡೊಕ್ಕೆ ಬೀಳೆ ಹೆಣವ ಬೆಂಕಿಗಿಕ್ಕಿ ಬರುವರೋ 4 ಹೀಗೆ ಎಂದು ನೀನು ನಿನ್ನ ತಿಳಿದು ಕೊಳ್ಳಬೇಕೋ ಆಗೋದ್ಹೋಗೋದೆಲ್ಲ ಈಶ್ವರಾಜÉ್ಞ ಎನ್ನ ಬೇಕೋ ವೈರಿ ಕೋಣೆ ಲಕ್ಷ್ಮೀರಮಣನ ಭಜಿಸಬೇಕೋ ಯೋಗ ಮಾರ್ಗದಿಂದ ನೀನು ಮುಕ್ತಿ ಪಡೆಯ ಬೇಕೋ 5
--------------
ಕವಿ ಪರಮದೇವದಾಸರು
ಏನು ನಿನ್ನ ಹಿತವಾ ಪಡೆದ್ಕೋ ಯಲೆ ಜೀವವೇ | ಶ್ರೀನಾಥನಂಘ್ರಿ ನಂಬಿ ಸುಖಿಸಲಾರೆಯಾ ಪ ಶ್ವಾನ ಸೂಕರಾದಾ ನಾನಾ ಯೋನಿಯಲ್ಲಿ ತೊಳಲಿ ಬಂದು | ಮಾನವ ಜನ್ಮ ಪುಣ್ಯದಿಂದ ಬಂದುದಾ | ಭವ | ಕಾನನದ ಮಾರ್ಗವನು ಜರೆಯಲಾಪೆಯಾ 1 ಕಾಮ ಕ್ರೋಧ ಲೋಭವೆಂಬಾ ತಾಮಸದ ಬಲಿಗೆ ಸಿಲುಕಿ | ನೇಮಗೆಟ್ಟಾ ವ್ಯರ್ಥನಾದೆ ಹರಿಯ ನಾಮವಾ | ಪ್ರೇಮದಿಂದ ಸ್ಮರಿಸಿ ಭಕ್ತಿ ಸೀಮೆಯೊಳು ಪಡೆದು ಮುಕ್ತಿ | ಸಾಮರಾಜ್ಯ ಪದವಿಯನು ಸಾರಲಾಪೆಯಾ 2 ಮರದು ತನ್ನ ನಿದ್ರೆಯೊಳು ಅರಸು ರಂಕನಾಗಿವಂತೆ | ಶರೀರ ತಾನೆಂಬ ವಿದ್ಯಾವಳಿದು ಜಾಗಿಸೀ | ಗುರು ಮಹಿಪತಿಸ್ವಾಮಿ ಕಿರಣವೆಲ್ಲರೊಳು ಕಂಡು | ಶರಣರಾ ವೃತ್ತಿಯೊಳು ಬರಸಲಾಪೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಬಲ್ಲಿದನೋ ಹನುಮಂತ ನೀನು ಏನು ಬಲ್ಲಿದನೋ ಪ ಏನು ಬಲ್ಲಿದನಯ್ಯ ನೀನು ಜ್ಞಾನಮೂರುತಿ ಜಾನಕೀಶನ ಧ್ಯಾನ ಸುಖಸಾಮ್ರಾಜ್ಯದಲ್ಲಿ ಲೀನನಾಗಿ ಸುಖಿವೆ ಬಲವಂತ ಅ.ಪ ಶರಧಿ ಜಿಗಿದವನೋ ಭರದಿ ದುರುಳನ ಪುರವ ಸೇರಿದನೋ ನಿರುತ ದೊರೆಮಾತೆ ದರುಶನಾದನವನೋ ಪರಮವೀರನೋ ಧರೆಯ ಮಾತೆ ಕೃಪಾಪಾತ್ರನಾಗಿ ಪರಮಪಾವನ ವರವ ಪಡೆದು ಮರಳಿ ದುರುಳನ ವನವ ಸೇರಿ ಧುರವ ಜೈಸಿದಿ ಧೀರಮಾರುತಿ 1 ತಿರುಗಿ ಅಂಗದನ ಬಲವನ್ನು ಸೇರಿ ಸಾರ ಕಥನವನ್ನು ಅರುಹಿ ಮುಂದೆ ಪರಮಪಾವನನ ಚರಣಕಂಡಿನ್ನು ಇರಿಸಿ ಹರಿಯಾಜ್ಞಂಗೀಕರಿಸಿ ತ್ವರದಿ ದಕ್ಷಿಣಶರಧಿ ಹೂಳಿಸಿ ಭರದಿ ಲಂಕೆಗೆ ಮುತ್ತಿಗಿತ್ತಯ್ಯ 2 ಬುದ್ಧದೇಹದ ಕುಂಭಕರ್ಣನ ಕ್ಷುದ್ರ ಇಂದ್ರಜಿತುನ ಮತ್ತವನ ತಂದೆ ಬುದ್ಧಿಹೀನನ್ನ ಹತ್ತು ತಲೆಯವನ ಯುದ್ಧದಿಂದ ಬದ್ಧರಕ್ಕಸ ರೊದ್ದು ಬೇಗನೆ ಛಿದ್ರ ಮಾಡಿ ಜ ಗದ್ರಕ್ಷ ಶ್ರೀರಾಮ ಪಾದಪದ್ಮಕ್ಕೆ ಮುದ್ದು ಮುಖಿಯನು ತಂದುಕೊಟ್ಟೆಯ್ಯ 3
--------------
ರಾಮದಾಸರು
ಏನು ಮಹಿಮರೊ ನಮ್ಮ ಶ್ರೀ ಗುರುಗಳು ಶ್ರೀನಿಧಿಗೆ ಪರಮ ಪ್ರಿಯರೆನಿಸಿ ಮೆರೆಯುವರು ಪ. ಶಾಂತತ್ವವೆಂತೆಂಬ ಕವಚವನೆ ತೊಟ್ಟಿಹರು ದಾಂತತ್ವದಾ ನಡುಕಟ್ಟು ಕಟ್ಟಿಹರು ಸಂತೋಷ ಸುಖದಲಿ ಅಂತರಂಗದಿ ಹರಿಯ ಚಿಂತನೆಯ ಮಾಡುತಲಿ ಮುಕ್ತಿಪೊಂದಿಹರು 1 ವೈರಾಗ್ಯವೆಂತೆಂಬ ಆಯುಧವ ಧರಿಸಿಹರು ಸೇರಿದವರನು ಪೊರೆವ ಕಂಕಣವ ಕಟ್ಟಿ ನಾರಸಿಂಹನ ನಾಮ ಕರ್ಣಭೂಷಣ ಧರಿಸಿ ನಾರಾಯಣನ ಗುಣದ ಹಾರ ಧರಿಸಿಹರು 2 ಪರರಿಗುಪಕಾರವನೆಸಗುವ ಭುಜದ ಕೀರುತಿಯು ವರತತ್ವ ಅರುಹುವ ವನಮಾಲಿಕೆಯು ಸಿರಿ ಭಕ್ತಿಗುಣಗಳೆಂತೆಂಬೊ ವಸನಗಳು ಧರಿಸಿರುವ ಮಹಿಮರ ಸರಿಗಾಣೆ ಜಗದಿ 3 ಕುಂದದೆ ಭಕ್ತರನು ಪೊರೆಯುವ ಭಾರದ ಅಂದದಾ ಮುಕುಟ ಶಿರದಲ್ಲಿ ಧರಿಸಿ ತಂದೆ ಮುದ್ದುಮೋಹನದಾಸರೆಂದೆನಿಸುತ ಮಂದಜ್ಞ ಮನ ಪಾಪ ಪಾದುಕೆಯ ಮೆಟ್ಟಿಹರು 4 ಎಷ್ಟು ಹೇಳಲು ಸಾಧ್ಯ ಶ್ರೇಷ್ಠ ಗುರುಗಳ ಚರಿತೆ ಪಟ್ಟವಾಳ್ವರು ಜ್ಞಾನ ಸಾಮ್ರಾಜ್ಯವ ಕೆಟ್ಟ ಭವರೋಗವನು ಸುಟ್ಟು ಭಸ್ಮವ ಮಾಡಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ತೋರ್ವರು5
--------------
ಅಂಬಾಬಾಯಿ
ಏನು ಮಾಡಲಯ್ಯ ಬಯಲಾಸೆ ಬಿಡದು ಪ ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಅ ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ 1 ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ 2 ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ 3 ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ 4 ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿಕಕ್ಕುಲಿತೆಗೊಂಬುದಿದ ನೀನು ಬಿಡಿಸೊಸಿಕ್ಕಿಸದಿರು ಸಿಕ್ಕಿಗೆ ಆದಿಕೇಶವರಾಯದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ 5
--------------
ಕನಕದಾಸ
ಏನು ಮಾಡಿದರೇನು ನಾನಾ ಸಾಧನೆಗಳನು | ಜ್ಞಾನಿಗಳ ಕೂಡದನಕಾ ಮರುಳೇ ಪ ಸಕಲ ಸಾಮಗ್ರಿಯನು ತಂದಿರಲೇನು ಪಾ | ಕಕೆ ವಹ್ನಿ ಇಲ್ಲದನಕಾ ಮರುಳಾ 1 ಪ್ರಕಟವಾಗಿರಲು ನಯನಾದಿಂದ್ರಿಯಗಳಿಗೆ ಐಂ | ದ್ರಿಕ ಬೆಳಗವಿಲ್ಲದನಕಾ ಮರುಳೇ 2 ಹಸನ ಭೂಮಿಯ ಮಾಡಿ ಬೀಜ ಉಡಿಗಟ್ಟಿರಲು | ವಸೆದು ಮಳೆಯಾಗದನಕಾ ಮರುಳೇ 3 ಪ್ರಕಟಿಸಿದ ಅನ್ನ ಭಕ್ಷದಿ ಶಾಖಗಳಿರಲು | ಯಶವಾಜ್ಯ ಬಡಿಸದನಕಾ ಮರುಳೇ 4 ತುಂಬಿ ಕುಳಿತೇನು ದೊಡ್ಡವರೆಲ್ಲಾ ನಾವಿಯೊಳು | ಅಂಬಿಗನು ಬಾರದನಕಾ ಮರುಳೇ 5 ನಂಬಿ ಗುರು ಮಹಿಪತಿಸುತಸ್ವಾಮಿ ಶ್ರೀಚರಣ | ದಿಂಬವನು ಪಡೆಯದನಕಾ ಮರುಳೇ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಮಾಡಿದರೇನು ಫಲವೊ ಪ ನೀನು ಮಾನಸ ವೃತ್ತಿ ತಿದ್ದುವತನಕ ಅ.ಪ ಪೂಜೆ ಮಾಡಿದರೇನು ತೇಜಸ್ವಿ ಇರಲೇನು ರಾಜಧಿರಾಜ ಸಂಪೂಜ್ಯನೆನಿಸಲೇನು ರಾಜತಾಸನದಲ್ಲಿ ಕುಳಿತರೂ ರಾಜಿಸದ ಮಾನಸದ ವೃತ್ತಿಯು ಜೂಜಿನಲಿ ಪಣ ಕಟ್ಟಿದಂತಿದೆ 1 ಭಾರಿ ಪಲ್ಲಕ್ಕಿಯ ಏರಿದ ಅನುಭವ ನೂರು ಜನರು ಸ್ತುತಿ ಕೇಳಿದ ಅನುಭವ ಕೀರುತಿಯ ಪರಮಾವಧಿಯನು ಸೇರಿದೆನು ನಾನಿನ್ನ ಕರುಣದಿ ತೂರುವಂದದಿ ತೂರುತಿಹುದೊ 2 ವರಗಳ ಕೊಟ್ಟಾಯ್ತು ಹಿರಿಯನೆಂದೆನಿಸ್ಯಾಯ್ತು ಅರಿತು ಶಾಸ್ತ್ರಾರ್ಥವ ಗುರುತನ ಪಡೆದಾಯ್ತು ಮನದಲಿ ತೋರುತಿಹುದೋ ಕರದಲಿರುವ ಪ್ರಸನ್ನನೇ ಹೃತ್ಸರಸಿಜದಿ ನೆಲಿಸೆಲೊ ನಿರಂತರ 3
