ಒಟ್ಟು 310 ಕಡೆಗಳಲ್ಲಿ , 58 ದಾಸರು , 236 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಶಿಂಗಾರ್ಯರ ಸುತನಮೋ ನಮೋ ಪ ಮಂಗಳಕರ ಕುಲಿಶಾಂಗ ಮತಾಂಬುಧಿ ತಿಂಗಳಸುಗುಣಿತ ನಮೊ ನಮೊ ಅ.ಪ ತುಂಗಮಹಿಮ ದ್ವಿಜ ಪುಂಗವ ವಿಜಿತಾ ನಂಗ ಶರ ದಯಾಪಾಂಗ ನಮೋ || ಡಿಂಗರೀಕ ಜನಪಾಲ ನಮೊ ಭವ ಭಂಗ ವಿದಾರಣ ನಮೊ ನಮೊ 1 ಜಾತರೂಪ ಶಯ್ಯಾತ್ಮಜ್ಯಾತೆ ಹರಿ | ದೂತ ಪ್ರಹ್ಲಾದರನುಜ ನಮೊ || ಪೂತುರೆ ಘನ ಸತ್ವಾತಿಶಯದ ಪ್ರ ಖ್ಯಾತ ದಿನಪ ಪ್ರಸೂತ ನಮೊ 2 ಪಾತಕಾದ್ರಿಜೀಮೂತ ಭ್ರಾತ ಪಣಿ ಪುರಂದರ ಪೋತನಮೊ ಪೂತಗಾತ್ರ ಶುಭದಾತ್ರ ಭರಿಕ್ಷ ಣ್ಮಾತಿರಿಷ್ಯಶ್ವ ಸುಪ್ರೀತ ನಮೊ 3 ಮೌನಿವರ್ಯ ವರದೇಂದ್ರ ಪಾದಾಂಬುಜ ರೇಣು ವಿಭೂಷಿತ ಪಾಲಯಮಾಂ ಧೇನು ನಿಧೆ ದೇವಾಂಶಜ ಪರಮತ ಪಾವಕ ಪಾಲಯಮಾಂ 4 ಮಾನವಿ ಕ್ಷೇತ್ರನಿಕೇತನ ಸನ್ನುತ ಮಾನಿತ ಗುರುವರ ಪಾಲಯ ಮಾಂ ಧೇನುಪಲ ವಿಜಯರಾರ್ಯ ಕೃಪಾನ್ವಿತ ಧೀನೋದ್ಧರಣ ಫಾಲಯಮಾಂ ಮಾನದಿ ಕ್ಷೇತನಿಕೇತನ ಸನ್ನುತ ಮಾನಿತ ಗುರುವರ ಪಾಲಯಮಾಂ ಜ್ಞಾನನಿಧೆ ದೇವಾಂಶಜ ಪರಮತ ಪಾವಕ ಪಾಲಯ ಮಾಂ 5 ಶೌರಿಕಥಾಮೃತ ಸಾರಗ್ರಂಥ ಕೃತ ಸೂರಿ ಕುಲೋತ್ತುಮ ಜಯ ಜಯಭೋ ಧಾರುಣಿ ಸುರಪರಿವಾರ ನಮಿತ ಪದ ಚಾರುಸ್ತಂಭಾಲಯ ಜಯ ಜಯ ಭೀ 6 ಮಂದವೃಂದ ಮಂದಾರ ಭೂಜನತ ಬಂಧೋ ಭಯಾಪಹ ಜಯ ಜಯ ಭೋ ನಂದಜ ಶಾಮಸುಂದರಾಂಘ್ರಿ ಅರ ವಿಂದ ಮರಂದುಣಿ ಜಯ ಜಯ ಭೋ 7
--------------
ಶಾಮಸುಂದರ ವಿಠಲ
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ
ಮೂರು ತುಂಡಾದ ಹನುಮನ ನೋಡಿರÉ ಪ. ಮಾರುತಿಯ ಮರ್ಮವಿದರಿಂದರಿಯರೆ ಅ.ಪ. ಮೊದಲ ಕಟ್ಟೆಯ ದಡದಿ ಮೊದಲಿದ್ದ ಹನುಮನ ವಿಧಿವಶದಿ ಖಳರು ಕಿತ್ತೊಗೆಯೆ ಮದದಿ ಮೊದಲು ಕಟ್ಟೆಯು ನಿಲದೆ ಒಡೆದು ಪರಿಯಲು ತುಂಗೆ ಅದರೊಳಡಗಿದ್ದ ಕೆಲಕಾಲವೀ ರಾಯ 1 ದೇವರಿಲ್ಲದ ಭವನ ಕಂಡು ನಿಂದು ತಾವೆ ಸ್ಥಾಪಿಸುವೆವೆಂಬನಿತರೊಳು ಸ್ವಪ್ನದಲಿ ಪಾವಮಾನಿಯು ತನ್ನ ಇರುವು ತೋರಿದನೊ 2 ಬರುತ ಕಟ್ಟೆಯ ದಿಡಗಿನಲ್ಲಿ ನಿಂದು ಕರೆವಡೆ ಬರಲು ಮೂರು ತುಂಡು ಹನುಮರಾಯ ತರುತ ಸ್ಥಾಪಿಸಿ ಬಂಧಿಸಲು ದ್ವಾರವಾರದಲಿ ಕರನ್ಯೂನ ಸಾಕಾರ ಸರಿಯಾದನೀತ 3 ಮೂರು ಯುಗದಲಿ ತಾನು ಮೂರು ರೂಪವ ತಾಳಿ ಮೂರು ಮೂರ್ತಿಯ ಭಜಿಸಿ ಮೂರು ಆಶ್ರಮದಿ ದುರುಳ ಮತಗಳ ಮುರಿದು ಮೂರುದಶ ಏಳು ಗ್ರಂಥಗಳ ಸ್ಥಾಪಿಸಿದ 4 ಮೂರು ಗುಣಬದ್ಧ ಮೂರು ದೇಹದಿ ನೆಲಸಿ ಮೂರು ವಿಧ ಜಪದಿಂದ ಮೂರ್ಗತಿಯನೀವ ಮೂರು ಸ್ಥಾನದಿ ಮೂರು ಕೋಟಿರೂಪವ ಧರಿಸಿ ಮೂರು ಲೋಕದಿ ಮೆರೆವ ಮಾರುತಿಯ ಚರ್ಯ 5 ಮೂರು ನಾಡಿಯ ಮಧ್ಯೆ ಮೂರೈದುದಲ್ಲಿ ತೋರುವೊ ಹರಿರೂಪ ತೋರಿಸುವನು ಮೂರು ಅವಸ್ಥೆಗಳ ವಿೂರಿದ ಜಾಗ್ರತನು ಮೂರು ಕಾಲದಿ ಜೀವರನು ಕಾಯುವನ 6 ಮೂರು ಮಾರ್ಗಗಳಿಂದ ಮಾರುತಿಯ ತೋರುವೊ ದಾರಿಯಿಂದಲಿ ಹರಿಯ ಸಾರಿ ಭಜಿಸೆ ಸೇರಿಸುವ ಗೋಪಾಲಕೃಷ್ಣವಿಠ್ಠಲನ ಪುರವ ತಾರಿಸುವ ಭವವನಧಿ ಮೊದಲಗಟ್ಟೇಶ7
--------------
ಅಂಬಾಬಾಯಿ
ಮೊದಲನೇ ಅಧ್ಯಾಯ ಪಾತಿವ್ರತ್ಯ ಮಹಾತ್ಮೆ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ನಿರ್ದೋಷ ಗುಣಪೂರ್ಣ ವಿಷ್ಣು ಸರ್ವೋತ್ತಮ ಸ್ವತಂತ್ರ ಶ್ರೀದ ಶ್ರೀಪತಿ ಜಗಜ್ಜನ್ಮಾದಿಕರ್ತನು ಸಚ್ಛಾಶ್ರ - ದಿಂದಲೇ ವೇದ್ಯನು ಮೂರು ವಿಧ ಜೀವರಿಗೆ ಯೋಗ್ಯ ಸಾಧನಕೆ ಗತಿಯ ಮಾಡುವ ಅವತಾರ ಲೀಲಾ 1 ಸುಪುಷ್ಪಭವ ಬ್ರಹ್ಮದೇವನೋಳ್ ತತ್ ಶಬ್ದವಾಚ್ಯನು ಶ್ರೀ ಪುರುಷೋತ್ತಮನೆ ಪ್ರಜಾಸೃಷ್ಟಿ ಮಾಡಿಸುವನು ತ್ರಿಪುರಾರಿ ಭಸ್ಮಧರ ರುದ್ರನೋಳ್ ತನ್ನಾಮದಲಿ ಶ್ರೀ ಪುರುಷೋತ್ತಮನೇ ಸಂಹಾರ ಮಾಳ್ಪ ಅಂತರ್ಯಾಮಿ 2 ಉರುಜ್ಞಾನ ಸುಖ ಬಲಾದ್ಯಮಿತ ಗುಣಧಾಮನ ಕರ ಚರಣಾದ್ಯವಯವಕ್ಕೂ ಅವಗೂ ಅವನು ಧರೆಯಲ್ಲಿ ಅವತಾರ ಮಾಡುವ ರೂಪಗಳಿಗೂ ಪರಿಪೂರ್ಣವಾಗಿ ಅಭೇದ ಭೇದಲೇಶವೂ ಇಲ್ಲ 3 ದ್ವಿ ಷೋಡಶ ಶುಭಲಕ್ಷಣ ತನುವುಳ್ಳ ಬ್ರಹ್ಮಗೂ ವಿಷಕಂಠ ರುದ್ರಗೂ ಪರಸ್ಪರ ಭೇದ ಅಂತಸ್ಥ ವಿಷ್ಣುಗೂ ಇವರುಗಳಿಗೂ ಭೇದವು, ಅಂತರ್ಯಾಮಿ ವಿಷ್ಣು ಒಬ್ಬನೇ ದ್ವಿರೂಪದಲ್ಲಿ ಇವರಲ್ಲಿಹ 4 ಹತ್ತಾವತಾರ ಮತ್ಸ್ಯಾದಿರೂಪಗಳು ಮಾತ್ರವಲ್ಲ ಅನಂತರೂಪನು ಅನಂತಗುಣ ಕ್ರಿಯಾವಂತನು ಕ್ಷಿತಿಯಲ್ಲಿ ಬಲಕಾರ್ಯಕ್ಕೆ ಕೆಲವು ಅವತಾರ ಹಿತಕರ ಹಲವು ಜ್ಞಾನಬೋಧಕ್ಕೇವೇ ಕೆಲವು 5 ಧ್ಯಾತ್ಮನು ಜ್ಞಾನಕಾರ್ಯಕ್ಕಾಗಿ ಅವತರಿಸುವನು ಶ್ರೀಮಾನ್ ಹಯಗ್ರೀವ ಸನತ್ಕುಮಾರ ದತ್ತ ಕಪಿಲ ಧೀಮಾನ್ ಪರಾಶರ ವಾಸವೀಸೂನು ಐತರೇಯಾದಿ 6 ದ್ವಾಪರದಲ್ಲೇವೆ ಅಲ್ಲಲ್ಲಿ ಕಲಿವಿಷ ಹರಡಿ ತಪೋಧನರು ಗೌತಮರು ಶಪಿಸೆ ಜ್ಞಾನಕುಂದೆ ಶ್ರೀಪ ವೇದವ್ಯಾಸ ಜ್ಞಾನ ತೇಜಃಪುಂಜ ಬಂದು ತೋರಿ ಆ ಪೀಡಿಸುವ ಅಜ್ಞಾನ ತರಿದು ಸಜ್ಞಾನ ಇತ್ತ 7 ಹಿಂದೆ ಬ್ರಹ್ಮದೇವರಾಜÉ್ಞಯಿಂ ಅತ್ರಿಋಷಿವರ್ಯರು ನಿಂತರು ಋಕ್ಷಗಿರಿಯಲ್ಲಿ ಅಪತ್ಯಾಪೇಕ್ಷೆಯಿಂದ ಅದ್ಭುತ ತಪವಚರಿಸಿ ಜಗದೀಶ್ವರ ಸಮ - ಪುತ್ರ ಕೊಡೆ ಚಿಂತಿಸಿ ಹರಿಯಲ್ಲಿ ಶರಣಾದರು 8 ಹರಿ ತಾನು ತನ್ನ ಅಧಿಷ್ಟಾನರಾದ ಬ್ರಹ್ಮೇಶ್ವರ ಕರಕೊಂಡು ಋಷಿ ಮುಂದೆ ನಿಂತು ಯುಕ್ತಮಾತನ್ನಾಡಿ ಮೂರು ಮಂದಿಗಳು ತಾವು ಪುತ್ರರಾಗುವೆವು ಎಂದ ತರುವಾಯ ತಾನಿತ್ತ ವರವ ಒದಗಿಸಿದನು 9 ಭಾಗವತ ಈ ವಿಷಯ ಒಳಗೊಂಡು ಇಹುದು ಪತಿ ವೇದವ್ಯಾಸ ಸಂಕೃತ ಈ ಭೂರಾದಿ ಜಗತ್ತಿನಲ್ಲಿ ಪ್ರಖ್ಯಾತ ಪುರಾಣಂಗಳೊಳ್ ಶ್ರೀ ಭಗವಾನ್ ದತ್ತಾತ್ರಯನ ಅವತಾರವು ವೇದ್ಯ 10 ಗೀರ್ವಾಣ ಛಂದಸ್ಸು ಅಷ್ಟಿಯಲಿ ಬರೆಯುವದೆಂದು ಶ್ರೀವರನ ಹಿತಾಜÉ್ಞಯಿಂ ಪ್ರಸನ್ನ ಶ್ರೀನಿವಾಸೀಯ ಶ್ರೀವಿಷ್ಣು ಸಹಸ್ರನಾಮ ಭಾಷ್ಯ ಕನ್ನಡದಲ್ಲಿ ಅಳವಡಿಸಿದಂತೆ ಅಷ್ಟೀ ಛಂದಸ್ಸಲಿ ಈ ಗ್ರಂಥವ 11 ಈ ಗ್ರಂಥದಲಿ ಶ್ರೀಭಾಗವತವು ಮಾರ್ಕಂಡೇಯವು ಭಾಗವತರಿಗೆ ಉಪಾಸನಾ ಹೇತು ಪಂಚರಾತ್ರ ಆಗಮವು ಒಳಗೊಂಡ ವಿಷಯಗಳು ಇವೆಯು ಕಾಯ ಶುದ್ಧಿಯಿಂ ಪಠಣೀಯವು 12 ಗುರುಮಂತ್ರ ಉಪದೇಶವಿಲ್ಲದಂತಹ ಸ್ತ್ರೀ ಜನ ಶೂದ್ರರು ಬ್ರಹ್ಮಬಂಧುಗಳು ಈ ಗ್ರಂಥ ಪಠಿಸಲು ಹರಿಭಕ್ತ ಸಾಧು ವೈದಿಕ ಬ್ರಾಹ್ಮಣರ ಅಪ್ಪಣೆ ಕೋರಿ ಅವರ ಅಪ್ಪಣೆಯಿಂದ ಓದಬಹುದು 13 ಪ್ರತಿಷ್ಠಾನಪುರದಲ್ಲಿ ಕೌಶಿಕಾಹ್ವಯ ದ್ವಿಜನು ವ್ಯಾಧಿ ಪೀಡಿತನು ಕುಷ್ಠಿ ನಡಮಾಡಲು ಅಶಕ್ತ ಆತನ ಪತ್ನಿಯು ಸಾಧುಗುಣವತಿ ಬಲುಶ್ರೇಷ್ಠ ಪತಿ ಹೇಳಿದಂತೆ ನಡೆಯುವಳು 14 ಒಂದು ದಿನ ಆ ಬ್ರಾಹ್ಮಣನು ನೋಡಿದ ಬಾಗಿಲಾಚೆ ಬೀದಿಯಲಿ ಹೋಗುತ್ತಿದ್ದ ಸುಂದರಿ ವೇಶ್ಯೆಯೋರ್ವಳಲಿ ಸೋತು ಮನ ಅವಳನ್ನು ತಾನು ಹೊಂದಬೇಕೆನ್ನಲು ಸಾಧ್ವಿಸತಿ ಪತಿಯನ್ನು ಎತ್ತಿದಳು ಸೊಂಟದಲಿ 15 ರಾತ್ರಿ ಕತ್ತಲೆಮಾರ್ಗ ತಿಳಿಯದಲೆ ಪತಿಯನ್ನು ಹೊತ್ತುಕೊಂಡು ಹೋಗುವಾಗ ಪತಿಯ ಕಾಲು ತಾಕಿತು ಹಾದಿಯಲ್ಲಿ ಕಬ್ಬಿಣ ಸಲಾಕದಲ್ಲಿ ಚುಚ್ಚಿಸಿ ಇದ್ದ ಕಟಿ ಸಮೀಪ ಹಾಹಾ 16 ಅನ್ಯಾಯದಿ ಆ ರಾಜ್ಯದರಸ ಆ ಮಹಾಮುನಿಯ ಧನಚೋರನೆಂದು ಶೂಲಕ್ಕೆ ಹಾಕಿಸಿದ್ದ ಆ ಶೂಲ ಕಾಣದೇ ಕೌಶಿಕನ ಕಾಲ್ತಗಲಿ ಬಲು ನೋವಾಗಿ ಮುನಿ ಶಾಪವಿತ್ತರು ಸೂರ್ಯೋದಯಲ್ಲೇ ಸಾಯೆಂದು 17 ಹಾಹಾ ಇದು ಏನು ಮುನಿಗಳಿಗೆ ನೋವಾಯಿತಲ್ಲಾ ಮಹಾತ್ಮರ ಶಾಪ ವೀಣಾಗಲಾರದು ಮಾಂಗಲ್ಯವ ಪತಿ ಅಂತಸ್ಥ ಶ್ರೀಹರಿಯ ಸ್ಮರಿಸಿ ಆ ಪತಿವ್ರತೆ ಹೇಳಿದಳು 18 ಸೂರ್ಯೋದಯವಾಗದಿದ್ದರೆ ಶಾಪವು ಫಲಿಸದು ಸೂರ್ಯೋದಯವಾಗಬೇಡಿ ಎಂದು ಹೇಳಿದಳು ಸಾಧ್ವಿ ಆರ್ಯಧರ್ಮ ಲೋಕಕಾರ್ಯ ಸರ್ವವೂ ಸ್ತಬ್ಧವಾದವು ಎಲೆಲ್ಲೂ ಕತ್ತಲೆಯು ಭಾನು ಉದಯಿಸಲಿಲ್ಲ 19 ಇಂದ್ರಾದಿ ದೇವರ್ಗಗಳು ಬ್ರಹ್ಮನಲಿ ಮೊರೆಯಿಡಲು ಪತಿವ್ರತೆ ಮಹಾತ್ಮನೆ ಮತ್ತೊಬ್ಬ ಪತಿವ್ರತೆಯೇ ಪ್ರತಿ ಮಾಡುವಳು ಅತ್ರಿಋಷಿ ಪತ್ನಿ ಅನಸೂಯಾ ಪತಿವ್ರತಾ ರತ್ನಳಾ ಸಹಾಯ ಕೇಳೆಂದರು ವೇಧ 20 ಶಕ್ರಾದಿ ಸುರರುಗಳು ಅನಸೂಯಾದೇವಿಯಲಿ ಕೋರಿಕೆ ಮಾಡಲು ಆಕೆ ದೇವತೆಗಳ ಸಮೇತ ಧೀರ ಪತಿವ್ರತೆಯಾದ ಕೌಶಿಕಾ ಗೃಹಕೆ ಹೋಗಿ ಪರಿಚಯ ಮಾಡಿಕೊಂಡು ಕೊಂಡಾಡಿದಳಾ ಸಾಧ್ವಿಯ 21 ಮಹಾಭಾಗರು ಇಂದ್ರಾದಿಗಳಿಗೂ ಅನಸೂಯಗೂ ವಿಹಿತೋಪಚಾರ ಪೂಜಾದಿಗಳ ಮಾಡಿ ಆ ಸಾಧ್ವಿ ಮಹಾಭಾಗ್ಯ ಆಗಮನ ಎನ್ನುತ್ತ ಕಾರಣವನು ಬಹು ಹಿತದಲಿ ಕೇಳಿದಳು ತನ್ನ ಸ್ಥಿತಿ ಹೇಳಿ 22 ಸೂರ್ಯ ಉದಿಸುವದಕ್ಕೆ ಪತಿ ಬದುಕಿಸಲ್ಪಡುವನು ಎನ್ನುತೆ ಕೌಶಿಕಾ ಸಾಧ್ವಿಯು ಅನುಮೋದನೆ ಕೊಂಡು ಇನ ಉದಿಸಲಿ ಎಂದ ಅಘ್ರ್ಯ ಕೊಟ್ಟಳು ಮುದದಿ 23 ಸೂರ್ಯ ಮುನಿಶಾಪ ಫಲಿಸಿತು ಬಿದ್ದ ಕೆಳಗೆ ಕೌಶಿಕ ತತ್‍ಕ್ಷಣವೇ ಬದುಕಿ ಎದ್ದ ಪತಿವ್ರತಾ ಶಿರೋಮಣಿ ಅನಸೂಯಾ ದೇವಿ ಪ್ರಭಾವ ಪತಿವ್ರತಾ ಮಹಾತ್ಮೆ ಜ್ವಲಿಸಿತು ಲೋಕದಲ್ಲಿ 24 ಕೌಶಿಕನ್ನ ಬದುಕಿಸಿದ್ದು ಮಾತ್ರವಲ್ಲದೇ ಸರ್ವ ಕುಷ್ಠಾದಿ ರೋಗ ಪರಿಹರಿಸಿ ಯುವವಾಗಿ ಮಾಡಿ ಅಯುಷ್ಯ ಬಹುನೂರು ವರ್ಷಗಳ ಅನುಗ್ರಹಿಸಿ ತುಷ್ಠಿ ಸುಖಜೀವನ ಒದಗಿಸಿದಳ್ ಅನಸೂಯಾ 25 ಅನಸೂಯೆಯ ಪಾತಿವ್ರತ್ಯ ಮಹಾತ್ಮೆಯ ಶ್ಲಾಘಿಸಿ ಏನು ವರ ಕೇಳಿದರೂ ಕೊಡುವವೆಂದು ಸುರಪ ಆನಿಮಿಷರು ಹೇಳಲು ಪತಿವ್ರತಾ ಶಿರೋಮಣಿ ವಿಧಿ ಶಿವ ತನ್ನಲ್ಲವತರಿಸಲೆಂದಳು 26 ತಥಾಸ್ತು ಎಂದ ದೇವತೆಗಳ ವರ ಸತ್ಯಮಾಡೆ ಸುತಪಸ್ವಿ ಅತ್ರಿಗೆ ಹಂಸ ವೃಷಾರೂಡರು ಪ್ರತ್ಯಕ್ಷದಿ ಹೇಳಿದಂತೆಯೂ ಅನಸೂಯ ಅತ್ರಿಗೆ ಪುತ್ರರೆಂದುದಿಸಿದರು ಸೋಮಸ್ತ ಬ್ರಹ್ಮೇಶ ವಿಷ್ಣು 27 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಾಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯನಮೋ ಪ್ರಿಯತಾಂ ಶರಣು 28 ಎರಡನೇ ಅಧ್ಯಾಯ ಶ್ರೀ ದತ್ತಾತ್ರಯ ಪ್ರಾದುರ್ಭಾವ ಸಾರ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಭೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಬ್ರಹ್ಮಾವಿಷ್ಟನು ಸೋಮ ಔಷಧಿಗಳ ರಾಜನಾದ ಉನ್ಮಾದ ಚರ್ಯದಿ ಕೋಪ ಪ್ರಕಟಿಸಿ ಮೆರೆವರು ತಮ್ಮ ಶಿಷ್ಯರೊಡಗೂಡಿ ಶಿವಾವತಾರ ದೂರ್ವಾಸ ಸುಮ್ಮನಸ ಸಜ್ಜನ ಹಿತರು ದುಷ್ಟನಿಗ್ರಹರು 1 ತನ್ನನ್ನ ತಾನೇ ಸುತನಾಗಿ ದತ್ತಮಾಡಿಕೊಂಡನು ವಿಷ್ಣು ಅತ್ರಿ ದಂಪತಿಗೆ ಆದ ಕಾರಣ ಪ್ರಖ್ಯಾತೆ ಉನ್ನಾಮ ದತ್ತಾತ್ರಯ ಕ್ಷೋಣಿ ಯೋಗ್ಯಾಧಿಕಾರಿಗಳಿಂ ಘನಭಕ್ತಿಯಿಂ ಶುಚಿಯಿಂ ಜಪ್ಯ ಸ್ಮರಣೀಯಿಂ ಶ್ರೋತವ್ಯ ಜಯತು 2 ಕಲ್ಯಾಣತಮ ಪೂರ್ಣ ಅಮಲ ಗುಣಗಣ ಸಿಂಧು ಮಾಲೋಲ ಶ್ರೀವಕ್ಷ ಶ್ರೀಶನೇ ಪ್ರಾದುರ್ಭವಿಸಿದನು ಚೆಲುವ ಅನುಪಮ ಸೌಂದರ್ಯಸಾರ ಸರ್ವೋತ್ತಮ ಲೀಲಾನಂದಮಯ ಚಿನ್ಮಾತ್ರಗಾತ್ರ ಭಕ್ತೇಷ್ಟದಾತ 3 ಕಮಲಾಸನಾವಿಷ್ಟ ಸೋಮ ರುದ್ರಾವತಾರ ದೂರ್ವಾಸ ತಮ್ಮ ತಮ್ಮ ಉದ್ಯೋಗಸಾಧನಕೆ ಬೇರೆ ಬೇರೆ ಹೋಗೆ ಸುಮನೋಹರ ರೂಪ ಶ್ರೀಮನೋರಮ ದತ್ತಾತ್ರಯ ಸುಮಹಾ ಯೋಗಿಯಾದ ನಿಸ್ಸಂಗ ಯೋಗೇಶ್ವರೇಶ್ವರ 4 ಅತ್ರೇಯರು ಮೂವರು ಹೀಗೆ ಬೇರೆ ಬೇರೆಯಾಗಿಯೇ ತಮ್ಮ ತಮ್ಮ ರೂಪದಲ್ಲೇ ಇದ್ದರು ಒಂದಾಗಿ ಅಲ್ಲ ಸೋಮ ಶಿವ ದತ್ತರಿಗೆ ಬೇರೆ ಬೇರೆ ಮಂತ್ರವುಂಟು ಸೋಮ ಪಂಚ ಶಿವ ಪಂಚ ದತ್ತ ನವಅಕ್ಷರವು 5 ಪ್ರೋದ್ಯ ದಿವಾಕರ ಪೋಲ್ವ ವರ್ಣವುಳ್ಳ ಶುಭಗಾತ್ರ ಆದಿತ್ಯ ಸಹಸ್ರಾಮಿತ ಮಹೋತ್ಕøಷ್ಟ ತೇಜಃಪುಂಜ ವ್ಯಾಪ್ತ ಸರ್ವತ್ರ ಜ್ಞಾನಾಭಯಕರನು ಬ್ರಹ್ಮಾದಿ ತ್ರಿದಿವ ಸುಬೋಧಕನು ಕಪಿಲನು ದತ್ತಾತ್ರಯ 6 ಇಂಥ ಮಹಾಮಹಿಮನು ಕಪಿಲ ದತ್ತಾತ್ರಯನು ಅಧಿಕಾರಿಗಳಿಗೆ ಅಪರೋಕ್ಷಜ್ಞಾನ ಮೋಕ್ಷದಾತ ಶ್ರೋತೃ, ಮಂತ್ರ, ಧ್ಯಾತೃಗಳಿಗೆ ಕಪಿಲ ದತ್ತಾತ್ರಯ ಭಕ್ತಿ ಮೆಚ್ಚಿ ಸದಾ ಸಂರಕ್ಷಿಸಿ ಇಷ್ಟಾರ್ಥ ಕೊಡುವ 7 ಪದ್ಮ ಭವಾದ್ಯಮರರಿಂ ಧ್ಯಾತ ದತ್ತಾತ್ರಯ ಹರಿ ಮೇದಿನಿ ನರರಂತೆ ಅವತಾರ ಲೀಲೆ ಚರಿಸಿ ಅದ್ಭುತ ಯೋಗಾನುಷ್ಠಾನದಿ ಇರುತಿರೆ ಜನರು ಈತನ ಸೌಂದರ್ಯ ಯೋಗಸಾಮಥ್ರ್ಯ ಹೊಗಳಿದರು 8 ಸಹಸ್ರಾರು ಋಷಿಪುತ್ರ ಬ್ರಹ್ಮಚಾರಿಗಳು ಬಂದು ಅಹರ್ನಿಶಿ ಯೋಗೇಶ್ವರೇಶ್ವರ ದತ್ತನಾಶ್ರಮದಿ ಬಹಳುತ್ಸಾಹದಲಿ ಸುತ್ತು ಮುತ್ತು ಗುಂಪುಗೂಡಿ ಮಹಾಯೋಗಾಭ್ಯಾಸಕ್ಕೆ ಚ್ಯುತಿಯ ಕಲ್ಪಿಸಿದರು 9 ಯೋಗ್ಯರು ಸಜ್ಜನರು ಈ ಭಕ್ತ ಋಷಿಕುವರರು ಯೋಗ್ಯಸಾಧನೆ ಅವರವರ ಆಶ್ರಮದಲ್ಲಿಯೇ - ಗೈಯಲಿ ಬೇಕೆಂದು ಅವರುಗಳು ಹೋಗೋ ಉಪಾಯ ನಿಶ್ಚೈಸಿ ಮುಳುಗಿದ ದತ್ತನು ಸರೋವರದೊಳು 10 ಸುರಮಾನದಿ ಸಾವಿರವರ್ಷ ಭಗವಾನ್ ದತ್ತನು ಸರೋವರದೊಳಿದ್ದನು ಹೊರಜನಕ್ಕೆ ಕಾಣದೆ ಆ ಋಷಿಪುತ್ರರು ತೀರದಲಿ ಇಕೋ ಈಗ ನಾಳೆ ಬರುವನು ಮೇಲೆ ಎಂದು ಕಾಯುತ್ತಿದ್ದರು ದೃಢದಿ 11 ಜಲಧಿ ಉಕ್ಕಿ ಹರಿದು ಕ್ಷೋಣಿಯ ಮುಳುಗಿಸದೆ ಜಲಮಧ್ಯ ತಾನಿದ್ದು ಕಾಯುವ ವಡವಾ ಮುಖಾಗ್ನಿ ಜಲಮಧ್ಯದಿ ಈಗ ಹೊಕ್ಕಿರುವ ದತ್ತಾತ್ರಯನು ಮುಳುಗಿರುವುದು ಆಶ್ಚರ್ಯವಲ್ಲ ಈರ್ವರೂ ಏಕ 12 ಬಲುದೀರ್ಘ ದೇವವರ್ಷಗಳು ಸಾಸಿರವಾದರೇನು ಶೀಲತಮ ವರವಾಯುವು ವರುಣನು ಬುಧಾದಿ ಜಲಾಭಿಮಾನಿಗಳು ಕಿಂಕರರಾಗಿ ಇರುತಿಹರು ಜಲಶಾಯಿ ನಾರಾಯಣ ಅವತಾರ ದತ್ತನಿಗೆ 13 ಒಂದು ದಿನ ಕೆರೆನೀರು ಚಲಿಸಲು ಸಂತೋಷದಿ ಬಂದರೂ ಬಂದರೂ ಎಂದು ಕೂಗೆ ಋಷಿಕುವರರು ಇಂದಿರಾಪತಿ ದತ್ತ ಮೇಲೆದ್ದು ಬಂದ ಬದಿಯಲ್ಲಿ ಇಂದಿರಾಂಗಿ ನಾರೀಮಣಿ ಓರ್ವಳ ಆಲಿಂಗಿಸುತ 14 ಯಾರನ್ನೂ ಲೆಕ್ಕಿಸದೆ ಕಾಮವಿಲಾಸ ಕೇಳಿಯ ಆ ಸ್ತ್ರೀಯೊಡನೆ ಮಾಡುತ್ತಿದ್ದುದು ಕಂಡು ಯುವಕರು ಯೋಗಿ ಹೀಗಾದರೆ ಎನ್ನುತ ತ್ವರಿತ ತೆರಳಿದರು ಜುಗುಪ್ಸೆಯಲ್ಲಿ ತ್ಯಜಿಸಿ 15 ಆ ಪುಣ್ಯವಂತ ಋಷಿಪುತ್ರರು ತಿಳಕೊಳ್ಳಲಿಲ್ಲ ಆ ಸ್ಛುರದ್ರೂಪಿಣಿ ನಾರಿ ಸಾಕ್ಷಾತ್ ಲಕ್ಷ್ಮೀದೇವಿಯೆಂದು ವಿಪುಲ ಮನ ಹರುಷ ತೋರಿಸಿ ದತ್ತಾತ್ರಯನು ಕೈಪಿಡಿದು ಲಕ್ಷ್ಮಿಯ ಕರೆದುಹೋದ ಆಶ್ರಮಕೆ 16 ಯಾವ ತನ್ನಾಶ್ರಮದಿ ಸ್ವಾಧ್ಯಾಯ ಪ್ರವಚನಗಳ್ ದಿವ್ಯ ಯೋಗ ಅಭ್ಯಾಸ ಶಿಷ್ಯರ್ಗೆ ಶೀಕ್ಷಾದಿಗಳ್ ಯಾವಾಗಲೂ ಹಿಂದೆ ನಡೆಸುತ್ತಿದ್ದನೋ ಅಲ್ಲಿ ಈಗ ದೇವಿಯೊಡನೆ ಲೀಲಾವಿಲಾಸಗಳ ತೋರಿಸಿದ 17 ಮಂದ ಧೀಗಳು ಈ ವಿಡಂಬನೆ ಕಂಡು ಮೋದದಲಿ ಶ್ರೀದತ್ತ ಈ ರೀತಿ ಆದನಲ್ಲಾ ಎಂದು ಮಾತನಾಡೆ ಸುಧೀಗಳು ಬೃಹಸ್ಪತ್ಯಾದಿಗಳು ದತ್ತಾತ್ರಯನು ಮೋದಚಿನ್ಮಯ ನಿರ್ದೋಷ ಹರಿ ಶ್ರೀಶನೆ ಎಂದರÀು 18 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯ ನಮೋ ಪ್ರಿಯತಾಂ ಶರಣು 19 -ಇತಿ ಎರಡನೇ ಅದ್ಯಾಯ ಸಂಪೂರ್ಣಂ - ಮೂರನೇ ಅದ್ಯಾಯ ಸಂಪತ್‍ಲಕ್ಷ್ಮೀ ವೃತ್ತಾಂತ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೊಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಸುರಪ ಜಂಭಾಸುರನಿಂದ ಅಪಜಯವ ಕೊಂಡು ಸುರಗುರು ಪ್ರೇರಣೆಯಿಂ ದತ್ತಾತ್ರಯನಲಿ ಹೋಗಿ ಶರಣು ಹೊಕ್ಕು ಸೇವಗೈಯಲು ಆಗ ಅವನನ
--------------
ಪ್ರಸನ್ನ ಶ್ರೀನಿವಾಸದಾಸರು
ಯತಿಗಳು ಟೀಕಾಚಾರ್ಯರು ಜಯರಾಯಾ ಜಯರಾಯಾ ಪ ದಯಕರ ಸಜ್ಜನಭಯಹರ ಗುರುವರ ಅ.ಪ ವಾಸವ ನೀ ವಸುಧೀಶನ ನಿಜ ಕೂಸೆನಿಸೀಪರಿ ದೇಶದಿ ಮೆರೆದೆ 1 ಸತಿಯಳ ತ್ಯಜಿಸಿ ಯತಿರೂಪ ಧರಿಸಿ ಪÀತಿತರ ಶಾಸ್ತ್ರವ ಹತಮಾಡಿದಿ ನೀ 2 ಸುಧಾದಿಗ್ರಂಥವ ಮುದದಲಿ ರಚಿಸಿ ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ3 ಅಲವಬೋಧರ ಮತ ಬಲವತ್ತರಮಾಡಿ ಜಲಜನಾಭನ ಮನ ಒಲಿಸಿದ್ಯೊ ಜೀಯಾ 4 ಪ್ರಮಿತಜನಗಣನಮಿತ ಪದಾಂಬುಜ ಅಮಿತಮಹಿಮ ನಿನ್ನ ನಮಿಸುವೆ ದಿನದಿನ 5 ಯಾತಕೆ ಎನ್ನನು ಈ ತೆರನೋಡುವಿ ದಾತಗುರುಜಗನ್ನಾಥ ವಿಠಲ ಪ್ರೀಯ6
--------------
ಗುರುಜಗನ್ನಾಥದಾಸರು
ಯತಿಗಳು ಶ್ರೀಜಯತೀರ್ಥರು ಕರುಣಿಸೊ ಜಯರಾಯಾ ಗುರುವರ್ಯ ಚರಣವೆ ಗತಿಯಯ್ಯ ಹೇ ಜಿಯಾ ಪ ರಘುನಾಥನ ಪುತ್ರ ಪವಿತ್ರ ರಾಘವನ ಪ್ರೀತಪ್ರಾತ್ರ ಚರಿತ್ರ ಮಘವನಾ ನೀ ನಘದೂರ ಶ್ರೀ ರಘುರಾಮನ ಕಿಂಕರನ ಅಮೋಘ ಸೇವಕನೊ 1 ಕುಕರ್ವಿಣಿಯ ತೀರಾ ಘೋರಕುವಾದಿಗಳ ಕು ಲಕುಠಾರ ಗಂಭೀರ ಸಕಲಶಾಸ್ತ್ರಸತ್ಸಾರ ಟೀಕಕರ ಕುಕವಿಶೃಗಾಲಕುಲಕಾಲಭಯಂಕರ 2 ಎರಗೋಳಾದ್ರಿಯೊಳು ಗುಹೆಯೊಳು ನಿರುತ ಪ್ರವಚನಗಳು ನಿತ್ಯದೊಳು ಮರುತಮತಾಂಬುಧಿಚಂದಿರ ಸುಂದರ ವರಸುಜ್ಞಾನಮಣಿಕಿರಣವ ತೋರಿದೆ 3 ಗುರು ಮಧ್ವಮುನಿ ತತ್ತ್ವಗ್ರಂಥದ ಕ್ಷೀರಶರಧಿಗೆ ಮಂಥಾ ವುನ್ನಂಥಾ ಮರುತನನುಗ್ರಹ ಪ್ರಗ್ರಹದಿಂದಲಿ ವರಮಥನದಿ ಇತ್ತೆ ಅಮೋಘವಸ್ತುಗಳೆಲ್ಲಾ4 ಉತ್ತಮ ಗ್ರಂಥವನಧೀ ಮಥನದಿ ಉತ್ತಮ ವಸ್ತುಗಳನಿತ್ತೆಯೊ ತತ್ತ್ವಪ್ರಕಾಶಿಕಾ ಮಹಾಲಕುಮಿಯು ಚಂದಿರನೇ ಪ್ರಮೇಯದೀಪಿಕಾ ಸುಧೆಯೇ ನ್ಯಾಯಸುಧಾಗ್ರಂಥ ಶ್ರೀ ಕೌಸ್ತುಭದಂತಿಹ ನ್ಯಾಯದೀಪಿಕಾ 5 ದುರುಳ ಮಾಯಾಖಂಡ ನಾಯುಧವೂ ಸರ್ವಜೀಯನೆ ಐರಾವತದಂತೆ ಋ ಗ್ಭಾಷ್ಯಟೀಕಾ ನ್ಯಾಯವಿವರಣವು ಉಚ್ಛೈಶ್ರವಸ್ಸು 6 ಕರ್ಮನಿರ್ಣಯ ಟೀಕಾ ವಜ್ರಾಯುಧ ಆ ಮಹಾಪಾರಿಜಾತ ವಿಖ್ಯಾತಾ ಶ್ರೀಮದ್ವಿಷ್ಣು ತತ್ತ್ವ ನಿರ್ಣಯ ಟೀಕೆಯು ಕಲ್ಪವು ಉಪನಿಷತ್ ಭಾಷ್ಯ ಟೀಕೆಯು 7 ಈಶಾವಾಸ್ಯ ಭಾಷ್ಯ ಟೀಕಾ ಸಂತಾನವೆಂಬೋ ಮಹಾವೃಕ್ಷಾ ಪ್ರ ಬಿಸಜ ಮಂದಾರ ಪ್ರಮಾಣ ಪದ್ಧÀ್ದತಿ ಹರಿಚಂದನಕೆ ಸಮನಾದ ವಾದಾವಳಿ 8 ಪಾಕಶಾಸನಾಂಶಾ ಕರುಣಿಸು ಶ್ರೀಕರಪದಪಾಂಸ ಯತೀಶಾ ನಾರ ಪತಿಯೆ ಶ್ರೀಕಾಗಿನೀ ತೀರದಿ ಏಕಾಂತದಿ ನಿಂದೆ ಲೋಕ ವಂದಿತ ದೇವಾ 9 ಮಂದಭಾಗ್ಯಜನರಾ ಪರಮಾ ನಂದದಿಂದಲಿ ನೋಡಿ ದಯಮಾಡಿ ತಂದೆಯಂದದಿ ಕಾಯ್ದಾನಂದವೀವೆ ನಿತ್ಯಾ10 ಪರಮಪಾತಕಿ ನಾನು ಗುರುವೆ ತವ ಪಾ ದ ರಕ್ಷಕವಚವ ತೊಡಿಸೊ ಉಳಿಸೋ ನಿರುತ ಶರಣರ ಕಾಯ್ವ ಶ್ರೀ ವೆಂಕಟೇಶನ ಪ್ರೀಯಾಉರಗಾದ್ರಿವಾಸವಿಠಲನ ದಾಸಾ 11
--------------
ಉರಗಾದ್ರಿವಾಸವಿಠಲದಾಸರು
ಯತಿಗಳು ಇರುವರ್ಯತಿಗಳ್ಹನ್ನೆರಡು ಮಂದಿ ರಘುವ(ರ) ಅಕ್ಷೋಭ್ಯತೀರ್ಥರ ನಡುವೆ ಕುಳಿತಿದ್ದಂಥ ಟೀಕೆ ಬರೆದ ಜಯ ಮಹರಾಯರಿವರು ಪಾಲಿಸೆನ್ನನು ಜಯರಾಯ ಪ ಎತ್ತಿನ ಜನ್ಮದಿ ಬಂದು ಶ್ರೀಮದಾನಂದತೀರ್ಥರಲ್ಲಿದ್ದು ಶಿಷ್ಯತ್ವ ವಹಿಸಿಕೊಂಡು ಬಿಟ್ಟು ಹರಿದಿನ ಮೇವು ನೀರನೆ ಪುಸ್ತಕದ ಗಂಟ್ಹೊತ್ತು ತಿರುಗುತ ತತ್ವಜ್ಞಾನವ ತಿಳಿದು ದ್ವಾದಶ ಸ್ತೋತ್ರ ಹೇ ಳುತ ಪ್ರಕಟವಾದರು 1 ಗೋವುಸುತನ ಜನ್ಮ ನೀಗಿ ಮಂಗಳವೇಡಿ ಸಾಹುಕಾರನ ಸುತನಾಗಿ ತೇಜಿಯನೇರಿ ಮಾ(ಮಹಾ?) ನದಿ ಮಧ್ಯದಲಿ ಮಂಡಿಬಾಗಿ ನೀರನು ಕುಡಿಯ- ಲಾಕ್ಷಣ ನೋಡಿ ಕರೆತರಲವರ ಗುರುಗಳ ಪಾದಕÀ್ವಂದನೆ ಮಾಡಿ ನಿಂತರು 2 ಅಕ್ಷೋಭ್ಯತೀರ್ಥರು ಆ ಮಹಿಮರ ನೋಡಿ ಕೊಟ್ಟು ಕಾಯ್ಕರದಲಿ ಜುಟ್ಟು ಜನಿವಾರವನು ಕಿತ್ತೆ ಕಾವಿಶಾಟಿಗಳನು ಉಟ್ಟು ದಂಡ ಕಾಷ್ಠವ್ಹಿಡಿದು ಶ್ರೇಷ್ಠಯತಿ ಆಶ್ರಮದಿ ಕುಳಿತಿರೆ ಹೆತ್ತವರು ಹುಡುಕುತ್ತ ಬಂದರು 3 ಕಂಡಕಂಡಂತೆ ಮಾತುಗಳಾಡಿ ಗುರುಗಳಿಗೆ ಧೋಂಡು ರಘುನಾಥನ ಕರಕೊಂಡು ಹಿಂದಕೆ ಹೋಗಿ ಹೆಂಡತಿ ಸಹಿತೆರೆದು ಪ್ರಸ್ತ ಮಂಡಿಗಿ ಮೃಷ್ಟಾನ್ನ ಉಣಿಸಿ ಚೆಂದದ್ವಸ್ತ್ರಾಭರಣ ಕೊಟ್ಟುರುಟಣೆಯ ಮಾಡಿಸ್ಯಾರತಿಯ ಬೆಳಗೋರು 4 ಸುಪ್ಪತ್ತಿಗೆಯು ಮಂಚ ಕುತ್ತಣಿ ಹಾಸಿಕೆಯಲ್ಲಿ ಇಟ್ಟು ತಾಂಬೂಲ ಬು- ಕ್ಕಿ ್ಹಟ್ಟು ಪರಿಮಳ ಗಂಧ ಸಕ್ಕರೆ ಕ್ಷೀರಗಳು ಲಡ್ಡಿಗೆ ಅಚ್ಚಮಲ್ಲಿಗೆ ಮಾಲೆ ಫಲಗಳು ರತ್ನ ಜ್ಯೋತಿ ಪ್ರಕಾಶದೊಳಗುತ್ತಮರು ಕುಳಿತಿರಲರ್ಥಿಯಿಂದಲಿ 5 ಮಡದಿ ಮಂಚಕೆ ಬಂದ ಸಡಗರವನು ನೋಡಿ ಹೆಡೆಯ ತೆಗೆದು ಕಣ್ಣು ಬಿಡುತ ವಿಷನಾಲಿಗೆಯ ಚಾಚುತಾರ್ಭಟಿಸಿ ಬರುತಿರಲ- ಸಾಧ್ಯಸರ್ಪವು ಕಡಿವುದೆನುತೆದೆ ಒಡೆದು ಕೂಗಲು ಹಡೆದವರು ಬಾಯ್ಬಿಡುತ ಬಂದರು 6 ಹಾವಾಗ್ಹರಿದು ಹುತ್ತವ ಸೇರಿಕೊಂಬುವೋದೀಗ ನಾವು ಮಾಡಿದಪರಾಧ ಕ್ಷಮಿಸಬೇಕೆನುತಲಿ ಬೇಡಿಕೊಂಡಾಕ್ಷಣದಿ ಮಗನ ನೋಡಿ ಕರೆತಂದಾಗ ಅಕ್ಷೋಭ್ಯರಾಯರಂಘ್ರಿಚರಣಕೊಪ್ಪಿಸಿ ನಾವು ಧನ್ಯರಾದೆವೆಂದರು 7 ಅತಿ ಬ್ಯಾಗದಿಂದವರಿಗ್ಯತಿ ಆಶ್ರಮವಕೊಟ್ಟು ದೇ- ವತಾ ಪೂಜೆಗಧಿಕಾರ ಮಾಡಲು ಗುರುಗಳು ಪಾಂಡಿತ್ಯದಿ (ಇ)ವರಿಗೆ ಪ್ರತಿಯು ಇಲ್ಲ- ವೆಂದೆನಿಸಿ ಮೆರೆವರು ಪತಿತರನೆ ಪಾವನವ ಮಾಡಿ ಸದ್ಗತಿಯ ಕೊಡುವ ಸಜ್ಜನ ಶಿರೋಮಣಿ 8 ಮಧ್ವರಾಯರು ಮಾಡಿದಂಥ ಗ್ರಂಥಗಳಿಗೆ ತಿದ್ದಿ ಟೀಕೆ ಟಿಪ್ಪಣಿ ಮಾಡಿ ಪದ್ಮನಾಭ ಭೀಮೇಶಕೃಷ್ಣಗೆ ಪರಮ ಭಕ್ತರೆನಿಸಿ ಮೆರೆವರು ವಿದ್ಯಾರಣ್ಯನ ಗರುವ ಮುರಿದು ಪ್ರಸಿದ್ಧರೆನಿಸೋರು ಸರುವ ಲೋಕದಿ 9
--------------
ಹರಪನಹಳ್ಳಿಭೀಮವ್ವ
ಯತಿರಾಜ ಯತಿರಾಜ ಕ್ಷಿತಿದೇವ ತತಿನುತ ರಾಘವೇಂದ್ರ ಆದಿಯುಗದಿ ಪ್ರಹ್ಲಾದ ಸುನಾಮದಿ ಮೋಹದಿ ಭಜಿಸುತ ಮಾಧವನೊಲಿಸಿದ 1 ಘನ ವಿರಾಗ್ರಣಿ ಜನಪತಿ ಬಾಹ್ಲೀಕ ನೆನಿಸಿ ದ್ವಾಪರದಿ ಜನಿಸಿದ ಗುಣನಿಧಿ 2 ವಾಸವನಾಯಕ ದಾಸಾರ್ಯರಿಗುಪ ದೇಶಗೈದ ಗುರುವ್ಯಾಸ ಪೋಷಿಸೈ 3 ಕ್ಷೋಣಿಯೊಳಗೆ ಕುಂಭಕೋಣ ಸುಕ್ಷೇತ್ರದಿ ವೀಣೆ ವೆಂಕಟಾಭಿಧಾನದಿ ಜನಿಸಿದ 4 ದೀನ ಜನಾಮರಧೇನು ಸುಧೀಂದ್ರರ ಪಾಣಿಪದ್ಮಭವ ಮಾಣದೆ ಕಾಯೋ 5 ತುಂಗಭದ್ರ ಸುತರಂಗಿಣಿ ತೀರದಿ ಕಂಗೊಳಿಸುವ ಶತಪಿಂಗಳ ತೇಜ6 ಜಲಧಿ ಶಶಾಂಕ 7 ಬಾಲನ ಬಿನ್ನಪ ಲಾಲಿಸಿ ಪ್ರೇಮದಿ ಪಾಲಿಪುದೈ ಮಂತ್ರಾಲಯ ನಿಲಯ8 ಪರಿಮಳ ಗ್ರಂಥವ ವಿರಚಿಸಿ ದುರ್ಮತ ಮುರಿದು ಸಜ್ಜನರಿಗೊರೆದ ಮಹಾತ್ಮ 9 ಪರಿಪರಿಭವದೊಳು ಪರಿತಪಿಸುವೆನೈ ಪರಮ ಕರುಣದಲಿ ಪರಿಕಿಸಿ ಪೊರೆಯೊ 10 ಕಾಮಿತದಾಯಕ ಭೂಮಿಜೆನಾಯಕ ಶಾಮಸುಂದರನ ಪ್ರೇಮದ ಸೇವಕ 11
--------------
ಶಾಮಸುಂದರ ವಿಠಲ
ಯತಿರಾಜಾ - ಪಾಲಿಸೊ ಎನ್ನ - ಯತಿರಾಜಾ ಪ ಯತಿರಾಜಾ ಪಾಲಿಸೊ ಎನ್ನ - ಅಹಂಮತಿಯ ಕಳೆದು ಗುರುವರೇಣ್ಯ | ಆಹ ಸತತದಿ ಹರಿ ಧ್ಯಾನ | ರತನನ ಮಾಡಿ ಸದ್ ಗತಿಯ ಸೇರುವಂಥ | ಪಥದಲ್ಲಿರಿಸೊ ರಾಜಅ.ಪ. ವೀಣಾ ವೆಂಕಟ ನಾಮಾಭಿಧ | ಕುಂಭಕೋಣ ಪುರದೊಳು ಮೆರೆದಾ | ಓವಿಜ್ಞಾನಿ ಸುಧೀಂದ್ರರೊಲಿಸಿದಾ | ಬಹುಮಾನವಾಗಿ ಶಾಲು ಪಡೆದಾ | ಆಹಏನು ಇದಾಶ್ಚರ್ಯ | ಮಾನ ಉಳಿವದೆಂತುನಾನೊಂದು ಕಾಣೆ | ನೆನುತಾವಸನ ಮುಂದಿಟ್ಟ 1 ಅಂದಿನಂದಿನ ಪಾಠಕ್ಕೆಲ್ಲ | ಟೀಕೆಛಂದಾಗಿ ಬರೆದಿರುವಲ್ಲ | ನಮ್ಮಹಿಂದಿನ ಸಂಶಯವೆಲ್ಲ | ನೀಗಿಮುಂದೆ ಜರುಗಿತು ಪಾಠವೆಲ್ಲ | ಆಹಎಂದು ನಮ್ಮ ವಸನ | ಕಂದ ನಿನ್ನಯ ಮೇಲೆಹೊಂದಿಸಿ ಮುದದಿಂದ | ಬಂದೆವೆಂದರ ಶಿಷ್ಯ 2 ಗುರುವು ಪಟ್ಟರು ಬಲು ಮೋದಾ | ಸುಧಾಪರಿಮಳಾರ್ಯರೆಂಬ ಬಿರುದಾ | ಪೊಂದಿಇರಲು ಕಾಲಾಂತರದಿಂದಾ | ಪಡೆದೆವರ ಯತ್ಯಾಶ್ರಮವವರಿಂದಾ | ಆಹಮೆರೆಸಿದೆ ರಾಮರ | ವರ ವೈಭವದಿಂದದುರುಳ ಮಾಯ್ಗಳಮತ | ತರಿದಿಟ್ಟೆ ವಾದದಿ 3 ಬೇಗೆಯಿಂದಳುತಿದ್ದ ಶಿಶುವಿಗೆ | ಚೈಲಆಗಸದೊಳು ನೀನು ನಿಲಿಸಿದೆ | ಹಾಂಗೆಮಾರ್ಗದಿ ಪ್ರಸವಿಸದವಳೀಗೆ | ನೀರನುಗಮಿಸುತ ನೀನು ಪೊರೆದೇ | ಆಹನಿಗಮಾಲಯ ವಾಸ | ರಾಘವೇಂದ್ರ ಗುರುವೆಬಗೆ ಬಗೆ ಗ್ರಂಥವ | ಮಿಗಿಲಾಗಿ ರಚಿಸೀದೆ 4 ಪಂಗು ಬಧಿರ ಮೂಕ ಜನರು | ನಿಮ್ಮಹಿಂಗದೆ ಬಂದು ಸೇವಿಪರು | ಬಂದಭಂಗಗಳೆಲ್ಲ ನೀಗುವರು | ಯತಿಪುಂಗನೆ ನಿನಗೆ ಸರಿಯಾರು | ಆಹಗಂಗಾ ಜನಕ ರೂ | ಪರಿಗಳು ನಾಲ್ಕರಿಂಅಂಗಲಾಚಿಪ ಜ | ನಂಗಳ ಪೊರೆಯುವ 5 ಅಘ ಪತಿ ಗೋ | ವಿಂದನ ಮಂದಿರಬಂದು ಸೇರುವುದಕ್ಕೆ | ಅಂದ ಸೋಪಾನವು 6 ವರಹಸುತೆ ತೀರ ವಾಸಾ | ಭಕ್ತಸುರತರುವೆ ನಿನ್ನ ದಾಸಾ | ನಾಗಿಇರಿಸೊ ಭೂ ತಳಾಧೀಶ | ಬೇಡ್ವೆವರ ಒಂದ ನಾನಿನ್ನ ಅನಿಶ | ಆಹಗುರುಗೋವಿಂದ ವಿಠಲನ | ಚರಣಾರವಿಂದವನಿರುತ ಭಜಿಸುವಂಥ ವರಮತಿ ಕೊಟ್ಟನ್ನ7
--------------
ಗುರುಗೋವಿಂದವಿಠಲರು
