ನರಹರಿ ದೀನದಯಾಳೊ ನರಹರಿ ಪ
ನರಹರಿ ಕಾಯೊ ನೀಯೆನ್ನ | ಮಹಾ
ದುರಿತಂಗಳ ಮರಿಯೊ ಮುನ್ನ | ಆಹ
ಪರಮ ಭಕುತಿಲಿ ನಿನ್ನ ಚರಣಾರಾಧನೆ ಮಾಳ್ಪೆ
ವರಭಯ ಹಸ್ತವೆನ್ನ ಸಿರದಲಿಡುತಲಿ ಅ.ಪ.
ಹಿಂದೆ ಪ್ರಹ್ಲಾದದೇವನಂದು | ಪಿತನ
ಬಂಧನದೊಳು ಸಿಲ್ಕಿ ಬಹುನೊಂದು | ತಾನು
ಸಂಧ್ಯಾಕಾಲದೊಳಾಗ ನಿಂದು ನಿನ್ನ
ಒಂದೇ ಮನದಿ ಸ್ತುತಿಸೆ ದಯಸಿಂಧು | ಆಹ
ಮಂದಮತಿಯ ಹಿರಣ್ಯಕನುದರವ ಬಗೆದು
ಛಂದದಿ ಕರುಳ ಮಾಲೆಯ ಧರಿಸಿದ ಧೀರ 1
ಕಂದು ಕೊರಳನಂತರ್ಗತದೇವ | ಸಕಲ
ವೃಂದಾರಕ ವೃಂದವ ಕಾವ | ಭಕುತ
ಸಂದಣಿಗೆ ಬೇಡಿದನೀವ | ಭವ
ಬಂಧನವೆಂಬ ವಿಪಿನಕೆ ದಾವ | ಆಹ
ಎಂದಿಗೆ ನಿನ್ನಯ ಸಂದರುಶನವೀವೆ
ಮಂದಮತಿಯಾದೆನ್ನ ಮುಂದಕೆ ಕರೆಯೊ 2
ನೊಂದೆ ಸಂಸಾರದೊಳು ಮಾಲೋಲ | ಕರುಣ
ದಿಂದ ನೋಡೆನ್ನ ದೀನಜನಪಾಲ | ದಿವ್ಯ
ಸುಂದರ ಮೂರುತಿಯೆ ಗೋಪಾಲ | ಪವನ
ವಂದಿತ ಶ್ರೀ ರಂಗೇಶವಿಠಲ | ಆಹ
ಬಂದೆನ್ನ ಹೃದಯಮಂದಿರದಿ ನೆಲೆಯಾಗಿ ನೀ
ನಿಂದು ಸಲಹೋ ಎನ್ನ ಕುಂದುಗಳೆಣಿಸದೆ 3