--------------
ವಿದ್ಯಾಪ್ರಸನ್ನತೀರ್ಥರು
ಏನು ಸಾಧಿಸುವದೇನರಿದು ಙÁ್ಞನಗಮ್ಯ ಗುರುಮಾರ್ಗದೊರೆಯಲರಿಯದು ಧ್ರುವ ನೀತಿಶಾಸ್ತ್ರವನೋದಿ ಪಂಡಿತನಾಗಲಿಬಹುದು ಶ್ರುತಿ ಸ್ಮøತಿಗಳ ತಿಳಿದು ತರ್ಕಸ್ಯಾಡಲಿಬಹುದು ಅತಿ ಬಲ್ಲತನದಿ ಯತಿಯನಿಸಿಕೊಳ್ಳಲಿಬಹುದು ಕ್ಷಿತಿಯೊಳು ಮೆರೆಯಲಿಬಹುದು ಸುತತ್ವ ಜ್ಞಾನಖೂನ ದೊರೆಯಲರಿಯದು 1 ಗೃಹತ್ಯಾಗಮಾಡಿ ಸಂನ್ಯಾಸಿ ಅಗಲಿಬಹುದು ದೇಹ ದಂಡಿಸಿ ವನವಾಸಿಯಾಗಲಿಬಹುದು ಗುಹ್ಯಗೊಪೆಯಲಿ ಸೇರಿ ತಪಸಿಯೆನಿಸಲಿಬಹುದು ಬಾಹ್ಯನಿಷ್ಠೆಯದೋರಬಹುದು ಸೋಹ್ಯ ಸದ್ಗುರುಮಾರ್ಗ ದೊರೆಯಲರಿಯದು 2 ಹಲವು ಕುಟಿಲದ ವಿದ್ಯವನು ಸಾಧಿಸಲಿಬಹುದು ಜಲದೊಳಗೆ ಮುಳಗಿ ಮಂತ್ರವನು ಜಪಿಸಲಿಬಹುದು ಸೀಲಿ ಸಾಲ್ವಳಿಯ ಸುಶಕುನ ಪೇಳಲಿಬಹುದು ಮ್ಯಾಲೆ ಜನರಂಜಿಸಲಿಬಹುದು ಮೂಲ ಮುಕ್ತಿ ಕೀಲ ತಿಳಿಯಲರಿಯದು 3 ಪೃಥ್ವಿಯನೆ ತಿರುಗಿ ಬಹುಭಾಷೆಯಾಡಲಿಬಹುದು ಮತಿವಂತನಾಗಿ ಕವಿತ್ವಮಾಡಲಿಬಹುದು ಗೀತರಾಗವು ಜಂತ್ರದೊಳು ನುಡಿಸಲಿಬಹುದು ಚದುರಂಗ ಪಗಡ್ಯಾಡಿ ಗೆಲಬಹುದು ಮತ್ತ ಮನ ಬೆರೆವ ಘನಸುಖವು ದೊರೆಯಲರಿಯದು 4 ಶೂರತನದಲಿ ಪರಾಕ್ರಮ ಹಿಡಿಯಲಿಬಹುದು ಧೀರಗುಣದಲಿ ಮಹಾಧೀರನೆನಿಸಲಿಬಹುದು ನೂರ್ಬಲದ ಪೌರುಷಲಿ ರಾಜ್ಯನಾಳಲಿಬಹುದು ಸಿರಿಸೌಖ್ಯದೊಳಿರಲಿಬಹುದು ಸಾರ ಸುಜ್ಞಾನಸುಖ ದೊರೆಯಲರಿಯದು 5 ಪರ್ವತಾಗ್ರದಲೇರಿ ಧರೆಗೆರಗಲಿಬಹುದು ಹರಿವ ನದಿಯನೆ ಹಾರಿ ಹೋಗಲಿಬಹುದು ಮೊರೆವುತಿಹ್ಯ ಸರ್ಪದಾ ವಿಷವು ಧರಿಸಲಿಬಹುದು ಕ್ರೂರ ಮೃಗದೊಳು ತಿರುಗ್ಯಾಡಬಹುದು ಪಥ ದೊರೆಯಲರಿಯದು 6 ಪೊಡವಿಯೊಳು ಹವಲು