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ ಗತಿಯನು ಪೊಂದುವರು ರಾಘವೇಂದ್ರ ಪ ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ ಮತದ ಪರಮ ಸಂಗತಿಗಳ ಹರಡಿದ ಅ.ಪ ಜಯ ಮುನಿಗಳವರ ಗ್ರಂಥಗಳಿಗೆ ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್ ಮಯ ರಾಮರ ಸೇವೆಯ ಸಂತಸದಲಿ ಗೈದು ಸುಮಂತ್ರಾಲಯದಲಿ ನೆಲೆಸಿದ 1 ಮಂಗಳಕರವಾದ ತುಂಗಾನದಿಯ ತರಂಗಗಳಲಿ ಮಿಂದು ನಿಮ್ಮನು ನಿಸ್ಸಂಗರಾದ ಸಾಧು ಸಂಘವ ಪೊರೆಯುವ 2 ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ ಸುರಧೇನುವಿನಂತೆ ಸಂತತ ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ ಸುರತರುವಂತೆ ಪ್ರಸನ್ನರಾಗುವಂಥ 3
--------------
ವಿದ್ಯಾಪ್ರಸನ್ನತೀರ್ಥರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ಯಾಕೆ ಪುಟ್ಟಿಸಿದಿ ನೀ ಸಾಕಲಾರದೆ ಜಗ-ದೇಕ ಕಾರಣಪುರುಷನೆ ಕೃಷ್ಣ ಪ ವಾಕು ಚಿಂತಿಸೆ ಇಂಥಕಾಕು ಮಾಡುವುದುಚಿತವೆ ಕೃಷ್ಣ ಅ.ಪ. ಒಡಲಿಗನ್ನವ ಕಾಣೆ ಉಡಲು ಅರಿವೆಯ ಕಾಣೆಗಡಗಡನೆ ನಡುಗುತಿಹೆನೋ ಕೃಷ್ಣಮಡದಿ ಮಾತೆಯರ ಬಿಟ್ಟು ಒಡಹುಟ್ಟಿದವರ ಬಿ -ಟ್ಟಡವಿ ಪಾಲಾದೆನಲ್ಲೋ ಕೃಷ್ಣಕುಡುತೆ ಕೊಡುವವರಿಲ್ಲ ನುಡಿಯ ಕೇಳುವರಿಲ್ಲಬಡತನವು ಕಂಗೆಡಿಸಿತೋ ಕೃಷ್ಣಕಡೆ ಹಾಯಿಸುವರ ಕಾಣೆ ನಡುಮಡುವಿನೊಳು ಕೈ ಬಿಡದೆ ದಡವನು ಸೇರಿಸೋ ಕೃಷ್ಣ 1 ಕೊಟ್ಟವರ ಸಾಲವನು ಕೊಟ್ಟು ತೀರಿಸದವರಪೊಟ್ಟೆಯೊಳು ಪುಟ್ಟಲಾಯ್ತೋ ಕೃಷ್ಣಎಷ್ಟು ಜನುಮದಿ ಮನಮುಟ್ಟಿ ಮಾಡಿದ ಕರ್ಮಕಟ್ಟೀಗ ಉಣಿಸುತಿಹುದೋ ಕೃಷ್ಣಸೃಷ್ಟಿಯೊಳಗೆನ್ನಂಥ ಕೆಟ್ಟ ಪಾಪಿಷ್ಠ ಜನಘಟ್ಟಿಸಲಿಲ್ಲವೇನೋ ಕೃಷ್ಣವಿಠ್ಠಲನೆ ನಿನ್ನ ಮನಮುಟ್ಟಿ ಭಜಿಸಿ ಹಿಂದೆಎಷ್ಟು ಜನ ಬದುಕಲಿಲ್ಲೋ ಕೃಷ್ಣ 2 ಆಳು ದೇಹವು ಗೇಣು ಕೀಳಾಗಿ ಪಲ್ಕಿರಿದುಖೂಳ ಜನರ ಮನೆಗೆ ಕೃಷ್ಣಹಾಳು ಒಡಲಿಗೆ ತುತ್ತು ಕೂಳಿಗೆ ಹೋಗಿ ಅವರವಾಲೈಸಲಾರೆನಲ್ಲೋ ಕೃಷ್ಣಬಾಳು ಈ ಪರಿಯಾದ ಮ್ಯಾಲೆ ಭೂಮಿಯಲಿ ಬಹುಕಾಲ ಕಳೆಯುವುದುಚಿತವೆ ಕೃಷ್ಣಆಲಸ್ಯ ಮಾಡದಲೆ ಈ ವ್ಯಾಳ್ಯದಲಿ ಅರಿತುಪಾಲಿಸಲು ಬಹು ಕೀರ್ತಿಯೋ ಕೃಷ್ಣ 3 ಸಿರಿ ಅರಸನೆಂದು ಶ್ರುತಿ ಸಾರುತಿದೆಬಂದುದೀಗೇನು ಸಿರಿಯೋ ಕೃಷ್ಣಒಂದೊಂದು ನಿಮಿಷ ಯುಗಕಿಂತಧಿಕವಾಗುತಿದೆಮುಂದೋರದ್ಹಾಂಗಾಯಿತೋ ಕೃಷ್ಣಸಂದೇಹವಿಲ್ಲ ಗೋವಿಂದ ಶ್ರೀಪದದಾಣೆತಂದೆ ನೀ ರಕ್ಷಿಸದಿರೆ ಕೃಷ್ಣಮುಂದೆ ಭಜಿಸುವರು ಹೀಗೆಂದು ವಾರುತೆ ಕೇಳಿಬಂದುದಪಕೀರ್ತಿ ಮಾತು ಕೃಷ್ಣ 4 ವತ್ಸರ ಈರೀತಿ ಕಾಲಕಳೆದೆನೋ ಕೃಷ್ಣವ್ಯರ್ಥವಾಯಿತು ಜನುಮ ಸಾರ್ಥಕಾಗದು ಕಣ್ಣುಕತ್ತಲೆಗವಿಸಿತಲ್ಲೋ ಕೃಷ್ಣಇತ್ತ ಬಾರೆಂತೆಂದು ಹತ್ತಿಲಿಗೆ ಕರೆದೊಂದುತುತ್ತು ಕೊಡುವರ ಕಾಣೆನೋ ಕೃಷ್ಣವಿಸ್ತರಿಸಲಾರೆ ಇನ್ನೆತ್ತ ಪೋಗಲೊ ನಿನ್ನಚಿತ್ತವ್ಯಾತಕೆ ಕರಗದೋ ಕೃಷ್ಣ 5 ಆರು ಗತಿ ನಿನಗಧಿಕರಾರು ಧಾರುಣಿಯೊಳಗೆತೋರಿಸೈ ಕರುಣನಿಧಿಯೆ ಕೃಷ್ಣಈರೇಳು ಲೋಕಕಾಧಾರವಾದವಗೆ ಬಲುಭಾರವಾದವನೆ ನಾನು ಕೃಷ್ಣಮೀರಿ ನುಡಿಯಲು ಹದಿನಾರೆರಡು ಪಲ್ಗಳುಬೇರು ಕಳಕಳಯಿತೋ ಕೃಷ್ಣತೋರು ಬಂಕಾಪುರದ ಧಾರುಣಿಪುರವಾಸವೀರ ನರಸಿಂಹದೇವ ಕೃಷ್ಣ 6 ಹರಿಯಾತ್ರೆ ಮಾಡಲಿಲ್ಲ ಹರಿಮೂರ್ತಿ ನೋಡಲಿಲ್ಲಹರಿದಾಸ ಸÀಂಗವಿಲ್ಲ ಕೃಷ್ಣಹರಿಸ್ಮರಣೆ ಮಾಡಲಿಲ್ಲ ಸುರನದಿಯ ಮೀಯಲಿಲ್ಲಧರಣಿ ಸಂಚರಿಸಲಿಲ್ಲ ಕೃಷ್ಣಅರಿತರಿತು ಮನ ವಿಷಯಕೆರಗಿ ಹರುಷವ ತಾಳಿಬರಿದಾಯಿತಾಯುವೆಲ್ಲ ಕೃಷ್ಣಮರುತಾಂತರ್ಗತ ಸಿರಿಯರಸ ಹರಿಯೆಂದುಹರುಷಾಬ್ದಿ ಮಗ್ನನಲ್ಲ ಕೃಷ್ಣ7 ಹರಿನಾರಾಯಣನೆಂದು ಕರವೆತ್ತಿ ಮುಗಿದೊಮ್ಮೆ ಮೈ ಮರೆದು ನಟಿಸಲಿಲ್ಲ ಕೃಷ್ಣಹರಿಸ್ಮರಣೆ ಸ್ಮರಿಸಿ ಸಿರಿತುಳಸಿ ಪುಷ್ಪವನುಕರವೆತ್ತಿ ನೀಡಲಿಲ್ಲ ಕೃಷ್ಣಸರ್ವಜ್ಞರಾಯರು ವಿರಚಿಸಿದ ಗ್ರಂಥವನುದರುಶನವೆ ಮಾಡಲಿಲ್ಲ ಕೃಷ್ಣಸ್ಮರಿಸಲಾರದ ಪಾಪ ಸ್ಮರಣೆಪೂರ್ವಕ ಮಾಡಿಸ್ಥಿರಭಾರನಾದೆನಲ್ಲೋ ಕೃಷ್ಣ 