ವಿದ್ಯವ ಸಾಧಿಸಲುಬಹುದು ಬಡದ ಬವಣಿಯ ಬಟ್ಟು ನಾಡ ಶೋಧಿಸಬಹುದು ಗೂಢ ವಿದ್ಯದ ಮಾತು ಆಡಿ ತೋರಿಸಬಹುದು ಹಿಡಿದು ಮೌನವ ಕೂಡಬಹುದು ಮೂಢಮಹಿಪತಿ ಒಡಿಯನ ಕೃಪೆ ಪಡೆವದೆ ದುರ್ಲಭವು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದುಸುರುವೆ ಈ ನವರಾತ್ರಿಯಾ | ಸ್ವಾನಂದ ಸುಖಮಯ ಮಹಿಪತಿ ಚರ್ಯಾ ಪ ಮೊತ್ತ ಜನರು ಕೂಡಿ ಭಿತ್ತಿ ಬಾಗಿಲುಗಳ ಬಣ್ಣದಿ ನಿಚ್ಚಳ | ತೆತ್ತ ಮಾಡಳರವಿ ತಳಿಲು ತೋರಣದಿ | ಮತ್ತೆ ದೇವಾಲಯ ಮಂಡಿತ ಜಗಲಿಯಾ | ಸುತ್ತ ಕದಳೀ ಕಂಭದಿ ಮ್ಯಾಲಿಯ | ಉತ್ತಮ ಮಂಟಪದಿ ತರಗು ತೆಂಗು | ಉತ್ತತ್ತೀ ಬಹು ಓಲವೀ ಕಟ್ಟಿಹ | ವತ್ತೊತ್ತಿ ಥರ ಥರದಿ ನಮ್ಮಯ್ಯಾನಾ 1 ಕಡಲೆ ತಂಡುಲ ಗುಡ ಶರ್ಕರವ ಮತ್ತೆ ಗೂಡಿಹ ಸಮಸ್ತ | ಘೃತ ವಡವೆಯ ತುಂಬಿಹ ಸ್ಟೈಪಾಕ ಮಾಡಲಿ | ತಡೆಯದೆ ಕೊಡುತಿಹರು ಓಡ್ಯಾಡಲು | ಅಡಿಗಡಿಗೊಬ್ಬೊಬ್ಬರು ಆಜ್ಯವ | ಧೃಡ ಭಕ್ತಿಯುಳ್ಳವರು ನಮ್ಮಯ್ಯನಾ 2 ಏಕೋ ಭಾವನೆಯಲಿ ಯಾತ್ರೆಯ ಸದ್ಭೋಧಾಸಕ್ತರು | ಬೇಕಾದಿ ಸಾಕುವದೇವ ದೇವರಾ ಸಾರಿ ಸುಜನ ವಿಂಡು | ಹಾಕಿ ಸಾಷ್ಟಾಂಗದಲಿ ಪರಿ ಲೋಕ ನೆರೆಯುತಿರಲಿ ನಮ್ಮಯ್ಯನಾ 3 ಮೊದಲಿನ ದಿವಸದಿ ಸಂಧ್ಯಾವಂದನಜಪಾನುಷ್ಠಾನಾ | ವಿದಿತ ಬಂಗಾರ ವೆಳಿಯಲಿ ಬರೆದ ಚದುರ | ಝಗ ಝಗ ಅದು ನಕ್ಷತ್ರ ಮಾಲಿ ನಮ್ಮಯ್ಯನಾ 4 ಪಡದಿಯ ಸೋಂಪಿಲಿ ಬಹು ವಿಚಿತ್ರ | ಸಡಗರದಲಿ ದೇವ ಸಂಪುಟ ಮೆರೆವಾ| ವಡೆಯನ ಏನೆಂದ್ಹೇಳಲಿ ನಮ್ಮಯ್ಯಾನಾ 5 ಸನ್ನುತ ಗಂಗೆಯ ಸಲಿಲವು ಮುನ್ನ ಪಂಚಾಮೃತ ದಾಗಲು ಅಭಿಷೇಕ | ಸುಗಂಧವನ್ನು ಅರ್ಪಿಸಿ ಚಲ್ವದಾ ಸಾಲಾದಾ | ಘನ್ನ ದೀಪದೆಡೆ ಬಲದಾ ನಮ್ಮಯ್ಯನಾ 6 ಪರಿಮಳ ದಿಂಡಿಗೆ ಪರಿ ಪುಷ್ಪದಾ ಪಸರಿಕೆ ಬಹುಳವಾ | ತರುವಾರಾ ಧೂ ಬಲವೆಡಾ ಊದುಬತ್ತಿಯ ಗಿಡಾ | ನೆರೆ ಏಕಾರತಿಯಾಗಲಿ ನೈವೇದ್ಯ ಹರಿವಾಣವನು | ಬರಲಿ ಹರಿಗೆ ಪ್ರತ್ಯಕ್ಷದಲೀ ನಮ್ಮಯ್ಯನಾ 7 ವಾದಾ ಪೂಗೀ ಫಲಾ ಹರಿವಾಣ ಆರತಿ ಪೂರಣಾ | ಛಂದ ಭೇದಿಸಿ ಘನತಾಳಾ ಬಲು ಶಂಖ ನಾಮ ಘೋಷದಿತಿಂತ | ರಾದವರು ಪಾಡಲೀ ನೀರಾಂಜನ | ಸಾದಿಪ ಸಮಯದಲಿ ಕಣ್ಣಿನಲಿ ನಮ್ಮಯ್ಯನಾ 8 ಮೆರೆವ ಷೋಡಷದಿಂದ ಹರಿತೀರ್ಥಕೊಳ್ಳಲು ಹರುಷದಿ ಜನಗಳು | ಕರುವೇದ ಘೋಷ ಮಾಡು ಮಾಡಿ ಕುಳ್ಳಿರೆ | ಪರಮಾನ್ನ ಪರಿ ಶಾಕಗಳು ಸೂಪಘೃತ | ಗಿರಿಸಿಹ ದೀಪಗಳು ನಮ್ಮಯ್ಯನಾ 9 ಪ್ರೌಢದಿ ಹರಿ ನಾಮಾ ಆಡಲೇನದು ತೃಪ್ತಿ ಆಯಿತು ಉಂಡು | ನೀಡೆ ವೇದೋಕ್ತದ ನುಡಿ ಆಶೀರ್ವಾದ | ಮಾಡುತ ಬ್ರಾಹ್ಮರು ಮನೆಗೆ ಹೋಗುವರು | ಗಾಡ ಮದ್ದಲೆ ಸದರು ಸಭೆಯೊಳುಗೂಡಿ | ಒಡೆಯನಿದಿರು ಹರಿಯ ಕೊಂಡಾಡಿ ಆರತಿಯತ್ತೀರ ನಮ್ಮಯ್ಯನಾ 10 ಮುಂಚಿಲಿ ನಡೆಯಲು ಅರ್ಚನೆಯಾ ಅರ್ತಿ | ಸಂಭ್ರಮದಲಿ ನೋಡಿ ಸದ್ಗತಿ ಸೂರ್ಯಾಡಿ | ಕೊಂಬರು ಸ್ವಸ್ಥಲ ಕುರಿತು ಆಜ್ಞೆಗಳ | ಇಂದಿಲ್ಲ ಆನಂದದೀ ಈ ಮಹಿ ಮಾಡಂಬರೆನ್ನ ಮುಖದಿ ನುಡಿಸಿದ | ಶಂಭು ಮಹಿಪತಿ ದಯದಿ ನಂದನ | ಬೊಂಬಿ ಸೂತ್ರ ದಂದದಿ ನಮ್ಮಯ್ಯನಾ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದ್ಹೇಳಲಿ ಸ್ವಾನಂದ ಘನ ಸುಖವು ಧ್ರುವ ಮಾತಿನಂತಲ್ಲ ಜ್ಯೋತಿರ್ಮಯದ ಸುಖ ನೇತಿ ನೆÉೀತಿವೆಂಬುದು ಶ್ರುತಿವಚನ 1 ಹೋಲಿಕೆಯ ಮಾತಿಗಿದು ಕೇಳು ಸಿಲುಕುವುದಿಲ್ಲ ಮೂಲ ತಿಳಿದವನೆ ಬಲ್ಲ ಮ್ಯಾಲೆ ಮಂದಿರದ 2 ಅಂಜನೆ ಇಟ್ಟ ಗುರು ಕೃಪೆಯಿಂದ ನಿಜ ಗುರುತು ಕಂಡವನೆ ಬಲ್ಲ ಹರಿಮಹಿಮೆಯ 3 ಸ್ವಾನುಭವದ ಸುಖಜ್ಞಾನಿಗಳಿಗಲ್ಲದೆ ನೀನು ನಾನೆಂಬವರಿಗೆ ಖೂನ ತಿಳಿಯದು 4 ಮನಕರಿಗಿ ಮಹಿಪತಿ ಘನ ಬೆರೆದ ಗುರುತ ಏನೋ ಎಂತೋ ತಿಳಿ ಮಾತ ಆನಂದಭರಿತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದ್ಹೇಳಲಿ ಸ್ವಾನಂದ ಮಹಿಮೆಯು ಏನೆಂದ್ಹೇಳಲಿ ಮಾ ಧ್ರುವ ವೇದಲ್ಲ ವಾದಲ್ಲ ಭೇದಮಾಡುವದಲ್ಲ ಸಾಧಕರಿಗೆ ತಾ ಸಿಲುಕುದುಮಾ ಓದಲ್ಲ ಶೋಧಲ್ಲ ಗಾದಿಯ ಮಾತಲ್ಲ ಭೇದಿಸಿದರೆ ತಾನು ತಿಳಿವದು ಮಾ 1 ಧ್ಯಾನಲ್ಲ ಮೋನಲ್ಲ ಸ್ನಾನ ಸಂಧ್ಯಾನಲ್ಲ ಙÁ್ಞನಹೀನರಿಗಿದು ತಿಳಿಯದು ಮಾ ನಾನಲ್ಲ ನೀನಲ್ಲ ನಾನುಡಿದ ಮಾತಲ್ಲ ಅನುಭವ ಸಿದ್ಧನು ಬಲ್ಲನು ಮಾ 2 ಸೇವಲ್ಲ ಸೂತ್ರಲ್ಲ ಬಾಹ್ಯನೋಟಿಕೆ ಅಲ್ಲ ಮಹಿಪತಿ ನಿನ್ನೊಳು ತಿಳಿವದು ಮಾ ಕೌತುಕವನು ಕಂಡು ಮಹಾ ಗುರುಕೃಪೆಯಿಂದ ಸಾಯೋಜ್ಯ ಸದ್ಗತಿ ಪಡೆವದು ಮಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದ್ಹೇಳಲಿ ಸ್ವಾನುಭವದ ಸುಭೋಗ ಧ್ರುವ ಸುಖಗರುತದ ಶಿಖಾಮಧ್ಯ ಸಂತ್ರಾಧಾರಿ ಬೇಕಾದರೆ ನೋಡಿ ಷಕಚಕ್ರವೇರಿ ಏಕೋಮಯವಾಗ್ಯದ ವಸ್ತು ಒಂದೇ ಸರಿ ಲೋಕಪಾಲಕಸ್ವಾಮಿ ತಾ ಸಹಕಾರಿ 1 ಜುಮ್ಮು ಜುಮ್ಮುಗುಡುತದೆ ರೋಮಾಂಚಗಳು ಧಿಮಿ ಧಿಮಿಗುಡುತದೆ ನಾದಧ್ವನಿಗಳು ಕ್ರಮ ತಿಳಿದರೆ ಭಾಸುತದೆ ಸುಳಹುಗಳು ಸಂಭ್ರಮವಾದರು ಅನುಭವಿಗಳು 2 ಕಳೆ ಮಳೆಮಿಂಚು ತುಂಬೇದ ಬಲು ಬಹಳ ಹೊಳೆಯುತಲ್ಯದೆ ಸ್ವಸುಖದ ಕಲ್ಲೋಳ ಝಳಝಳಿಸುತ ಜ್ಯೋತಿರ್ಮಯ ಥಳಥಳ ತಿಳಕೊ ಮಹಿಪತಿ ಗುರುದಯದ ಸುಫಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಲೆ ಸಖಿ ವಾನರ ಮುಖಿ ನೀನು ಒಳ ಒಳಗೆ ಮಾಡಿದ ಯೋಚನೆ ಪ ಹಳೆಯ ಜೌಳಿಗಳು ಘಳಿಲನೆ ತಂದಿಟ್ಟು ಘನವ ಪೇಳಿಕೊಂಬೆ 1 ಭಕ್ಷ್ಯ ಭೋಜ್ಯ ನಿನ್ನ ಕುಕ್ಷಿ ತುಂಬಿದಾರು ಲಕ್ಷ್ಯವಿಲ್ಲದೆ ನಮ್ಮಾ- ನಾಕ್ಷೇಪಿಸುತ್ತಿರುವೆ 2 ಹಪ್ಪಳಾವು ಹತ್ತು ಹೋಳಿಗೆ ಇಪ್ಪತ್ತು ತಪ್ಲೇಲಿ ತಿಳಿ ತುಪ್ಪ ತಪ್ಪದೆ ಮಾಯವಾಯ್ತು 3 ಬಡವರಮ್ಮ ನಾವು ಬಡಿವಾರವೆಮಗಿಲ್ಲ ನಡುಬೀದಿಗೆ ಕಾಲ- ಚಾಚದಿರತ್ತಿಗೆ 4 ಜಲಜಾಕ್ಷ ಗುರುರಾಮ | ವಿ- ಠಲನಾ ಸ್ಮರಿಸುತ್ತಾ ಕಲಹಕಾರಿ ನೀನು ಎಲೆಯ ನೋಡಿವುಣ್ಣೆ 5