8 ದುರುಳಜನರೊಡನಾಡಿ ಹರಿಣಾಕ್ಷಿಯರ ಕೂಡಿಸರಿ ಯಾರು ಎಂದು ತಿರುಗಿ ಕೃಷ್ಣನಿರುತ ಕ್ಷುದ್ರವ ನೆನೆಸಿ ನೆರೆದೂರ ಮಾರಿ ಹೆಗ್ಗೆರೆಗೋಣನಂತೆ ತಿರುಗಿ ಕೃಷ್ಣಪರರ ಅನ್ನವ ಬಯಸಿ ಶರೀರವನೆ ಪೋಷಿಸಿಶಿರ ಒಲಿದು ಶಿಲೆಗೆ ಹಾಯಿದು ಕೃಷ್ಣಶರಣವತ್ಸಲನೆಂಬೊ ಬಿರುದು ಪಸರಿಸುವಂಥಕರುಣ ಇನ್ನೆಂದಿಗಾಹುದೊ ಕೃಷ್ಣ 9 ಉರಗ ಫಣಿ ತುಳಿಯಲೊಎರಡೊಂದು ಶೂಲಕ್ಹಾಯಲೊ ಕೃಷ್ಣಕೊರಳಿಗ್ಹಗ್ಗವ ಹಾಕಿ ಮರವೇರಿ ಕರಬಿಡಲೋಗರಗಸದಿ ಶಿರಗೊಯ್ಯಲೋ ಕೃಷ್ಣಕರುಣವಾರಿಧಿ ಎನ್ನ ಕರಪಿಡಿದು ಸಲಹದಿರೆಧರೆಯೊಳುದ್ಧರಿಪರ್ಯಾರೋ ಕೃಷ್ಣ 10 ಎಷ್ಟು ಹೇಳಲಿ ಎನ್ನ ಕಷ್ಟ ಕೋಟಿಗಳನ್ನುಸುಟ್ಟೀಗ ಬೇಯ್ಯುತಿಹವೋ ಕೃಷ್ಣಕಷ್ಟಬಟ್ಟ ಮಗನೆಂದು ದೃಷ್ಟಿ ನೀರೊರೆಸೆನ್ನಪೊಟ್ಟೆಯೊಳ್ಪಿಡಿವರ್ಯಾರೊ ಕೃಷ್ಣಕೃಷ್ಣನಾಮ ವಜ್ರಕ್ಕೆ ಬೆಟ್ಟ ದುರಿತವು ನೀಗಿಥಟ್ಟನೆ ಬಂದು ನೀನು ಕೃಷ್ಣಇಷ್ಟವನು ಸಲಿಸಿ ಗುಟ್ಟ್ಟಲಿ ಶ್ರೀರಂಗವಿಠಲ ಎನ್ನ ಕಾಯೋ ಕೃಷ್ಣ 11
--------------
ಶ್ರೀಪಾದರಾಜರು
ರಕ್ಷಿಸೋ ಜಗನ್ನಾಥದಾಸ ರಕ್ಷಿಸೋ ರಕ್ಷಿಸು ಗುರು ಜಗನ್ನಾಥದಾಸ ಪಕ್ಷಿವಾಹನನ ನಿಜದಾಸ ಮು ಮುಕ್ಷು ಮಾರ್ಗವ ತೋರ್ದಧೀಶ ನೀನೆ ಪ್ರ ತ್ಯಕ್ಷ ಪ್ರಹ್ಲಾದನನುಜ- ||ಅಹಾ|| ಈ ಕ್ಷಿತಿಯೊಳು ಸುರಶ್ರೇಷ್ಠನೆನಿಸಿ ವಿ ಶಿಷ್ಟರ ಮನೋಭೀಷ್ಟವನಿತ್ತ ಹರಿದಾಸ 1 ವೇದವಂದ್ಯನ ನಿಜತತ್ತ್ವ ನಿಜ ನಿತ್ಯ (ಸತ್ಯ) ಪೂರ್ಣ ಬೋಧರ ಗ್ರಂಥ ತತ್ತ್ವ ನೀತಿ ತ ಪ್ಪದೆ ಪೇಳ್ದೆ ಮಹತ್ವ ||ಅಹಾ|| ಮೋದಪಡಿಸಿ ಮೋದತೀರ್ಥರ ಮತ ದು ಗ್ಧಾಬ್ಧಿಸುಧೆಯನಿತ್ತ ಬಾದರಾಯಣನ ದಾಸ 2 ಪ್ರಕೃತಿಬಂಧಕರಾದ ಜನರು ನಿನ್ನ ಪ್ರಾಕೃತಗ್ರಂಥನೊಡಿ ಮೋದಿಪರು ಸತತಾ ಪ್ರಾಕೃತನ ತಾ ವಂದಿಪರು ಜನ್ಮ ಸುಕೃತಕ್ಕೆ ತಾವು ಸಾಧಿಪರು ||ಅಹಾ|| ಸಂಸ್ಕøತ ಭಾಷೆಯ ಪ್ರಕರಣಗಳನೆಲ್ಲ ಪ ರಿಷ್ಕøತ ಪಡಿಸಿ ನೀ ಪ್ರಾಕೃತದೊಳು ತೋರ್ದೆ3 ವಿಪ್ರವರೇಣ್ಯನೆ ನೀನು ಜಗದಿ ಅಪ್ರಮೇಯನ ಪ್ರಮೇಯವನ್ನೂ ಅದಕ್ಕೆ ಸಪ್ರಮಾಣಗಳೆಲ್ಲವನ್ನೂ ತೋರಿ ದಿ ಕ್ ಪ್ರದರ್ಶನ ಮಾಡಿ ಇನ್ನೂ ||ಅಹಾ|| ಸ್ವಪ್ರಯೋಜನ ರಹಿತ ಅಪ್ರಮೇಯನ ಮಹಿಮೆ ಕ್ಷಿಪ್ರ ಭೋಧೆಯಾಗಲ್ ತ್ವತ್ಪ್ರಸಾದವನಿತ್ತೆ4 ನಿನ್ನುಪಕಾರದ ಪರಿಯಾ ನಾನು ಜನ್ಮಜನ್ಮಾಂತರಕೆ ಮರೆಯೆ ನೀನೆ ಘನ್ನ ಶ್ರೀಹರಿದಾಸಾಗ್ರಣಿಯೇ ಇನ್ನು ನಿನ್ನ ಹರಿಕಥಾಮೃತಸಾರಕ್ಕೆಣೆಯೇ ||ಅಹಾ|| ಇನ್ನಿಲ್ಲ ನಿನ್ನಂಥ ಘನ್ನ ಕವಿಗಳ ಕಾಣೆ ಪನ್ನಂಗಶಯನ ಶ್ರೀ ವೆಂಕಟೇಶನ ದಾಸಾ 5
--------------
ಉರಗಾದ್ರಿವಾಸವಿಠಲದಾಸರು
ರಂಗವಲಿದ ದಾಸರಾಯ | ಸಾಧು ಸಂಗವಿಡಿಸಿ ಕರುಣದಿ ಪಿಡಿ ಕೈಯ್ಯ ಪ ಕುಂಭಿಣಿ ಸುರನಾಥ | ನಂಬಿದೆ ನಿನ್ನ ಪಾದ ಬೆಂಬಿಡದಲೆ ಕಾಯೊ || ಕಂಬು ಕಂಧರ ಭಕ್ತಮಂದಾರ 1 ಹರಿಕಥೆ ಸುಧಾಸಾರ | ಸುರಸಗ್ರಂಥವ ಜಗದಿ | ವಿರಚಿಸಿರುವ ನಿನ್ನ || ವರ ಉಪಕಾರ | ವರ್ಣಿಸಲಪಾರ | ಪರಮೋದಾರ 2 ಸಾಮಗಾನ ವಿಲೋಲ | ಶಾಮಸುಂದರವಿಠಲ ಸ್ವಾಮಿಯ ಭಕುತಿ | ನಿ | ಅನುಜ ಸಲ್ಹಾದ ನೀಡೆನಗಲ್ಹಾದ 3
--------------
ಶಾಮಸುಂದರ ವಿಠಲ
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ಮಂಗಳ ಚರಿತ ಕೃಪಾಂಗನೆ ಎನ್ನಂತ ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ ನತಜನ ಸುರಧೇನು ನೀನೆಂದು ನುತಿಸಿ ವಂದಿಸುವೆನೋ ರತಿಪತಿಪಿತ ನುತ ಕಥಾಮೃತ ಗ್ರಂಥದಿ ಸತತ ಎನಗೆ ಮತಿ ಹಿತದಲಿ ಪ್ರೇರಿಸು 1 ಧನ್ಯನ ನೀಮಾಡೋ ಕರುಣದಿ ಮನ್ನಿಸಿ ಕಾಪಾಡೋ ಘನ್ನ ಮಹಿಮಕಿನ್ನು ನಿನ್ನ ಹೊರತು ಇನ್ನಾರು ಕಾವರರಿಯೆ ಕಾಣೆ ಗುರೋ 2 ಮಂದಮತಿ ಬಿಡಿಸೋ ಈ ಭವ ಬಂಧನ ಪರಿಹರಿಸೊ ಪತಿ ಶಾಮಸುಂದರವಿಠಲ ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
--------------
ಶಾಮಸುಂದರ ವಿಠಲ