--------------
ಗುರುರಾಮವಿಠಲ
ಏಳು ಚೆನ್ನಿಗರಾಯ ನನ್ನೀನಾಗರ ಏಳು ಪ. ಏಳೆನ್ನ ಕಣ್ಮಣಿಯೇ ಕಾಳಿಮರ್ಧನಕೃಷ್ಣ ಅ.ಪ. ಮಾರನೆಯ ದಿನದಲ್ಲಿ ನೀ ಹಾರುತ್ಯಾರುತ ಬಂದು ಸೀರೆ ಸೆರಗನು ಪಿಡಿದು ಬೆಲ್ಲವನು ಬೇಡಲು ಕೇಳಿಕೊಳ್ಳವುದೇಕೆ ಹಗಲುಗಳ್ಳನೆ ಹೋಗು ಒಳಿತು ಚೋರರಿಗೆಲ್ಲ ಕೇಳಿ ಕೊಳಲೆಂದೆ 1 ಚೋರ ನೀನೆಂದುದಕ್ಕೆ ಈ ಸೀರೆಯನು ಜರಿವರೇ ಚೋರನಲ್ಲವೇ ನೀನು ಮಧ್ವರ ಹೃದಯ ಕದ್ದ 2 ಜಾರ ನೀನೆಂದುದಕೆ ಕರೆಕರೆಗೊಳಿಸುವರೆ ಜಾರೆಯಾಸಹುದು ನೀನಲ್ಲ ಜಾರರಮಣ 3 ಕಂಡದನು ಆಡಿದರೆ ಕಡುಕೋಪವ್ಯಾತಕೆ ಹಿಂಡು ಗೋವಳಲೊಡೆಯ ಪುಂಡನೀನಹುದು 4 ಮಜ್ಜನವ ಮಾಡಿಸುವೆ ಸುಳಿಗುರುಳ ತಿದ್ದುವೆ ಸಜ್ಜಾದ ಚಂದನದ ಚಂದ್ರಮನ ಫಣಿಯಲಿಡುವೆ 5 ಗೊಲ್ಲಬಾಲರು ಈಗ ಕರೆಯಲು ಬರುವರು ಮೆಲ್ಲಗೆ ಎದ್ದು ನೀ ಬೆಲ್ಲವನು ಮೆಲ್ವ ಬಾಲಕೃಷ್ಣ 6 ಮಧ್ವೇಶ ನೀನೇಳು ಮುದ್ದು ಮೊಗದವನೆ ಏಳು ಹದ್ದುವಾಹನ ಏಳೂ ಹಾಲಕುಡಿಯೇಳು 7 ಹಾಲು ಬೆಲ್ಲವ ಸವೆದು ಸುಧೆಯನು ಸುರಿಸೇಳೋ ಪಾಲಗಡಲ ಶಯನ ಶಯನದಿಂದೇಳೋ 8 ಮುನಿಸು ಏಕೇಕೆ ರಮಣ ಮುಸುಕನು ತೆಗೆದೇಳು ತಿನಿಸು ತಿಂಡಿಯ ಕೊಡುವೆ ತನಿವಣ್ಣ ಕೊಡುವೆ 9 ಚಿನ್ನದಾ ಒಂಟೆಳೆಯ ರನ್ನಧಾಭರಣ ಭಿನ್ನ ಭಿನ್ನವಾದ ಆಭರಣಗಳಿಡುವೆ ಕೃಷ್ಣ 10 ಹೆಚ್ಚೇನು ಪೇಳಲಿ ಮಗಸಾಮ್ರಾಜ್ಯದ ದೊರೆತನವು ನಿನ್ನದೊ ಸ್ವಚ್ಚಾಗಿ ಹೇಳುವೆನು ಫಲಿಸೇಳು ಕೃಷ್ಣಾ 11 ಬಾಧಿಸದೆ ಜಾಗವನು ಬಿಟ್ಟೇಳೊ 12 ಏನು ಬಯಸಿದ ಕೊಡುವೆ ಮನಬಯಕೆ ಪೂರೈಸೊ ಮನದನ್ನನೇ ಎನ್ನ ಕಾಳಿಮರ್ಧನಕೃಷ್ಣ 13
--------------
ಕಳಸದ ಸುಂದರಮ್ಮ